‘ವಚನದರ್ಶನ’ ಮಾಡಿಸಲು ಲಿಂಗಾಯತ ಧರ್ಮ ಅರಿತ ದಾರ್ಶನಿಕರಿಲ್ಲವೆ?

2 years ago

ಇದೊಂದು ತರಲೆ ವಿಶ್ವವಿದ್ಯಾಲಯ

ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿ ಸುದ್ದಿಯಲ್ಲಿರಬೇಕಾದರೆ ಅದು / ಅವನು famous ಆಗಬೇಕು ಇಲ್ಲವೆ Notorious ಆಗಿರಬೇಕು. Famous ಆಗಲು ಕಠಿಣ ಪರಿಶ್ರಮ, ಶ್ರದ್ಧೆ, ನಿರಂತರ ಅಭ್ಯಾಸ ಬೇಕಾಗುತ್ತದೆ. Notorious ಆಗಲು ಇದಾವುದರ ಅವಶ್ಯಕತೆಯಿಲ್ಲ. ಪ್ರತಿಷ್ಠಿತ ವ್ಯಕ್ತಿಗಳ ಕೊಲೆಮಾಡಿ ಅಥವಾ ಅವರ ಸಿದ್ಧಾಂತಗಳನ್ನು ತಿರುಚಿಯೂ ಸುದ್ದಿಯಲ್ಲಿರಬಹುದು.

ಕರ್ನಾಟಕದಲ್ಲಿ ಬಹುಜನರು ಕೇಳಿರದ ಒಂದು ವಿಶ್ವವಿದ್ಯಾಲಯವಿದೆ. ಅದರ ಕೆಲಸ ಗ್ರಾಮೀಣ ಅಭಿವೃದ್ಧಿಗಾಗಿ ಮಕ್ಕಳಿಗೆ ಶಿಕ್ಷಣ ನೀಡುವುದು. ಅದೊಂದು ಅನುದಾನಿತ ವಿಶ್ವವಿದ್ಯಾಲಯ. ಅದರ ಹೆಸರು ‘ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ನಾಗಾವಿ, ಗದಗ’. ಇದನ್ನು ಅಸ್ತಿತ್ವಕ್ಕೆ ತಂದವರು ಗ್ರಾಮೀಣ ಅಭಿವೃದ್ಧಿಯ ಕನಸು ಕಾಣುತ್ತಿರುವ ಮಾನ್ಯ ಸಚಿವ ಶ್ರೀ ಎಚ್. ಕೆ. ಪಾಟೀಲರು.

ಈ ಸಂಸ್ಥೆ ತನ್ನ ಇರುವಿಕೆಯೊಂದಿಗೆ ಪ್ರಸಿದ್ಧಿ ಪಡೆಯಲು ಆಯ್ಕೆ ಮಾಡಿಕೊಂಡದ್ದು famous ಸಿದ್ಧಾಂತವನ್ನಲ್ಲ. Famous ಆಗಲು ಬಯಸಿ notorious ಸಿದ್ಧಾಂತದತ್ತ ಹೊರಳುತ್ತಿದೆ. ಇದರ ಕುರುಹು ಇತ್ತೀಚಿನ ಒಂದು ಕಾರ್ಯ.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈರ್ಮಲ್ಯ, ಉದ್ಯೋಗ, ಅಬಲೆಯರ/ ಹಿಂದುಳಿದವರ ಸಬಲೀಕರಣದಂತಹ ನೂರಾರು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಹುಟ್ಟಿಕೊಂಡ ಸಂಸ್ಥೆ ಇಂದು ಬೆರೆಯದೆ ದಾರಿ ಹಿಡಿದಿದೆ. ದುರ್ದೈವಶಾತ್ ಅದು ಇಂದು ಹಿಂದೂ ಸಾಮ್ರಾಜ್ಯ ಕಟ್ಟಲು ಹೊರಟಿದೆ.

ಈ ವಿಶ್ವವಿದ್ಯಾಲಯ ಬರಲಿರುವ ಭಾನುವಾರ, ಸೋಮವಾರ ಮತ್ತು ಮಂಗಳವಾರ (೧೭,೧೮ ಹಾಗೂ ೧೯ನೆಯ ಡಿಸೆಂಬರ ೨೦೨೩ )ರಂದು ಒಂದು ವಿಚಾರ ಸಂಕಿರಣ ಏರ್ಪಡಿಸಿದೆ. ಆಯ್ದುಕೊಂಡ ವಿಷಯ; “ವಚನ ದರ್ಶನ ಭಕ್ತಿ, ದಾಸೋಹ ಮತ್ತು ಕಾಯಕ”. ಮೇಲ್ನೋಟಕ್ಕೆ ಸಂವಿಧಾನದ ಆಶಯಗಳಾದ ಕಾಯಕ ದಾಸೋಹದ ಮೇಲಿನ ಚರ್ಚೆಯಂತೆ ಕಂಡರೂ ಒಳನೋಟ ಬೇರೆಯದೆಯಿದೆ. ಕಾರಣ ಅದರಲ್ಲಿ ಭಾಗವಹಿಸಲಿರುವ ಉಪನ್ಯಾಸಕರ ಹಿನ್ನೆಲೆ.

ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲಿದ್ದಾರೆ ಮೌಢ್ಯ ಬಿತ್ತುವ, ವೀರಶೈವಪಂಥವು ಹಿಂದೂ ಧರ್ಮದ ಒಂದು ಭಾಗವೆಂದು ಪ್ರತಿಪಾದಿಸುತ್ತಿರುವ ಡಾ ಸಂಗಮೇಶ ಸವದತ್ತಿಮಠರವರು. ಎರಡನೆಯವರು ಅಕ್ಕಮಹಾದೇವಿಯ ವಚನಗಳನ್ನು ಬಾಯಲ್ಲಿ ಪಠಿಸುತ್ತ ಮನದಲ್ಲಿ ಮನುವನ್ನು ನೆನೆಯುವ ಡಾ. ವೀಣಾ ಬನ್ನಂಜೆಯವರು. ಪ್ರಖರ ಆರ್.ಎಸ್.ಎಸ್. ಪ್ರತಿಪಾದಕ ರಾಜಾರಾಮ ಹೆಗಡೆಯವರು. ಅವರೊಂದಿಗೆ ಇರಲಿದ್ದಾರೆ ಇನ್ನಿಬ್ಬರು ಹಿಂದೂ ವೈದಿಕವಾದಿ ಡಾ.ರಘುನಂದನ್ ಮತ್ತು ಬಲಪಂಥೀಯ ಮೈಸೂರಿನ ಡಾ ವಸಂತಕುಮಾರ ಮತ್ತಿತರು. ಕಾಟಾಚಾರಕ್ಕೆ ಲಿಂಗಾಯತರ ಪರವಾಗಿ ಕರೆದಿದ್ದಾರೆ ಹಂಪಿ ವಿಶ್ವವಿದ್ಯಾಲಯದ ಡಾ. ರವೀಂದ್ರನಾಥ ಮತ್ತು ಬಾಗೇವಾಡಿಯ ಹಂಚಲಿ ಗುರುಗಳನ್ನ. ಇದರ ಸಾನ್ನಿಧ್ಯ ವಹಿಸಲಿದ್ದಾರೆ ಮಾದಾರ ಚೆನ್ನಯ್ಯ ಪೀಠದ ಪೀಠಾಧಿಪತಿ ಶ್ರೀ ಮಾದಾರ ಚನ್ನಯ್ಯ ಜಗದ್ಗುರುಗಳು. ಇವರ ನಿಜ ನಿಲುವುಗಳು ಇಡೀ ಕರ್ನಾಟಕದ ಜನತೆಗೆ ಗೊತ್ತಿದೆ.

ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ವಿಚಾರ ಸಂಕಿರಣದ ಅಂತರಂಗದ ಭಾವವನ್ನು ಅರಿತು ಅದರಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ ಗದುಗಿನ ಪೂಜ್ಯರಾದ ಶ್ರೀ ಸಿದ್ದರಾಮ ಸ್ವಾಮೀಜಿವಯರು.

ಇನ್ನೂ ಮೂರು ದಿನಗಳು ನಡೆಯಲಿರುವ ವಿಚಾರ ಸಂಕಿರಣದಲ್ಲಿ ಆಯ್ದುಕೊಂಡ ವಿಷಯಗಳ ಮೇಲೆ ಚರ್ಚಿಸೋಣ. ಲಿಂಗಾಯತ ಧರ್ಮದ ಜೀವಾಳಾದ ಭಕ್ತಿ, ಕಾಯಕ ಮತ್ತು ದಾಸೋಹಗಳು ಈ ವಿಚಾರ ಸಂಕಿರಣದ ಚರ್ಚಾ ವಿಷಯಗಳು.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗ್ರಾಮೀಣ ಅಭಿವೃದ್ಧಿಯನ್ನು ಕಡೆಗಣಿಸಿ ಧರ್ಮ ಆಭಿವೃದ್ಧಿಗೆ ಏಕೆ ಕೈ ಹಾಕಬೇಕು? ಇದು ಮೊದಲನೆಯ ಪ್ರಶ್ನೆ.

“ಕಾಯಕ ಗ್ರಾಮೀಣ ಅಭಿವೃದ್ಧಿಯಲ್ಲಿ ಇಲ್ಲವೆ?” ನೀವು ಕೇಳಬಹುದು.
“ಹೌದು ಬರಬಹುದು ಅಥವಾ ಬರುತ್ತದೆ”.

‘ಕಾಯಕ’ ದ ಅರ್ಥ ‘ಕೆಲಸ’ವೆಂದು ನಾವು ಪರಿಗಣಿಸಿದ್ದೇವೆ. ಹೃದಯ ಶುದ್ಧಿ, ಅಂತರಂಗದ ಶುದ್ಧಿಯಿಂದ ಮಾಡಿದ ಕೆಲಸ ಕಾಯಕವಾಗುತ್ತದೆ. ಶ್ರದ್ಧೆ ಭಕ್ತಿಯಿಲ್ಲದ ಕಾಯಕ ಕೆಲಸವಾಗಿ ಪರ್ಯವಸಾನಗೊಳ್ಳುತ್ತದೆ. ಮೇಲಧಿಕಾರಿ, ಅವನ ಉಚ್ಚ ಅಧಿಕಾರಿಯ ಹೆದರಿಕೆಯಿಂದ ಅಥವಾ ಗಿಂಬಳದ ಅಸೆಯಿಂದ ಮಾಡುವ ಕೆಲಸ ಹೇಗಾಗುತ್ತದೆ ಸತ್ಯ ಶುದ್ಧ ಕಾಯಕ.

ಸತ್ಯ ಶುದ್ಧ ಕಾಯಕಮಾಡಿ ತಂದು,
ವಂಚನೆಯಿಲ್ಲದೆ ಪ್ರಪಂಚವನಳಿದು,
ನಿಚ್ಛ ಜಂಗಮಕ್ಕೆ ದಾಸೋಹವ ಮಾಡುವ
ಸದ್ಭಕ್ತನ ಹೃದಯದೊಳಗೆ ಅಚ್ಛೊತ್ತಿದಂತಿಪ್ಪ
ಕಾಮಧೂಮ ಧೂಳೇಶ್ವರಾ…… ಎನ್ನುತ್ತಾರೆ ಶರಣರು.

ಸಂಬಳಕ್ಕಾಗಿ ದುಡಿಯುವ ಕೆಲಸದಲ್ಲಿ ಶ್ರೇಣಿಕೃತ ವ್ಯವಸ್ಥೆಯಿದೆ. ಕುಲಪತಿ… ಉಪ ಕುಲಪತಿ… ಕಾರಕೂನ… ಜವಾನನೆಂದು ಇವರಲ್ಲಿ ಶ್ರೇಣೀಕೃತ ವ್ಯವಸ್ಥೆಯಿದೆ. ಆದರೆ ಕಾಯಕ ಜೀವಿಗಳಾಗಿದ್ದ ನಮ್ಮ ಶರಣರ ಮಧ್ಯ ಶ್ರೇಷ್ಠ- ಕನಿಷ್ಠ ಎಂಬ ಭಾವವಿರಲಿಲ್ಲ. ಚರ್ಮ ಹದಮಾಡುವ ಡೋಹರ ಕಕ್ಕಯ್ಯ, ಚಪ್ಪಲಿ ಹೊಲಿಯುವ ಮಾದಾರ ಚನ್ಯಯ್ಯ, ಬೀದಿ ಕಸಗೂಡಿಸುವ ಸತ್ಯಕ್ಯ, ಕೊಳೆಬಟ್ಟೆ ತೊಳೆಯುವ ಅಂಬಿಗರ ಚೌಡಯ್ಯ ಎಲ್ಲರೂ ಸಮಾನರೆ. ಇವರೆಲ್ಲರೂ ಕಾಯಕ ಜೀವಿಗಳೆ. ಎಲ್ಲರೂ ಅನುಭವ ಮಂಟಪದ ಸದಸ್ಯರುಗಳೆ. ಪ್ರಧಾನಿ ಬಸವಣ್ಣ, ಆಧ್ಯಾತ್ಮ ಸೂರ್ಯ ಅಲ್ಲಮನ ಪಕ್ಕದಲ್ಲಿ ಕುಳಿತವರೆ. ರಾಣಿಯ ಪದವಿಯನ್ನೇ ತಿರಸ್ಕರಿಸಿ, ಮೈಮೇಲಿನ ವಸ್ತ್ರವನ್ನೂ ತ್ಯಜಿಸಿದ ವೈರಾಗಿಣಿ ಅಕ್ಕನ ಸಮನಾಗಿ ಕುಳಿತು ವಚನ ಸಂಪತ್ತನ್ನು ಬೆಳಸಿದವರು ಇದೆ ಕಾಯಕ ಜೀವಿಗಳು, ಇವರೇ ಲಿಂಗಾಯತರು.

ಇಂದು ನಾವು ನಾವೆಲ್ಲ ಮಾಡುತ್ತಿರುವುದು ಕಾಯಕವಲ್ಲ, ನಾವು ಮಾಡುತ್ತಿರುವುದು ಕೆಲಸ. ಇಂದಿನ ವಿಚಾರ ಸಂಕಿರಣದದಲ್ಲಿ ಉಪನ್ಯಾಸ ನೀಡುವ ಮಹಾನುಭಾವರು ಕೆಲಸದವರು. ಕಾಯಕದ ನಿಜ ಮರ್ಮವನ್ನು ಅರಿಯದ, ಶ್ರೇಣಿಕೃತ ವ್ಯವಸ್ಥೆಯ ಭಾಗವಾದ, ತರತಮ ಮನೋಭಾವದವರು. ಅಷ್ಟೇಕೆ ವೈದಿಕ ಧರ್ಮದ ಪ್ರತಿಪಾದಕರಾದ ಇವರು ದೇಹದ ಅಂಗಾಂಗಗಳಲ್ಲಿಯೂ ಶ್ರೇಷ್ಠ ಕನಿಷ್ಠ ಗುರುತಿಸುವವರು, ತಲೆಯಿಂದ ಹುಟ್ಟಿದ ಬ್ರಾಹ್ಮಣ ಶ್ರೇಷ್ಠ, ಪಾದದಿಂದ ಹುಟ್ಟಿದವ ಶೂದ್ರ ಕನಿಷ್ಠ ಎಂಬ ಮನೋಭಾವದ ಮನು ಸಿದ್ಧಾಂತದ ಪ್ರತಿಪಾದಕರು. ಇಂಥಹವರಿಂದ ಕಾಯಕದ, ದಾಸೋಹದ ಅರ್ಥ ಕಾಣಲಾದೀತೆ?

‘ವಚನದರ್ಶನ’ ಮಾಡಿಸಲು ಲಿಂಗಾಯತ ಧರ್ಮ ಅರಿತ ದಾರ್ಶನಿಕರಿಲ್ಲವೆ? ಈ ವಿಚಾರ ಸಂಕಿರಣದಲ್ಲಿ ವಚನ ವಿಶ್ಲೇಷಣೆ ಮಾಡುವ ನಿಜ ಲಿಂಗಾಯತ ತಜ್ಞರು ಸಿಗಲಿಲ್ಲವೆ? ಅಥವಾ ಇದೊಂದು ಆರ್.ಎಸ್.ಎಸ್. ಹುನ್ನಾರದ ಮತ್ತೊಂದು ಷಡ್ಯಂತ್ರವೆ? ಅವರು ಹೇಳುವಂತೆ ಶರಣರು ಸಹ ವೈದಿಕ ಸನಾತನ ಹಿಂದೂ ಧರ್ಮದ ಪ್ರತಿಪಾದಕರು. ಅವರೆಲ್ಲ ಮಾಡರೇಟ್ ಥಿಂಕರ್ಸ್ ಎಂದು ಮರುನಾಮಕರಣ ಮಾಡಿ ಲಿಂಗಾಯತ ಧರ್ಮದ ಹೋರಾಟಕ್ಕೆ ತಡೆಯೊಡ್ಡುವ ಮತ್ತೊಂದು ಪ್ರಯಾಸವೆ?

ಈ ವಿಚಾರ ಸಂಕಿರಣಕ್ಕೆ ವಿರೋಧ ಬಲವಾಗುತ್ತಲಿದೆ. ಧರ್ಮ ದಳ್ಳುರಿಯನ್ನು ನಂದಿಸಲಾರರಾ ಸಚಿವ ಎಚ್.ಕೆ.ಪಾಟೀಲ ಸಾಹೇಬರು. ಕರ್ನಾಟಕ ಸರಕಾರದ ಉಚ್ಚ ಶಿಕ್ಷಣ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆಯೆ?

  • ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply