ಸ್ವಾತಂತ್ರ ಬಂದ ನಂತರ ಭಾರತದಲ್ಲಿ ನೆಹರೂವಿಯನ್ ಚಿಂತನೆಯಲ್ಲಿ ರೂಪುಗೊಂಡ ಸಾರ್ವಜನಿಕ ವ್ಯವಸ್ಥೆ-ಖಾಸಗಿ ಪಾಲ್ಗೊಳ್ಳುವಿಕೆಯ ಮಿಶ್ರ ಸಮಾಜವಾದದ ಆರ್ಥಿಕತೆಯನ್ನು ಜಾರಿಗೊಳಿಸಲಾಯಿತು. ಇಲ್ಲಿ ಸಾರ್ವಜನಿಕರಂಗ ಪ್ರಧಾನವಾಗಿತ್ತು. ಸರ್ಕಾರದ ನೇತೃತ್ವದಲ್ಲಿ ಸ್ವತಂತ್ರ ಕೈಗಾರಿಕೆಯನ್ನು ಬೆಳೆಸಬೇಕು, ಇದು ಸ್ವಾವಲಂಬನೆ ಸಾಧಿಸಬೇಕು, ಉದ್ಯೋಗ ಸೃಷ್ಟಿಸಬೇಕು ಎನ್ನುವ ಉದ್ದೇಶಗಳೊಂದಿಗೆ ಹೊಸ ಯೋಜನೆಗಳು, ಉದ್ಯಮಗಳು ಪ್ರಾರಂಭಗೊಂಡವು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸ್ವಾವಲಂಬನೆ ಮತ್ತು ಸ್ಥಳೀಯತೆಗೆ ಪ್ರಾಧಾನ್ಯತೆ ಒದಗಿಸಲು ಆಮದುಗಳಿಗೆ ಹೆಚ್ಚಿನ ಶುಲ್ಕ ಹೇರುವ ಮೂಲಕ ಆ ನೀತಿಯನ್ನು ನಿಯಂತ್ರಣಗೊಳಿಸಲಾಯಿತು. ಇಲ್ಲಿಯೇ ಉತ್ಪಾದಿಸಿ ಇಲ್ಲಿನ ಜನರಿಗೆ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವ ಈ ಆರ್ಥಿಕ ನೀತಿ ಅರವತ್ತರ ದಶಕದವರೆಗೂ ಹಂತಹಂತವಾಗಿ ರೂಪುಗೊಳ್ಳತೊಡಗಿತು. ಮತ್ತು ನಿರ್ದಿಷ್ಟ ಪ್ರಮಾಣದಲ್ಲಿ ಖಾಸಗಿ ಬಂಡವಾಳಶಾಹಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಮಿಶ್ರ ಆರ್ಥಿಕ ನೀತಿಯನ್ನು ʼಮಧ್ಯ-ಬಲʼ ನೀತಿಯ ರಾಜಾಜಿ, ಮಿನೂ ಮಸಾನಿಯ ಸ್ವತಂತ್ರ ಪಕ್ಷ ಮತ್ತು ತೀವ್ರವಾದಿ ಬಲಪಂಥೀಯ ಆರೆಸ್ಸಸ್‌ನ ಜನಸಂಘ ಪಕ್ಷಗಳು ವಿರೋಧಿಸಿದರು. ಕಾಂಗ್ರೆಸ್‌ನಲ್ಲಿಯೂ ಹಳೆ ತಲೆಗಳಾದ ನಿಜಲಿಂಗಪ್ಪ, ಮುರಾರ್ಜಿ ದೇಸಾಯಿ ಮುಂತಾದ ಸಿಂಡಿಕೇಟ್ ಮುಂಖಡರು ಈ ಸ್ವಾವಲಂಬಿ ನೀತಿಯನ್ನು ವಿರೋಧಿಸಿದರು. 1967ರಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗುವ ಹೊತ್ತಿಗೆ ಅವರ ವಿರುದ್ಧ ಹೊರಗಿನ ಬಲಪಂಥೀಯ ಪಕ್ಷಗಳು ಮತ್ತು ಒಳಗಿನ ಬಲಪಂಥೀಯರು ಯುದ್ಧವನ್ನೇ ಸಾರಿದರು. ಸಾರ್ವಜನಿಕರಂಗವನ್ನು ವಿರೋಧಿಸಿದರು, ಖಾಸಗೀಕರಣವನ್ನು ಬೆಂಬಲಿಸಿದರು.
ಸ್ವತಂತ್ರ ಬಂದ ನಂತರದ ಎರಡು ದಶಕಗಳ ಸಾರ್ವಜನಿಕರಂಗ ಆರ್ಥಿಕ ಪ್ರಧಾನತೆಯ ಪ್ರಯೋಗಗಳು ಅರವತ್ತರ ದಶಕದ ಕೊನೆಯ ಹೊತ್ತಿಗೆ ಒಂದು ಹಂತ ತಲುಪಿತ್ತು. ಈ ತಿರುವಿನ ಘಟ್ಟದಲ್ಲಿ ಈ ಮಿಶ್ರ ಆರ್ಥಿಕ ನೀತಿಗೆ ಮತ್ತಷ್ಟು ಬದಲಾವಣೆಗಳ, ಹೊಸ ದೃಷ್ಟಿಕೋನ, ಸಬಲೀಕರಣದ ಅಗತ್ಯವಿತ್ತು. ಅದೇ ಸಂದರ್ಭದಲ್ಲಿ ಸರ್ಕಾರಿ ವಲಯದಲ್ಲಿ ಭ್ರಷ್ಟಾಚಾರದ ಪರ್ವವೂ ಶುರುವಾಗಿದ್ದು ಕ್ರಮೇಣ ಅಲ್ಲಿನ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರತೊಡಗಿತು. ಇಂತಹ ಬಿಕ್ಕಟ್ಟಿನಲ್ಲಿ ಹಸಿರು ಕ್ರಾಂತಿಯಂತಹ ದೊಡ್ಡ ವಿದ್ಯಾಮಾನವು ಇಲ್ಲಿನ ಬಡಕುಟುಂಬಗಳನ್ನು ಹಸಿವಿನಿಂದ ಕಾಪಾಡಿದ್ದು ನಿಜ(ಈ ಕ್ರಾಂತಿಯು ಇಲ್ಲಿನ ಕೃಷಿ ವಲಯವನ್ನು ಸಂಪೂರ್ಣವಾಗಿ ರಾಸಾಯನಿಕ ಬೇಸಾಯಕ್ಕೆ ದೂಡಿತು, ಮಣ್ಣಿನ ಫಲವತ್ತತೆ ನಾಶ ಮಾಡಿತು ಎನ್ನುವುದು ಬೇರೆಯದೇ ಚರ್ಚೆ). ನಂತರ ಇಂದಿರಾ ಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ, ಗರೀಬಿ ಹಟಾವೋ, ಭೂ ಸುಧಾರಣೆಯಂತಹ ಮಹತ್ವದ ನಡೆಗಳು ಮರಳಿ ದೇಶವನ್ನು ಸಮಾಜವಾದಿ ಹಳಿಗೆ ತಂದು ನಿಲ್ಲಿಸಿದ್ದು ಸತ್ಯ. ಆದರೆ ಇದು ಕೇವಲ ಸೀಮಿತ ಯಶಸ್ಸು ಸಾಧಿಸಿತು. ಮತ್ತು ಆಡಳಿತರಂಗದಲ್ಲಿನ ಭ್ರಷ್ಟಾಚಾರ ಹಾಗೂ ನಿರುದ್ಯೋಗದ ಪರಿಸ್ಥಿತಿಯು ಇಂದಿರಾ ಗಾಂಧಿಯವರ ವಿರುದ್ಧ ದೊಡ್ಡ ಹೋರಾಟಕ್ಕೆ ಕಾರಣವಾಯಿತು.
ಇದು ಕ್ರಮೇಣ ಸಾರ್ವಜನಿಕರಂಗದ ವಿರುದ್ಧ ಖಾಸಗೀಕರಣದ ಪರವಾದ ಹೋರಾಟವಾಗಿ ಪರಿವರ್ತನೆಗೊಂಡಿತು. ಆರೆಸ್ಸಸ್, ಜನಸಂಘ, ಲೋಹಿಯಾವಾದಿಗಳು ಮತ್ತು ಸಂಸ್ಥಾ ಕಾಂಗ್ರೆಸ್ಸಿಗರು ಇದರ ಮುಂಚೂಣಿಯಲ್ಲಿದ್ದರು. ಕಾಂಗ್ರೆಸ್ ವಿರೋಧಿ ಗೀಳನ್ನು ಹತ್ತಿಸಿಕೊಂಡಿದ್ದ ಸಮಾಜವಾದಿಗಳು ಸಹ ಇದರ ಭಾಗವಾಗಿದ್ದು ಇಲ್ಲಿನ ದುರಂತ.
ಇಲ್ಲಿನ ಸಮಾಜೋ-ಆರ್ಥಿಕ ಹಿನ್ನಡೆಗೆ ಲೋಹಿಯಾ ಸಮಾಜವಾದಿಗಳ ಕೊಡುಗೆ ತುಂಬಾ ಇದೆ. ಇವರಿಗೆ ರಾಜಕೀಯ ಪಕ್ಷವನ್ನು ಕಟ್ಟುವುದು, ಸಂಘಟಿಸುವುದು ಎರಡೂ ಗೊತ್ತಿಲ್ಲ. ಬೌದ್ಧಿಕವಾಗಿ ತುಂಬಾ ಓದಿಕೊಂಡಿದ್ದರೂ ಸಹ ಅದನ್ನು ಅನುಷ್ಠಾನಗೊಳಿಸುವ ದೀರ್ಘಕಾಲದ ಕಾರ್ಯಯೋಜನೆ, ದೂರದೃಷ್ಟಿ ಎರಡೂ ಇಲ್ಲ. ಹೆಚ್ಚೆಂದರೆ ಅಕಾಡೆಮಿಕ್ ಆಗಿ ತಲೆದೂಗಿಸುವಂತೆ ಮಾತನಾಡಬಲ್ಲ ಇವರನ್ನು ವಂಚಿತ ಸಮುದಾಯಗಳ ಪ್ರಾತಿನಿಧ್ಯ ಮತ್ತು ಸಬಲೀಕರಣದ ಕುರಿತು ಮುಂದಿನ ಹತ್ತು ವರ್ಷಗಳ ಅವಧಿಗೆ ಒಂದು plan of action ಹಾಕಿಕೊಡಿ ಎಂದು ಕೇಳಿ ನೋಡಿ, ಕಕ್ಕಾಬಿಕ್ಕಿಯಾಗುತ್ತಾರೆ. ಈ ಸೋ ಕಾಲ್ಡ್ ಲೋಹಿಯಾವಾದಿಗಳು ಮಾಧ್ಯಮಗಳ ಜೊತೆಗೆ ಉತ್ತಮ ಸಂಬಂಧವಿಟ್ಟುಕೊಂಡಿರುವ ಕಾರಣ ಇವರು ಸದಾ ಚರ್ಚೆಯಲ್ಲಿರುತ್ತಾರೆ.
– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




