ಇಬ್ಬರು ದಿಟ್ಟತನದ ನಾಯಕರುಗಳ ನೆನಪುಗಳು

1 year ago

ಸರ್ದಾರ್ ವಲ್ಲಬಾಯ್ ಪಟೇಲ್ ಭಾರತದ ಉಕ್ಕಿನ ಮನುಷ್ಯರಾದರೆ, ಶ್ರೀಮತಿ ಇಂದಿರಾ ಗಾಂಧಿ ರವರು ಭಾರತ ದೇಶ ಕಂಡ ಉಕ್ಕಿನ ಮಹಿಳೆ, ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಇವರಿಬ್ಬರೂ ದಿಟ್ಟತನಕ್ಕೆ ಮತ್ತು ಸಾಹಸಮಯ ಬದುಕಿಗೆ ಸಾಕ್ಷಿಗಳಾಗಿದ್ದಾರೆ.

ಸರ್ದಾರ್ ವಲ್ಲಬಾಯ್ ಪಟೇಲ್, ಮಹಾತ್ಮಾ ಗಾಂಧೀಜಿಯವರ ಅತ್ಯಂತ ಪ್ರೀತಿಯ ಒಡನಾಡಿಯಾಗಿದ್ದು ಗಾಂಧೀಜಿ ರವರು, ನೆಹರೂರವರನ್ನು ಪ್ರೀತಿಸುತ್ತಿದ್ದಷ್ಟೇ ಸರ್ದಾರ್ ವಲ್ಲಬಾಯ್ ಪಟೇಲರನ್ನು ಪ್ರೀತಿಸುತ್ತಿದ್ದರು.. ಅದೇ ರೀತಿಯಲ್ಲಿ ಪಟೇಲರು ಗಾಂಧೀಜಿಯವರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ರೈತ ಹೋರಾಟದ ಮೂಲಕ ಮುಂಚೂಣಿಗೆ ಬಂದಂತಹ ಇವರು ಮುಂದಿನ ದಿನಗಳಲ್ಲಿ ಗಾಂಧೀಜಿಯವರ ನೇತೃತ್ವದ ಉಪ್ಪಿನ ಸತ್ಯಾಗ್ರಹ ,ಕ್ವಿಟ್ ಇಂಡಿಯಾ ಚಳುವಳಿ, ಮುಂತಾದಂತಹ ಎಲ್ಲ ಸಂದರ್ಭಗಳಲ್ಲೂ ಜೊತೆ ಜೊತೆಗೆ ,ಹೆಜ್ಜೆ ಹಾಕಿದ್ದಾರೆ, ದೇಶಕ್ಕಾಗಿ ಹಲವಾರು ಬಾರಿ ಕಠಿಣವಾದ ಸೆರೆಮನೆ ವಾಸವನ್ನು ಅನುಭವಿಸಿದ್ದಾರೆ.

ವಿಶೇಷವಾಗಿ 1947ರ ನಂತರ ದೇಶಕ್ಕೆ ಸ್ವಾತಂತ್ರ ಬಂದು ಸಂಕಷ್ಟದ ಸಮಯದಲ್ಲಿ ಇದ್ದ ದಿನಗಳಲ್ಲಿ ಕಠಿಣವಾದ ನಿರ್ಧಾರಗಳ ಮೂಲಕ ದೇಶದ ಸಮಗ್ರತೆಯನ್ನು ಎತ್ತಿ ಹಿಡಿದಂತಹ ಮಹಾನ್ ಪುರುಷರು ಇವರಾಗಿದ್ದಾರೆ. ಇವರ ಕಾರಣದಿಂದಾಗಿ 540 ಕ್ಕೂ ಹೆಚ್ಚು ಸಂಸ್ಥಾನಗಳು ಭಾರತದ ದೇಶದಲ್ಲಿ ವಿಲೀನ ವಾಗಿ ಭಾರತ ದೇಶ ತನ್ನ ಸಮಗ್ರತೆಯನ್ನ ಮೆರೆಯಲು ಸಾಧ್ಯವಾಯಿತು .ಕೆಲವರಿಗೆ ಪ್ರೀತಿಯಿಂದ, ಕೆಲವರನ್ನ ಬೆದರಿಸಿ ಮತ್ತೆ ಕೆಲವರಿಗೆ ಶಸ್ತ್ರಾಸ್ತ್ರಗಳ ಮೂಲಕ, ಪಾಠ ಕಲಿಸಿ ಎಲ್ಲಾ ರಾಜರನ್ನು ಭಾರತದ ದೇಶದಲ್ಲಿ ವಿಲೀನವಾಗುವಂತೆ ಮಾಡಿದಂತಹ ಕೀರ್ತಿ ಇವರಿಗೆ ಸಲ್ಲುತ್ತದೆ.

ಇವರು ಗಟ್ಟಿಯಾದಂತಹ ನಿರ್ಧಾರಗಳಿಗೆ ಸದಾ ಸಿದ್ದರಾಗಿದ್ದರು. ತಮ್ಮ 75 ವರ್ಷದ ಜೀವಿತದ ಅವಧಿಯಲ್ಲಿ ದೇಶಕ್ಕಾಗಿಯೇ ಬಹಳಷ್ಟು ಸಮಯವನ್ನು ಮೀಸಲಿಟ್ಟಿರುತ್ತಾರೆ. ೧೮೭೫ ರಲ್ಲಿ ಹುಟ್ಟಿದಂತಹ ಇವರು ಸಾವಿರ 1950ರಲ್ಲಿ ನಮ್ಮನ್ನು ಬಿಟ್ಟು ಅಗಲಿರುತ್ತಾರೆ. ಸ್ವಾತಂತ್ರ ಬಂದು ಕೇವಲ ಎರಡು ವರ್ಷದ ಅವಧಿಯಲ್ಲಿ ಗಾಂಧೀ ರವರನ್ನು ಕಳೆದುಕೊಂಡ ದೇಶ ನಂತರ ಅಷ್ಟೇ ಎತ್ತರದ ವ್ಯಕ್ತಿತ್ವದ ಸರ್ದಾರ್ ವಲ್ಲಬಾಯ್ ಪಟೇಲರನ್ನು ಕಳೆದುಕೊಂಡಿತು.

ಸರ್ದಾರ್ ವಲ್ಲಬಾಯ್ ಪಟೇಲರ ಕೊಡುಗೆ ಕರ್ನಾಟಕದ ರಾಜ್ಯಕ್ಕೆ ಜನತೆಗೆ ಹೆಚ್ಚು ಗೌರವಕ್ಕೆ ಪಾತ್ರರಾಗಿದ್ದಾರೆ ಕಾರಣ ನಿಜಾಮರ ಆಡಳಿತದಲ್ಲಿದ್ದಾರೆ ಹೈದರಾಬಾದ್ ಸಂಸ್ಥಾನವನ್ನು ಭಾರತ ದೇಶದಲ್ಲಿ ವಿಲೀನಗೊಳಿಸಲು ಅವರು ಅನುಸರಿಸಿದ ಮಾರ್ಗ ಮತ್ತು ದಿಟ್ಟತನದ ಕ್ರಮಗಳು ಅಂದು ಕಲ್ಯಾಣ ಕರ್ನಾಟಕ ವೆಂದು ಕರೆಯುವರು ಪ್ರದೇಶವೆಲ್ಲವೂ ಭಾರತ ದೇಶದಲ್ಲಿ ವಿಲೀನ ವಾಗಿ ನಮ್ಮ ನಾಡಿನ ಭಾಗವಾಗಿ ಉಳಿದುಕೊಂಡಿರುತ್ತದೆ ಈ ಹಿನ್ನೆಲೆಯಲ್ಲಿ ಸರ್ದಾರ್ ವಲ್ಲಬಾಯ್ ಪಟೇಲರ ಪ್ರತಿಮೆಗಳು ಗುಲ್ಬರ್ಗ ರಾಯಚೂರು ಬೀದರ್ ಬಳ್ಳಾರಿ ಮುಂತಾದಂತಹ ಪ್ರದೇಶಗಳಲ್ಲಿ ಇಂದಿಗೂ ರಾರಾಜಿಸುತ್ತಿದೆ ಅವರಿಗೆ ಗೌರವವನ್ನು ಸಮರ್ಥಿಸುತ್ತಿದೆ.

ಅಕ್ಟೋಬರ್ 31 ಸರ್ದಾರ್ ವಲ್ಲಬಾಯ್ ಪಟೇಲರ ಹುಟ್ಟಿದ ದಿನವಾದರೆ ಶ್ರೀಮತಿ ಇಂದಿರಾ ಗಾಂಧಿ ರವರ ಹತ್ಯೆಯಾದ ದಿನವೂ ಆಗಿದೆ. ಶ್ರೀಮತಿ ಇಂದಿರಾ ಗಾಂಧಿರವರು ಸಹ ಪಟೇಲರಷ್ಟೇ ನೆನಪಿನಲ್ಲಿ ಉಳಿಯುವಂತಹ ಎದೆಗಾರಿಕೆಯ ನಾಯಕಿ‌.

ಅವರು ತೆಗೆದುಕೊಂಡಂತಹ ಕೆಲವು ನಿರ್ಧಾರಗಳನ್ನು ಯಾವ ಪ್ರಧಾನಮಂತ್ರಿಗಳು ಸಹ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 1974 ರಲ್ಲಿ ಪೊಕ್ರಾನಲ್ಲಿ ಅಣುಪರೀಕ್ಷೆಯನ್ನ ಮಾಡಿದಂತಹ ತೀರ್ಮಾನ, 1971ರಲ್ಲಿ ಪಾಕಿಸ್ತಾನದ ಮೇಲೆ ಯುದ್ಧವನ್ನು ಮಾಡಿ ಬಾಂಗ್ಲಾದೇಶದ ಸ್ಥಾಪನೆಗೆ ಕಾರಣಕರ್ತರಾದದ್ದು, 1982 ಹಾಗೂ 83ರ ಅವಧಿಯಲ್ಲಿ ಪಂಜಾಬಿನಲ್ಲಿ ದೇಶ ವಿರೋಧಿ ಚಳುವಳಿಯನ್ನ ಮಟ್ಟ ಹಾಕಲು ಬ್ಲೂಸ್ಟಾರ್ ಆಪರೇಷನ್ ಎಂಬ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದು, ಇದೆಲ್ಲದರ ಜೊತೆಗೆ ಉಳುವವನಿಗೆ ಭೂಮಿ ಎಂಬ ಕ್ರಾಂತಿಕಾರಿಯದಂತಹ ಕಾನೂನನ್ನು ಜಾರಿಗೆ ತಂದು ಭಾರತ ದೇಶದ ಲಕ್ಷಾಂತರ ಭೂಮಿರಹಿತರಿಗೆ ಭೂಮಿಯ ಮಾಲೀಕರನ್ನಾಗಿಸಿದಂತಹ ಮಹಾನ್ ಕಾರ್ಯವನ್ನು ಮಾಡಿದಂತಹ ಧೈರ್ಯವಂತೆ ಇವರಾಗಿದ್ದಾರೆ‌.

1971 ರಲ್ಲಿ ಅಮೆರಿಕದ ಅಧ್ಯಕ್ಷರು ಭಾರತಕ್ಕೆ ಉಚಿತವಲ್ಲದ ಸಲಹೆಯನ್ನ ಒತ್ತಡದ ರೀತಿಯಲ್ಲಿ ಕೊಟ್ಟ ಸಂದರ್ಭದಲ್ಲಿ, ಅಮೆರಿಕಾದ ನೆಲದಲ್ಲಿ ನಿಂತು ಅಮೆರಿಕ ಅಧ್ಯಕ್ಷರನ್ನ ಧಿಕ್ಕರಿಸಿ, ಪಾಕಿಸ್ತಾನದ ಮೇಲೆ ಯುದ್ಧವನ್ನ ಸಾರಿದಂತಹ ಘಟನೆ ಸಾಮಾನ್ಯವಾದುದಲ್ಲ. ಅದೇ ರೀತಿಯಲ್ಲಿ ಉಳ್ಳವರ ಬಳಿಯಲ್ಲಿದ್ದ ಲಕ್ಷಾಂತರ ಎಕರೆ ಭೂಮಿಯನ್ನು ಕಾನೂನಿನ ಮೂಲಕ ಬಡವರಿಗೆ ಹಂಚುವ ಸಂದರ್ಭದಲ್ಲಿ ಅವರಿಗೆ ಬಂದಂತಹ ಒತ್ತಡ ರಾಜಕೀಯದ ಬೆದರಿಕೆಗಳು ಸಾಮಾನ್ಯವೇನೆಲ್ಲ.

ಆದರೆ ಅವುಗಳನ್ನ ಲೆಕ್ಕಿಸದೆ ಮುನ್ನುಗ್ಗಿದರು, ಇದೇ ರೀತಿಯಲ್ಲಿ ಪಂಜಾಬಿನಲ್ಲಿ ಅಮೃತ್ಸರದ ಮೇಲೆ ಬ್ಲೂ ಸ್ಟಾರ್ ಆಪರೇಷನ್ ಯೋಜನೆಯನ್ನ ರೂಪಿಸುವ ಸಂದರ್ಭದಲ್ಲಿ ಮುಂದಿನ ಪರಿಣಾಮಗಳ ಬಗ್ಗೆ ಲೆಕ್ಕಿಸದೆ ದೇಶದ ಭದ್ರತೆ ಮತ್ತು ಐಕ್ಯತೆಗಾಗಿ ಬದ್ಧತೆಯಿಂದ ಕರ್ತವ್ಯವನ್ನು ನಿರ್ವಹಿಸಿದರು. ಅದರ ಪರಿಣಾಮವೇ ಅವರ ಹತ್ಯೆ.

20 ಅಂಶದ ಕಾರ್ಯಕ್ರಮಗಳ ಮೂಲಕ ಬಡವರ ಬದುಕಿನಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲಕ್ಕೆ ಎತ್ತುವ ಕೆಲಸವನ್ನು ಮಾಡಿದ ಆಡಳಿತತ್ವಕವಾದ  ನಿರ್ಧಾರಗಳು ವಿಶ್ವದ ಗಮನವನ್ನು ಸೆಳೆದಿರುತ್ತದೆ.

ನಮ್ಮ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೈನಾ ದೇಶದ ವಿಚಾರದಲ್ಲಿ ಇಂದಿರಾಗಾಂಧಿರವರು ತೆಗೆದುಕೊಂಡ ಕಠಿಣ ನಿರ್ಧಾರದ ರೀತಿಯಲ್ಲಿ ಬೇರೆ ಯಾವ ಪ್ರಧಾನಮಂತ್ರಿಗಳು ತೆಗೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ.1972ರಲ್ಲಿ ಚೀನಾ ದೇಶವನ್ನು ಧಿಕ್ಕರಿಸಿ ಸಿಕ್ಕಿಂ ಪ್ರದೇಶವನ್ನು ಭಾರತದ ಒಂದು ರಾಜ್ಯವನ್ನಾಗಿ ಘೋಷಿಸಿದಂತಹ ನಾಯಕಿ ಶ್ರೀಮತಿ ಇಂದಿರಾ ಗಾಂಧಿ. ಒಬ್ಬ ವ್ಯಕ್ತಿಯ ಹೆಸರಿನ ಮೇಲೆ ಚುನಾವಣೆಯನ್ನು ಗೆಲ್ಲಬಹುದು ಎಂಬುದನ್ನ ತೋರಿಸಿಕೊಟ್ಟವರು ಇವರು. ಟಿವಿಗಳು ಇಲ್ಲದ ಕಾಲದಲ್ಲಿ ಆಧುನಿಕ ತಂತ್ರಜ್ಞಾನಗಳು ಪ್ರಚಾರಕ್ಕೆ ಇರದ ಕಾಲದಲ್ಲಿ ,ತಮ್ಮ ಕಾರ್ಯಕ್ರಮಗಳ ಮೂಲಕ ಕೋಟಿ, ಕೋಟಿ ಭಾರತೀಯರ ಮನೆ ಮನಗಳನ್ನು ಮುಟ್ಟಿದಂತಹ ವ್ಯಕ್ತಿತ್ವ ಇವರದಾಗಿದೆ. ಇಂದು ಕೆಲವೇ ನಿಮಿಷದಲ್ಲಿ ಯಾರು ಬೇಕಾದರೂ ದೇಶದ ತುಂಬೆಲ್ಲ ಪ್ರಚಾರ ಪಡೆಯಬಹುದು. ಆದರೆ ಇಂದಿರಾರವರ ಕಾಲದಲ್ಲಿ ಈ ವ್ಯವಸ್ಥೆಗಳಿರಲಿಲ್ಲ. ಆದರೂ ಅವರ ಹೆಸರು ಎಲ್ಲರ ಮನದಲ್ಲಿತ್ತು. ಅವರ ಮುಖದ ಚಿತ್ರ ಎಲ್ಲರಿಗೂ ಪರಿಚಯವಿತ್ತು.

ಸರ್ದಾರ್ ವಲ್ಲಬಾಯ್ ಪಟೇಲ್ ಮತ್ತು ಮಹಾತ್ಮ ಗಾಂಧೀಜಿರವರ ನಡುವೆ ಇದ್ದಂತಹ ಆತ್ಮೀಯತೆ ಬಾಂಧವ್ಯದ ಅರಿವಿನ ಕೊರತೆ ಉಳ್ಳಂತಹ ಜನ ಪೂರ್ವಗ್ರಹ ಪೀಡಿತರಾಗಿ ಅನೇಕ ಸುದ್ದಿಗಳನ್ನು ಹಬ್ಬಿಸುತ್ತಲೇ ಇದ್ದಾರೆ. ಅದೇ ರೀತಿಯಲ್ಲಿ ಇಂದಿರಾ ಗಾಂಧಿರವರ ದಿಟ್ಟತನ ಸಾಹಸವಂತಿಕೆ ಎದೆಗಾರಿಕೆ ಇವುಗಳ ಬಗ್ಗೆ ಮಾತನಾಡದೆ ಕೆಲಸಕ್ಕೆ ಬಾರದ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಅವರ ವ್ಯಕ್ತಿತ್ವವನ್ನು ವಿಕೃತಗೊಳಿಸುವ ಲೇಖನಗಳಿಗೆ ಬರವಿಲ್ಲ. ಎಷ್ಟೇ ಮಂದಿ ಎಷ್ಟೇ   ಲೇಖನವನ್ನು ಬರೆದುಕೊಳ್ಳಲಿ ಆದರೆ ಭಾರತ ದೇಶದಲ್ಲಿ ಇಂದಿರಾ ಗಾಂಧಿರವರ ಹೆಸರನ್ನು ಯಾರು ಸಹ ಜನರ ಮನಸ್ಸಿನಿಂದ ಕಿತ್ತೆಸೆಯಲು ಸಾಧ್ಯವೇ ಇಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply