ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಚಿರತೆ ಹಾಗೂ ಜಿಂಕೆಗಳ ಸಾವಿನ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಗೆ ಸೇರಿದ ವನ್ಯಮೃಗಗಳಿಗೆ ಸೋಂಕು ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಲ್ಲಿ ಬೆಕ್ಕುಗಳಿಗೆ ತಗಲುವ ಮಾರಕ ಫೆಲಿನ್ ಪ್ಯಾನ್ಲೂಕೋಪೇನಿಯಾ (ಎಫ್.ಪಿ.ವಿ.) ವೈರಾಣು ಸೋಂಕಿನಿಂದ 7 ಚಿರತೆ ಮರಿಗಳು ಮತ್ತು ಉದರ ಸಂಬಂಧಿ ಕಾಯಿಲೆ (ಹೆಮೊರೈಜಿಕ್ ಎಂಟ್ರೈಟಿಸ್ ಮತ್ತು ಎಂಡೋಕಾರ್ಡೈಟಿಸ್) ಯಿಂದ 16 ಜಿಂಕೆಗಳು ಸಾವಿಗೀಡಾಗಿದ ವರದಿ ಹಿನ್ನೆಲೆಯಲ್ಲಿ ಉದ್ಯಾನಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ,ಅಧಿಕಾರಿಗಳ ಸಭೆ ನಡೆಸಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉದ್ಯಾನದಲ್ಲಿ ಚಿರತೆಗಳಿಗೆ ಸೋಂಕು ಬಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಯಾವುದೇ ಸಿಬ್ಬಂದಿ ರಾಜ್ಯದ ಬೇರೆ ಯಾವುದೇ ಮೃಗಾಲಯಕ್ಕೆ ಭೇಟಿ ನೀಡದಂತೆ ಆದೇಶ ನೀಡಿರುವುದಾಗಿ ತಿಳಿಸಿದರು.
ರಾಜ್ಯದ ಮೃಗಾಲಯಗಳಲ್ಲಿ ಬೆಕ್ಕಿನ ಜಾತಿಯ ಪ್ರಾಣಿಗಳು ಅಂದರೆ ಚಿರತೆ, ಸಿಂಹ, ಹುಲಿ, ಕಾಡುಬೆಕ್ಕು ಇತ್ಯಾದಿಗಳಿಗೆ ಅಗತ್ಯವಿದ್ದರೆ ಲಸಿಕೆ ನೀಡುವಂತೆ ಸೂಚಿಸಲಾಗಿದೆ.ಅರಣ್ಯ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಸಮನ್ವಯದೊಂದಿಗೆ ಎಲ್ಲ ಪ್ರಾಣಿಗಳನ್ನು ಗಮನವಿಟ್ಟು ಪರೀಕ್ಷಿಸಿ ಅವುಗಳ ಆರೈಕೆ ಮತ್ತು ಸಂರಕ್ಷಣೆಗೆ ಆದ್ಯತೆ ನೀಡಬೇಕು ಯಾವುದೇ ವೈಮನಸ್ಯ ಮನಸ್ತಾಪದಿಂದ ಸಂಸ್ಥೆಗೆ ಸರ್ಕಾರಕ್ಕೆ ಕೆಟ್ಟ ಹೆಸರು ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಆದೇಶಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ವನ್ಯಮೃಗಗಳು ಹಠಾತ್ ಅಥವಾ ಅನುಮಾಸ್ಪದ ಸಾವಿಗೀಡಾದರೆ ತಕ್ಷಣವೇ ಸರ್ಕಾರಕ್ಕೆ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಆದೇಶಿಸಿರುವುದಾಗಿ ಹೇಳಿದರು.




