ಬೆಂಗಳೂರು ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗಲು ಕೆಂಪೇಗೌಡರೇ ಕಾರಣ

10 months ago

ದಾವಣಗೆರೆ: ಕೆಂಪೇಗೌಡರ ರೀತಿ ವೈಜ್ಞಾನಿಕ ತಳಹದಿಯ ಮೇಲೆ ವಿದ್ಯಾರ್ಥಿಗಳು ಚಿಂತನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರಾತಾ ಇಲಾಖೆ ಹಾಗೂ ಜಿಲ್ಲಾ ಒಕ್ಕಲಿಗರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲ್ಲಿ ಆಯೋಜಿಸಿದ್ದ 516 ನೇ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಶೇ.50 ರಷ್ಟು ಆರ್ಥಿಕ ವ್ಯವಸ್ಥೆ ಬೆಂಗಳೂರಿನಲ್ಲಿದೆ. ಕೆಂಪೇಗೌಡರು ಮೊದಲು ಯಲಹಂಕಕ್ಕೆ ಬಂದು ನಂತರ ಮಾಗಡಿಗೆ ಬಂದರು. ಪೇಟೆಗಳನ್ನು ನಿರ್ಮಿಸಿ ವಾಣಿಜ್ಯ ವಹಿವಾಟುಗಳಿಗೆ ಹಾಗೂ ಕುಶಲಕರ್ಮಿಗಳ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟರು. ಹಾಗಾಗಿ ವಿದ್ಯಾರ್ಥಿಗಳು ಕೆಂಪೇಗೌಡರ ಹಾದಿಯನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದರು.

ನಗರವನ್ನು ಹೇಗೆ ಬೆಳವಣಿಗೆ ಮಾಡಬೇಕು? ನಗರಕ್ಕೆ ಯೋಜನೆ ಯಾವರೀತಿ ರೂಪಿಸಬೇಕು ಎಂದು ಈ ಕ್ಷೇತ್ರದ ಕುರಿತು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಉದ್ಯೋಗ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ ಎಂದರು.

ಬೆಂಗಳೂರಿನಲ್ಲಿ ಕೆಂಪೇಗೌಡರು ಸುಮಾರು 26 ಪೇಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ನಿರ್ಮಿಸಿದ ಪೇಟೆಗಳು ಯಾವುದೇ ಟ್ರಾಫಿಕ್ ಆಗದಂತೆ ಜಾಗೃತಿವಹಿಸಿದ್ದಾರೆ. ಸಿಂಧೂ ನಾಗರಿಕತೆ ಪ್ಲಾನ್ ಪ್ರಕಾರ ಬೆಂಗಳೂರನ್ನು ನಿರ್ಮಾಣ ಮಾಡಿದರು. ಸಾರ್ವಜನಿಕರು ಬಾವಿ ಇಲ್ಲವೆ ಬೋರ್ ತೆಗೆದರೆ 10-15 ಅಡಿ ಅಳದಲ್ಲೇ ನೀರು ಸಿಗುವಂತೆ ಕ್ರಮವಹಿಸಿದ್ದಾರೆ. ಅನೇಕ ದೇವಸ್ಥಾವನ್ನು ನಿರ್ಮಾಣ ಮಾಡಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಬಿ.ಎನ್ ಮಲ್ಲೇಶ್ ಮಾತನಾಡಿ, ಕೆಂಪೇಗೌಡರು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ ಕೋಟೆ, ಕೆರೆ, ಕಟ್ಟೆ ಕಟ್ಟಿಸಿದರು, ಮಾರುಕಟ್ಟೆ ಕಟ್ಟಿದ್ದರು. ಆ ಮೂಲಕ ಸುಂದರ, ಸೌಹಾರ್ದ ರಾಜ್ಯವನ್ನು ನಿರ್ಮಿಸಿದರು. ವರ್ತಮಾನದಲ್ಲಿ ಬೆಂಗಳೂರಿಗೆ ಗ್ಲೋಬಲ್ ಸಿಟಿ ಆಗಿ ವಿಶ್ವದಲ್ಲಿ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಕೆಂಪೇಗೌಡರೇ ಕಾರಣಕರ್ತರು ಎಂದರು.

ನಗರ ನಿರ್ಮಾಣಕ್ಕೆ ಸೂಕ್ತ ಜಾಗವನ್ನರಸುತ್ತಾ ಅಮಾತ್ಯ ವೀರಣ್ಣ ಹಾಗೂ ಕೆಲ ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣಕ್ಕೆ ಹತ್ತು ಮೈಲು ದೂರ ದಾಟಿ ಎತ್ತರದ ಪ್ರದೇಶವೊಂದಕ್ಕೆ ಬರುವ ಕೆಂಪೇಗೌಡರಿಗೆ ಸಣ್ಣ-ಪುಟ್ಟ ತೊರೆಗಳಿಂದ ಕೂಡಿದ ಹಸಿರಿನಿಂದ ನಳನಳಿಸುತ್ತಿದ್ದ ಕಾಡು ಎದುರಾಗುತ್ತದೆ. ಕಾಡಿನ ನಡುವೆ ಸಾಗುತ್ತಿದ್ದಂತೆ ಒಂದು ವಿಸ್ಮಯಕಾರಿ ಘಟನೆ ಕೆಂಪೇಗೌಡರ ಎದುರಿನಲ್ಲೇ ನಡೆಯುತ್ತದೆ. ಪುಟ್ಟ ಮೊಲವೊಂದು ತನ್ನನ್ನು ತಿನ್ನಲೆಂದು ಬಂದ ಬೇಟೆ ನಾಯಿಯೊಂದನ್ನು ಓಡಿಸಿಕೊಂಡು ಹೋಗುತ್ತಿರುವುದು ಕೆಂಪೇಗೌಡರಿಗೆ ಕಂಡುಬರುತ್ತದೆ. ಇಲ್ಲಿರುವ ಸಾಮಾನ್ಯ ಮೊಲವೊಂದಕ್ಕೆ ಇಷ್ಟು ಧೈರ್ಯವಿರಬೇಕಾದರೆ ಇದು ಖಂಡಿತ ವೀರಭೂಮಿಯೇ ನಿಜ ಎನಿಸುತ್ತದೆ. ಹೀಗಾಗಿ ನಗರ ನಿರ್ಮಾಣಕ್ಕೆ ಇದೇ ಸೂಕ್ತವಾದ ಪ್ರದೇಶವೆಂದು ಕೆಂಪೇಗೌಡರು ಭಾವಿಸುತ್ತಾರೆ ಎಂದರು.

ಅಲ್ಲದೆ ನಾನಾಕಡೆಗಳಿಂದ ತೊರೆಗಳಾಗಿ ಹರಿದು ಅರ್ಕಾವತಿ ನದಿಗೆ ಸೇರುತ್ತಿದ್ದ ಪ್ರದೇಶವೂ ಇದಾದ್ದರಿಂದ ನೀರಾವರಿಗೂ ಯೋಗ್ಯವಾಗಿದೆಯೆಂದು ಗೌಡರು ತೀರ್ಮಾನಿಸುತ್ತಾರೆ. ತಮ್ಮ ಪರಿವಾರದ ಹಿರಿಯರೊಂದಿಗೆ ಸಮಾಲೋಚಿಸಿ ಒಪ್ಪಿಗೆ ಪಡೆದು ಕೆಂಪೇಗೌಡರು ರಾಜ್ಯದ ನಾಗರೀಕರಲ್ಲಿ ಸಾಮಾಜಿಕ ಸಾಮರಸ್ಯದ ಆಲೋಚನೆಯನ್ನು ಮೂಡಿಸಿದ್ದರು ಎಂದರು.

ಈ ದೇಶವನ್ನು ಅನೇಕರು ಆಳ್ವಿಕೆ ಮಾಡಿದ್ದಾರೆ. ಆದರೆ ನಮ್ಮ ನೆನಪಿನಲ್ಲಿ ಸದಾ ಉಳಿಯುವುದು ಕೆಂಪೇಗೌಡ ಆಳ್ವಿಕೆಯ ಕಾಲ. ಹಾಗಾಗಿ ಬೆಂಗಳೂರು ಅಂದರೆ ನಮ್ಮ ಕಣ್ಣ ಮುಂದೆ ಬರುವ ಚಿತ್ರಣ ಕೆಂಪೇಗೌಡರದು. ಇವರು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲೆ ರಾಜ್ಯದ ಅಭಿವೃದ್ದಿಗಾಗಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ಆ ದೂರದೃಷ್ಟಿಯ ಆಲೋಚನೆಯಿಂದ ಭವಿಷ್ಯ ಬೆಂಗಳೂರನ್ನು ಕಟ್ಟಿದ್ದಾರೆ. ಕೆಂಪೇಗೌಡರು ನಾಗರೀಕ ಸಮಾಜಕ್ಕೆ ಏನು ಬೇಕು, ಏನು ಬೇಡ ಎಂಬುದನ್ನು ಅರಿತಿದ್ದರು. ಆ ದೃಷ್ಟಿಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸಿದ್ದರು. ನಾಗರೀಕರಿಗೆ ಅನುಕೂಲ ಮಾಡಿಕೊಟ್ಟರು. ಅಭಿವೃದ್ದಿ ಜೊತೆಗೆ ಕೆಂಪೇಗೌಡರು ಸಾಂಸ್ಕೃತಿಕ, ಕಲೆ, ಸಾಹಿತ್ಯಕ್ಕೂ ಒತ್ತು ನೀಡಿದ್ದು ಯಕ್ಷಗಾನ ಕೃತಿಯನ್ನು ರಚಿಸಿದ್ದಾರೆ. ಅನೇಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೆಂಪೇಗೌಡರು ಬೆಂಗಳೂರನ್ನು ಕಟ್ಟುವಾಗ ಎಲ್ಲ ಜಾತಿ, ಜನಾಂಗದವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಗರ ನಿರ್ಮಿಸಿದರು. ಇತಿಹಾಸಕ್ಕೆ ಬೇಕಾದ ಎಲ್ಲಾ ಕಾರ್ಯವನ್ನು ಮಾಡಿದ್ದಾರೆ. ಅದರ ಫಲವಾಗಿ ಇಂದು ಬೆಂಗಳೂರನ್ನು ವಿಶ್ವವೇ ತಿರುಗಿ ನೋಡುತ್ತಿದೆ ಎಂದರು.

ನಾಡಪ್ರಭು ಕೆಂಪೇಗೌಡರ ಕುರಿತು ಪ್ರಬಂಧ ಸ್ಪರ್ದೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, ಡಿಡಿಪಿಐ ಕೊಟ್ರೇಶ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ಬಿಇಒ ಪುಪ್ಪಾಲತಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಾಮದೇವಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಯೋಗೇಶ್ ಮೊದಲಾದವರು ಹಾಜರಿದ್ದರು.

Leave a Reply