ಬೆಂಗಳೂರು: ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರುಗಳ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ನವೆಂಬರ್ 7ರಿಂದ ಡಿಸೆಂಬರ್ 7ರವರೆಗೆ ಒಂದು ತಿಂಗಳ ಕಾಲ ರಾಜ್ಯದಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಇಂದಿನಿಂದ ಒಂದು ತಿಂಗಳ ಕಾಲ ಎಲ್ಲಾ ತಾಲ್ಲೂಕುಗಳಲ್ಲಿ ಎಲ್ಲಾ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲು ಉದ್ದೇಶಿಸಲಾಗಿದೆ ಎಂದರು.
ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಿ, ನಿರ್ಮೂಲನೆಗೊಳಿಸಲು ಪ್ರತಿ 6 ತಿಂಗಳಿಗೊಮ್ಮೆ ರೋಗದ ವಿರುದ್ಧ ಲಸಿಕೆ ಹಾಕಿಸುವುದು ಪರ್ಯಾಯವಾಗಿದೆ. ಈ ರೋಗದ ವಿರುದ್ಧ ಎಲ್ಲಾ ದನ, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುವುದು. ಪ್ರತಿ ಜಾನುವಾರುಗಳಿಗೆ ಪ್ರತ್ಯೇಕ ಸಿರಿಂಜ್ ಮತ್ತು ನೀಡಲ್ ಗಳನ್ನು ಬಳಸಲು ಸೂಚನೆ ನೀಡಲಾಗಿದೆ ಎಂದರು.
ಲಸಿಕೆ ವಿಷಯವಾಗಿ ಸಿಎಂ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದರು. ನಾನು ಕೂಡ ಕೇಂದ್ರ ಪಶುಸಂಗೋಪನಾ ಸಚಿವ ಪರುಷೋತ್ತಮ್ ರೂಪಾಲ್ ಜೀ ಅವರನ್ನು ಭೇಟಿ ಮಾಡಿ ಒಂದು ಕೋಟಿ ಲಸಿಕೆ ನೀಡುವಂತೆ ಮನವಿ ಮಾಡಿದ್ದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕಾಲು ಬಾಯಿ ರೋಗದ ವಿರುದ್ಧ ಹೋರಾಡಲು 73,79,250 ಲಸಿಕೆ ಕಳುಹಿಸಿಕೊಟ್ಟಿದೆ. ಇದನ್ನು ಎಲ್ಲಾ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.




