ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕಾವೇರಿ ಕೊಳ್ಳದ ಮಂಡ್ಯದಲ್ಲಿ ಬಂದ್ ನಡೆಸಿದ ಹೋರಾಟಗಾರರು ರಾಜಧಾನಿ ಬೆಂಗಳೂರಿಗೆ ತಮ್ಮ ಹೋರಾಟದ ಬಿಸಿ ಮುಟ್ಟಿಸಲು ತೀರ್ಮಾನಿಸಿದ್ದಾರೆ.
ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಬರುವ ಮಂಗಳವಾರ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಗೆ ಕರೆ ನೀಡಿವೆ. ಕರ್ನಾಟಕ ಜಲಸಂರಕ್ಷಣಾ ಸಮಿತಿ ಆಶ್ರಯದಲ್ಲಿ ನೂರಕ್ಕೂ ಹೆಚ್ಚು ಸಂಘಟನೆಗಳು ನಗರದ ಫ್ರೀಡಂ ಪಾರ್ಕ್ ನಲ್ಲಿ ಸಭೆ ನಡೆಸಿ, ಇದೇ 26 ರಂದು ಮಂಗಳವಾರ ಬೆಂಗಳೂರು ಬಂದ್ ನಡೆಸುವುದಾಗಿ ತೀರ್ಮಾನಿಸಿದವು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ಕುರಬೂರು ಶಾಂತಕುಮಾರ್, ಬೆಂಗಳೂರು ಸೇರಿದಂತೆ ನಾಡಿನ ಹಿತರಕ್ಷಣೆಗೆ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮಂಗಳವಾರ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೇಳಿದರು.
ಮಂಗಳವಾರ ಬೆಂಗಳೂರಿನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಿ ಎಲ್ಲರೂ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನೀರು ನಿಯಂತ್ರಣಾ ಸಮಿತಿ, ನೀರು ನಿರ್ವಹಣಾ ಮಂಡಳಿಯ ಆದೇಶದಂತೆ ಪ್ರತಿದಿನ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಸಿದರೆ ಕೆಆರ್ಎಸ್ ಸೇರಿದಂತೆ ಕಾವೇರಿ ನದಿ ಪಾತ್ರದ ಜಲಾಶಯಗಳು ಬರಿದಾಗಲಿವೆ. ಬೆಂಗಳೂರಿಗೆ ಕುಡಿಯುವ ನೀರೇ ಇಲ್ಲದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 195 ತಾಲೂಕುಗಳು ಬರಪೀಡಿತವಾಗಿವೆ. ಸದ್ಯಕ್ಕೆ ಮಳೆಯ ಮುನ್ಸೂಚನೆಯೂ ಇಲ್ಲ. ಅತ್ತ ತಮಿಳುನಾಡಿನಲ್ಲಿ ಅಕ್ಟೋಬರ್ನಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಅದರ ಹೊರತಾಗಿಯೂ ತಮಿಳುನಾಡು ಅನಗತ್ಯವಾಗಿ ನೀರಿಗಾಗಿ ತಗಾದೆ ತೆಗೆಯುತ್ತಿದೆ. ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ನಡೆಸದೆ ತೀರ್ಪುಗಳು ಹೊರಬೀಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾರ ವಿರುದ್ಧ ಹೋರಾಟ: ಈ ನಡುವೆ ಕಾವೇರಿ ವಿಷಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಯಾರ ವಿರುದ್ಧ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸರ್ಕಾರ ಕಾವೇರಿ ನೀರು ನಿಯಂತ್ರಣಾ ಸಮಿತಿಗೆ, ಕಾವೇರಿ ನೀರು ನಿರ್ವಹಣಾ ಮಂಡಳಿಗೆ, ಸುಪ್ರೀಂಕೋರ್ಟ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ. ಅದರ ಹೊರತಾಗಿ ತೀರ್ಪು ಬಂದಿದೆ. ಈಗ ಪ್ರತಿಭಟನೆ ಮಾಡುತ್ತಿರುವುದು ಯಾರ ವಿರುದ್ಧ ಎಂದರು.
ರಾಜ್ಯಸರ್ಕಾರದ ಪರವಾಗಿ ವಿವಿಧ ಸಮಿತಿಗಳು ನ್ಯಾಯಾಲಯದ ಮುಂದೆ ಸಮರ್ಥವಾದ ವಾದ ಮಂಡಿಸಲಾಗಿದೆ. ಈ ಮೊದಲು ಅಸ್ತಿತ್ವದಲ್ಲಿದ್ದ ಕಾನೂನು ತಜ್ಞರ ತಂಡವೇ ವಾದ ಮಂಡಿಸಿದೆ. ಈ ಮೊದಲು ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಇದೇ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ನ್ಯಾಯಾಲಯದ ತೀರ್ಪು ಪಾಲನೆ ಮಾಡುವುದಿಲ್ಲ ಎಂದಾಗ ಮಿಲ್ಟ್ರಿ ಕಳುಹಿಸುವುದೂ ಸೇರಿದಂತೆ ಹಲವಾರು ರೀತಿಯ ಎಚ್ಚರಿಕೆಗಳನ್ನು ನೀಡಲಾಗಿತ್ತು. ಈಗಲೂ ಅದೇ ರೀತಿಯ ವಾತಾವರಣ ಇದೆ ಎಂದು ಹೇಳಿದರು.
ರಾಜ್ಯಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಳ್ಳಲಾಗಿದೆ. ಇದು ಒಂದು ಪಕ್ಷ ಅಥವಾ ಒಂದು ಸರ್ಕಾರದ ಪ್ರಶ್ನೆ ಅಲ್ಲ. ನಮ್ಮ ಪರಿಸ್ಥಿತಿ ಏನು, ಕಾನೂನು ಚೌಕಟ್ಟಿನಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ವಿವರಣೆ ನೀಡಲಾಗಿದೆ. ನೀರು ನಿಯಂತ್ರಣಾ ಮಂಡಳಿ ಮತ್ತು ನಿರ್ವಹಣಾ ಪ್ರಾಧಿಕಾರಗಳು ರಾಜ್ಯಕ್ಕೆ ವ್ಯತಿರಿಕ್ತ ಆದೇಶ ನೀಡಿವೆ. ನ್ಯಾಯಾಲಯದ ಮೊರೆ ಹೋದರೆ ಮೊದಲು ನೀರು ನಿಯಂತ್ರಣಾ ಮಂಡಳಿಯ ಆದೇಶ ಪಾಲನೆ ಮಾಡಿ, ನಂತರ ಬನ್ನಿ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯಸರ್ಕಾರ ಏನು ಮಾಡಲು ಸಾಧ್ಯ ಎಂದರು.



