ಕನ್ನಡ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ

2 years ago

#Kannada #needs #saved #nurtured #Mysore

ಮೈಸೂರು: ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಬಳಸೋಣ, ಕನ್ನಡ ಭಾಷೆಯನ್ನು ಬೆಳೆಸೋಣ. ಕನ್ನಡ ಭಾಷೆಯ ಮೇಲೆ ಅಭಿಮಾನವನ್ನು ಬೆಳೆಸಿಕೊಳ್ಳೋಣ ಎಂದು ಎನ್ ಐ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಗಣೇಶ್ ಪ್ರಸಾದ್ ಕರೆ ನೀಡಿದರು.

ಎನ್ಐ ಇಂಜಿನಿಯರಿಂಗ್ ಕಾಲೇಜಿನ ನೌಕರರ ಸಂಘ ಸರ್ವಪಲ್ಲಿ ರಾಧಾಕೃಷ್ಣ ಸಭಾಂಗಣದಲ್ಲಿ ಏರ್ಪಡಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ಹಿರಿಮೆ ದೊಡ್ಡದು. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಯ ವಾರಸುದಾರರಾದ ನಾವೆಲ್ಲ ಕನ್ನಡ ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ವಿಭಾಗ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಿ ಮಣಿ ಮಾತನಾಡಿ, ಕರುನಾಡು, ಕನ್ನಾಡು, ಕರ್ನಾಟಕ ಎಂದು ನಾನಾ ಹೆಸರಿನಲ್ಲಿ ರಾರಾಜಿಸುವ ನಮ್ಮ ನಾಡಿಗೆ ಪ್ರಾಚೀನ ಇತಿಹಾಸವಿದೆ. ಕನ್ನಡ ಭಾಷೆ ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ್ದು , ಸುಂದರ ಭಾಷೆಯಾಗಿದೆ. ಕನ್ನಡ ನಾಡಿನಲ್ಲಿರುವ ಎಲ್ಲರೂ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ಇದರಿಂದ ಭಾಷೆ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಂತರರಾಷ್ಟ್ರೀಯ ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಕನ್ನಡ ನಾಡು ನುಡಿ ನೆಲ ಜಲ ಭಾಷೆ ಬಗ್ಗೆ ಎಲ್ಲರಿಗೂ ಪ್ರೀತಿ ಅಭಿಮಾನ ಇರಬೇಕು. ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎನ್ ಐ ಇ ಕನ್ನಡ ಪ್ರಾಧ್ಯಾಪಕ ಎಸ್ ಶಿಶಿರಂಜನ್ ಮಾತನಾಡಿ, ಕನ್ನಡ ಭಾಷೆ ಬಗ್ಗೆ ಆಸಕ್ತಿ ,ಅಭಿಮಾನ ಬೆಳೆಸುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ನೌಕರರ ಸಂಘದ ಅಧ್ಯಕ್ಷ ಎಸ್ ಸಿಂಗಯ್ಯ, ಕಾರ್ಯದರ್ಶಿ ಎಂ. ಸುರೇಶ್ ಭಾಗವಹಿಸಿದ್ದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವರಿಗೆ ಇದೇ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.

Leave a Reply