ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಹಾಗೂ ಮಹಾದಾಯಿ ಮತ್ತು ಕೃಷ್ಣಾ ನದಿಯ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚಿಸಲು ಸರ್ವ ಪಕ್ಷ ಮುಖಂಡರ ಸಭೆ ಕರೆಯಲು ಚಿಂತನೆ ನಡೆಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರ ಹಲವು ಅನುಮೋದನೆ ನೀಡಬೇಕಿದೆ. ಹಲವಾರು ಕಾರಣಗಳಿಂದ ಇದು ವಿಳಂಬವಾಗಿ ಈ ಪ್ರದೇಶದ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕೃಷ್ಣಾ ನದಿ ನೀರು ಹಂಚಿಕೆ ಕುರಿತು ನ್ಯಾಯಮಂಡಳಿ ನೀಡಿರುವ ಐತೀರ್ಪನ್ನು ಕೇಂದ್ರ ಸರ್ಕಾರ ಗೆಜೆಟ್ ನಲ್ಲಿ ಪ್ರಕಟಿಸಬೇಕು. ಆದರೆ, ಕೇಂದ್ರ ಸರ್ಕಾರ ಇಲ್ಲಿಯವರೆಗೆ ಇದನ್ನು ಮಾಡಿಲ್ಲ. ಇದರಿಂದಾಗಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳ ಸೇರಿ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚಿಸಬೇಕಾಗಿದೆ ಎಂದು ಹೇಳಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮೈತ್ರಿ ಉದ್ದೇಶದಿಂದ ತಮಿಳುನಾಡಿಗೆ ನೀರು ಹರಿಸಿಲ್ಲ. ನ್ಯಾಯಾಲಯದ ಆದೇಶ ಗೌರವಿಸಿ, ಅದನ್ನು ಪಾಲಿಸಿದ್ದೇವೆ. ಜೊತೆಗೆ ನಮ್ಮ ರೈತರ ಹಿತವನ್ನು ಕಾಯಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಈ ವಿಚಾರದಲ್ಲಿ ನಾವು ಕಾನೂನು, ಸಂವಿಧಾನ ಹಾಗೂ ಕೋರ್ಟ್ ಆದೇಶಕ್ಕೆ ಗೌರವ ನೀಡಬೇಕು. ಈ ಹಿಂದೆ ಇದ್ದ ಸರ್ಕಾರಗಳು ನ್ಯಾಯಾಲಯದ ಆದೇಶಗಳನ್ನು ಇದೇ ರೀತಿ ಪಾಲಿಸಿವೆ. ನೀರು ಬಿಡುಗಡೆ ಮಾಡಿವೆ. ಆದರೆ ನಮ್ಮ ರೈತರ ಹಿತ ಕಾಪಾಡುವುದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ನೀರು ಬಿಟ್ಟಿರುವುದನ್ನು ಪ್ರಶ್ನಿಸಿ ವಿರೋಧ ಮಾಡುತ್ತಾರೆ. ಅದು ಸಹಜ. ಸರ್ಕಾರ ಇಂತಹ ಸಮಯದಲ್ಲಿ ಸಮತೋಲಿತವಾಗಿ ಕೆಲಸ ಮಾಡಬೇಕಿದೆ. ಮಳೆ ಕಡಿಮೆ ಆಗಿರುವುದರಿಂದ ಕೃಷಿಗೆ ಮಾತ್ರವಲ್ಲ, ಕುಡಿಯಲು ನೀರಿಲ್ಲ. ಇದೇ ಕಾರಣಕ್ಕೆ ಪ್ರಾಧಿಕಾರಕ್ಕೆ ತನ್ನ ನಿರ್ಧಾರ ಪುನರ್ ಪರಿಶೀಲಿಸಲು ಮನವಿ ಮಾಡಿದ್ದೇವೆ ಎಂದರು.
ಈ ಹಿಂದೆ ಇಂತಹ ಪರಿಸ್ಥಿತಿಯಲ್ಲಿ ಜನತಾದಳ ಹಾಗೂ ಬಿಜೆಪಿ ಸರ್ಕಾರಗಳು ಎಷ್ಟು ನೀರು ಬಿಟ್ಟಿದ್ದವು ಎಂಬ ಅಂಕಿ ಅಂಶ ನೀಡಬಲ್ಲೆ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ ಎಂದು ಹೇಳಿದರು.



