ಮುಜರಾಯಿ ಇಲಾಖೆ ವಿವಾದ: ಅನುದಾನ ತಡೆ ಹಿಂಪಡೆದ ಸರ್ಕಾರ

3 years ago

#Mujarai #Department #Controversy #Govt #withdraws #grant #freeze

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ತಡೆ ಹಿಡಿಯುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶಿಸಿತ್ತು. ಇದು ವಿವಾದವಾದ ಬೆನ್ನಲ್ಲೇ ಸರ್ಕಾರ ಆದೇಶ ವಾಪಸ್ ಪಡೆದುಕೊಂಡಿದೆ.

ಮುಜರಾಯಿ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲಿ, ದೇವಸ್ಥಾನ ಜೀರ್ಣೋದ್ದಾರ ಸೇರಿದಂತೆ ಇತರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡಬಾರದು, ಶೇ 50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ತಕ್ಷಣ ಅನುದಾನ ತಡೆ ಹಿಡಿಯಬೇಕು, ಅನುದಾನದ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯಬೇಕು ಎನ್ನುವ ಮೂರು ವಿಷಯಗಳನ್ನು ಪ್ರಸ್ತಾಪಿಸಿ ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನ ಬಿಡುಗಡೆ ತಡೆಹಿಡಿಯಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆದೇಶ ನೀಡಿತ್ತು. ಇದು ವಿವಾದದ ಸ್ವರೂಪ ಪಡೆದುಕೊಂಡಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ರಾಮಲಿಂಗಾರೆಡ್ಡಿ, ಕಳೆದ ವಾರ ತಾವು ಮುಜರಾಯಿ ಇಲಾಖೆಯ ಪ್ರಧಾನಕಾರ್ಯದರ್ಶಿಗಳು, ಆಯುಕ್ತರ ಜತೆ ಸಭೆ ನಡೆಸಿದ್ದೆ.ಈ ವೇಳೆ,ದೇವಸ್ಥಾನಗಳ ಸ್ಥಿತಿ-ಗತಿ ಏನು? ಯಾವ ದೇವಸ್ಥಾನಕ್ಕೆ ಎಷ್ಟು ಹಣ ಬಿಡುಗಡೆಯಾಗಿದೆ? ಎಷ್ಟು ಹಣ ಬಳಕೆಯಾಗಿದೆ? ಬಿಡುಗಡೆಯಾಗದೆ ಇರಲು ಕಾರಣಗಳೇನು? ಇನ್ನೆಷ್ಟು ದೇವಸ್ಥಾನಗಳಿಗೆ ಹಣ ನೀಡಬೇಕು ಎಂಬ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಮುಜರಾಯಿ ಇಲಾಖೆಯ ಆಯುಕ್ತರು ಅನುದಾನವನ್ನು ನಿಲ್ಲಿಸುವ ಕುರಿತಂತೆ ಆದೇಶ ಹೊರಡಿಸಿದ್ದಾರೆ. ಇಂದು ಬೆಳಗ್ಗೆ ಅವರು ತಮ್ಮೊಂದಿಗೆ ಚರ್ಚೆ ನಡೆಸಿದ್ದು, ಗೊಂದಲದಿಂದಾಗಿ ಆದೇಶ ಹೊರಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕ್ಷಣವೇ ಅದನ್ನು ಹಿಂಪಡೆಯುತ್ತಿದ್ದೇವೆ ಎಂದರು.

ಹಿಂದೆ ಬಿಜೆಪಿ ಸರ್ಕಾರ ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಕಾಗದದ ಮೇಲೆ ಮಾತ್ರ ಹಣ ಬಿಡುಗಡೆ ಮಾಡುವ ಆದೇಶ ನೀಡಿದೆ. ಆದರೆ, ವಾಸ್ತವದಲ್ಲಿ ಹಣ ದೇವಸ್ಥಾನಗಳಿಗೆ ತಲುಪಿಲ್ಲ. ನಾವು ಹಣ ಬಿಡುಗಡೆ ಮಾಡಬೇಕಿದೆ ಎಂದು ಹೇಳಿದರು.

ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಇದರಲ್ಲಿ ಬೇರೇನೂ ಇಲ್ಲ. ಧರ್ಮ, ದೇವಸ್ಥಾನ, ಮಠಗಳ ಬಗ್ಗೆ ನಮಗೆ ಬಿಜೆಪಿಯವರಿಗಿಂತಲೂ ಹೆಚ್ಚಿನ ಶ್ರದ್ಧೆ ಮತ್ತು ಕಾಣಜಿ ಇದೆ. ಹಿಂದಿನ ಸರ್ಕಾರಗಳಿಗಿಂತಲೂ ಹೆಚ್ಚಿನ ಅನುದಾನ ನೀಡುತ್ತೇವೆಯೇ ಹೊರತು ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Leave a Reply