ಇನ್ವೆಸ್ಟ್ ಕರ್ನಾಟಕ 2025 ಹೂಡಿಕೆದಾರರ ಸಮಾವೇಶಕ್ಕೆ ಗೈರಾದ ಮಲ್ಲಿಕಾರ್ಜುನ, ಖರ್ಗೆ ರಾಹುಲ್ ಗಾಂಧಿ

2 years ago

ಬೆಂಗಳೂರು: ಕರ್ನಾಟಕವನ್ನು ಹೂಡಿಕೆದಾರ ಸ್ನೇಹಿ ರಾಜ್ಯವನ್ನಾಗಿ ಮಾಡಲು ಪ್ರಯತ್ನ ನಡೆಸಿರುವ ರಾಜ್ಯ ಸರ್ಕಾರ ಇದಕ್ಕಾಗಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿದೆ. ಈ ಸಮಾವೇಶಕ್ಕೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದಾರೆ.

ಇನ್ವೆಸ್ಟ್ ಕರ್ನಾಟಕ 2025 ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಆಹ್ವಾನವನ್ನು ನೀಡಲಾಗಿತ್ತು. ಆದರೆ ಲೋಕಸಭೆಯ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡಿರುವ ಈ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.

ಆದರೆ ಅವರ ಈ ಗೈರು ಹಾಜರಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಈ ಸಮಾವೇಶದಲ್ಲಿ ಬಿಜೆಪಿ ನಾಯಕರು ಮತ್ತು ಬಿಜೆಪಿ ಬೆಂಬಲಿತ ಉದ್ದಿಮೆದಾರರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಇದರ ಬಗ್ಗೆ ಬೇಸರಗೊಂಡಿರುವ ರಾಹುಲ್ ಗಾಂಧಿ ಮತ್ತು ಖರ್ಗೆ ಸಮಾವೇಶದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. 

ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಮಂತ್ರಿಗಳ ಹೆಸರು ಮೇಲ್ಭಾಗದಲ್ಲಿದೆ ಆನಂತರದಲ್ಲಿ ವಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರ ಹೆಸರುಗಳನ್ನು ಹಾಕಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಮಾಡುತ್ತಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಈ ಇಬ್ಬರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ.

ಈ ನಡುವೆ ಈ ಗೈರು ಹಾಜರಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯ ವಿಪಕ್ಷ ನಾಯಕ ಆರ್ ಅಶೋಕ್, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ರಾಜ್ಯ ಸರ್ಕಾರದ ಧೋರಣೆ ಬಗ್ಗೆ ಅಸಮಾಧಾನಗೊಂಡು ಸಮಾವೇಶದಿಂದ ದೂರ ಉಳಿದಿದ್ದಾರೆ ಎಂದಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಸಲವೂ ‘ಶೂನ್ಯ’ ಸಾಧನೆ ಮಾಡಿ ಅವಮಾನಗೊಂಡಿರುವುದಕ್ಕೆ ರಾಹುಲ್‌ ಗಾಂಧಿ ಅವರು ಕರ್ನಾಟಕಕ್ಕೆ ಬರಲು ಮುಜುಗರ ಪಡುತ್ತಿದ್ದಾರೆಯೇ? ಅಥವಾ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯನ್ನು ಎದುರಿಸಲು ರಾಹುಲ್‌ ಹೆದರುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಹಾಗೆಯೇ ಸಮಾವೇಶದಲ್ಲಿ ರಾಜ್ಯ ಸರ್ಕಾರ ಶಿಷ್ಟಾಚಾರವನ್ನು ಉಲ್ಲಂಘಿಸಿದೆ ಎಂದು ಆಪಾದಿಸಿರುವ ಅವರು, ರಾಜ್ಯ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಮಾತೆತ್ತಿದರೆ ಸಂವಿಧಾನ, ಪ್ರಜಾಪ್ರಭುತ್ವ ಅಂತ ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರಿಗೆ ರಾಜ್ಯದ ಪ್ರಥಮ ಪ್ರಜೆಯಾಗಿರುವ ರಾಜ್ಯಪಾಲರ ಫೋಟೋ ಹಾಕುವ ಕನಿಷ್ಠ ಶಿಷ್ಟಾಚಾರವನ್ನೂ ಪಾಲನೆ ಮಾಡುವ ಸೌಜನ್ಯವಿಲ್ಲ ಎಂದಿದ್ದಾರೆ.

ಈ ಶಿಷ್ಟಾಚಾರದ ಕೀಳು ರಾಜಕೀಯ ಒಂದು ಕಡೆಯಾದರೆ ಮತ್ತೊಂದು ಕಡೆ ಹೂಡಿಕೆದಾರರ ಸಮಾವೇಶಕ್ಕೆ ಪ್ರವೇಶಾತಿ ಶುಲ್ಕ ವಿಧಿಸುವ ಮೂಲಕ ರಾಜ್ಯ ಸರ್ಕಾರ ಎಷ್ಟು ಪಾಪರ್ ಆಗಿದೆ ಎಂದು ಮತ್ತೊಮ್ಮೆ ಪ್ರದರ್ಶನ ಮಾಡಿದೆ. ನಮ್ಮ ರಾಜ್ಯದ ಯುವ ಜನಾಂಗಕ್ಕೆ ಈ ಹೂಡಿಕೆದಾರರ ಸಮಾವೇಶದಲ್ಲಿ ಪ್ರವೇಶ ಇಲ್ಲದ ಮೇಲೆ ಈ ಸಮಾವೇಶ ಮಾಡುತ್ತಿರುವುದಾದರೂ ಯಾರಿಗೋಸ್ಕರ? ಮೂರು ದಿನ ಫೋಟೋ ಶೂಟ್ ಮಾಡಿಸಿಕೊಂಡು ಪುಕ್ಕಟೆ ಪ್ರಚಾರ ಪಡೆಯೋದಕ್ಕಾ? ಎಂದು ಪ್ರಶ್ನಿಸಿದ್ದಾರೆ.

Leave a Reply