ಬೆಂಗಳೂರು: ಕನ್ನಡದ ವೀರ ಸೇನಾನಿಯಾದ ಟಿ.ಎ.ನಾರಾಯಣ ಗೌಡರು ಕನ್ನಡಕ್ಕಾಗಿ ವೀರ-ಧೀರ-ಶೂರರಾಗುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕೂಡ ಹೊಂದಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಕನ್ನಡ ನೆಲ, ಜಲ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ನಾರಾಯಣ ಗೌಡರು ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಯಾವುದೇ ಪುರಸ್ಕಾರವನ್ನೂ ಸ್ವೀಕರಿಸಿಲ್ಲ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಕುವೆಂಪು ಅವರ ಸಾಹಿತ್ಯದ ಪ್ರೇರಣೆಯಿಂದ ಹೋರಾಟಕ್ಕೆ ಬಂದ ಹಿನ್ನೆಲೆಯಿಂದ ತಮ್ಮ ಜೀವನದ ಮೊಟ್ಟ ಮೊದಲ ಪ್ರಶಸ್ತಿಯಾಗಿ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ ಎಂದರು.
ವಿವೇಕಾನಂದರು ಪ್ರವಾಹದ ವಿರುದ್ದ ಹೋರಾಡುವವರು ಯೋಧರು ಎಂದಿದ್ದರು. ಅದರಂತೆ ಕಾವೇರಿ ತೀರ್ಪಿನ ವಿರುದ್ದ, ಬೆಳಗಾವಿ ಕರ್ನಾಟಕಕ್ಕೇ ಸೇರಬೇಕು ಎನ್ನುವ ಕುರಿತು ಹೀಗೆ ನಾರಾಯಣ ಗೌಡರ ಹೋರಾಟದ ಹಾದಿ. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾರಾಯಣ ಗೌಡರೂ ಬೆಂಬಲ ನೀಡಿದ್ದಾರೆ. ಅವರ ಹೋರಾಟಕ್ಕೆ ನ್ಯಾಯಾಧೀಶರಿಂದ ಹಿಡಿದು ಸಮಾಜದ ಎಲ್ಲಾ ಹಂತದ ಕನ್ನಡಿಗರೂ ಬೆಂಬಲ ನೀಡಿರುವುದು ಕನ್ನಡ ಕೆಲಸಕ್ಕೆ ಹುಮ್ಮನಸ್ಸನ್ನು ತಂದಿದೆ ಎಂದರು.
‘ಸ್ನೇಹಕ್ಕೆ ಬದ್ದ; ಸಮರಕ್ಕೆ ಸಿದ್ದ’ಎನ್ನುವ ಮನೋಭಾವದ ನಾರಾಯಣ ಗೌಡರು ಕನ್ನಡದ ಬದ್ದತೆಯ ಹರಿಕಾರ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ.ಹಂಪ.ನಾಗರಾಜಯ್ಯ ಮಾತನಾಡಿ, ನಾನು ಕುವೆಂಪು ಅವರ ನೇರ ಶಿಷ್ಯನಾದರೆ ನಾರಾಯಣ ಗೌಡರು ಪರೋಕ್ಷ ಶಿಷ್ಯರು. ಹೋರಾಟಗಾರರದಂತೆ ಅವರು ವಿನಯವಂತರು, ಬೀಗುವವರಲ್ಲ ಬಾಗುವವರು. ಕನ್ನಡ ಬಾವುಟಕ್ಕೆ ಇರುವ ಶಕ್ತಿಯನ್ನು ತೋರಿಸಿ ಕೊಟ್ಟವರು, ನಾರಾಯಣ ಗೌಡರು ಕನ್ನಡ ಚಳುವಳಿಯನ್ನು ವಿಕೇಂದ್ರೀಕರಣಗೊಳಿಸಿದರು. ಸ್ವಯಂ ಬರಹಗಾರರಾದ ಅವರು ಕನ್ನಡದ ವಿರಾಟ್ ಶಕ್ತಿಯನ್ನು ತೋರಿಸಿ ಕೊಟ್ಟರು ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ವಿಶ್ರಾಂತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಎರಡರ ಉದ್ದೇಶವೂ ಒಂದೇ ಆಗಿದೆ. ಇಲ್ಲಿ ಕನ್ನಡ ಹೃದಯದ ಮಾತಾಗಿದೆ. ಕರ್ನಾಟಕ ರಕ್ಷಣಾ ವೇದಿಕೆಗೆ ಹೋರಾಟದ ಆಯಾಮ ಇರುವಂತೆ ವೈಚಾರಿಕತೆಯ ಆಯಾಮ ಕೂಡ ಇದೆ. ಯುವ ಸಮುದಾಯಕ್ಕೆ ನಾಯಕತ್ವದ ಗುಣವನ್ನು ಅವರು ಕಲಿಸುತ್ತಾ ಬಂದಿದ್ದಾರೆ ಎಂದರು.
ಅಭಿನಂದನಾ ನುಡಿಗಳನ್ನಾಡಿದ ಡಾ.ದೊಡ್ಡರಂಗೇಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಹುಟ್ಟಿನಿಂದ ನಾನು ಜೊತೆಗಿದ್ದೇನೆ. ನಾರಾಯಣ ಗೌಡರನ್ನು ಸಂಸ್ಕೃತಿಯ ಹಿನ್ನೆಲೆ ಇರುವ ನಾಯಕ. ಸಂಘಟನೆಗೆ ಪರ್ಯಾಯ ಪದವೇ ನಾರಾಯಣ ಗೌಡರಾಗಿದ್ದಾರೆ. ಅವರೊಬ್ಬ ಅವರ ಹೋರಾಟದಲ್ಲಿ ಅಭಿಜಾತವಾದ ಆಶಯಗಳಿವೆ ಎಂದರು.
ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೆಳಗಾವಿಯಲ್ಲಿ ಕನ್ನಡ ಉಳಿಯುವಲ್ಲಿ ನಾರಾಯಣ ಗೌಡರ ಪಾತ್ರ ಬಹಳ ಮುಖ್ಯವಾದದ್ದು. ಉತ್ತರ ಕರ್ನಾಟಕಕ್ಕೆ ತೊಂದರೆಯಾದಾಗಲೆಲ್ಲ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರುವರು ಧ್ವನಿ ಎತ್ತಿದ್ದಾರೆ. ಈ ಪುರಸ್ಕಾರ ಸ್ವತಃ ಕುವೆಂಪು ಅವರೇ ಕೈ ತುತ್ತು ತಿನ್ನಿಸಿದಷ್ಟು ಆತ್ಮೀಯವಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಕೋಡಿಮಠದ ಶ್ರೀ ಶ್ರೀ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಮಾತಾಡಿ, ನಾರಾಯಣ ಗೌಡರಿಗೆ ಅವರೇ ಹೋಲಿಕೆ. ಕೆಂಪೇಗೌಡರೇ ನಾರಾಯಣ ಗೌಡರಾಗಿ ಜನಿಸಿದ್ದಾರೆ ಎನ್ನುವ ಭವ್ಯತೆ ಅವರ ವ್ಯಕ್ತಿತ್ವದಲ್ಲಿದೆ ಎಂದರು.
ಪುರಸ್ಕಾರಕ್ಕೆ ಸ್ಪಂದಿಸಿದ ನಾರಾಯಣ ಗೌಡ, ನಾನು ನಾಯಕನಲ್ಲ ನೀವೇ ನನ್ನ ನಾಯಕರು ಮನುಜಮತ ವಿಶ್ವ್ಪಥದ ಕುವೆಂಪು ಅವರ ಆಶಯಕ್ಕೆ ಸ್ಪಂದಿಸಿ ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ ಎನ್ನುವ ಅವರ ಕರೆಗೆ ಸ್ಪಂದಿಸಿ ಹೋರಟಕ್ಕೆ ಬಂದೆ. ಹೀಗಾಗಿ ಕುವೆಂಪು ಅವರ ಹೆಸರನ ಪುರಸ್ಕಾರ ನನಗೆ ಬಹಳ ಮುಖ್ಯ, ಕನ್ನಡ ಸಾಹಿತ್ಯ ಪರಿಷತ್ತು ಮಹೇಶ ಜೋಶಿಯವರ ನೇತೃತ್ವದಲ್ಲಿ ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಟೀಕೆಗಳ ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎನ್ನುವ ಮಾತಿನಂತೆ ಅವರು ಟೀಕೆಗಳ ಬಗ್ಗೆ ಚಿಂತಿಸದೆ ಮುನ್ನುಗ್ಗಲಿ. ಕರ್ನಾಟಕ ರಕ್ಷಣಾ ವೇದಿಕೆ ಸದಾ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಕೆಲಸ ಮಾಡುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು ವಂದಿಸಿದರು. ತಿಮ್ಮೇಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಬಿ.ಎಂ.ಪಟೇಲ ಪಾಂಡು ಪ್ರಶಸ್ತಿ ಪತ್ರವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ಮೊದಲು ಖ್ಯಾತ ಗಾಯಕರಾದ ಮತ್ತು ಆನಂದ ಮಾದಲಗೆರೆಯವರ ತಂಡದಿಂದ ಗೀತ ಗಾಯನ ಕಾರ್ಯಕ್ರಮವಿತ್ತು.



