ಇದೆಲ್ಲವೂ ಪ್ರಾರಂಭವಾಗಿದ್ದು ಹಾಸನದ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಿಂದ ದೊರೆತ ಬೊಗಸೆ ಪ್ರೇರಣೆಯಿಂದ. ಸಹೋದರಿ ರೂಪ ಹಾಸನರವರ ಮಾರ್ಗದರ್ಶನದಿಂದ.
ಈಗ್ಗೆ ಏಳು ವರ್ಷಗಳ ಹಿಂದೆ ಬರಡಾಗಿದ್ದ ಈ ಶಾಲೆಯ ಆವರಣಕ್ಕೆ ನಾನು ಹೊಸದೇನನ್ನೋ ಸೃಷ್ಟಿಸಬೇಕೆಂಬ ಹುಮ್ಮಸ್ಸಿನಲ್ಲಿ ಹೆಜ್ಜೆ ಇಟ್ಟಿದ್ದೆ. ಅಂದುಕೊಂಡಿದ್ದನ್ನ ಸಾಧಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ನಮ್ಮೊಳಗಿನ ಅಂತಃಶಕ್ತಿಯೂ ಅಲುಗಾಡುವಂಥದ್ದೇನೂ ಆಗಿರಲಿಲ್ಲ.
ರೂಪಕ್ಕ ಮತ್ತು ಅಪಾರ ಪರಿಸರ ಪ್ರೇಮಿಗಳು ಹಾಸನದ ಹಸಿರು ಭೂಮಿ ಪ್ರತಿಷ್ಠಾನದ ವತಿಯಿಂದ ಬಹುಶಃ ಈ ದೇಶದ ಪ್ರಮುಖ ಪರಿಸರ ಚಳುವಳಿಯನ್ನ ಕಟ್ಟಿದರು. ಕೆರೆಗಳಿಗೆ ಕಲ್ಯಾಣಿಗಳಿಗೆ ಜೀವತುಂಬಿದರು. ಸಾವಿರ ಸಾವಿರ ಮರನೆಟ್ಟರು. ಈ ಎಲ್ಲ ಕಾರ್ಯಚಟುವಟಿಕೆಗಳಿಂದ ಪ್ರೇರಣೆಗೊಂಡ ನಾನು ಮತ್ತು ನನ್ನ ಶಾಲೆಯ ಮಕ್ಕಳು ನಮ್ಮ ಶಾಲೆಯಲ್ಲಿ ತೇಜಸ್ವಿ ಜೀವತಾಣ ರೂಪಿಸಿದೆವು. ಗೆಳೆಯ ಕವಿ ರಾಜು ಸಂಕಪಾಳ ಗಿಡಗಳನ್ನ ಕೊಡಿಸಿದರು. ನಮ್ಮ ಇಲಾಖೆಯಿಂದಲೂ ಎಕೊ ಕ್ಲಬ್ ನಡಿಯಲ್ಲಿ ಸಹಾಯ ದೊರೆಯಿತು.
ನಮ್ಮ ಶಾಲೆಗೆ ಬಂದ ಅನೇಕ ಹಿರಿಯರು ನಮ್ಮ ಶಾಲೆಯ ಆವರಣದಲ್ಲಿ ಗಿಡನೆಟ್ಟು ತಮ್ಮ ಅಮೂಲ್ಯ ನೆನಪು ಬೆಳೆಯಲು ಸಹಕರಿಸಿದ್ದಾರೆ.
ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮಕ್ಕಳು ಶಾಲೆಯ ಎಲ್ಲ ಗಿಡಗಳನ್ನ ತಮ್ಮಂತೆಯೇ ಸಹಜೀವಿಗಳಂತೆ ನೋಡಿಕೊಳ್ಳತೊಡಗಿದರು, ಬೆಳೆಸಿದರು. ಗೇಣುದ್ದ ಇದ್ದ ಗಿಡಗಳು ಈಗ ನಲವತ್ತು ಅಡಿ ಎತ್ತರದ ಮರಗಳಾಗಿವೆ.
ಒಂದು ಸುಂದರ ಹೂಲೋಕ ನಮ್ಮ ಶಾಲೆಯಲ್ಲಿ ಪ್ರತ್ಯಕ್ಷವಾಗಿದೆ. ಇದೊಂದ ಸುಂದರ ಜೀವಕಾವ್ಯ. ಇದನ್ನ ಬರೆದವರು ನಮ್ಮ ಶಾಲೆಯ ಮಕ್ಕಳು. ಮತ್ತು ಈ ಗಿಡಮರ ಹೂಗಳೆಲ್ಲ ಹೀಗೆ ಸಹಜವಾಗಿ ಉಳಿಯುವಲ್ಲಿ ನಾನು ಗೌರವಿಸುವ ಹಿರಿಯರಾದ Shyam Bombay ಯವರ ಸಹಾಯ ದೊಡ್ಡದು. ಅವರು ಕೊಡಿಸಿದ ಸಿಸಿಟಿವಿ ಸಿಸ್ಟಮ್ ನಿಂದಾಗಿ ಇಂದು ನಮ್ಮ ಶಾಲೆಯ ಒಂದೇ ಒಂದು ಹೂವು ಹಾಳಾಗುವುದಿಲ್ಲ. ಯಾವುದೂ ಮುಕ್ಕಾಗುವುದಿಲ್ಲ.
ನಮ್ಮ ಶಾಲೆಯ ಗಿಡಮರ ಹೂದೋಟ ತೇಜಸ್ವಿ ಜೀವತಾಣದ ಪುಟ್ಟ ಪುಟ್ಟ ಹೆಜ್ಜೆಗಳ ದಾಖಲೆ ನನ್ನ ಬಳಿ ಇದೆ. ಅದೆಲ್ಲವನ್ನೂ ಕುರಿತು ಶೀಘ್ರದಲ್ಲೇ ವಿವರವಾಗಿ ಬರೆಯುವೆ. ಸದ್ಯಕ್ಕೆ ನಮ್ಮ ಶಾಲೆಯ ಮಕ್ಕಳು ಸೃಜಿಸಿದ ಈ ಸುಂದರ ದೃಶ್ಯ ಕಾವ್ಯ ಕಣ್ಣುತುಂಬಿಕೊಳ್ಳಿ.
ನಮ್ಮ ಶಾಲೆಯ ಮಕ್ಕಳ ಜೊತೆ ನಿಲ್ಲಿ. ನಾವಿನ್ನೂ ಬಹಳಷ್ಟು ಕೆಲಸ ಮಾಡಬೇಕಿದೆ.
- ವೀರಣ್ಣ ಮಡಿವಾಳರ, ಶಿಕ್ಷಕರು
ಸಂಪಕರ್ಕ ಸಂಖ್ಯೆ: 9972120570




