ಬೆಂಗಳೂರು: ದಯವಿಟ್ಟು ಭಾವೋದ್ವೇಗದಿಂದ ಮಾತನಾಡಬೇಡಿ. ನೀವು ದೊಡ್ಡವರು, ಮಂತ್ರಿಯಾಗಿದ್ದವರು. ಶಾಸಕರಾಗಿ ಬಹಳ ವರ್ಷ ಕೆಲಸ ಮಾಡಿದವರು.ಹಲವು ದುಃಖದ ಮನೆಗಳಿಗೆ ಹೋಗಿ ಸಾಕಷ್ಟು ಬಾರಿ ಸಾಂತ್ವನ ಹೇಳಿದ್ದೀರಿ. ಭಾವೋದ್ವೇಗ ಬೇಡ ಎಂದು ಚಂದ್ರು ಅನುಮಾನಾಸ್ಪದ ಸಾವಿನ ತನಿಖೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಗ ತೀರಿಕೊಂಡಾಗ ಸಹಜವಾಗಿಯೇ ಭಾವುಕರಾಗಿದ್ದಾರೆ. ನಾನು ಅವರ ಮನೆಗೆ ಭೇಟಿ ಕೊಟ್ಟಿದ್ದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದಾರೆ. ಮರಣೋತ್ತರ ವರದಿ ಬರಬೇಕು. ತನಿಖೆಯು ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ನಡೆಯುತ್ತಿದೆ ವರದಿ ಬಂದ ಮೇಲೆ ಎಲ್ಲಾ ತಿಳಿಯಲಿದೆ ಎಂದು ಸ್ಪಷ್ಟಪಡಿಸಿದರು.
ರೇಣುಕಾಚಾರ್ಯ ಅವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ ಅದು ಸಹಜ ಕೂಡ. ಹಾಗಂತ ಏನೇನೋ ಆಗೋದು ಬೇಡ. ಪೊಲೀಸ್ ತನಿಖೆ ಸರಿಯಾಗಿಯೇ ನಡೆಯುತ್ತಿದೆ. ನಾನೂ ಕೂಡಾ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ. ಈ ಪ್ರಕರಣಕ್ಕೆ ಸರ್ಕಾರ ಬಹಳ ಮಹತ್ವ ಕೊಟ್ಟಿದೆ. ಎಡಿಜಿಪಿಯವರು ಸ್ಥಳಕ್ಕೆ ಹೋಗಿದ್ದರು. ಯಾವುದನ್ನೂ ಅವಗಣನೆ ಮಾಡಿಲ್ಲ. ರೇಣುಕಾಚಾರ್ಯ ಜಾಗದಲ್ಲಿ ಯಾರೇ ಇದ್ರೂ ಭಾವೋದ್ವೇಗಕ್ಕೆ ಹೋಗ್ತಾರೆ. ತನಿಖೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ ಎಂದರು.
ಪೊಲೀಸರು ಯಾವುದನ್ನೂ ಮುಚ್ಚಿಡುತ್ತಿಲ್ಲ, ಮುಚ್ಚಿಡುವುದರಿಂದ ಯಾರಿಗೇನು ಪ್ರಯೋಜನ ಇದೆ ಹೇಳಿ? ಯಡಿಯೂರಪ್ಪನವರೂ ಭೇಟಿ ಕೊಟ್ಟಿದ್ದರು. ಸಿಎಂ ಸಹ ಅವರ ಮನೆಗೆ ಭೇಟಿ ಕೊಡಬಹುದು. ತನಿಖೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗುತ್ತೆ ಎಂದರು.
ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್ ವಿಚಾರವಾಗಿ ಮಾತನಾಡಿ, ಪ್ರಕರಣದ ಸಂಬಂಧ ಎಲ್ಲಾ ರೀತಿಯಿಂದಲೂ ಆಳವಾದ ತನಿಖೆ ನಡೀತಿದೆ. ತನಿಖೆಯಿಂದ ಎಲ್ಲವೂ ಹೊರಗೆ ಬರಲಿದೆ ಎಂದರು.



