ಸತೀಶ್ ಜಾರಕಿಹೊಳಿ ಸೋಲಿಸಲು ಪಣತೊಟ್ಟಿದ್ದ ಉಮೇಶ್ ಕತ್ತಿ
ವಿವಾದಗಳಿಂದಲೇ ಸುದ್ದಿಯಲ್ಲಿ ಸದ್ದು ಮಾಡುತ್ತಿದ್ದ ಕತ್ತಿ
ಹಿರಣ್ಯ ಕೇಶಿ ಸಕ್ಕರೆ ಕಾರ್ಖಾನೆ, ಶಿಕ್ಷಣ ಸಂಸ್ಥೆಗಳ ಮಾಲೀಕ
ಬೆಂಗಳೂರು: ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (62) ಹೃದಯಾಘಾತದಿಂದ ಮಂಗಳವಾರ ರಾತ್ರಿ ಕಾಲವಶರಾಗಿದ್ದಾರೆ.
ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲಿಯೇ ಕುಸಿದುಬಿದ್ದಿದ್ದರು. ಹತ್ತು ನಿಮಿಷಗಳಾದರೂ ಹೊರಗೆ ಬಾರದೇ ಇದ್ದದ್ದರಿಂದ ಕುಟುಂಬದವರು ಬಾಗಿಲು ತೆರೆದು ಒಳಗೆ ಹೋದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು. ಉಮೇಶ್ ಕತ್ತಿ ಅವರು ಪತ್ನಿ ಶೀಲಾ, ಮಗ ನಿಖಿಲ್, ಮಗಳು ಸ್ನೇಹಾ ಅವರನ್ನು ಅಗಲಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ 1961ರ ಮಾರ್ಚ್ 14ರಂದು ಅವರು ಜನಿಸಿದ್ದರು ಬಿ.ಎ. ಪದವಿ ಪೂರೈಸಿದ್ದ ಅವರು, ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ 1985ರಲ್ಲಿ ಮೊದಲ ಬಾರಿ ಶಾಸಕರಾದರು. ಆರು ಬಾರಿ ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು.
ಜನತಾ ಪರಿವಾರದ ಹಿನ್ನೆಯಿಂದ ರಾಜಕಾರಣ ಪ್ರವೇಶಿಸಿದ ಕತ್ತಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸೇರಿದ್ದರು. 1996ರಿಂದ 1999ರವರೆಗೆ ಸಕ್ಕರೆ ಸಚಿವ, 2008ರಿಂದ ಕೃಷಿ ಸಚಿವ ಮತ್ತು 2010ರಿಂದ 2013ರವರೆಗೆ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2021ರ ಆಗಸ್ಟ್ ನಿಂದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವರಾಗಿದ್ದರು.
ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಪ್ರವೃತ್ತಿ ಅವರದಾಗಿತ್ತು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಪದೇಪದೇ ಎತ್ತುತ್ತಿದ್ದರು. ಅನ್ನ ಭಾಗ್ಯ ಯೋಜನೆ ನಿಲ್ಲಿಸುವ ಕುರಿತು ಆಗಾಗ ಮಾತಾಡುತ್ತಿದ್ದರು, ಜೊತೆಗೆ ಸಿಎಂ ಹುದ್ದೆಯ ಆಕಾಂಕ್ಷಿ ಕೂಡ ಆಗಿದ್ದರು. ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿಯವರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸುವುದಾಗಿ ಪಣತೊಟ್ಟಿದ್ದರು.



