ಕರ್ನಾಟಕವ ಗೆಲ್ಲಲು ಅದೆಷ್ಟು ಮಂದಿಯ ಸಾಹಸ!
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲ್ಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಬಿ.ಜೆ.ಪಿ.ಯ ನಾಯಕರು ಪ್ರಧಾನಮಂತ್ರಿಗಳ ಹತ್ತಾರು ರ್ಯಾಲಿಗಳು, ಗೃಹಮಂತ್ರಿಗಳ ಹತ್ತಾರು ರಸ್ತೆಬದಿಯ ಮೆರವಣಿಗೆಗಳು, ಬಿ.ಜೆ.ಪಿ ಆಡಳಿತದಲ್ಲಿರುವ ಮುಖ್ಯಮಂತ್ರಿಗಳ, ಮೂಲೆ ಮೂಲೆಯ ಓಡಾಟ, ಇನ್ನು ಕೇಂದ್ರ ಸಚಿವರುಗಳ ಗಲ್ಲಿ ಗಲ್ಲಿಯ ಪಯಣ. ಜಿಲ್ಲೆಗೊಬ್ಬರಂತೆ, ಕ್ಷೇತ್ರಗೊಬ್ಬರಂತೆ, ತಾಲ್ಲೂಕಿಗೊಬ್ಬರಂತೆ, ಪಂಚಾಯ್ತಿಗೊಬ್ಬರು ರಾಷ್ಟ್ರ ನಾಯಕರುಗಳ ತಿರುಗಾಟವೇ ತಿರುಗಾಟ, ಅದೆಷ್ಟು ವಿಮಾನಗಳ ಸದ್ದು, ಅದೆಷ್ಟು ಹೆಲಿಕಾಪ್ಟರ್‌ಗಳ ಆರ್ಭಟ, ಅದೆಷ್ಟು ಟೀಕೆ ಟಿಪ್ಪಣಿಗಳು, ಆದರೂ ಇನ್ನು ಗುರಿ ಮುಟ್ಟುವ ವಿಶ್ವಾಸವಿಲ್ಲ.
ಜಾತಿಗಳ ನಡುವೆ ಸಂಘರ್ಷ ತಂದಿಟ್ಟಿದ್ದಾಯಿತು. ಧರ್ಮಗಳ ನಡುವೆ ಬಿರುಕು ಮೂಡಿಸಿದ್ದು ಆಯಿತು, ಭಾವನೆಗಳ ಬಿತ್ತಿ ಕನಸ್ಸುಗಳ ಕಂಡಿದ್ದಾಯಿತು. ಆದರೂ ಗುರಿ ಮುಟ್ಟುತ್ತಿಲ್ಲ. ರಾಜ್ಯದ ಎಲ್ಲ ವಾಹಿನಿಗಳಲ್ಲೂ ಇಪ್ಪತ್ತನಾಲ್ಕು ಘಂಟೆಯೂ ಇವರದೇ ಸುದ್ದಿ, ಪತ್ರಿಕೆಯ ಪುಟ ಪುಟದಲ್ಲೂ ಇವರದೇ ಜಾಹೀರಾತು, ಗಲ್ಲಿ ಗಲ್ಲಿಯಲ್ಲೂ ಇವರ ವಾಹನಗಳ ಸದ್ದು, ಆದರೂ ಗುರಿ ಮುಟ್ಟುವ ವಿಶ್ವಾಸವಿಲ್ಲ.
ಸಾಧನೆಯನ್ನು ಮಾಡಿದ್ದರೆ ಅದರ ಫಲವನ್ನು ಉಂಡ ಮಂದಿ ನಿಮ್ಮ ಮಾತುಗಳನ್ನು ಕೇಳುವ ಮುನ್ನವೇ ನಿಮಗಾಗಿ ಕಾಯುತ್ತಿದ್ದರು. ನಿಮ್ಮ ಸಾಧನೆಗಳು ಜನರ ಬದುಕು ಬದಲಾಯಿಸಿದ್ದರೆ ಇಷ್ಟೆಲ್ಲಾ ಬೆವರು ಸುರಿಸುವ ಅನಿವಾರ್ಯತೆ ಏನಿತ್ತು. ಒಂದು ರಾಜ್ಯದ ಚುನಾವಣೆಯ ಗೆಲುವಿಗಾಗಿ ಕೇಂದ್ರ ಸರ್ಕಾರವೇ ಇಲ್ಲಿ ನೆಲೆಸಿ ಕಳೆದ ಹಲವಾರು ತಿಂಗಳುಗಳಿಂದ ಅದೆಷ್ಟು ತುತ್ತೂರಿ ಬಾರಿಸುತ್ತಿದ್ದರು. ಇನ್ನು ವಿಶ್ವಾಸ ಮೂಡಿಲ್ಲ.
ಆಪರೇಷನ್ ಕಮಲದಂತಹ ಅನೈತಿಕ ರಾಜಕೀಯ ಸಂಸ್ಕೃತಿಯ ಆರಂಭಿಸಿದವರು ಬಹುಮತ ಬರದಿದ್ದರೇನಂತೆ ಮತ್ತೆ ಖರೀದಿಸಲು ಸಿದ್ಧರಿದ್ದಾರೆ ಹತ್ತಾರು ಕೋಟಿ ಕೊಟ್ಟು ಶಾಸಕರುಗಳ.
ರಾಜ್ಯದ ಜನತೆ ಎಚ್ಚೆತುಕೊಂಡಿದ್ದಾರೆಂಬ ಅನುಮಾನವು ಮೂಡಿದಂತಿದೆ. ಮೈಸೂರು ಬ್ಯಾಂಕ್’ನ್ನು ಇಲ್ಲವಾಗಿಸಿದವರು, ವಿಜಯಾ ಬ್ಯಾಂಕಿನ ಹೆಸರನ್ನೇ ಮಾಯಮಾಡಿದವರು, ಸಿಂಡಿಕೇಟ್ ಬ್ಯಾಂಕಿನ ಸಿರಿವಂತಿಕೆಯನ್ನು ಹಾಳು ಮಾಡಿದವರು, ಕಾರ್ಪೋರೇಷನ್ ಬ್ಯಾಂಕಿನ ಸಂಭ್ರಮವನ್ನು ಮಣ್ಣು ಪಾಲು ಮಾಡಿದವರು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಮಾರಾಟ ಮಾಡುವ ಹಾದಿಯಲ್ಲಿರುವವರು, ನಮ್ಮ ಹೆಮ್ಮೆಯ ನಂದಿನಿಯನ್ನು ಮುಳುಗಿಸಲು ತಂತ್ರವನ್ನು ರೂಪಿಸುತ್ತಿರುವವರು ಬರುತ್ತಿದ್ದಾರೆ.
ಮತ್ತೆ ಮತ್ತೆ ರಾಷ್ಟ್ರೀಯತೆಯ ಹೆಸರಿನಲ್ಲಿ ನಮ್ಮ ತನವನ್ನು ಕಳೆದು ಉತ್ತರಭಾರತೀಯರ ಗುಲಾಮಗಿರಿಯ ಸಂಸ್ಕೃತಿಯನ್ನು ಬಿತ್ತಲು ಬರುತ್ತಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಅದಕ್ಕಾಗಿ ಇವರ ಬೆವರೆಲ್ಲವೂ ಮಣ್ಣು ಪಾಲಾಗುತ್ತಿದೆ. ಇವರ ಮಾತು ಗಾಳಿಗೆ ತೂರಿ ಹೋಗುತ್ತಿದೆ. ಇವರುಗಳ ಮೇಲೆ ವಿಶ್ವಾಸ ಮೂಡಿ ಬರುತ್ತಿಲ್ಲ. ಆದರೂ ಬಿಡುತ್ತಿಲ್ಲ ಮತ್ತೆ ಮತ್ತೆ ಇಲ್ಲಿಯೇ ಸುತ್ತಾಡುತ್ತಿದ್ದಾರೆ. ಮೇ 13ರಂದು ಕನ್ನಡಿಗರ ಪ್ರಜ್ಞಾವಂತಿಕೆಯನ್ನು ಪರಿಚಯಿಸುವ ದಿನವಾಗಿರುತ್ತದೆ.
– ಕೆ.ಎಸ್.ನಾಗರಾಜ್, ಬೆಂಗಳೂರು



