ಮಾತುಕತೆ ನಡೆಸಿ ಎಲ್ಲ ಗೊಂದಲಗಳನ್ನು ಬಗೆಹರಿಸುತ್ತೇವೆ: ಮಲ್ಲಿಕಾರ್ಜುನ ಖರ್ಗೆ

5 months ago

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಎಚ್ಚೆತ್ತುಕೊಂಡಿದೆ. ಅಧಿಕಾರ ಹಸ್ತಾಂತರ ಕುರಿತಾಗಿ ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಮದ್ದು ಅರೆಯಲು ಮುಂದಾಗಿದೆ.

ರಾಜ್ಯದ ವಿದ್ಯಮಾನಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಗಮನ ಹರಿಸಿದೆ. ಲೋಕಸಭೆಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಹೈಕಮಾಂಡ್ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿದ್ಯಮಾನಗಳ ಬಗ್ಗೆ ತಾವು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಮಾಹಿತಿ ನೀಡುತ್ತೇನೆ. ರಾಜ್ಯದ ಮೂರು ನಾಲ್ಕು ಜನರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.ತಾವು,ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲ ಮತ್ತು ರಾಜ್ಯದ ಪ್ರಮುಖ ಮೂರ್ನಾಲ್ಕು ಮಂದಿ ನಾಯಕರು ಕುಳಿತುಕೊಂಡು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿ ಎಲ್ಲ ಗೊಂದಲಗಳನ್ನು ಬಗೆಹರಿಸುತ್ತೇವೆ ಎಂದರು.

ತಾವು ದೆಹಲಿಗೆ ತೆರಳಿದ ನಂತರ ಯಾವಾಗ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರುಗಳಿಗೆ ತಿಳಿಸುತ್ತೇವೆ. ಆನಂತರ ಎಲ್ಲವನ್ನು ಸುಗಮವಾಗಿ ಬಗೆಹರಿಸುತ್ತೇವೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರ ಈ ಹೇಳಿಕೆ ಸ್ವಾಗತಿಸಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ನಿಂದ ನಮಗೆ ಕರೆ ಬಂದ ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಇಬ್ಬರು ಒಟ್ಟಾಗಿ ದೆಹಲಿಗೆ ತೆರಳುತ್ತೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದು ಹೈಕಮಾಂಡ್ ಕರೆದ ಕೂಡಲೇ ತಾವು ದೆಹಲಿಗೆ ತೆರಳುವುದಾಗಿ ಹೇಳಿದರು.

Leave a Reply