ಚೇತನಾ ಎಚ್.ಎಸ್. ಅವರಿಗೆ ಮಾತೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ

3 years ago

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ನಾಗಸೇನಾ ವಿದ್ಯಾಲಯ ಕೊಡ ಮಾಡುವ 2023 ನೇ ಸಾಲಿನ “ಮಾತೆ ಸಾವಿತ್ರಿಬಾಯಿ ಫುಲೆ” ರಾಜ್ಯ ಪ್ರಶಸ್ತಿಗೆ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ (MLAC) ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಚೇತನ ಹೆಚ್.ಎಸ್ ಆಯ್ಕೆಯಾಗಿದ್ದಾರೆ.

ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮೈಸೂರಿನ ಮಹಾರಾಜರು ಬೆಂಗಳೂರಿನ ಸದಾಶಿವನಗರದಲ್ಲಿ ಕೊಡುಗೆಯಾಗಿ ನೀಡಿರುವ ಸ್ಥಳದಲ್ಲಿ ನಿರ್ಮಾಣಗೊಂಡಿರುವ ವಿಶ್ವ ಪ್ರಸಿದ್ಧ ನಾಗಸೇನಾ ವಿದ್ಯಾಲಯವು ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ದುಡಿದಿರುವ ನಾಡಿನ ಗಣ್ಯರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಾ ಬಂದಿರುತ್ತದೆ.

ಭಾರತದ ಶ್ರೇಣಿಕೃತ ಜಾತಿಯ ಸಾಮಾಜಿಕ ಅಸಮಾನತೆಗೆ ಒಳಗಾಗಿ ಶಿಕ್ಷಣದಿಂದ ವಂಚಿತವಾಗಿದ್ದ ದಲಿತರು ಹಿಂದುಳಿದವರ ನಾಲಿಗೆಯ ಮೇಲೆ ಅಕ್ಷರ ಬರೆದು ಭಾರತದ ಮೊದಲ ಮಹಿಳಾ ಶಿಕ್ಷಕಿಯಾದ ಮಾತೆ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ಪ್ರತಿವರ್ಷ ವಿವಿಧ ಕ್ಷೇತ್ರದ ಸಾಧಕರಿಗೆ ಮಾತೆ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಮೂಲತಃ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಹುಂಜನಕೆರೆಯ ನಿವೃತ್ತ ಕೃಷಿ ಅಧಿಕಾರಿಯಾದ ಶಿವಲಿಂಗಯ್ಯ ಮತ್ತು ಸುಶೀಲಮ್ಮ ದಂಪತಿ ಪುತ್ರಿಯಾದ ಚೇತನ ಹೆಚ್.ಎಸ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದು ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಸಾಮಾಜಿಕ ಪರಿವರ್ತನಾ ಚಳುವಳಿಯಲ್ಲಿ ತಮ್ಮನ್ನು ತಾವು ಸ್ವಪ್ರೇರಣೆಯಿಂದ ತೊಡಗಿಸಿಕೊಂಡಿದ್ದಾರೆ.

ಇವರ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ 2023 ನೇ ಸಾಲಿನ ಮಾತೆ ಸಾವಿತ್ರಿಬಾಯಿ ಬಾಯಿ ಫುಲೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿ ಫಲಕದ ಜೊತೆಗೆ ಐದು ಸಾವಿರ ಗೌರವ ಧನವನ್ನು ನೀಡಿ ಅಭಿನಂದಿಸಲಾಗುತ್ತದೆ.

Leave a Reply