ಬೆಂಗಳೂರು: ಟ್ಯಾಗೂರ್ ರಂತೆ ಕುವೆಂಪು ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದರು ಎಂದು ಸಾಹಿತಿ ಹರಿಹರ ಪ್ರಿಯ ಹೇಳಿದರು.
ರಂಗೋತ್ರಿ ಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯದಲ್ಲಿ ಬೆಂಗಳೂರಿನ ಮೂಡಲಪಾಳ್ಯ ಬಳಿಯ ಕಲ್ಯಾಣನಗರದ ಜ್ಞಾನಸೌಧ ಸಭಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ-2022 ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಪುಸ್ತಕಮನೆಯ ಹರಿಹರಪ್ರಿಯ ಅವರು ಮಾತನಾಡಿ, ಕುವೆಂಪು ಅವರ ಕೃತಿಗಳು ಇಂಗ್ಲಿಷ್ ಭಾಷೆಯಲ್ಲಿದ್ದಿದ್ದರೆ ಅಥವಾ ಅನುವಾದ ಮಾಡಿದ್ದರೆ ರವೀಂದ್ರನಾಥ ಟ್ಯಾಗೂರ್ ರಂತೆ ಕುವೆಂಪು ಅವರಿಗೂ ನೊಬೆಲ್ ಪುರಸ್ಕಾರ ದೊರೆಯುತ್ತಿತ್ತು ಎಂದು ಹೇಳಿದರು.

ಕುವೆಂಪು ಅವರು ಕನ್ನಡದ ಧೀಮಂತ ದಾರ್ಶನಿಕ. ಅವರೊಬ್ಬ ವಿಶ್ವಕವಿ. ಈಗ ನಾವು ಹಾಡುತ್ತಿರುವ ನಾಡಗೀತೆಯನ್ನು ಕುವೆಂಪು ಅವರು 1924ರಲ್ಲೇ ತಮ್ಮ 20 ನೇ ವಯಸ್ಸಿನಲ್ಲೇ ಬರೆದರು. ಕುವೆಂಪು ಅವರು ದುಡಿಯುವನನ್ನು ಯೋಗಿ ಎಂದು ಕರೆದರು. ಎರಡು ನಾಡಗೀತೆಗಳನ್ನು ನೀಡಿದ ಕವಿ ಜಗತ್ತಿನಲ್ಲಿಯೇ ಇಲ್ಲ. ಅವರ ಓ ನನ್ನ ಚೇತನ ವಿಶ್ವದ ನಾಡಗೀತೆ ಎಂದರು.
ವಿಶ್ವಮಾನವರನ್ನು ಹುಡುಕಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕುವೆಂಪು ಅವರು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದರು. ಮನುಷ್ಯರಾಗಲು ಕುವೆಂಪು ಅವರ ಸಾಹಿತ್ಯ ಮತ್ತು ಬದಕನ್ನು ಪ್ರತಿಯೊಬ್ಬರು ಅದರಲ್ಲೂ ಇಂದಿನ ಯುವಪೀಳಿಗೆ ಅವಶ್ಯವಾಗಿ ಅಧ್ಯಯನ ಮತ್ತು ಮನನ ಮಾಡಿಕೊಳ್ಳಬೇಕು ಎಂದೂ ಹೇಳಿದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಕುವೆಂಪು ಅವರು ಒಬ್ಬ ಮಹಾನ್ ದಾರ್ಶನಿಕ ಕವಿ. ಮನುಜ ಮತ-ವಿಶ್ವಪಥ ಎಂಬ ಸಂದೇಶವವನ್ನು ರಾಷ್ಟ್ರ ಮತ್ತು ನಾಡಪ್ರೀತಿಯ ಸಂದೇಶವನ್ನು ಜಗತ್ತಿಗೆ ಕೊಟ್ಟರು. ಕುವೆಂಪು ಮನುಜ ಮತ, ವಿಶ್ವಪಥ, ಸಮನ್ವಯ, ಸರ್ವೋದಯ, ಪರಿಪೂರ್ಣ ದೃಷ್ಟಿ ತತ್ವಗಳು ಇಡೀ ವಿಶ್ವಕ್ಕೆ ಆದರ್ಶನೀಯವಾದದ್ದು. ಅವರೊಬ್ಬ ಮಹಾನ್ ಸ್ವಾಭಿಮಾನಿಯಾಗಿದ್ದರು ಮತ್ತು ಎಲ್ಲದರಲ್ಲೂ ಮಾನವೀಯತೆ ಕಾಣುತ್ತಿದ್ದರು ಎಂದರು.
ಸಂಸ್ಥೆಯ ಅಧ್ಯಕ್ಷ ಕುಮಾರ್ ರಂಗೋತ್ರಿ ಅವರು, ಕಳೆದ 30 ವರ್ಷಗಳಿಂದ ತಮ್ಮ ಸಂಸ್ಥೆ ಯುವಕವಿ ಸಮ್ಮೇಳನ, ಬೆಳದಿಂಗಳ ರಾತ್ರಿ ಉತ್ಸವ, ಅಂತರ ಕಾಲೇಜು ರಂಗ ಸ್ಪರ್ಧೆ, ಮಕ್ಕಳ ಚಿತ್ರಕಲೆ ಸ್ಪರ್ಧೆ, ರಂಗ ತರಬೇತಿ, ಜಿಎಸ್ ಎಸ್, ಅನಂತಮೂರ್ತಿ ಮತ್ತಿತರ ಕವಿ ಸಾಹಿತಿಗಳ ನೆನಪಿನ ಕಾರ್ಯಕ್ರಮಗಳೂ ಸೇರಿದಂತೆ ಹಲವಾರು ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ ಎಂದು ಹೇಳಿದರು.
ಡಾ ಎ ಆರ್ ಗೋವಿಂದ ಸ್ವಾಮಿ ಮಾತನಾಡಿ, ಎಲ್ಲಾ ವಿಭಾಗದಲ್ಲಿ ನಾಯಕರು ಇದ್ದಾರೆ. ಪ್ರಜಾಪ್ರಭುತ್ವ, ಆಡಳಿತ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಆದರೆ ಸಾಹಿತ್ಯದಲ್ಲಿ ನಾಯಕರಿಲ್ಲ. ಹೀಗಾಗಿ ನಾವು ಕುವೆಂಪು ಅವರನ್ನು ಸಾಹಿತ್ಯದ ನಾಯಕರು ಎಂದು ಸ್ವೀಕರಿಸಬಹುದು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಗುಂಡೀಗೆರೆ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾಣೆಹಳ್ಳಿ ಶಿವಸಂಚಾರ ತಂಡದಿಂದ ಕುವೆಂಪು ವಿರಚಿತ ಚಂದ್ರಹಾಸ ನಾಟಕ ಪ್ರದರ್ಶನ ನಡೆಯಿತು.
ರಂಗೋತ್ರಿ ಸಾಂಸ್ಕೃತಿಕ ಸಂಸ್ಥೆ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯ ಅಂಗವಾಗಿ ಜ್ಞಾನಸೌಧ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 119ನೇ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪುಸ್ತಕ ಮನೆ ಹರಿಹರಪ್ರಿಯ, ಡಾ ಸಿ ಸೋಮಶೇಖರ್ ಸಂಸ್ಥೆಯ ಅಧ್ಯಕ್ಷ ರಂಗೋತ್ರಿ ಕುಮಾರ್ ಕೆಎಚ್, ರಂಗತಜ್ನ ಡಾ. ಎ ಆರ್ ಗೋವಿಂದ್ ಸ್ವಾಮಿ ಕವಿಗುಂಡೀಗೆರೆ ವಿಶ್ವನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




