ಊರೆಂದಮೇಲೆ… ಕೊಳಕು ಮನಸುಗಳ ತರಲೆ…

3 years ago

#Village #dirty #minds #upendra #shashikanthyadahalli

“ಊರೆಂದಮೇಲೆ ಹೊಲಗೇರಿ ಇದ್ದೇ ಇರುತ್ತೆ. ಅಂತವರನ್ನು ಬಿಟ್ಟಾಕೋನಾ” ಎಂದು ಸ್ಟಾರ್ ನಟ ಉಪೇಂದ್ರ ಹೇಳಿದ ಮಾತು ಈಗ ವಿವಾದಕ್ಕೆ ಗುರಿಯಾಗಿದೆ. ಹಾರವ ಸಂಜಾತ ಈ ನಟನ ಮಾತಿನ ವಿರುದ್ದ ಜಾಲತಾಣಗಳಲ್ಲಿ ಪ್ರತಿಭಟನೆಗಳೂ ಜೋರಾಗಿವೆ. ಇದು ಉಪೇಂದ್ರನೊಬ್ಬನ ನುಡಿಯಲ್ಲಾ, ಬಹುತೇಕ ಮೇಲ್ಜಾತಿ ಮೇಲ್ವರ್ಗದವರ ಬಾಯಲ್ಲಿ ಆಗಾಗ ಕೇಳಿ ಬರುವ ಗಾದೆ.

ಊರು ಮತ್ತು ಕೇರಿ ಎನ್ನುವ ವಿಭಜನೆ ಮಾಡುವ ಮೂಲಕ ಮೇಲುಕೀಳುಗಳ ಸೃಷ್ಟಿಸಿದವರು ಯಾರು? ಇದೇ ವೈದಿಕಶಾಹಿಗಳು. ಹೊಲಗೇರಿ ಅಂದರೆ ಅಸಹ್ಯ, ಹೊಲಗೇರಿ ಅಂದ್ರೆ ಮನುಷ್ಯರಲ್ಲದ ಮನುಷ್ಯರಂತಿರುವ ಹೊಲಸು ಪ್ರಾಣಿಗಳು ವಾಸಿಸುವ ನಿಷಿದ್ಧ ಸ್ಥಳ. ಹೊಲಗೇರಿ ಅಂದರೆ ಅನಾಗರಿಕ ಅಸ್ಪೃಶ್ಯರು ಇರುವ ಕೊಳಚೆ ಪ್ರದೇಶ ಎನ್ನುವ ಕೊಳಕು ಮನಸ್ಥಿತಿ ಮೇಲ್ಜಾತಿಯರ ಮೆದುಳಲ್ಲಿ ಅವರ ಡಿಎನ್ಎ ವಂಶಾವಳಿ ಮೂಲಕ ಬಂದಿರುವ ರೋಗ.

ಅದಕ್ಕೆ ಪೂರಕವಾಗಿ ಊರೆಂದರೆ ಹೊಲಗೇರಿ ಇದ್ದೇ ಇರುತ್ತೆ ಎನ್ನುವ ಗಾದೆಯನ್ನು ಸೃಷ್ಟಿಸಿದವರೂ ಇದೇ ಮೇಲ್ವರ್ಗದ ಮೇಧಾವಿಗಳು(?). ಇದಕ್ಕೆ ಪೂರಕವಾಗಿ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವ ಸುಳ್ಳು ಸಮರ್ಥನೆ ಬೇರೆ. ಈ ವೇದದ ಸೃಷ್ಟಿಕರ್ತರ ವಿಕೃತ ಸೃಷ್ಟಿಯೇ ಈ ವರ್ಣ ವರ್ಗ ವ್ಯವಸ್ಥೆ. ಇವರೇ ತಮ್ಮ ವರ್ಣವ್ಯವಸ್ಥೆಯ ಪ್ರತಿಪಾದನೆಗೆ ಹೀಗೆ ಹಲವಾರು ವಿಕ್ಷಿಪ್ತ ಗಾದೆಗಳನ್ನೂ ಹುಟ್ಟು ಹಾಕಿ ಜನಪದರ ತಲೆಗೆ ಕಟ್ಟಿದರು. ಉದಾಹರಣೆಗೆ ಲಿಂಗತಾರತಮ್ಯವನ್ನು ಸಮರ್ಥಿಸಲೆಂದೇ ” ಹೆಂಗಸರ ಬುದ್ದಿ ಮೊಣಕಾಲು ಕೆಳಗೆ” ಎನ್ನುವಂತಹ ಗಾದೆಗಳ ಜನಕರೂ ಇದೇ ಮೇಲ್ಜಾತಿಯ ಪುರುಷಪುಂಗವರು. ಇಂತಹ ಕೆಲವಾರು ಜೀವವಿರೋಧಿ, ಜನವಿರೋಧಿ ಗಾದೆಗಳು ಸಮಾಜದ ಅವಿಭಾಜ್ಯ ಅಂಗಗಳಾಗಿವೆ.

ಎರಡೂವರೆ ದಶಕದ ಹಿಂದೆ ಬಾಗಲಕೋಟೆಯಲ್ಲಿ ಸಾಹಿತ್ಯ ಅಕಾಡೆಮಿಯು ಯುವಕರಿಗೆ ಸಾಹಿತ್ಯ ಕಾರ್ಯಾಗಾರವನ್ನು ಆಯೋಜಿಸಿತ್ತು. ಆ ಶಿಬಿರದ ನಿರ್ದೇಶಕರು ಬಂಡಾಯ ಸಾಹಿತ್ಯ ಸಂಘಟನೆಯ ಪ್ರಮುಖ ಅಂಗವಾಗಿದ್ದವರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತಾಡುತ್ತಾ “ಊರೆಂದಮೇಲೆ ಹೊಲಗೇರಿ ಇದ್ದೇ ಇರುತ್ತೆ” ಎಂದು ಹೇಳಿದ್ದು ಕೇಳಿ ನನಗೆ ಕಿರಿಕಿರಿಯನ್ನಿಸಿತು. ಊಟದ ಸಮಯದಲ್ಲಿ ನನ್ನ ಅಸಮಾಧಾನ ತೋಡಿಕೊಂಡೆ. ಅದು ಜೀವವಿರೋಧಿ ಗಾದೆ, ನಿಮ್ಮಂತಾ ಬಂಡಾಯದವರ ಬಾಯಲ್ಲಿ ಬರಬಾರದಿತ್ತು ಎಂದು ಹೇಳಿದೆ. ಪ್ರಶ್ನೆ ಕೇಳಿ ತಬ್ಬಿಬ್ಬಾದರು. ಆ ಜನವಿರೋಧಿ ಗಾದೆ ಉಂಟುಮಾಡುವ ಬಾಧೆಯನ್ನು ಅರಿಯದ ಅವರೂ ಉದ್ದೇಶಪೂರ್ವಕವಾಗಿ ಹೇಳಿರದೇ ಲೋಕಾರೂಢಿಯಾಗಿ ಹೇಳಿದ್ದರು. ಆದರೆ ನಾನು ಪ್ರಶ್ನೆ ಮಾಡಿದ್ದೇ ತಡ ಎಚ್ಚರಗೊಂಡರು. ಆದ ಅಚಾತುರ್ಯ ಅವರ ಅರಿವಿಗೆ ಬಂತು. ಉತ್ತರಿಸಲು ತಡಕಾಡಿದ್ರು. ತಪ್ಪನ್ನು ಒಪ್ಪಿಕೊಳ್ಳುವ ಜಾಯಮಾನದವರಲ್ಲದ ಆ ಬಂಡಾಯಿಗಳು ” ಅದೂ ನಾನು ಹೇಳಿದ್ದು ಹಾಗಲ್ಲಾ. ಆ ಶಬ್ದ ಹೊಲಗೇರಿ ಅಂತಲ್ಲಾ ವಲ್ಗರ್ ಅಂತಾ ಹೇಳಿದ್ದು. ಇಂಗ್ಲಿಷಿನ ವಲ್ಗರ್ ಶಬ್ದದ ಅರ್ಥ ಕನ್ನಡದಲ್ಲಿ ಕೆಟ್ಟದ್ದು ಅಂತಾ. ಅಂದ್ರೆ ಊರು ಅಂದ ಮೇಲೆ ಕೆಟ್ಟದ್ದು ಅಂತಾ ಇದ್ದೇ ಇರುತ್ತೆ ಅಂತಾ ನಾನು ಹೇಳಿದ್ದು” ಎಂದು ಹೇಳಿ ತಿಪ್ಪೆ ಸಾರಿಸಿ ಯಾಮಾರಿಸಲು ನೋಡಿದರು.

ಇದು ಕೇವಲ ಗಾದೆಯ ಸಮಸ್ಯೆಯಲ್ಲಾ. ಕೆಳವರ್ಗದ ಕೇರಿಯವರ ಕುರಿತು ಮೇಲಿನವರ ಮನಸ್ಥಿತಿಯೇ ಈ ರೀತಿಯದ್ದಾಗಿದೆ. ಈಗಲೂ ಯಾವುದೇ ಹಳ್ಳಿಗಳಿಗೆ ಹೋಗಿ ನೋಡಿದರೂ ಹೊಲೆಯ ಮಾದಿಗರ ಕೇರಿಗಳು ಊರಾಚೆ ಸಪರೇಟಾಗಿ ಇರುತ್ತವೆ. ಯಾವ ಊರಲ್ಲೂ ಮೇಲ್ವರ್ಗದವರು ವಾಸಿಸುವ ಪ್ರದೇಶದ ಒಳಗೆ ಕೆಳವರ್ಗದವರ ಮನೆ ಇರಲು ಆಸ್ಪದವೇ ಇಲ್ಲ. ಪಟ್ಟಣಗಳಲ್ಲೂ ಜಾತಿ ಕೇಳಿ ಮನೆ ಬಾಡಿಗೆಗೆ ಕೊಡುವ ಇಲ್ಲವೇ ನಿರಾಕರಿಸುವ ವಿದ್ಯಮಾನ ಈಗಲೂ ವಾಸ್ತವ. ಗ್ರಾಮೀಣ ಭಾಗದಲ್ಲಿರುವ ಈ ಮೇಲ್ಜಾತಿಯವರೆಲ್ಲಾ ಶ್ರೀಮಂತರೇನಲ್ಲಾ. ಕೆಲವೇ ಕೆಲವು ಭೂಮಾಲೀಕರ ಭೂಮಿಯಲ್ಲಿ ಮೇಲ್ಜಾತಿಯವರೂ ಕೆಳಜಾತಿಯವರೊಂದಿಗೆ ಕೂಲಿ ಕೆಲಸ ಮಾಡುತ್ತಲೇ ತಮ್ಮ ಜಾತಿ ಅಂತಸ್ತನ್ನು ಕಾಪಾಡಿಕೊಂಡಿರುತ್ತಾರೆ. ಆರ್ಥಿಕ ಅಸಮಾನತೆಯನ್ನು ಮೀರಿದ್ದು ಈ ಜಾತಿ ವ್ಯವಸ್ಥೆ.

ಹೀಗಾಗಿ ಉಪೇಂದ್ರ ಒಬ್ಬ ಸೆಲೆಬ್ರಿಟಿಯಾಗಿದ್ದರಿಂದ ನಮ್ಮ ಕಣ್ಣಿಗೆ ಆತನ ಕೊಳಕು ಬಾಧಿಸುತ್ತಿದೆ. ಆದರೆ ಅವನದೇ ರೀತಿಯ ಮನಸ್ಥಿತಿ ಮೇಲ್ಜಾತಿ ಶ್ರೇಷ್ಟತೆಯ ವ್ಯಸನ ಪೀಡಿತರ ಹೆಮ್ಮೆಯಾಗಿದೆ. ಊರು ಕೇರಿ ಎಂಬ ಬೇಧ ನಿರಾಕರಿಸಲಾಗದ ನಿಜ. ಅದೆಷ್ಟೇ ದಾರ್ಶನಿಕರು ಬಂದು ಜಾತಿವಿನಾಶಕ್ಕೆ ಪ್ರಯತ್ನಿಸಿದರೂ ಬದಲಾಗದಷ್ಟು ಜಾತಿಬೇರುಗಳು ಸಮಾಜದ ಸುಪ್ತಪ್ರಜ್ಞೆಯ ಆಳಕ್ಕೆ ಇಳಿದಿವೆ. ಈ ಸಂವಿಧಾನ, ಕಾನೂನು ಕಟ್ಟಳೆಗಳೂ ಸಹ ಈ ಜಾತಿ ವ್ಯವಸ್ಥೆಯ ತಾರತಮ್ಯ ಅಳಿಸಿ ಹಾಕಿ ಸಮಸಮಾಜ ನಿರ್ಮಿಸುವಲ್ಲಿ ವಿಫಲವಾಗಿವೆ. ಈ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಬಲಾಢ್ಯವಾಗಿರುವ ಕೆಳವರ್ಗದವರೂ ಅಸ್ಪೃಶ್ಯರೇ, ಆಧಿಕಾರದಲ್ಲಿರುವ ತಳವರ್ಗದವರೂ ತಿರಸ್ಕೃತರೇ. ಈ ಮೇಲ್ಜಾತಿ ವ್ಯವಸ್ಥೆಯ ಚಕ್ರವ್ಯೂಹವನ್ನು ಬೇಧಿಸಲು ಪ್ರಯತ್ನಿಸಿ ಅದೆಷ್ಟೋ ಅಭಿಮನ್ಯುಗಳು ಅಸುನೀಗಿದ್ದಾರೆ. ಹಲ್ಲೆಗೊಳಗಾಗಿದ್ದಾರೆ, ಹತ್ಯೆಯಾಗಿದ್ದಾರೆ. ಅತ್ಯಾಚಾರಕ್ಕೆ ಒಳಗಾಗಿದ್ದಾರೆ.

ಪಾಪ ಈ ವಿಕ್ಷಿಪ್ತ ಮನಸ್ಸಿನ ವ್ಯಕ್ತಿ ಉಪೇಂದ್ರ ಹೇಳಬಾರದ್ದನ್ನು ಹೇಳಿ ಸಿಕ್ಕಾಕಿಕೊಂಡಿದ್ದಾನೆ. ತನ್ನ ಸಿನೆಮಾಗಳ ಮೂಲಕ ಸಮಾಜಕ್ಕೆ ವಿಕೃತಿಯನ್ನೇ ಕಟ್ಟಿ ಕೊಟ್ಟಿರುವ ಈ ವ್ಯಕ್ತಿಗೆ ನಿಜಕ್ಕೂ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎನ್ನಿಸುತ್ತದೆ. ಬಹಿರಂಗವಾಗಿ ಹೇಳಿಕೆ ಕೊಟ್ಟು ದಲಿತರ ಅಸ್ಮಿತೆಯನ್ನು ಘಾಸಿಗೊಳಿಸಿದ ಇಂತವರ ವಿರುದ್ದ ಪ್ರತಿಭಟಿಸಬಹುದು, ಅಟ್ರಾಸಿಟಿ ಕೇಸ್ ದಾಖಲಿಸಬಹುದು, ಇಲ್ಲವೇ ಇವರ ಕೊಳಕು ಮನಸ್ಥಿತಿಯನ್ನು ಬೆತ್ತಲುಗೊಳಿಸಬಹುದು. ಆದರೆ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ಉಪೇಂದ್ರನಂತಹ ಮನಸ್ಥಿತಿಯನ್ನೇ ಹೊಂದಿರುವ ಬಹುಸಂಖ್ಯಾತ ಮೇಲ್ಜಾತಿ ವರ್ಗದವರನ್ನು ಏನು ಮಾಡುವುದು? ಇಂತವರ ಮೆದುಳಿನಲ್ಲಿರುವ ಕಲ್ಮಶವನ್ನು ಸ್ವಚ್ಛಗೊಳಿಸಿ ಸಮಸಮಾಜವನ್ನು ನಿರ್ಮಿಸಲು ಇನ್ನೂ ಎಷ್ಟು ಸಲ ಎಷ್ಟು ಜನ ಬುದ್ದ ಬಸವ ಪೆರಿಯಾರ್ ನಾರಾಯಣಗುರುಗಳಂತವರು ಹುಟ್ಟಿ ಬರಬೇಕು. ಅಂಬೇಡ್ಕರರ ಸಂವಿಧಾನವೇನೋ ಎಲ್ಲಾ ಜಾತಿ ವರ್ಗದವರಿಗೆ ಸಮಾನ ಹಕ್ಕುಗಳನ್ನು ಕೊಟ್ಟಿದೆ. ಆದರೆ ಸಂವಿಧಾನವನ್ನೇ ಬದಲಿಸಿ ಮನುಧರ್ಮಶಾಸ್ತ್ರದ ಆಧಾರದಲ್ಲಿ ಹಿಂದುತ್ವವಾದಿ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸುವ ಪ್ಯಾಸಿಸ್ಟ್ ಶಕ್ತಿಗಳನ್ನು ಹೇಗೆ ಎದುರಿಸುವುದು? ಊರು ಅಂದಮೇಲೆ ಹೊಲಗೇರಿ ಇರುತ್ತದೋ ಇಲ್ಲವೋ ಅನ್ನುವುದಕ್ಕಿಂತಲೂ ಕೊಳಕು ಮನಸ್ಸಿನ ಮೇಲ್ಜಾತಿ ಕ್ರಿಮಿಗಳಂತೂ ಇದ್ದೇ ಇರುತ್ತಾರೆ. ಇಂತವರಲ್ಲಿ ಉಪೇಂದ್ರ ಒಂದು ತೃಣ ಮಾತ್ರ.

  • ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply