ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಿದರೆ, ಶಾಸಕ, ಆಗಬಹುದು ಎಂದು ಅನೇಕರು ಪಕ್ಷ ಸೇರಲು ಆಸಕ್ತಿ ತೋರುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಡಿ. ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿ ಎಂದು ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಎಐಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ನಂತರ ಮೊದಲ ಬಾರಿಗೆ ಆಗಮಿಸಿದ ಖರ್ಗೆ ಅವರಿಗೆ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶದ ಮೂಲಕ ಪ್ರದೇಶ ಕಾಂಗ್ರೆಸ್ ಅದ್ದೂರಿ ಸ್ವಾಗತ ಕೋರಿದರು.
ಕಾರ್ಯಕರ್ತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ 70 ವರ್ಷದಿಂದ ಏನು ಮಾಡಿದ್ದೀರೆಂದು ಪ್ರಧಾನಿ ನರೇಂದ್ರ ಮೋದಿ ಕೇಳುತ್ತಾರೆ. ನಾವು ಕೆಲಸ ಮಾಡಿದ್ದರಿಂದಲೇ ದೇಶ ಈ ಹಂತಕ್ಕೆ ಬೆಳೆದಿದೆ. ಕಾಂಗ್ರೆಸ್ ಪಕ್ಷ ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿದೆ. ಹಿಂದಿನ ಯಾವ ಸರ್ಕಾರ ಈ ರೀತಿ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಪದೇಪದೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕೆ ಮಾಡುವುದು ಸರಿಯಲ್ಲ. ದೇಶಕ್ಕಾಗಿ ಗಾಂಧಿ ಕುಟುಂಬದ ತ್ಯಾಗ, ಕೊಡುಗೆ ಸಾಕಷ್ಟಿದೆ. ಇದರಲ್ಲಿ ಸ್ವಲ್ಪನಾದರೂ ನೀವು ಕೊಟ್ಟಿದ್ದರೆ ದೇಶ ಮತ್ತಷ್ಟು ಅಭಿವೃದ್ಧಿಯಾಗುತ್ತಿತ್ತು. ತಾಯಿ, ಮಕ್ಕಳ ಪಕ್ಷವೆಂದು ಪ್ರಧಾನಿ ಮೋದಿ ಕಾಂಗ್ರೆಸ್ನ್ನು ಟೀಕಿಸುತ್ತಾರೆ. ನಮ್ಮ ಪಕ್ಷದ ಆಂತರಿಕ ವಿಚಾರ ನಿಮಗೇಕೆ? ಜನ ನಿಮಗೆ ಅವಕಾಶ ಕೊಟ್ಟಿದ್ದಾರೆ, ದೇಶದ ಅಭಿವೃದ್ಧಿ ಕಡೆ ಚಿಂತೆ ಮಾಡಿ ಎಂದರು.
ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಅನೇಕ ನಾಯಕರು ಖರ್ಗೆ ಅವರ ಗುಣಗಾನ ಮಾಡಿದರು. ಅವರ ನಾಯಕತ್ವದಲ್ಲಿ ಪಕ್ಷ ಕಟ್ಟುವ ಪಣ ತೊಟ್ಟರು.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಡಾ.ಜಿ.ಪರಮೇಶ್ವರ್, ಜಮೀರ್ ಅಹಮದ್ ಖಾನ್ ಸೇರಿದಂತೆ ಎಲ್ಲ ನಾಯಕರು ವಿಮಾನ ನಿಲ್ದಾಣದಲ್ಲಿಯೇ ಸ್ವಾಗತ ಕೋರಿದರು.
ಅಲ್ಲಿಂದ ಅವರನ್ನು ಅದ್ಧೂರಿ ಮೆರವಣಿಗೆಯ ಮೂಲಕ ಬೃಹತ್ ಸಮಾವೇಶ ನಡೆದ ಅರಮನೆ ಮೈದಾನಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ಎನ್ಎಸ್ಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿಗಳ ಮೂಲಕ ಸ್ವಾಗತ ಕೋರಿದರು.
ಸಾದೇನಹಳ್ಳಿ ಗೇಟ್ ಬಳಿ ಖರ್ಗೆ ಅವರಿಗೆ ಎರಡು ಜೆಸಿಬಿಗಳಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅಭಿನಂದಿಸಲಾಯಿತು. ಅಲ್ಲಲ್ಲಿ ನೂರಾರು ಕಾರ್ಯಕರ್ತರು ಜಮಾವಣೆಗೊಂಡು ಜೈಕಾರ ಕೂಗಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಖರ್ಗೆ ಅವರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು.




