ಪ್ರಶ್ನೆ: ನಿಮ್ಮ ಯುಪಿಎ-2 ಅವಧಿಯಲ್ಲಿ ಬೆಳಕಿಗೆ ಬಂದ ಭ್ರಷ್ಟಾಚಾರ ಆರೋಪಗಳ ಬಗ್ಗೆ ನೀವು ಏನು ಹೇಳುವಿರಿ?
ಮನಮೋಹನ್ ಸಿಂಗ್: ಈಗ ನಮ್ಮ ಮೇಲೆ ಹೊರಿಸಲಾಗುತ್ತಿರುವ ಭ್ರಷ್ಟಾಚಾರದ ಆರೋಪಗಳು, ಯುಪಿಎ-1 ಅವಧಿಯಲ್ಲಿ ನಡೆದಿವೆ ಎನ್ನಲಾಗುತ್ತಿರುವ ಆರೋಪಗಳು. ಕೋಲ್‌ಗೇಟ್ ಆರೋಪ ಮತ್ತು 2ಜಿ ಹಂಚಿಕೆಯ ವ್ಯವಹಾರಗಳು ನಡೆದದ್ದು ಯುಪಿಎ-1ರ ಅವಧಿಯಲ್ಲಿ. ನಮ್ಮ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡೇ ನಾವು ಚುನಾವಣೆ ಎದುರಿಸಿದ್ದೆವು. ಅವು ಹಗರಣಗಳೇ ಆಗಿದ್ದರೆ, ಜನ ಯಾಕೆ ನಮ್ಮನ್ನು ಎರಡನೇ ಅವಧಿಗೆ (ಯುಪಿಎ-2) ಆಯ್ಕೆ ಮಾಡುತ್ತಿದ್ದರು. ಮತ್ತೆ ಐದು ವರ್ಷ ಆಡಳಿತ ನಡೆಸಲು ಜನ ನಮಗೆ ಆದೇಶ ನೀಡಿದ್ದಾರೆ. ಅಂದರೆ ಆಗ ಅವ್ಯಾವುವೂ ಹಗರಣಗಳಾಗಿರಲಿಲ್ಲ. ಆಗಿದ್ದಿದ್ದರೆ, ಜನ ಮತ್ತೊಮ್ಮೆ ನಮ್ಮ ಪರವಾಗಿ ಮತ ಹಾಕುತ್ತಿರಲಿಲ್ಲ. ಆದರೆ ಈಗ ವಿರೋಧ ಪಕ್ಷಗಳು ಸುಳ್ಳುಸುಳ್ಳೇ ಆರೋಪ ಮಾಡಿ, ಅವುಗಳನ್ನು ದೊಡ್ಡ ಹಗರಣಗಳಂತೆ ಬಿಂಬಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಪ್ರಶ್ನೆ: ಹಿಂದಕ್ಕೆ ತಿರುಗಿನೋಡಿದಾಗ, ಈ ಹತ್ತು ವರ್ಷದ ನಿಮ್ಮ ಆಡಳಿತದಲ್ಲಿ ಏನಾದರು ವಿಭಿನ್ನವಾಗಿ ಮಾಡಿದ್ದೇವೆ ಎಂದು ನಿಮಗೆ ಅನ್ನಿಸುತ್ತಿದೆಯೇ?
ಮನಮೋಹನ್ ಸಿಂಗ್: ನನಗೆ ಈಗ ನಿಜಕ್ಕೂ ಬೇಸರವೆನಿಸುತ್ತಿದೆ. ನಮ್ಮ ಆಡಳಿತದ ಕಾರಣಕ್ಕಲ್ಲ. ವಿರೋಧಪಕ್ಷಗಳು ನಡೆಸುತ್ತಿರುವ ಅಪಪ್ರಚಾರದ ಕಾರಣಕ್ಕೆ. 2ಜಿ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಪಾರದರ್ಶಕತೆ ಇರಬೇಕು, ಕಾನೂನುಪಾಲನೆಯಾಗಬೇಕು ಮತ್ತು ನ್ಯಾಯಯುತವಾಗಿರಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ಕೊಟ್ಟಿದ್ದೇ ನಾನು. ಹರಾಜು ಪ್ರಕ್ರಿಯೆಗೆ ಒಳಪಟ್ಟೇ ಕಲ್ಲಿದ್ದಲು ಬ್ಲಾಕ್‌ಗಳನ್ನು ವಿತರಿಸಬೇಕು ಎಂದು ಮುತುವರ್ಜಿ ವಹಿಸಿದ್ದೇ ನಾನು. ಭ್ರಷ್ಟಾಚಾರಕ್ಕೆ ಆಸ್ಪದವಾಗದಂತೆ ನಾವು ತೆಗೆದುಕೊಂಡ ಎಚ್ಚರಿಕೆಯ ಕ್ರಮಗಳನ್ನು ಇಂದು ಕಡೆಗಣಿಸಲಾಗುತ್ತಿದೆ. ವಿರೋಧಪಕ್ಷಗಳು ತಮ್ಮ ಸ್ಥಾಪಿತ ಹಿತಾಸಕ್ತಿಗಾಗಿ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೆಲವೊಮ್ಮೆ ಮಾಧ್ಯಮಗಳು ಕೂಡಾ ಅವರಿಗೆ ಕೈಜೋಡಿಸುತ್ತಿರುವುದು ವಿಪರ್ಯಾಸ. ಅಲ್ಲಿ ಲೋಪದೋಷಗಳಿರಬಹುದು. ಆದರೆ ಮಾಧ್ಯಮಗಳು, ಕೆಲವೊಮ್ಮೆ ಸಿಎಜಿ ಕೂಡಾ, ಈ ಲೋಪದೋಷಗಳನ್ನೆ ದೊಡ್ಡ ಭ್ರಷ್ಟಾಚಾರದ ಹಗರಣಗಳಂತೆ ಹಿಗ್ಗಿಸಿ ವರದಿ ಮಾಡುತ್ತಿವೆ.
ಪ್ರಶ್ನೆ: ನಿಮ್ಮ ಈ 9-10 ವರ್ಷಗಳ ಅವಧಿಯಲ್ಲಿ ಯಾವತ್ತಾದರೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಅನ್ನಿಸಿದ್ದಿದೆಯೇ?
ಮನಮೋಹನ್ ಸಿಂಗ್: ಯಾವ ಕ್ಷಣದಲ್ಲೂ ನನಗೆ ಹಾಗೆ ಅನ್ನಿಸಿದ್ದಿಲ್ಲ. ನನ್ನ ಹುದ್ದೆಯನ್ನು ನಾನು ಖುಷಿಯಿಂದ ನಿಭಾಯಿಸಿದ್ದೇನೆ. ಯಾವುದೇ ಭಯ, ಯಾವುದೇ ಪಕ್ಷಪಾತ ಅಥವಾ ಯಾವುದೇ ಪೂರ್ವಗ್ರಹವಿಲ್ಲದೆ ಸಮಗ್ರ ಪ್ರಾಮಾಣಿಕತೆಯಿಂದ ಮತ್ತು ಐಕ್ಯತೆಯ ಪ್ರಜ್ಞೆಯಿಂದ ನನ್ನ ಕೆಲಸ ಮಾಡಿದ್ದೇನೆ. ಹೀಗಿರುವಾಗ ರಾಜೀನಾಮೆಯ ಆಲೋಚನೆಯಾದರೂ ಹೇಗೆ ಉದ್ಭವಿಸುತ್ತೆ?
ಪ್ರಶ್ನೆ: ಈಗಲೂ ನೀವು ಕೆಲವು ಸುಧಾರಣೆಗಳನ್ನು ಅನುಷ್ಠಾನಕ್ಕೆ ತರುವ ಉತ್ಸಾಹದಲ್ಲಿದ್ದೀರಾ?
ಮನಮೋಹನ್ ಸಿಂಗ್: ಸುಧಾರಣೆ ಎನ್ನುವುದು ಒಂದು ಕಾರ್ಯಕ್ರಮವಲ್ಲ, ಅದೊಂದು ನಿರಂತರ ಪ್ರಕ್ರಿಯೆ. ಹಾಗಾಗಿ, ಸನ್ನಿವೇಶಗಳು ಕೂಡಿ ಬಂದರೆ, ಆ ಸುಧಾರಣೆಯ ಅಗತ್ಯವಿದ್ದರೆ, ಎಲ್ಲಿಯವರೆಗೆ ನಮಗೆ ಅಧಿಕಾರವಿರುತ್ತೋ ಅಲ್ಲಿಯವರೆಗೆ ಖಂಡಿತ ನಾವು ಸುಧಾರಣಾ ಕ್ರಮಗಳಿಗೆ ಮುಂದಾಗುತ್ತಲೇ ಇರುತ್ತೇವೆ.
ಪ್ರಶ್ನೆ: ನಿಮ್ಮನ್ನು ಈಗ ಸಾಮಾನ್ಯ ಜನ ಹೇಗೆ ಸ್ವೀಕರಿಸುತ್ತಾರೆ ಎಂದು ನಿಮಗನ್ನಿಸುತ್ತದೆ, ಅಂದರೆ ರಾಜಕಾರಣಿಯಾಗಿಯೋ ಅಥವಾ ಪ್ರಧಾನಿಯಾಗಿಯೋ?
ಮನಮೋಹನ್ ಸಿಂಗ್: ಇಲ್ಲಿಗೆ ಹತ್ತು ವರ್ಷಗಳ ಹಿಂದೆ ಹೇಗಿದ್ದೆನೋ, ಈಗಲೂ ನಾನು ಹಾಗೇ ಇದ್ದೇನೆ. ಯಾವ ಬದಲಾವಣೆಯೂ ಇಲ್ಲ. ಗರಿಷ್ಠ ಅರ್ಪಣೆ ಮತ್ತು ಬದ್ಧತೆಯೊಂದಿಗೆ, ಗರಿಷ್ಠ ದೃಢತೆಯೊಂದಿಗೆ ನಾನು ನನ್ನ ದೇಶಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದು ಗಟ್ಟಿಯಾಗಿ ಹೇಳಬಲ್ಲೆ. ನನ್ನ ಸ್ನೇಹಿತರಿಗೋ ಅಥವಾ ಸಂಬಂಧಿಕರಿಗೋ ಅಥವಾ ಪರಿಚಯಸ್ಥ ಉದ್ಯಮಪತಿಗಳಿಗೋ ಅನುಕೂಲ ಮಾಡಿಕೊಡಲು ನನ್ನ ಕಚೇರಿಯನ್ನು ನಾನು ಯಾವತ್ತೂ ಬಳಸಿಕೊಂಡಿಲ್ಲ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇರುವುದರಿಂದ ಜನ ಹೇಗೆ ಸ್ವೀಕರಿಸಿದರೂ ನನ್ನ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ನಾನು ಕೂಡಾ ಎಲ್ಲರಂತೆ ಒಬ್ಬ ಮನುಷ್ಯನಷ್ಟೆ.
ಪ್ರಶ್ನೆ: ನೀವು ಪ್ರಧಾನಿಯಾಗಿ ಕಾರ್ಯನಿರ್ವಹಿಸುವಲ್ಲಿ ಸೋತುಹೋಗಿದ್ದೀರಿ ಎಂಬ ಮಾತುಗಳ ದೃಷ್ಟಿಯಿಂದ ನಿಮ್ಮ ವರ್ಚಸ್ಸನ್ನು ನೀವು ಹೇಗೆ ಕಾಣುತ್ತೀರಿ?
ಮನಮೋಹನ್ ಸಿಂಗ್: ಇವತ್ತಿನ ಮಾಧ್ಯಮಗಳು ಮತ್ತು ಸಂಸತ್ತಿನ ವಿರೋಧಪಕ್ಷಗಳಿಗಿಂತಲೂ ಇತಿಹಾಸ ನನ್ನೆಡೆಗೆ ದಯಾಪರವಾಗಿರುತ್ತೆ ಎಂಬ ಪ್ರಾಮಾಣಿಕ ವಿಶ್ವಾಸ ನನಗಿದೆ. ಸರ್ಕಾರದ ಸಂಪುಟ ಸಂರಚನೆಯೊಳಗೆ ನಡೆದ ಎಲ್ಲಾ ವಿಚಾರಗಳನ್ನು ನಾನು ಬಹಿರಂಗಪಡಿಸಲಾರೆ. ಆದರೆ, ನಾವಿದ್ದ ಕಾಲಘಟ್ಟ ಮತ್ತು ಮೈತ್ರಿಕೂಟವನ್ನು ಮುನ್ನಡೆಸುವ ಸವಾಲುಗಳನ್ನು ಪರಿಗಣಿಸುವುದಾದರೆ, ನಾನು ನನ್ನ ಗರಿಷ್ಠ ಪ್ರಮಾಣದಲ್ಲಿ ಕೆಲಸ ಮಾಡಿದ್ದೇನೆ.
ಪ್ರಶ್ನೆ : ಮೋದಿಯವರ ಎದುರು ರಾಹುಲ್ ಗಾಂಧಿ ಪೈಪೋಟಿ ಕೊಡಬಲ್ಲರು ಎಂದು ನಿಮಗನ್ನಿಸುತ್ತದೆಯೇ? ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ವಿಶ್ವಾಸ ನಿಮಗಿದೆಯೇ?
ಮನಮೋಹನ್ ಸಿಂಗ್: ಮುಂದಿನ ಪ್ರಧಾನಿ ಯುಪಿಎ ಮೈತ್ರಿಕೂಟದ ಸದಸ್ಯರೇ ಆಗುತ್ತಾರೆ ಎಂಬ ವಿಶ್ವಾಸ ನನಗಿದೆ. ಆದಾಗ್ಯೂ, ನರೇಂದ್ರ ಮೋದಿಯವರ ಬಲಾಬಲಗಳ ಬಗ್ಗೆ ಹೆಚ್ಚು ಮಾತಾಡಲು ಹೋಗದೆ ಒಂದು ಸಂಗತಿಯನ್ನಂತೂ ಹೇಳಬಲ್ಲೆ. ಅಕಸ್ಮಾತ್ ಮೋದಿ ಏನಾದರೂ ಪ್ರಧಾನಿಯಾದರೆ ದೇಶ ದೊಡ್ಡ ದುರಂತವನ್ನು ಎದುರಿಸಬೇಕಾಗುತ್ತದೆ.
ಪ್ರಶ್ನೆ: ಬಿಜೆಪಿ ಪಕ್ಷ ಮತ್ತು ಮೋದಿಯವರು ನಿಮ್ಮನ್ನು ದುರ್ಬಲ ಪ್ರಧಾನಿ ಎಂದು ಲೇವಡಿ ಮಾಡಿದ್ದಾರೆ. ಅದಕ್ಕೆ ನಿಮ್ಮ ಪ್ರತಿಕ್ರಿಯೆ?
ಮನಮೋಹನ್ ಸಿಂಗ್: ನಾನು ದುರ್ಬಲ ಪ್ರಧಾನಿ ಹೌದೋ, ಅಲ್ಲವೋ ಅನ್ನೋದನ್ನು ಇತಿಹಾಸ ನಿರ್ಧರಿಸುತ್ತೆ. ಆದರೆ ನನ್ನ ದೃಷ್ಟಿಯಲ್ಲಿ, ನಾನು ದುರ್ಬಲ ಪ್ರಧಾನಿಯಲ್ಲ. ಬಿಜೆಪಿಯವರು, ಅವರಿಗೆ ಬೇಕಾದಂತೆ ಕರೆಯಬಹುದು. ಆ ಸ್ವಾತಂತ್ಯ್ರ ಅವರಿಗಿದೆ. ನಿಮ್ಮ ಪ್ರಕಾರ ಪ್ರಬಲ ಪ್ರಧಾನಮಂತ್ರಿ ಅಂದ್ರೆ ಏನು? ಅಹಮದಾಬಾದ್‌ನ ರಸ್ತೆಯ ಮೇಲೆ ಅಮಾಯಕ ಜನರ ಮಾರಣಹೋಮ ನಡೆಯುತ್ತಿದ್ದರೂ ಕಣ್ಮುಚ್ಚಿ ಕೂರುವುದೇ? ಅಥವಾ ಅಂತಹ ಮಾರಣಹೋಮದ ನೇತೃತ್ವ ವಹಿಸುವುದೇ? ಒಂದುವೇಳೆ, ನಾಯಕನೊಬ್ಬನ ಬಲವನ್ನು ಅಳೆಯಲು ಅಂತಹ ಮಾರಣಹೋಮವೇ ನಿಮ್ಮ ಮಾನದಂಡವಾಗಿದ್ದರೆ, ಸೌಹಾರ್ದತೆಯ ಈ ದೇಶಕ್ಕೆ ಅಂತಹ ಬಲಶಾಲಿ ಪ್ರಧಾನಿ ಯಾವತ್ತಿಗೂ ಬೇಡ!”
ಪ್ರಶ್ನೆ: ನಿರ್ಧಾರಗಳು 10 ಜನಪತ್‌ನಲ್ಲಿ ಆಗುತ್ತಿದ್ದವು, ಆದರೆ 7 ಆರ್ ಸಿ ಆರ್ ನಿವಾಸದಲ್ಲಿ ಘೋಷಣೆಯಾಗುತ್ತಿದ್ದವು ಎಂಬ ಮಾತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ.
ಮನಮೋಹನ್ ಸಿಂಗ್: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರಬಹುದು ಅಥವಾ ಉಪಾಧ್ಯಕ್ಷರಾಗಿರಬಹುದು, ಅವಕಾಶವಿದ್ದರೆ ಮಾತ್ರ ತಮ್ಮ ದೃಷ್ಟಿಕೋನಗಳನ್ನು ಸರ್ಕಾರದ ನೀತಿನಿರ್ಧಾರದ ಭಾಗವಾಗಿಸುವ ಸಲಹೆ ನೀಡುತ್ತಿದ್ದರು. ಅನಗತ್ಯವಾಗಿ ಅವರು ಅಡ್ಡಿಪಡಿಸಿದವರಲ್ಲ. ಶ್ರೀಮತಿ ಸೋನಿಯಾಗಾಂಧಿಯವರು ಮತ್ತು ರಾಹುಲ್ ಗಾಂಧಿಯವರು, ಈ ಒಂಬತ್ತೂವರೆ ವರ್ಷಗಳಲ್ಲಿ ನಮ್ಮ ಸರ್ಕಾರದ ಬೆನ್ನೆಲುಬಾಗಿ ನಿಂತಿದ್ದರಿಂದಲೇ, ಸಂಕಷ್ಟದ ಸವಾಲುಗಳನ್ನೂ ನಾವು ಎದುರಿಸಿ ಮುನ್ನಡೆಯಲು ಸಾಧ್ಯವಾಗಿದೆ. ಹಾಗಂತ, ಭಿನ್ನಾಭಿಪ್ರಾಯಗಳು ಇರಲಿಲ್ಲ ಅಂತ ಅಲ್ಲ. ಆದರೆ ಅವು ಸರ್ಕಾರದ ನಡೆಯ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದವು. ಆ ಭಿನ್ನಾಭಿಪ್ರಾಯಗಳು ಮೌಲ್ಯಯುತ ಎನಿಸಿದರೆ, ಸರ್ಕಾರ ತನ್ನ ನಡೆಯನ್ನು ಮರುಪರಿಶೀಲಿಸಿಕೊಳ್ಳುತ್ತಿತ್ತು. ತಪ್ಪುಗಳನ್ನು ಅಥವಾ ಅನಾನುಕೂಲಗಳನ್ನು ಗುರುತಿಸಿಕೊಳ್ಳುವುದು ಅಥವಾ ಸುಧಾರಿಸಿಕೊಳ್ಳುವುದು ಕೆಟ್ಟದೇನೂ ಅಲ್ಲವಲ್ಲ..
ಪ್ರಶ್ನೆ: ಸರ್ಕಾರದ ಭಾಗವಾಗುವಂತೆ ನೀವು ಪದೇಪದೇ ಕೇಳಿದಾಗಲೂ ರಾಹುಲ್ ನಿರಾಕರಿಸುತ್ತಾ ಬಂದರು. ಕಾರಣವೇನಿರಬಹುದು?
ಮನಮೋಹನ್ ಸಿಂಗ್: ರಾಹುಲ್ ಗಾಂಧಿಯವರು ನಮ್ಮ ಸರ್ಕಾರದ ಭಾಗವಾದರೆ, ನಮಗೆ ಇನ್ನಷ್ಟು ಬಲ ಬರುತ್ತದೆ ಎಂಬುದು ನನ್ನ ಸದಾಕಾಲದ ನಂಬಿಕೆಯಾಗಿತ್ತು. ಆದರೆ ರಾಹುಲ್ ಗಾಂಧಿಯವರು ಅದನ್ನು ನಿರಾಕರಿಸುತ್ತಾ ಬಂದರು. ಪಕ್ಷದ ಸಂಘಟನೆಗಾಗಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳಬೇಕಿರುವುದರಿಂದ ಸರ್ಕಾರದಲ್ಲಿ ಭಾಗಿಯಾಗಲಾರೆ ಎಂದು ಹೇಳಿದರು. ಅವರ ಭಾವನೆಯನ್ನು, ಕಾಳಜಿಯನ್ನು ನಾನು ಗೌರವಿಸಿದೆ.
ಪ್ರಶ್ನೆ: ಚುನಾವಣೆಗು ಮೊದಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ನಾಯಕತ್ವ ನಿಮಗೆ ಯಾವತ್ತಾದರೂ ಸುಳಿವು ರವಾನಿಸಿತ್ತೆ?
ಮನಮೋಹನ್ ಸಿಂಗ್: ಹೇಳಬೇಕಿರುವುದನ್ನೆಲ್ಲ ಈಗಾಗಲೇ ಹೇಳಿದ್ದೇನೆ. ಪ್ರಧಾನಿಯಾಗಿ ಮುಂದುವರೆಯಲು ನಾನು ಅಸಮರ್ಥನಾಗಿದ್ದೇನೆ ಎಂಬ ಭಾವನೆ ಯಾರಲ್ಲೂ ಬಂದಿಲ್ಲವಾದ್ದರಿಂದ, ಹುದ್ದೆಯಿಂದ ಕೆಳಗಿಳಿಯುವಂತೆ ಯಾರೂ ನನಗೆ ಇದುವರೆಗೆ ಹೇಳಿಲ್ಲ.
ಪ್ರಶ್ನೆ: ನಿಮ್ಮ ಪಕ್ಷದವರೇ ಕೆಲವರು, ನೀವು ಒಬ್ಬ ಅತ್ಯುತ್ತಮ ಅರ್ಥಶಾಸ್ತ್ರಜ್ಞ; ಆದರೆ, ಕಳಪೆ ರಾಜಕಾರಣಿ ಎಂದು ಹೇಳುತ್ತಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ.
ಮನಮೋಹನ್ ಸಿಂಗ್: ನಾನು ಪ್ರಧಾನಮಂತ್ರಿಯಾಗಿ ಆಯ್ಕೆಯಾದಾಗ ಸಾಮಾನ್ಯ ಅಭಿಪ್ರಾಯ ಹೇಗಿತ್ತೆಂದರೆ, ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿ ಸರ್ಕಾರವನ್ನು ಮುನ್ನಡೆಸುವ ಸಾಮರ್ಥ್ಯ ಇಲ್ಲ ಎನ್ನಲಾಗುತ್ತಿತ್ತು. ಮೈತ್ರಿಕೂಟವನ್ನು ಮುನ್ನಡೆಸುವ ಕಾಂಗ್ರೆಸ್‌ನ ಶಕ್ತಿಯನ್ನೇ ಪ್ರಶ್ನೆಗೊಡ್ಡಲಾಗಿತ್ತು. ಆ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ಪಕ್ಷ, ಒಂದಲ್ಲ, ಎರಡು ಅವಧಿಗೆ ಮೈತ್ರಿ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ತನ್ನ ಸಾಮರ್ಥ್ಯ ಏನು ಅನ್ನೋದನ್ನು ಸಾಬೀತು ಮಾಡಿ ತೋರಿಸಿದೆ. ಆ ಹಾದಿಯಲ್ಲಿ ಸಣ್ಣಪುಟ್ಟ ರಾಜಿಯಾಗಿರಬಹುದು, ಆದರೆ ಆ ರಾಜಿಗಳು ಬಾಹ್ಯ ಚಾಚಿಕೆಗಷ್ಟೆ ಸೀಮಿತವಾದವೇ ವಿನಾ ನಮ್ಮ ಮೂಲ ಆಶಯ, ಸಿದ್ದಾಂತಕ್ಕೆ ಧಕ್ಕೆಯಾಗುವಂತೆ ನಾವು ಯಾವತ್ತೂ ವರ್ತಿಸಿಲ್ಲ.
ಕನ್ನಡಕ್ಕೆ: ಗಿರೀಶ್ ತಾಳಿಕಟ್ಟೆ



