ಬೆಂಬಲ ಬೆಲೆ ಯೋಜನೆಯಡಿ ರೂ.8682 ರಂತೆ ಹೆಸರು ಕಾಳು ಉತ್ಪನ್ನ ಖರೀದಿ
ಧಾರವಾಡ: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರ ಮಾರಾಟಕ್ಕೆ ಅನುಕೂಲವಾಗುವಂತೆ ಜಿಲ್ಲೆಯ 20 ಸ್ಥಳಗಳಲ್ಲಿ ಸರಕಾರದ ಆದೇಶ ದಿನಾಂಕದಿಂದ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್ಗೆ ರೂ.8682 ರಂತೆ ದರದಂತೆ ಪ್ರತಿ ರೈತನಿಂದ ಗರಿಷ್ಠ 10 ಕ್ವಿಂಟಾಲ್ ಹೆಸರು ಕಾಳು ಉತ್ಪನ್ನವನ್ನು ನೇರವಾಗಿ ಖರೀದಿ ಮಾಡಲಾಗುತ್ತದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆ ಜರುಗಿಸಿ, ಹೆಸರು ಕಾಳು ಉತ್ಪನ್ನ ಖರೀದಿಗಳನ್ನು ಆರಂಭಿಸುವ ಕುರಿತು ಚರ್ಚಿಸಿ, ನಿರ್ದೇಶನ ನೀಡಿದರು.
ಪ್ರಸಕ್ತ ವರ್ಷ ಮುಂಗಾರಿನಲ್ಲಿ ಜಿಲ್ಲೆಯ ಸುಮಾರು 1ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹೆಸರು ಕಾಳು ಬಿತ್ತನೆ ಆಗಿದೆ. ನವಲಗುಂದ ತಾಲೂಕಿನಲ್ಲಿ 38, ಅಣ್ಣಿಗೇರಿ ತಾಲೂಕಿನಲ್ಲಿ ಸುಮಾರು 19, ಧಾರವಾಡ ತಾಲೂಕಿನಲ್ಲಿ 10 ಸಾವಿರ, ಹುಬ್ಬಳ್ಳಿ ತಾಲೂಕಿನಲ್ಲಿ 12 ಸಾವಿರ ಮತ್ತು ಕುಂದಗೋಳ ತಾಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿದೆ ಎಂದರು.
ಅಂದಾಜು 1 ಲಕ್ಷ ಕ್ವಿಂಟಲ್ ಹೆಸರು ರೈತರಿಗೆ ತೊಂದರೆ ಆಗದಂತೆ ನಿಯಮಾನುಸಾರ ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬೇಕು. ರೈತರಿಗೆ ತೊಂದರೆ ಆಗದಂತೆ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಧ್ಯವರ್ತಿಗಳಿಗೆ ಅವಕಾಶವಿಲ್ಲ: ರೈತರಿಂದಲೇ ನೇರವಾಗಿ ಖರೀದಿ ಕೇಂದ್ರಗಳ ಮೂಲಕ ಹೆಸರು ಕಾಳು ಉತ್ಪನ್ನವನ್ನು ಖರೀದಿಸುವದರಿಂದ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಹೇಳಿದರು.
2024-25 ನೇ ಸಾಲಿನ ಮುಂಗಾರು ಹಂಗಾಮಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಉತ್ಪನ್ನವನ್ನು ಖರೀದಿಸಲು ನಾಫೆಡ್ ಸಂಸ್ಥೆಯನ್ನು ಕೇಂದ್ರ ಸರಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಗಳನ್ನಾಗಿ ಗುರುತಿಸಲಾಗಿದೆ ಎಂದು ಹೇಳಿದರು.
ರೈತರ ನೋಂದಣಿಗೆ ಕಾಲಾವಧಿಯನ್ನು ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ 45 ದಿನಗಳವರೆಗೆ ಹಾಗೂ ಹೆಸರುಕಾಳು ಉತ್ಪನ್ನ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಲಾಗಿದೆ ಎಂದರು.
ಪ್ರತಿ ರೈತರಿಂದ ಹೆಸರುಕಾಳನ್ನು ಪ್ರತಿ ಎಕರೆಗೆ 02 ಕ್ವಿಂಟಾಲ್ನಂತೆ ಗರಿಷ್ಟ 10 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಲಾಗಿದೆ. ಖರೀದಿ ಕೇಂದ್ರಗಳಲ್ಲಿ ಹೆಸರುಕಾಳು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು NIC ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಬೆಳೆಗಳ ಉತ್ಪನ್ನವುನ್ನು ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತೀಕರಿಸಿ, ಬಯೋಮೇಟ್ರಿಕ್ ಮೂಲಕ ಹೆಸರುಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಲು ಬಳಸಕ್ಕದ್ದು, ಹಾಗೂ NIC ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸದರಿ ನೋಂದಣಿ ತಂತ್ರಾಂಶವು ಈಗಾಗಲೇ FRUITS ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ. FRUITS ದತ್ತಾಂಶದಲ್ಲಿ ರೈತರಿಗೆ ಸಂಬಂಧಿಸಿದ ವಿವರಗಳನ್ನು ಭೂಮಿ, UIDAI ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂದೀಕರಿಸಲಾಗಿದೆ. ಸದರಿ ವಿವರಗಳನ್ನು ಬೆಂಬಲಬೆಲೆ ಯೋಜನೆಯಡಿ ನೊಂದಣಿ ಮಾಡಲು ಸಿದ್ಧಪಡಿಸಿದ ತಂತ್ರಾಂಶಕ್ಕೆ ವಿದ್ಯುನ್ಮಾನ ರೀತಿಯಲ್ಲಿ ಒದಗಿಸಲಾಗುತ್ತದೆ ಎಂದರು.
ಬೆಂಬಲಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ NIC ತಂತ್ರಾಂಶದಿಂದ ನ್ಯಾಫೆಡ್ ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವುದು. ನ್ಯಾಫೆಡ್ ಸಂಸ್ಥೆಯು ತಮ್ಮ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಹೆಸರುಕಾಳು ಖರೀದಿ ಕೇಂದ್ರಗಳಿಂದ ಖರೀದಿಸತಕ್ಕದ್ದು ಎಂದು ಸರಕಾರದ ಸುತ್ತೋಕೆಯಲ್ಲಿ ತಿಳಿಸಲಾಗಿದೆ ಎಂದರು.
ಖರೀದಿ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ನಾಫೆಡ್ ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೊದಾಮುಗಳನ್ನು ಹೊಂದಿರುವ ಸಧೃಡ PACS, VSSN, FPO ಹಾಗೂ TAPCMS ಸಂಸ್ಥೆಗಳ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಹೆಸರುಕಾಳು ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಬೆಂಬಲ ಬೆಲೆ ಯೋಜನೆಯ ಮಾರ್ಗಸೂಚಿಗಳಂತೆ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮಾಲ್ಯವನ್ನು DBT ಮೂಲಕ ಜಮಾ ಆಗುವಂತೆ ಪಾವತಿ ಮಾಡತಕ್ಕದ್ದು. ಹಾಗೂ ಆವರ್ತ ನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದರು.
ಹೆಸರುಕಾಳು ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಹೆಸರುಕಾಳು ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತನಿಧಿ ಮಾರ್ಗ ಸೂಚಿಗಳನ್ನು ಖರೀದಿದಾರರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಹೇಳಿದರು.
ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸುವ ಪ್ರಗತಿ ವಿವರವನ್ನು ಪ್ರತಿದಿನ ಸರ್ಕಾರಕ್ಕೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಇ-ಮೇಲ್ ಮುಖಾಂತರ ಸಲ್ಲಿಸಬೇಕು. ಕೇಂದ್ರ ಸರ್ಕಾರವು ಘೋಷಿಸಿರುವ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.ಗುಣಮಟ್ಟದ ಹೆಸರುಕಾಳು ಉತ್ಪನ್ನಕ್ಕೆ ಪ್ರತಿ ಕ್ವಿಂಟಾಲ್ಗೆ ರೂ.8682 ರಂತೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು ಎಂದು ಸೂಚಿಸಿದ್ದಾರೆ.
ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಧಾರವಾಡ ಜಿಲ್ಲೆಯಲ್ಲಿನ ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ & ಅಣ್ಣಿಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ತೆರೆಯಲು ಉದ್ದೇಶಿಸಿರುವ ಹೆಸರುಕಾಳು ಉತ್ಪನ್ನದ ಖರೀದಿ ಕೇಂದ್ರಗಳು ಸೂವ್ಯವಸ್ಥಿತವಾಗಿದ್ದು, ಖರೀದಿ ಪ್ರಕ್ರಿಯೆ ಕೈಗೊಳ್ಳಲು ಸದೃಢ ಇರುವ ಬಗ್ಗೆ ಶಾಖಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹುಬ್ಬಳ್ಳಿ ಹಾಗೂ ಉಪನಿರ್ದೇಶಕರು ಕೃಷಿ ಮಾರಾಟ ಇಲಾಖೆ ಧಾರವಾಡ ಜಿಲ್ಲೆ ಧಾರವಾಡ ಇವರು ದೃಡೀಕರಿಸಿರುವ ಅಂಶಗಳನ್ನು ಪರಿಶೀಲಿಸಲಾಗಿ, ಗುರುತಿಸಿದ ಸ್ಥಳಗಳಲ್ಲಿ ಎಫ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳು ಉತ್ಪನ್ನದ ಖರೀದಿ ಕೇಂದ್ರ ತೆರೆದು ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಟಾಸ್ಕಫೋರ್ಸ ಸಮಿತಿಯು ಒಪ್ಪಿ ಸರ್ವಾನುಮತದಿಂದ ತಿರ್ಮಾನಿಸಲಾಯಿಗಿದೆ ಎಂದು ಹೇಳಿದರು.
ಹೆಸರುಕಾಳು ಖರೀದಿ ಕೇಂದ್ರಗಳ ವಿವರಗಳು:
ಧಾರವಾಡ ತಾಲೂಕು: ಟಿ.ಎ.ಪಿ.ಸಿ.ಎಮ್.ಎಸ್ ಧಾರವಾಡ
ಪಿ.ಕೆ.ಪಿ.ಎಸ್ ಉಪ್ಪಿನಬೇಟಗೇರಿ ಮತ್ತು ಹೆಬ್ಬಳ್ಳಿಯಲ್ಲಿ
ಪಿ.ಕೆ.ಪಿ.ಎಸ್ ಹಳೆಹುಬ್ಬಳ್ಳಿ
ಹುಬ್ಬಳ್ಳಿ ತಾಲೂಕು: ಟಿ.ಎ.ಪಿ.ಸಿ.ಎಮ್.ಎಸ್ ಹುಬ್ಬಳ್ಳಿ,
ಪಿ.ಕೆ.ಪಿ.ಎಸ್ ಬ್ಯಾಹಟ್ಟಿ,ಪಿ.ಕೆ.ಪಿ.ಎಸ್ ಹೆಬಸೂರ,
ಪಿ.ಕೆ.ಪಿ.ಎಸ್ ಕೋಳಿವಾಡ ನಂ-1,
ಪಿ.ಕೆ.ಪಿ.ಎಸ್ ನೂಲ್ವಿ
ನವಲಗುಂದ ತಾಲೂಕು:
ಪಿ.ಕೆ.ಪಿ.ಎಸ್ ಹೆಬ್ಬಾಳ, ಪಿ.ಕೆ.ಪಿ.ಎಸ್ ತಿರ್ಲಾಪೂರ,
ಪಿ.ಕೆ.ಪಿ.ಎಸ್ ಆರೇಕುರಹಟ್ಟಿ, ಶಿರೂರ ಗ್ರಾಮದಲ್ಲಿ
ಎಫ್.ಪಿ.ಓ ಮೊರಬ, ಮೊರಬ ಗ್ರಾಮದಲ್ಲಿ
ಪಿ.ಕೆ.ಪಿ.ಎಸ್ ಮೊರಬ,
ಪಿ.ಕೆ.ಪಿ.ಎಸ್ ಹಾಳಕುಸುಗಲ್ಲ,
ಪಿ.ಕೆ.ಪಿ.ಎಸ್. ನವಲಗುಂದ ಮತ್ತು
ಎ.ಪಿ.ಎಮ್.ಸಿ ನವಲಗುಂದದಲ್ಲಿ
ಟಿ.ಎ.ಪಿ.ಸಿ.ಎಮ್.ಎಸ್ ಅಣ್ಣಿಗೇರಿ
ಅಣ್ಣಿಗೇರಿ ತಾಲೂಕು: ಪಿ.ಕೆ.ಪಿ.ಎಸ್ ಅಣ್ಣಿಗೇರಿ
ಟಿ.ಎ.ಪಿ.ಸಿ.ಎಮ್.ಎಸ್ ಅಣ್ಣಿಗೇರಿ
ಕುಂದಗೋಳ ತಾಲೂಕು:
ಪಿ.ಕೆ.ಪಿ.ಎಸ್ ಯಲಿವಾಳ,ಪಿ.ಕೆ.ಪಿ.ಎಸ್ ಯರಗುಪ್ಪಿ
ಬೆಂಬಲ ಬೆಲೆ ಯೋಜನೆಯ ಬಗ್ಗೆ ರೈತರಿಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಹೆಸರುಕಾಳು ಉತ್ಪನ್ನದ ಖರೀದಿಯ ಕಾಲಾವಧಿ, ಖರೀದಿಯ ಪ್ರಮಾಣ, ನೀಡಲಾಗುವ ಕನಿಷ್ಟ ಬೆಂಬಲ ಬೆಲೆ, ಇತ್ಯಾದಿ ಕುರಿತು ಕರಪತ್ರ ಹಾಗೂ ಬ್ಯಾನರ್ಗಳ ಮೂಲಕ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಿ ಖರೀದಿಯ ಪ್ರಕ್ರಿಯೆಯನ್ನು ಹೆಚ್ಚು ಪ್ರಚುರಪಡಿಸುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯದರ್ಶಿಗಳಿಗೆ ಹಾಗೂ ಖರೀದಿ ಏಜೆನ್ಸಿಯ ಶಾಖಾ ವ್ಯವಸ್ಥಾಪಕರುಗಳಿಗೆ ಸೂಚಿಸಿದರು.
ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲು ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಅಥವಾ ಅನಧೀಕೃತ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಕ್ರಮಕೈಗೊಳ್ಳಲು ಖರೀದಿ ಏಜನ್ಸಿಯವರಿಗೆ ಕಟ್ಟುನಿಟ್ಟಿನ ಸೂಚನೆ ಹಾಗೂ ತಕ್ಷಣವೇ ಎನ್.ಐ.ಸಿ ತಂತ್ರಾಂಶದಲ್ಲಿ ಖರೀದಿ ಪ್ರಕ್ರಿಯೆಯ ಸರ್ಕಾರದ ಆದೇಶದಂತೆ ನೋಂದಣಿ ಕಾರ್ಯವನ್ನು ಪ್ರಾರಂಭಿಸಲು ತಿಳಿಸಿದರು.
ಧಾರವಾಡ, ಹುಬ್ಬಳ್ಳಿ, ಅಣ್ಣಿಗೇರಿ, ಕುಂದಗೋಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳಿಗೆ ಸಮಿತಿಗಳ ವ್ಯಾಪ್ತಿಯಲ್ಲಿ ಬರುವ ಖರೀದಿ ಕೇಂದ್ರಗಳಿಗೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು ಖರೀದಿ ಕೇಂದ್ರಗಳಲ್ಲಿ ಮೇಲ್ವಿಚಾರಣೆ ಮತ್ತು ಸೂಕ್ತ ಪ್ರಚಾರ ಕೈಗೊಂಡು ಖರೀದಿ ಪ್ರಕ್ರಿಯೆಯು ಸುಗಮವಾಗಿ ನಡೆಯಲು ಅವಶ್ಯಕ ಕ್ರಮ ಕೈಗೊಳ್ಳಲು ಸೂಚಿಸಿದರು.
ಸಭೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪನಿರ್ದೇಶಕ ವಿ.ಎಂ.ಲಮಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಸಿ.ಭದ್ರಣ್ಣವರ, ಧಾರವಾಡ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಕುಂದಗೋಳ ತಹಶಿಲ್ದಾರರು, ಜಿಲ್ಲೆಯ ಎಲ್ಲ ಎಪಿಎಂಸಿ ಮಾರುಕಟ್ಟೆಗಳ ಕಾರ್ಯದರ್ಶಿಗಳು ಹಾಜರಿದ್ದರು.




