ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು: ಬಿಜೆಪಿ

1 year ago

ಬೆಂಗಳೂರು: ಒತ್ತುವರಿ ಆರೋಪದಲ್ಲಿ ವಕ್ಪ್ ಆಸ್ತಿ ತೆರವು ವಿಚಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬಿಜೆಪಿಗೆ ದೊಡ್ಡ ಅಸ್ತ್ರ ಪ್ರಯೋಗಿಸಿದೆ. 

ವಿವಾದ ಸೃಷ್ಟಿಸಿರುವ ಸಚಿವ ಜಮೀರ್ ಅಹಮದ್ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ  ಬಿಜೆಪಿ ನವೆಂಬರ್ 4ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದೆ.

ತಾಲ್ಲೂಕು ಮಟ್ಟದಿಂದ ಜಿಲ್ಲಾ ಹಂತದವರೆಗೂ ಪಕ್ಷದ ಕಾರ್ಯಕರ್ತರು ಧರಣಿ ಮತ್ತು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಸಚಿವರ ರಾಜಿನಾಮೆಗೆ ಒತ್ತಾಯಿಸಬೇಕು ಎಂದು ಸೂಚನೆ ನೀಡಿದೆ.

ಪ್ರತಿಭಟನೆಯಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಲೋಕಸಭಾ ಸದಸ್ಯರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಬೇಕೆಂದು ಪಕ್ಷದ ಅಧ್ಯಕ್ಷ ವಿಜಯೇಂದ್ರ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತುಘಲಕ್ ನೀತಿಯನ್ನು ಜಾರಿಗೆ ತರುತ್ತಿದೆ. ಅಲ್ಪಸಂಖ್ಯಾತ ಸಚಿವ ಜಮೀರ್ ಅಹದ್ ಅವರು ಸಿಎಂ ಸಿದ್ಧರಾಮಯ್ಯನವರ ಸೂಚನೆಯಂತೆ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಇದರ ಫಲವಾಗಿ ಕರ್ನಾಟಕ ರಾಜ್ಯದ ಬಹುತೇಕ ರೈತರು ತೀವ್ರ ಸಂಕಷ್ಟ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಅಮಾಯಕ ರೈತರ ಪಹಣಿ ಪತ್ರಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸುವುದರ ಮೂಲಕ ರೈತರ ಜಮೀನನ್ನು ರಾಜ್ಯಾದ್ಯಂತ ಕಬಳಿಸುವ ಹುನ್ನಾರ ನಡೆದಿದೆ ಎಂದು ದೂರಿದ್ದಾರೆ.

ಈಗಾಗಲೇ ಸಾವಿರಾರು ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಾಗಿರುವುದರಿಂದ ಕಲಬುರ್ಗಿ, ವಿಜಯಪುರ, ಯಾದಗಿರಿ, ಬೀದರ್, ಶಿವಮೊಗ್ಗ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಚನಾತ್ಮಕ ಪ್ರತಿಪಕ್ಷವಾಗಿ ನಾವು ರೈತರ ಪರವಾಗಿ ನಿಂತು ಸರ್ಕಾರವನ್ನು ಎಚ್ಚರಿಸುವ ಹೋರಾಟಕ್ಕೆ ತಕ್ಷಣಕ್ಕೆ ಧುಮುಕಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಪಕ್ಷದ ಎಲ್ಲ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ಎಲ್ಲ ತಹಶೀಲ್ದಾರರ ಕಛೇರಿಗಳ ಮುಂದೆ ನೊಂದ ರೈತರನ್ನೊಳಗೊಂಡಂತೆ ಬೃಹತ್ ಸಂಖ್ಯೆಯಲ್ಲಿ ನ.4ರಂದು ಹೋರಾಟ ನಡೆಸಬೇಕೆಂದು ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೂಡಲೇ ಜಮೀರ್ ಅಹದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಅಕ್ರಮವಾಗಿ ಈಗಾಗಲೇ ವಕ್ಫ್ ಆಸ್ತಿ, ಪರಭಾರೆ ನಿಷೇಧಿಸಿದೆ ಎಂದು ನಮೂದಿಸಿರುವ ಪಹಣಿಗಳನ್ನು ತಕ್ಷಣಕ್ಕೆ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

Leave a Reply