ನಮ್ಮ ದೇಶದಲ್ಲಿ ಕೊನೆಯ ಜಾತಿಗಣತಿಯಾಗಿದ್ದು ೧೯೩೧ ಬ್ರಿಟಿಷರ ಆಡಳಿತದ ಕಾಲದಲ್ಲಿ. ಸ್ವಾತಂತ್ರ್ಯದ ನಂತರ ಇದು ಬೇಕಿಲ್ಲ ಎಂದಿದ್ದರು ನಮ್ಮ ಹಿರಿಯರು. ಇತ್ತೀಚಿನ ದಿನಗಳಲ್ಲಿ ಸರಕಾರಿ ಮೀಸಲಾತಿಯನ್ನು ಎಲ್ಲರೂ ಕೇಳುತ್ತಿದ್ದು ಅರ್ಹ ಪಲಾನುಭಾವಿಗಳು ಯಾರು? ಎಂಬ ಪ್ರಶ್ನೆಗೆ ಜಾತಿಗಣತಿ ಬೇಕೇಬೇಕು ಎನ್ನುತ್ತಿವೆ ಎಲ್ಲ ಸಮಾಜಗಳು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಎಲ್ಲರ ಬೇಡಿಕೆಯನ್ನು ಮನ್ನಿಸುತ್ತ ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕಾಂತರಾಜ ಆಯೋಗವನ್ನು ರಚಿಸಿದ್ದರು. ಆದರೆ ಆ ವರದಿ ಸೋರಿಕೆಯಾಗಿ ವರದಿ ವೈಜ್ಞಾನಿಕವಿಲ್ಲವೆಂದು ಅನೇಕ ಸಮಾಜಗಳು ಅದಕ್ಕೆ ವಿರೋಧ ವ್ಯಕ್ತಪಡಿಸಲಾರಂಭಿಸಿದ್ದವು. ವರದಿ ಬಹಿರಂಗಗೊಳ್ಳದೆ ಸರಕಾರದ ಕಪಾಟುಗಳಲ್ಲಿ ಕೊಳೆಯಲಾರಂಭಿಸಿತ್ತು. ಸಿದ್ದರಾಮಯ್ಯನವರು ಪುನಃ ಮುಖ್ಯಮಂತ್ರಿಯಾದರು, ಈಗಲಾದರು ವರದಿ ಬಿಡುಗಡೆ ಮಾಡಿ ಎಂದವು ಕೆಲ ಸಮಾಜಗಳು. ಬಿಹಾರ ಸರ್ಕಾರ ಜಾತಿಗಣತಿ ಮಾಡಿತ್ತು. ಅದಕ್ಕೆ ಯಾರಿಂದಲೂ ತೊಂದರೆ ಬರಲಿಲ್ಲವಂತೆ. ಈ ಬಾರಿ ಕಾಂಗ್ರೆಸ್ ಹೈ ಕಮಾಂಡ್ ಸಿದ್ದರಾಮಯ್ಯನವರ ಬೆನ್ನಿಗೆ ನಿಂತು ವರದಿ ಅಂಗೀಕರಿಸಿ ಎಂದಿತು. ಕಾಂತರಾಜ ವರದಿಯನ್ನು ಹಿಂದುವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಡೆಯವರು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಸರ್ಕಾರಕ್ಕೆ ಸಲ್ಲಿಸಿದ್ದಾರೆಂದು ತಿಳಿದು ಬರುತ್ತದೆ.
“ಜಾತಿಗಣತಿ ಸಮೀಕ್ಷೆ ವೈಜ್ಞಾನಿಕ, ಜಾರಿ ನಿಶ್ಚಿತ” ಎಂಬ ತಲೆಬರಹದ ಅಡಿಯಲ್ಲಿ ನಿನ್ನೆಯ ಪ್ರಜಾವಾಣಿಯಲ್ಲಿ ಒಂದು ದೊಡ್ಡ ಲೇಖನ ಪ್ರಕಟವಾಗಿದೆ. ಅದೇ ಲೇಖನದಲ್ಲಿ ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ವರದಿ ಪ್ರಕಾರ ಪ್ರವರ್ಗವಾರು ಜನಸಂಖ್ಯೆಯ ವಿವರಗಳನ್ನೂ ನೀಡಿದೆ. ಈ ವರದಿಯನ್ನು ಓದುತ್ತ ಹೋದಂತೆ ಇದೊಂದು ಅವೈಜ್ಞಾನಿಕ ವರದಿ ಎಂದು ಅನಿಸಿ ಅದನ್ನು ನಿರ್ಲಕ್ಷಿಸಲು ಬಯಸಿದೆ. ಆದರೆ ಇದೇ ವರದಿಯನ್ನು ನನ್ನ ನೆಚ್ಚಿನ ಸರಕಾರ ದಿನಾಂಕ ೧೭ರಂದು ನಡೆಯಲಿರುವ ಮಂತ್ರಿಮಂಡಳದ ಸಭೆಯಲ್ಲಿ ಸ್ವೀಕರಿಸುವುದಾಗಿ ಪ್ರಕಟಿಸಿದೆ.
ಇದು ಅವೈಜ್ಞಾನಿಕ ಅಥವಾ ವಸ್ತುನಿಷ್ಠ ವರದಿಯಲ್ಲ ಎಂದು ಭಾವಿಸಲು ಮಾಧ್ಯಮಗಳ ವರದಿಯಲ್ಲಿ ಬಂದಿರುವ ವಿವರಗಳನ್ನು ಗಮನಿಸಿದರೆ ತಿಳಿಯುವುದು. ಅಲ್ಲದೆ ಜಾತಿಗಣತಿ ಸಮಯದಲ್ಲಿ ಗಣತಿದಾರರ ಕೈಪಿಡಿಯೇ ದೋಷ ಪೂರಿತವಾಗಿತ್ತು ಎಂದು ವಿಧಾನಸೌಧದ ಮೂರನೆಯ ಮಹಡಿಯಲ್ಲಿಂದು ಚರ್ಚೆಯಾಗುತ್ತಿದೆ. ಉದಾಹರಣೆಗೆ ವೀರಶೈವರ ೭೮ ಉಪಜಾತಿಗಳಿಗೆ ಸಂಖೇತ ಸಂಖ್ಯೆಗಳನ್ನು ನೀಡಿದ್ದಾರೆ ಆದರೆ ಈ ಮತದಲ್ಲಿ ೯೮ ಜಾತಿಗಳನ್ನು ಗುರುತಿಸಿದೆ ಅ. ಭಾ. ವೀ. ಮ. ಸಭೆ.
ಪ್ರಜಾವಾಣಿ ವರದಿಯಂತೆ ಕಾಂತರಾಜ ವರದಿಯಲ್ಲಿ ಪ್ರವರ್ಗಗಳನ್ನು ಮಾಡಿ ಅವುಗಳಲ್ಲಿ ಜಾತಿ ಪಟ್ಟಿ ತೋರಿಸಿ ಅವರ ಜನಸಂಖ್ಯಾ ವಿವರ ನೀಡಿದೆ. ಪ್ರವರ್ಗ ೧ಎ ಜನಸಂಖ್ಯೆ ೩೪, ೯೬, ೬೩೮ ಎಂದು ತೋರಿಸಲಾಗಿದೆ. ಪ್ರವರ್ಗ ೧ಬಿಯಲ್ಲಿ, ೭೩,೯೨,೩೧೩ ಎಂದಿದೆ, ಅದರಂತೆ ಪ್ರವರ್ಗ ೨ಎ ದಲ್ಲಿ ೭೭, ೭೮,೨೦೮, ಪ್ರವರ್ಗ ೨ಬಿಯಲ್ಲಿ ೭೫,೨೫, ೮೮೦, ಪ್ರವರ್ಗ ೩ಎ – ೭೨,೯೯,೫೭೭ ಮತ್ತು ಪ್ರವರ್ಗ ೩ಬಿ ಯಲ್ಲಿ ೮೧,೩೭,೫೩೬ ಜನಸಂಖ್ಯೆಯನ್ನು ತೋರಿಸಲಾಗಿದೆ. ಇವೆಲ್ಲವನ್ನು ಸೇರಿಸಿದಾಗ ಕರ್ನಾಟಕದ ಒಟ್ಟು ಜನಸಂಖ್ಯೆ ೪,೧೬,೩೦,೧೫೩ ಆಗುತ್ತದೆ. ಆದರೆ ೨೦೧೧ ರ ಜನಗಣತಿ ಪ್ರಕಾರ ಕರ್ನಾಟಕದ ಒಟ್ಟು ಜನಸಂಖ್ಯೆ ೬,೧೧,೩೦,೭೦೪. ಆದರೆ ಕಾಂತರಾಜ ವರದಿಗೂ ೨೦೧೧ರ ಜನಗಣತಿಯ ವರದಿಗೂ ಇರುವ ಜನಸಂಖ್ಯೆಯ ಅಂತರ ೧,೯೫,೦೦,೫೫೧.. ಸುಮಾರು ಎರಡು ಕೋಟಿ ಜನ ಎಲ್ಲಿ ಹೋದರು? ಅವರಿದ್ದರೇ ಯಾವ ಪ್ರವರ್ಗದಲ್ಲಿ ಅವರನ್ನು ಸೇರಿಸಲಾಗಿದೆ?
ಈ ಅಂಕಿಸಂಖ್ಯೆಯ ಗೊಂದಲದಿಂದ ಹೊರಬರಲು ತಕ್ಷಣ ಕಾಂತರಾಜ ವರದಿಯ ಆಯೋಗದ ಪ್ರಮುಖ ಸದಸ್ಯರೊಂದಿಗೆ ಚರ್ಚೆಗಿಳಿದೆ. ಅವರ ಹೇಳಿಕೆ ಪ್ರಕಾರ ಅವರು ಸಲ್ಲಿಸಿದ ವರದಿಯಲ್ಲಿ ಐದು ಕೋಟಿ ತೊಂಬತ್ತೆಂಟು ಲಕ್ಷ ಜನಸಂಖ್ಯೆಯ ವರದಿಯನ್ನು ನೀಡಿದ್ದಾಗಿ ತಿಳಿಸಿದರು. ಹಾಗಿದ್ದರೆ ಜಯಪ್ರಕಾಶ ಹೆಗ್ಡೆ ವರದಿಯ ಜನಸಂಖ್ಯೆ ವರದಿ ಹಾಗು ಕಾಂತರಾಜ ವರದಿಯಲ್ಲಿ ಜನಸಂಖ್ಯಾ ವ್ಯತ್ಯಾಸಕ್ಕೆ ಕಾರಣಗಳೇನು? ಎಂದಿದ್ದಕ್ಕೆ ಅವರು ನಿರುತ್ತರರಾದರು. ಆಗ ನಾನು ೨೦೧೧ರ ಜನಸಂಖ್ಯಾ ವಿವರಕ್ಕೂ ನೀವು ಸಲ್ಲಿಸಿದ ಜನಸಂಖ್ಯಾ ವಿವರಕ್ಕೂ ಇರುವ ವ್ಯತ್ಯಾಸ ಏಕೆ? ಎಂದಾಗ ಅವರು ಭಾರತೀಯ ಜನಸಂಖ್ಯಾ ಅಯೋಗ ಹಾಗು ಸರ್ವೋಚ್ಚ ನಾಯಾಲಯವು ೧೦% ಜನಸಂಖ್ಯಾ ವ್ಯತ್ಯಾಸ ಪರಿಗಣಿಸಬಹುದು ಎನ್ನುತ್ತದೆ ಎಂದು ಹೇಳುತ್ತ ಕಾಂತರಾಜ ವರದಿಯ ಕೇವಲ ೪.೫% ಜನಸಂಖ್ಯಾ ವ್ಯತ್ಯಾಸ ಇರುವುದೆಂದು ತಿಳಿಸುತ್ತ ತಾವು ಸಲ್ಲಿಸಿದ ಐದು ಕೋಟಿ ತೊಂಬತ್ತೆಂಟು ಲಕ್ಷಕ್ಕೆ ೪.೫% ಸೇರಿಸಿದರೆ ಅಂದಾಜು ಆರು ಕೋಟಿ ಇಪ್ಪತ್ತೈದು ಲಕ್ಷಕ್ಕೆ ಬರುತ್ತದೆ ಎಂದು ಸಮಜಾಯಿಷಿ ನೀಡಿದರು. ಆಗ ನಾನು ಪ್ರಜಾವಾಣಿ ವರದಿ ಸುಳ್ಳೆ ಎಂದೆ. ಅವರು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ.
ಕುತೂಹಲಕ್ಕಾಗಿ ನಾನು ಲಿಂಗಾಯತರ ಒಟ್ಟು ಜನಸಂಖ್ಯೆಯನ್ನು ಸೇರಿಸಿದಾಗ ಅಲ್ಲಿಯೂ ಕೂಡ ತಪ್ಪು ಅಂಕಿಸಂಖ್ಯೆಗಳು ಗೋಚರಿಸಿದವು. ಉದಾಹರಣೆಗೆ ಪ್ರವರ್ಗ ೩ಬಿಯಲ್ಲಿ ಒಟ್ಟು ೮೧, ೩೭, ೫೩೬ ಎಂದು ತೋರಿಸಿ ಜಾತಿವಾರು ಜನಸಂಖ್ಯೆಯ ವಿವರ ನೀಡಿದ್ದಾರೆ. ವೀರಶೈವ ಲಿಂಗಾಯತ, ಲಿಂಗಾಯತ ಉಪಗುಂಪುಗಳು, ಬೇಡುವ ಜಂಗಮ, ಲಿಂಗಾಯತ ಹಡಪದ, ಲಿಂಗಾಯತ ಬಡಿಗ, ಲಿಂಗಾಯತ ವೀರಶೈವ, ವೀರಶೈವ ಪಂಚಮಸಾಲಿ, ಪಂಚಮಸಾಲಿ ಲಿಂಗಾಯತ, ಆದಿ ಬಣಜಿಗ, ಬಣಜಿಗ ಲಿಂಗಾಯತ, ಜಂಗಮ ಲಿಂಗಾಯತ, ಕುಡುವಕ್ಕಲಿಗ, ಲಿಂಗವಂತ, ಲಿಂಗಾಯತ್, ರೆಡ್ಡಿ ಲಿಂಗಾಯತ, ಸಾದರ ಲಿಂಗಾಯತ, ವೀರಶೈವ ಮತ್ತು ನೊಳಂಬ ಲಿಂಗಾಯತ ಎಂದು ಹದಿನೆಂಟು ಜಾತಿಗಳಾಗಿ ವಿಂಗಡಿಸಿ ವರದಿ ನೀಡಿದ್ದಾರೆ. ಇವರೇ ನೀಡಿದ ಒಟ್ಟು ಜನಸಂಖ್ಯೆ ವಿವರದ ಆಧಾರದಲ್ಲಿ ಪ್ರವರ್ಗ ೩ಬಿ ಯಲ್ಲಿ ಲಿಂಗಾಯತರ ಜನಸಂಖ್ಯೆ ೧,೨೭,೬೬,೩೭೮ ಇವರೊಂದಿಗೆ ಇದೆ ಪ್ರವರ್ಗದಲ್ಲಿರುವ ಕ್ರಿಶ್ಚಿಯನ್ ಉಪಜಾತಿಗಳು ೯,೪೭,೯೯೪ + ಬಂಟ್೩,೧೯,೧೧೩ + ಪರಿವಾರ ಬಂಟ್ ೩,೨೫೮ + ಜೈನ ದಿಗಂಬರರನ್ನು ೧,೬೨,೫೬೬ ಸೇರಿಸಿದರೆ ಒಟ್ಟು ೧,೪೧,೯೯,೩೦೯ ಬರುವುದು. ಆದರೆ ಯಾವ ಆಧಾರದಲ್ಲಿ ಪ್ರವರ್ಗ ೩ಬಿಯಲ್ಲಿ ೮೧,೩೭,೫೩೬ ಎಂದು ಹೆಡ್ ಲೈನಿನಲ್ಲಿ ತೋರಿಸಲಾಗಿದೆ?
ಲಿಂಗಾಯತರ ಜನಸಂಖ್ಯೆ ಕೇವಲ ಎಂಬತ್ತು ಲಕ್ಷ ಎಂದು ಮಾಧ್ಯಮಗಳು ವರದಿ ಮಾಡುತ್ತವೆ. ಅದು ಸತ್ಯಕ್ಕೆ ದೂರ ಅಲ್ಲವೆ ಎಂದು ಅವರನ್ನು ಪ್ರಶ್ನೆ ಮಾಡಿದೆ. “ಲಿಂಗಾಯತರ ಜನಸಂಖ್ಯೆಯಲ್ಲಿ ೪.೫ ಲಕ್ಷದಷ್ಟು ಜನಸಂಖ್ಯೆಯ ಜಂಗಮರು ಬೇಡಜಂಗಮ ಎಂದು ನಮೂದಿಸಿದ್ದಾರೆ” ಎಂದರು. ಅಲ್ಲದೆ ಲಿಂಗಾಯತ ಇತರ ಸಮುದಾಯಗಳಾದ ಗಾಣಿಗ ಮತ್ತು ಕುರುಹಿನ ಸೆಟ್ಟಿ, ಸಮುದಾಯಗಳನ್ನು ಪ್ರವರ್ಗ ೨ಎದಲ್ಲಿ ಸೇರಿಸಿದೆ ಎಂದರು. ಅವರ ಜನಸಂಖ್ಯೆ ಕ್ರಮವಾಗಿ ೬,೮೬,೪೨೮ ಮತ್ತು ೧,೫೩,೫೬೮ ಎಂದು ನಮೂದಿಸಲಾಗಿದೆ. ಇವರೊಂದಿಗೆ ೨,೯೬,೪೧೧ಸಂಖ್ಯೆಯ ಬಣಜಿಗ ಸಮುದಾಯವನ್ನು ಪ್ರವರ್ಗ ೩ಎದಲ್ಲಿ ಸೇರಿಸಲಾಗಿದೆ. ಇವೆಲ್ಲ ಸಂಖ್ಯೆಗಳನ್ನು ಸೇರಿಸಿದಾಗ ಲಿಂಗಾಯತರ ಸಂಖ್ಯೆಯು ೧,೩೯,೦೨,೭೭೫ ಆಗುವುದು. ಇದರೊಂದಿಗೆ ಲಿಂಗಾಯತ ಜಂಗಮರೆಂದು ಕರೆಸಿಕೊಳ್ಳದೆ ಬೇಡ ಜಂಗಮರೆಂದು ದಾಖಲಿಸಿದ ಸುಮಾರು ನಾಲ್ಕುವರೆ ಲಕ್ಷ ಜಂಗಮರನ್ನು ಲಿಂಗಾಯತರ ಸಂಖ್ಯೆಯಲ್ಲಿ ಸೇರಿಸಿದರೆ ಇವರ ಒಟ್ಟು ಜನಸಂಖ್ಯೆ ೧,೪೩,೫೨,೭೭೫ ಕ್ಕೆ ಏರುವುದು. ಹಾಗಿದ್ದರೆ ಸುಳ್ಳು ಸುದ್ದಿಯನ್ನು ಹರಡುವ ಅವಶ್ಯಕತೆ ಎನಿತ್ತು?
ಇತ್ತೀಚೆಗೆ ೨ಎ ಮಿಸಲಾತಿಗಾಗಿ ಹೊರಾಡುತ್ತಿರುವ ಪಂಚಮಸಾಲಿ ಜನಾಂಗದ ಜನಸಂಖ್ಯೆಯನ್ನು ಕೇವಲ ೧೦,೭೧,೩೦೨ ಎಂದು ದಾಖಲಿಸಿದ್ದು, ಕುರುಬ ಸಮಾಜದ ಜನಸಂಖ್ಯೆಯ ೮೬,೪೪,೨೪೬ ಎಂದು ದಾಖಲಿಸಲಾಗಿದೆ. ಮೇಲ್ನೋಟಕ್ಕೆ ಇದು ತಪ್ಪೆಂದು ತೋರುವುದು. ಪಂಚಮಸಾಲಿಗರ ಜನಸಂಖ್ಯೆಯ ಸತ್ಯಾಸತ್ಯತೆಯನ್ನು ಅರಿಯಲು ಹುಡುಕಾಟ ಪ್ರಾರಂಭಿಸಿದೆ. ೧೮೮೧ರಲ್ಲಿ ವಿಜಾಪುರ ಜಿಲ್ಲಾ ಗೆಜೆಟಿಯರ್ ಬರೆದ ಇಂಗ್ಲಿಷ್ ಅಧಿಕಾರಿ ಜೇಮ್ಸ್ ಕ್ಯಾಂಬೆಲ್ ಲಿಂಗಾಯತರ ವಿವರ ನೀಡುತ್ತಾರೆ. ವಿಜಾಪುರ ಜಿಲ್ಲೆಯಲ್ಲಿ ಇವರ ಒಟ್ಟು ಜನಸಂಖ್ಯೆ ೨,೨೦,೦೦೦ ಎನ್ನುತ್ತಾರೆ. ಇವರು ಲಿಂಗಾಯತರನ್ನು ಮೂರು ವರ್ಗಗಳಲ್ಲಿ ವಿಂಗಡಿಸುತ್ತಾರೆ. ಇಂದು ದಲಿತರು ಎಂದುಕೊಳ್ಳುತ್ತಿರುವ ಸಮಾಜಗಳನ್ನೂ ಲಿಂಗಾಯತ ಸಮಾಜಗಳು ಎಂದು ಗುರುತಿಸುತ್ತಾರೆ. ಪಂಚಮಸಾಲಿ, ಬಣಜಿಗ ಮತ್ತು ಜಂಗಮರನ್ನು ನಿಜಲಿಂಗಾಯತರು ಎನ್ನುತ್ತಾರೆ. ಲಿಂಗಾಯತರಲ್ಲಿ ಎರಡನೆಯ ವರ್ಗವನ್ನು ಗುರುತಿಸುತ್ತ ಆದಿ ಬಣಜಿಗರು, ಚಟ್ಟೇರ, ಚಲುವಾದಿ, ಗಾಣಿಗರು, ಗವಳಿಗಳು, ಹಂಡೇವಜೀರ, ಹಂಡೆಯವರು, ಕಲಾವಂತರು, ಕೋಷ್ಠಿಗಳು, ಕುಡುಒಕ್ಕಲಿಗರು, ಕುರುಸಾಲಿಗಳು, ಕುರುವಿನ ಸೆಟ್ಟರು, ಮಾಲಗಾರರು, ನಾಗಲಿಕರು, ನಾಡಿಗರು, ನೀಲಗಾರರು, ಪಡಸಾಲಿಗಳು ಮತ್ತು ಶಿವಾಚಾರಿಗಳೆಂದು ಲಿಂಗಾಯತ ಸಮಾಜಗಳನ್ನು ಗುರುತಿಸಿ ಇವರನ್ನು ಸಂಲಗ್ನ ಲಿಂಗಾಯತರು ಎನ್ನುತ್ತ ಇವರ ಒಟ್ಟು ಜನಸಂಖ್ಯೆ ೮೩,೪೦೮ ಎಂದು ದಾಖಲಿಸುತ್ತಾನೆ. ಇನ್ನೂ ಲಿಂಗಾಯತರಲ್ಲಿ ಮೂರನೆಯ ವರ್ಗದಲ್ಲಿ ಚಿಕ್ಕ ಕುರುವಿನವರು, ಡೋಹರರು, ಗುರವರು, ಹಟಗಾರರು, ಹೆಳವರು, ಕಬ್ಬೇರರು, ಪರೀಟರು, ಸಾಲಿಗಳು, ಸಮಗಾರರನ್ನು ಅರೆ ಲಿಂಗಾಯತರು ಎನ್ನುತ್ತಾರೆ ಇವರ ಸಂಖ್ಯೆಯು ೨೬,೪೦೫ ಎಂದು ದಾಖಲಿಸುತ್ತಾರೆ.
ವಿಜಾಪುರ ಜಿಲ್ಲೆಯ ಒಟ್ಟು ಲಿಂಗಾಯತರ ೨.೨೦.೦೦೦ ಸಂಖೆಯಲ್ಲಿ ಸಂಲಗ್ನ ಮತ್ತು ಇತರೇ ಲಿಂಗಾಯತರ ಸಂಖ್ಯೆಯನ್ನು ಕಳೆದಾಗ ಅರ್ದಕ್ಕಿಂತ ಹೆಚ್ಚು ಪಂಚಮಸಾಲಿಗಳು, ಬಣಜಿಗರು ಜಂಗಮರು ಇರುವುದಾಗಿ ತಿಳಿದು ಬರುವುದು. (ಬಣಜಿಗ ಹಾಗೂ ಗುರುವರ್ಗದ ಜಂಗಮ ಮನೆತನಗಳು ಊರಿಗೊಂದೋ ಎರಡೋ ಇರಬಹುದು. ಕಾರಣ ಅಂದು ವಕ್ಕಲುತನ ಪಂಚಮಸಾಲಿಗಳ ಕಾಯಕವಾಗಿತ್ತು. ಪೂಜೆ ಹಾಗೂ ವ್ಯಾಪಾರ ಮಾಡುವ ಈ ಸಮಾಜಗಳು ಬಹು ಸಂಖ್ಯಾತರಾಗಲು ಸಾಧ್ಯವಿಲ್ಲ.) ಇದರಿಂದ ವಿಜಾಪುರ ಜಿಲ್ಲೆ ಒಂದನ್ನೇ ಉದಾಹರಣೆಗೆ ಪರಿಗಣಿಸಿದಾಗ ಈ ಒಂದೇ ಜಿಲ್ಲೆಯಲ್ಲಿ ಪಂಚಮಸಾಲಿಗಳು ಬಹು ಸಂಖ್ಯಾತರು ಎಂದು ತಿಳಿಯಬಹುದು. ಅಂದಿನ ದಿನಗಳಲ್ಲಿಯೆ ಈ ಸಮಾಜವು ಈ ಎಲ್ಲ ಸಮಾಜಗಳನ್ನು ಗಣನೆಗೆ ತಗೆದುಕೊಂಡಾಗಲು ೫೦% ಜನಸಂಖ್ಯೆಯನ್ನು ಹೊಂದಿತ್ತು ಎಂದು ಮೇಲ್ನೋಟಕ್ಕೆ ಕಂಡುಬರುವುದು. ಪಂಚಮಸಾಲಿಗಳು ಅವಿಭಜಿತ ಬೆಳಗಾವಿ, ಅವಿಭಜಿತ ಧಾರವಾಡ, ಅವಿಭಜಿತ ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಬಹುಸಂಖ್ಯಾತರು ಮತ್ತು ಅವಿಭಜಿತ ರಾಯಚೂರು ಮತ್ತು ಬೀದರ್ ಜಿಲ್ಲೆಯಲ್ಲಿ ೩೫-೪೦% ಜನಸಂಖ್ಯೆಯನ್ನು ಹೊಂದಿದ್ದಾರೆ ಎಂಬುದಕ್ಕೆ ದಾಖಲೆಗಳು ದೂರೆಯುತ್ತವೆ. ಇರಲಿ.
ಜಾತಿಗಣತಿಯ ಬಗ್ಗೆ ಚರ್ಚಿಸುತ್ತ ಹೋದಂತೆ ಅನೇಕ ಹೊಸ ವಿಚಾರಗಳು ದೊರೆಯಲಾರಂಭಿಸಿದವು. ನಿವೃತ್ತ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿದಾಗ ಇನ್ನೊಂದು ಪ್ರಮುಖ ವಿಷಯ ಅವರಿಂದ ಹೊರಬಂತು. ಜಾತಿ ಆಧಾರದ ಮೇಲೆ ರಾಜ್ಯ ಸರ್ಕಾರ ಯಾವುದೆ ನಿರ್ಣಯ ತೆಗೆದುಕೊಳ್ಳುವ ಹಾಗಿಲ್ಲವೆಂದು ತಿಳಿಸುತ್ತ ಅದಕ್ಕೆ ಆ ಅಧಿಕಾರವಿಲ್ಲವೆಂದು ಸ್ಪಷ್ಟಪಡಿಸಿದರು. ಇವರ ಅಭಿಪ್ರಾಯವನ್ನು ಪತ್ರಕರ್ತಮಿತ್ರರೊಬ್ಬರ ಎದುರು ಇಟ್ಟಾಗ ಅವರು “ಬಿಹಾರದಲ್ಲಿ ಆ ಸಮಸ್ಯೆ ಉದ್ಭವವಾಗಿಲ್ಲವಲ್ಲ” ಎಂದರು.
ಮಾಜಿ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷರೊಬ್ಬರು “ಇದು ಅತ್ಯಂತ ಅವೈಜ್ಞಾನಿಕ ವರದಿ ಇದಕ್ಕೆ ತಳ ಬುಡ ಇಲ್ಲ” ಎನ್ನುತ್ತ “ಇದು ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ. ಮೇಲಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ” ಎಂದು ಹೇಳುವುದನ್ನು ಮರೆಯಲಿಲ್ಲ.
ಹಾಗಿದ್ದಲ್ಲಿ ರಾಜ್ಯಸರ್ಕಾರ ಯಾವ ಕಾರಣಕ್ಕಾಗಿ ಇದನ್ನು ಅಂಗಗೀಕರಿಸುತ್ತದೆ?
ಮೊದಲನೆಯದಾಗಿ ಕಾಂತರಾಜ ವರದಿಯ ಅಂಕಿಸಂಖ್ಯೆಗಳು ತಾಳೆಯಾಗುವುದಿಲ್ಲ.
ಎರಡನೆಯದಾಗಿ ರಾಜ್ಯಸರ್ಕಾರದ ಈ ನಿರ್ಣಯಕ್ಕೆ ಸಂವಿಧಾನದ ಬದ್ಧತೆ ಇದ್ದಂತೆ ಕಾಣುವುದಿಲ್ಲ (ನ್ಯಾಯ ಮೂರ್ತಿಗಳ ಹೇಳಿಕೆ ಗಮನಿಸಿ).
ಮೂರನೆಯದಾಗಿ ಕೆಲವು ಮೆಲ್ವರ್ಗದ ಸಮಾಜಗಳನ್ನು ದಲಿತ ವರ್ಗದಲ್ಲಿ ಸೇರಿಸಿ ನಿಜವಾಗಿ ಸಲ್ಲಬೇಕಾದ ಮೀಸಲಾತಿಯನ್ನು ಕಿತ್ತು ಕೊಳ್ಳುವುದು ಅಕ್ಷಮ್ಯ.
ನಾಲ್ಕನೆಯದಾಗಿ ವೀರಶೈವ ಮಹಾಸಭೆ ಆಪಾದಿಸುವಂತೆ ಲಿಂಗಾಯತ ಮತ್ತು ಒಕ್ಕಲಿಗ ಸಮಾಜಗಳ ಒಳಪಂಗಡಗಳನ್ನು ಗುರುತಿಸುವಲ್ಲಿ ಹೆಚ್ಚು ಗೊಂದಲ ಮೂಡಿಸಿದೆ.
ಐದನೆಯದಾಗಿ ಅನೇಕರು ಅಭಿಪ್ರಾಯ ಪಡುವಂತೆ ಜಾತಿಗಣತಿ ಪಾರದರ್ಶಕವಾಗಿಲ್ಲ.
ಆರನೆಯದಾಗಿ ಗಣಿತಿದಾರರು (Enumarators) ಸರಿಯಾದ ಮಾಹಿತಿಯನ್ನು ಕಲೆಹಾಕದೆ ಕಚೇರಿಯಲ್ಲಿ ಕುಳಿತು ತಪ್ಪು ಮಾಹಿತಿ ನೀಡಿದ್ದಾರೆ.
ಏಳನೆಯದಾಗಿ ಅರ್ಹ ಸಮಾಜಗಳಿಗೆ ಇದರಿಂದ ಲಾಭವಾಗುವ ಬದಲಾಗಿ ಹಾನಿಯಾಗಿ ಸರಕಾರ ಸಾಮಾಜಿಕ ಆಕ್ರೋಶಕ್ಕೆ ಗುರಿಯಾಗುತ್ತದೆ.
ಇದು ಸರ್ಕಾರಕ್ಕೆ ಮುಟ್ಟೀತೆ?
– ಜಿ.ಬಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ




