ಮಹಿಳಾ ದಿನಾಚರಣೆ & ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ  ಜನಜಾಗೃತಿ  ಜಾಥಾ

4 years ago

ಚಿತ್ರದುರ್ಗ: ಮಹಿಳೆಯರು ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು, ಆಗ ಮಾತ್ರ ಸುಸ್ಥಿರ  ಸಮಾಜ ಕಟ್ಟಬಹುದು ಎಂದು ಮಹಿಳಾ ಮತ್ತು  ಮಕ್ಕಳ  ಕಲ್ಯಾಣ  ಇಲಾಖೆ  ಅಧಿಕಾರಿ ಸುಧಾ ಹೇಳಿದರು.

ಚಿತ್ರದುರ್ಗದ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ಸಭಾಂಗಣದಲ್ಲಿ ಅಂತರಾಷ್ಟ್ರೀಯ  ಮಹಿಳಾ ದಿನಾಚರಣೆಯನ್ನು  ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿಯ ಕಾಲಘಟ್ಟದಲ್ಲಿ  ಮಹಿಳೆಯರು ಶಿಕ್ಷಣ ಮತ್ತು ಸಾಮಾಜಿಕವಾಗಿ ಚಲನಶೀಲರಾಗಬೇಕು. ಆಗ ಮಾತ್ರ ಅತ್ಯುತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕ ಫಾದರ್  ಸಜ್ಜಿ ಜಾರ್ಜ್ ಮಾತನಾಡಿ, ಮಹಿಳೆಯರು ಉತ್ತಮ  ಬದುಕು ರೂಪಿಸಕೊಳ್ಳಬೇಕಾದರೆ ಕೌಶಲ್ಯ ಆಧಾರಿತ ತರಬೇತಿ ಪಡೆಯಬೇಕು. ಹೀಗೆ ತರಬೇತಿ  ಪಡೆದುಕೊಂಡು ಆರ್ಥಿಕ ಸ್ವಾವಲಂಬನೆ ಹೊಂದಿದರೆ ಮಹಿಳೆಯರನ್ನು ಸಮಾಜ ಗೌರವಿಸುತ್ತದೆ ಎಂದರು.

ಕರ್ನಾಟಕ  ಶಾಂತಿ & ಸೌಹಾರ್ದ  ವೇದಿಕೆ ಅಧ್ಯಕ್ಷ ಹಾಗೂ ಹಿರಿಯ  ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್  ಮಾತನಾಡಿ, ಮಹಿಳೆಯರಿಗೆ ಭಾರತದ ಸಂವಿಧಾನದಲ್ಲಿ  ಡಾ.ಬಾಬಾಸಾಹೇಬ್  ಅಂಬೇಡ್ಕರ್ ಅವರು ಸಮಾನತೆಯನ್ನು  ಕಲ್ಪಿಸಿಕೊಟ್ಟರು. ಸಂವಿಧಾನದ ಆಧಾರದ ಮೇಲೆಯೇ ಮಹಿಳೆಯರು ಶಿಕ್ಷಣ, ಉದ್ಯೋಗ, ಆರ್ಥಿಕ ವಲಯದಲ್ಲಿ ಅಪರಿಮಿತವಾಗಿ ಬೆಳೆಯಲೂ ಕಾರಣವಾಗಿದೆ. ಪ್ರತಿಯೊಬ್ಬ  ಮಹಿಳೆ ಅಂಬೇಡ್ಕರ್ ಅವರನ್ನು ಸ್ಮರಿಸಬೇಕಾಗಿದೆ ಎಂದರು.

ಪ್ರತಿ ಹಂತದಲ್ಲೂ ಮಹಿಳೆಯರು ಸ್ವಾವಲಂಬನೆ  ಬದುಕು ಕಟ್ಟಿಕೊಂಡರೆ ಉತ್ತಮ  ಸಮಾಜ ನಿರ್ಮಾಣವಾಗುತ್ತದೆ.  ಹಾಗೆಯೇ  ಮಹಿಳೆಯರಿಗೆ ಸಮಾನತೆ ಕಲ್ಪಿಸಬೇಕಾದ ಹೊಣೆಗಾರಿಕೆ  ಪ್ರತಿಯೊಬ್ಬರ ಮೇಲಿದೆ ಎಂದರು.

ಪತ್ರಕರ್ತ ಮಾಲತೇಶ್ ಅರಸ್ ಮಾತನಾಡಿ, ಉಕ್ರೇನ್  ಮತ್ತು  ರಷ್ಯಾ  ನಡುವೆ ನಡೆಯುತ್ತಿರುವ ಯುದ್ಧದಲ್ಲಿ  ಮಹಿಳೆಯರು ಹೆಗಲ ಮೇಲೆ ಗನ್ ಹೊತ್ತು ರಣರಂಗದಲ್ಲಿ ಹೋರಾಟಕ್ಕೆ  ನಿಂತಿರುವುದನ್ನು ನೋಡಿದರೆ ಮಹಿಳೆ ಯಾರಿಗೇನು ಕಡಿಮೆ ಎಂಬಂತೆ ಇದೆ ಎಂದರು.

ಮಹಿಳಾ ದಿನಾಚರಣೆ  ಕಾರ್ಯಕ್ರಮದಲ್ಲಿ ಚಿತ್ರ ಡಾನ್ ಬೋಸ್ಕೋ ಸಂಸ್ಥೆಯ ನಿರ್ದೇಶಕ  ಫಾದರ್  ಜೋಸೆಫ್ ದಂಡಾವತಿ, ಮಹಂತಮ್ಮ, ವೀಣಾ ವಿಜಯ್, ಸುನಂದಾ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮೂರು ಪ್ರತಿಭಾನ್ವಿತ  ವಿದ್ಯಾರ್ಥಿಗಳಿಗೆ ಮತ್ತು ಗೌರವನ್ವಿತ ಮಹಿಳಾ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

Leave a Reply