ಧರ್ಮ ಸಂಸ್ಕೃತಿಯ ಸನ್ನಿ ಹಿಡಿದವರಿಗೆ

1 year ago

ಹೊಸ ವರ್ಷ ಅಂತ ವಿಷ್ ಮಾಡೋಕೆ ಹೋದ್ರೆ ‘ಇಲ್ಲ ನಾವು ಹೊಸ ವರ್ಷ ಆಚರಿಸಲ್ಲ. ನಮ್ಮದು ಯುಗಾದಿಗೆ ಹೊಸ ವರ್ಷ’ ಅಂತ ಹಲ್ಕಿರಿತಾರೆ. ಇವರ ಮಕ್ಕಳು ಮಾತ್ರ ವಿದೇಶದಲ್ಲಿ ಕೆಲಸ ಮಾಡ್ತಾ ಇರ್ತಾರೆ. ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣವೇ ಬೇಕು. ಅವು ಮಮ್ಮಿ ಡ್ಯಾಡಿ ಅಂತಾನೇ ಕರಿಬೇಕು. ಇನ್ನು ಅಡುಗೆ ಮನೆಯನ್ನ ಇಟಾಲಿಯನ್ ಕಿಚನ್ ಆಗಿ ಬದಲಾಯಿಸಿರ್ತಾರೆ. ಟಾಯ್ಲೆಟ್ ರೂಮಲ್ಲಿ ವೆಸ್ಟರ್ನ್ ಶೈಲಿಯ ಕಮೋಡ್ ಹಾಕ್ಸಿರ್ತಾರೆ‌. ಮಕ್ಕಳಿಗೆ ಬಾಬ್ ಕಟ್ ಮಾಡ್ಸಿರ್ತಾರೆ. ಬೀದಿಯವರ‌್ನೆಲ್ಲಾ ಕರ್ದು ಮಕ್ಕಳ ಬರ್ತಡೆ ಆಚರಿಸ್ತಾರೆ‌. ಮಕ್ಕಳಿಗೆ ಷಾರ್ಟ್ಸ್ ತೊಡಿಸಿ ಮುದ್ದಿಸುವಾಗ ಇವರಿಗೆಲ್ಲಾ ಭಾರತೀಯ ಸಂಸ್ಕೃತಿ ಮರೆತೇ ಹೋಗಿರತ್ತೆ. ನಾವು ಅಮೇರಿಕಾ ಹೋಗ್ತಿದಿವಿ, ಜರ್ಮನಿ ಹೋಗ್ತಿದಿವಿ, ಸ್ವಿಜರ್ ಲ್ಯಾಂಡ್ ಹೋಗ್ತಿವಿ ಅಂತ ತಿಂಗಳಾನುಗಟ್ಟಲೆ ಮೊದಲೇ ಪ್ರಚಾರ ಮಾಡ್ಕೊಳ್ತಾರೆ. ಜಾಬ್ ಗೆ ಅಂತ ವಿದೇಶಕ್ಕೆ ಹೋದ ಮಗನೊ ಮಗಳೊ ಅಲ್ಲಿಯದೇ ಹುಡುಗ‌ನನ್ನೊ ಹುಡುಗಿಯನ್ನೊ ಮದುವೆ ಆಗ್ತಾರೆ. ಆಗ ಇವರಿಗೆಲ್ಲಾ ಭಾರತೀಯ ಸಂಸ್ಕೃತಿ, ಹಿಂದೂ ಧರ್ಮ ಇದ್ಯಾವುದರ ಪ್ರಜ್ಞೆಯೂ ಇರುವುದಿಲ್ಲ..

ಈ ಧರ್ಮ ಸಂಸ್ಕೃತಿ ಅವುಗಳ ರಕ್ಷಣೆ ಅಂತ ಬೊಗಳೇ ಬಿಡ್ತಾ ಇರ್ತಾರಲ್ಲ; ಅವರೆಲ್ಲ ಒಂತರ ಹೆಣಗಳಿದ್ದಹಾಗೆ.‌ ಹಿಂದೂಗಳೇ ಆದ ದಲಿತರು ಶೂದ್ರರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವಾಗಿದ್ದರೆ, ಅವರಿಗೆ ದೇವಾಲಯಗಳಿಗೆ ಬಹಿಷ್ಕಾರ ಹಾಕಿದರೆ, ಊರಿಗೆ ಬಹಿಷ್ಕಾರ ಹಾಕಿದರೆ, ಹಲ್ಲೆ ನಡೆಸಿದರೆ ಅವರ ರಕ್ಷಣೆಗೆ ಧಾವಿಸದೆ ಗರಬಡಿದ ಹೆಣದಂತೆ ಸ್ಥಬ್ಧವಾಗಿರುತ್ತಾರೆ. ನ್ಯೂ ಇಯರ್, ವ್ಯಾಲಂಟೈನ್ಸ್ ಡೇ, ಅಂತವೆಲ್ಲಾ ಬಂದಕೂಡಲೇ ಕೊಳ್ಳಿ ದೆವ್ವಗಳಾಗಿ ಕುಣಿಯಲು ಆರಂಭಿಸುತ್ತಾರೆ. ಆಗ ಯುಗಾದಿಯ ಬಗ್ಗೆ ಎಲ್ಲಿಲ್ಲದ ಜಾಗೃತಿ ಟಾಂಟಾಂ ಢಂಢಂ ಎಲ್ಲ ಶುರೂ..

ವಿದೇಶಿ ಕಂಡು ಹಿಡಿದ ವಿದ್ಯುತ್ ದೀಪ, ಫೋನ್, ರೇಡಿಯೊ, ಟಿವಿ, ರೈಲು ಬಂಡಿ, ವಿಮಾನ, ಲಸಿಕೆಗಳು, ಚುಚ್ಚು ಮದ್ದುಗಳು, ಔಷಧ, ಆಧುನಿಕ ಯಂತ್ರ ಸಲಕರಣೆಗಳೆಲ್ಲವೂ ಬೇಕು. ಕೋವಿಡ್ ವಕ್ಕರಿಸಿಕೊಂಡಿದ್ದಾಗ ‘ರಷ್ಯಾ ಲಸಿಕೆ ಕಂಡು ಹಿಡಿಯಿತಂತೆ, ಅಮೆರಿಕ ಅಭಿವೃದ್ಧಿ ಪಡಿಸಿತಂತೆ’ ಎಂದು ಹುರಿಹುರಿ ಮಾಡುತ್ತಾ, ಜೀವ ಉಳಿದರೆ ಸಾಕು, ಆ ಲಸಿಕೆ ನನಗೇ ಮೊದಲು ಸಿಕ್ಕರೆ ಸಾಕು ಎಂದು ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರೆಲ್ಲಾ ಆ ಕ್ಷಣಕ್ಕೆ ಭಾರತೀಯ ದೇಸೀಯತೆಯನ್ನು ಗಾಳಿಗೆ ತೂರಿಬಿಟ್ಟರಲ್ಲ!‌

ಇವರು ಇವರ ಮಕ್ಕಳ ಶಿಕ್ಷಣ ಅಧ್ಯಯನ ಉದ್ಯೋಗಾವಕಾಶ ಎಲ್ಲದೂ ಎಲ್ಲಿಯದ್ದು. ರಸಾಯಶಾಸ್ತ್ರ, ರಸಾಯನ ವಿಜ್ಞಾನ, ಭೌತಶಾಸ್ತ್ರ, ಭೌತ ವಿಜ್ಞಾನ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಗಣಕ ವಿಜ್ಞಾ‌ನ, ಜೀವಶಾಸ್ತ್ರ, ಸೂಕ್ಷ್ಮಾಣು ಜೀವಶಾಸ್ತ್ರ, ಔಷಧ ಶಾಸ್ತ್ರ, ಔಷಧ ವಿಜ್ಞಾನ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಹೀಗೆ ಅನೇಕ ಅಧ್ಯಯನ ಶಿಸ್ತುಗಳ ಪಿತಾಮಹರೆಲ್ಲಾ ವಿದೇಶಿಯರೇ. ಅವುಗಳನ್ನ ಓದಿ ಬರೆದು ಉದ್ಯೋಗ ಹಣ ಸುಖ ಎಲ್ಲವನ್ನೂ ಅನುಭವಿಸಿದವರು ಅವೆಕ್ಕೆಲ್ಲ ಗೋಲಿ ಹೊಡೆದು ಭಾರತೀಯ ಸಂಸ್ಕೃತಿಯನ್ನು ಒಪ್ಪಿಸಲು ಬರುತ್ತಾರೆ‌. ಇವರ ಮನೆ ಮನೆಗಳಿಗೂ ವಿದ್ಯುತ್ ಬೆಳಕು ನೀಡುವ ಜಲವಿದ್ಯುತ್ ನ ಟರ್ಬೈನ್ ಗಳು ರಷ್ಯಾ ದೇಶದವು. ಲೈಟು ಕಂಡಿಡಿದವನೂ ವೆಸ್ಟರ್ನ್. ಜಪಾನಿನ ದೊಡ್ಡ ದೊಡ್ಡ ಟ್ರಾನ್ಸ್ ಫಾರ್ಮ್ ಗಳು ನಮ್ಮ ವಿದ್ಯುತ್ ಪ್ರಸರಣ ವ್ಯವಸ್ಥೆಗೆ ಜೀವಾಧಾರವಾಗಿವೆ. ಲಿಂಗನಮಕ್ಕಿ. ಜೋಗ ಮತ್ತಿತರೆ ಕಡೆ ಜವಿದ್ಯುತ್ ತಯಾರಿಕಾ ಟರ್ಬೈನ್ ಗಳು ರಷ್ಯಾದ ಯಂತ್ರಗಳು. ಶಸ್ತ್ರ ಚಿಕಿತ್ಸಾ ವಿಜ್ಞಾನ ತಂತ್ರಜ್ಞಾನ,  ಕ್ಯಾನ್ಸರ್ ಮತ್ತಿತರೆ ಖಾಯಿಲೆಗಳಿಗೆ ಲೇಜರ್ ಕೀಮೋ ರೇಡಿಯೊದಂತಹ ಥೆರಪಿಗಳು, ದೇಶದ ರಕ್ಷಣೆಗೆ ಬೇಕಾದ ಆಯುಧಗಳು, ವಾಹನಗಳು, ಒಂದಾ ಎರಡಾ ಇದು ಮುಗಿಯದ ಕಥೆ. ತಮ್ಮ ಅವಷ್ಯಕತೆಗೆ ವಿದೇಶಿಯದ್ದಾದರೇನು ಪಾಯಿಖಾನೆಯದ್ದಾದರೇನು ಬಳಸಿಕೊಳ್ಳುತ್ತಾರೆ. ನಾವು ಬುದ್ಧಿವಂತ ಜನಾಂಗ ಎಂದು ಹೇಳಿಕೊಳ್ಳುವ ಈ ಡೋಂಗೀ ಭಾರತೀಯ ಸಂಸ್ಕೃತಿಯ ರಕ್ಷಕರು ಜಗತ್ತಿಗೆ ಏನು ಕೊಟ್ಟರು? ಈಗಲೂ ಅದೇ ಅಳಲೇ ಕಾಯಿ ಪಾಂಡಿತ್ಯ, ಅದೇ ಗುರುಕುಲ ಶಿಕ್ಷಣ, ಇದರಾಚೆ ಇವರ ಕೊಡುಗೆಯಾದರೂ ಏನು. ಗೋವಿನ ಸಗಣಿ ಗಂಜಳದ ಮಹತ್ವವೂ ಇವರಿಗಿಲ್ಲ.

ಯುಗಾದಿ ನಮ್ಮ ಹಿಂದೂಗಳ ಹೊಸ ವರ್ಷ ಅನ್ನೋದನ್ನ, ಉಗಾದಿಯ ದಿನ ಪಂಚೆ ಉಟ್ಟು, ಭೂಮಿ ತಾಯಿಯ ಪೂಜೆ ಮಾಡ, ಹೊಸ ಬೇಸಾಯ ಶುರುವಿಟ್ಟು, ಹಣೆಗೆ ವಿಭೂತಿ ಭಂಡಾರ ಕುಂಕುಮ ಇಟ್ಟುಕೊಂಡು, ತಲೆಗೆ ಹೂ ಮುಡಿದು,  ಶ್ರದ್ಧಾ ಭಕ್ತಿಯಿಂದ ಬೀದಿಯಲ್ಲಿ ನಿಂತು ಚಂದಿರನ ನೋಡಿ, ರತ್ನ ಪಕ್ಷಿಯನ್ನು ನೋಡಿ, ಆರತಿ ದೀಪ ಬೆಳಗಿ, ಬೇವು ಬೆಲ್ಲ ಹಂಚಿ, ಗುರುಹಿರಿಯರಿಗೆ ಪೊಡಮಟ್ಟು, ಸಕಲರಿಗೂ ಶುಭ ಕೋರುತ್ತಾ ಹೋಳಿಗೆ ಉಂಡು ಸಂಭ್ರಮಿಸುವ ನಮಗೆ ಇವರು ಸಂಸ್ಕೃತಿಯ ಪಾಠ ಹೇಳಿಕೊಡಬೇಕಾ? ಜಗತ್ತು ಬದಲಾದರೂ ಬದಲಾಗಲು ಒಲ್ಲದ ಈ ಜಾಣ ಬುದ್ದಿಯ ಸಂಪ್ರದಾಯವಾದಿಗಳು ನಮ್ಮನ್ನೆಲ್ಲಾ ಖಂಡಿತಾ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಮುನ್ನಡೆಯಲು ಬಿಡದೆ ಧರ್ಮ ಸಂಸ್ಕೃತಿಯ ಹೆಸರಲ್ಲಿ ಅಡ್ಡಿಗಾಲು ಹಾಕುತ್ತಾ ಶಿಲಾ ಯುಗಕ್ಕೆ ಎಳೆದೊಯ್ಯುತ್ತಿದ್ದಾರೆ. ಈ ದೇಶದ ರಕ್ಷಣೆಗೆ ಇವರ ಮಕ್ಕಳ ಕೊಡುಗೆ ಏನು? ಈ ಹಿಂದೂ ಧರ್ಮ ಹಿಂದೂ ಸಂಸ್ಕೃತಿಯ ರಕ್ಷಣೆಗಾಗಿ ಇವರ ಮಕ್ಕಳ ತ್ಯಾಗ ಬಲಿದಾನವೆಷ್ಟು? ನಮ್ಮ ಹಿಂದೂ ರೈತರು ನೆರೆ ಬಂದು ಬರ ಬಿದ್ದು ಬೆಳೆ ಕಳೆದುಕೊಂಡು ಅಳುವಾಗ, ಮಾರುಕಟ್ಟೆಯಲ್ಲಿ ಬೆಲೆ ಕುಸಿದು ಸಾಲದ ಶೂಲಕ್ಕೆ ಬೆದರಿ ಆತ್ಮಹತ್ಯೆಗೆ ಬಲಿಯಾದಾಗ ಇವರು ಎಲ್ಲಿ ಹೋಗಿರುತ್ತಾರೆ? ಇಂಥಾ ಕ್ಷುದ್ರ ಆತ್ಮವಂಚಕರು ಹೇಳಲು ಬರುವ ಧರ್ಮ ಸಂಸ್ಕೃತಿಯ ಅಡುಗೂಲಜ್ಜಿ ಕಥೆಯನ್ನು ಕೇಳುತ್ತಾ ಕೂರಬೇಕೆ…? ಧರ್ಮ ಸಂಸ್ಕೃತಿ ನಿಷ್ಠೆ ಇವೆಲ್ಲವೂ ನಮ್ಮ ರಕ್ತದಲ್ಲೇ ಇದೆ ಅದ‌ನ್ನ ನಿಜವಾಗಲೂ ತಿಂದು ಹಾಕುತ್ತಿರುವವರು ಈ ಡೋಂಗಿಗಳು…

– ಸುರೇಶ ಎನ್ ಶಿಕಾರಿಪುರ, ಚಿಂತಕರು

Leave a Reply