ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆಗೆ ಗೈರು
ಪ್ರತ್ಯೇಕ ಸಭೆ ನಡೆಸಿದ ಭಿನ್ನಮತೀಯ ನಾಯಕರು
ಬೆಂಗಳೂರು: ಸಂಘ ಪರಿವಾರ ನಾಯಕರ ಮಧ್ಯ ಪ್ರವೇಶದ ನಂತರವೂ ರಾಜ್ಯ ಬಿಜೆಪಿಯಲ್ಲಿನ ಭಿನ್ನಮತದ ಬೇಗುದಿ ಶಮನವಾಗಿಲ್ಲ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಮೇಲ್ನೋಟಕ್ಕೆ ಒಟ್ಟಾಗಿದ್ದೇವೆ ಎಂದು ತೋರಿಸಿಕೊಂಡರೂ ಇಬ್ಬರ ನಡುವೆ ತಾಳಮೇಳ ಇಲ್ಲ. ಇನ್ನು ಇವರಿಬ್ಬರ ನಾಯಕತ್ವವನ್ನು ಧಿಕ್ಕರಿಸಿರುವ ಮುಖಂಡರು ಯಾವುದೇ ಸೂಚನೆಗೂ ಬಗ್ಗುತ್ತಿಲ್ಲ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಎಲ್ಲರನ್ನೂ ಒಂದೇ ವೇದಿಕೆಗೆ ಕರೆತಂದು ಭಿನ್ನಮತಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ ಸಂಘ ಪರಿವಾರದ ನಾಯಕರ ಪ್ರಯತ್ನಕ್ಕೆ ಭಿನ್ನಮತೀಯ ನಾಯಕರು ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಂಡಿಲ್ಲ. ತಮ್ಮ ಪಟ್ಟು ಸಡಿಲಿಸಿಲ್ಲ.
ನಿವೇಶನ ಹಂಚಿಕೆ ಅಕ್ರಮ ಆರೋಪದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಕೋರ್ಟ್ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ ಆರಂಭಿಸಿದೆ. ಇದನ್ನು ತೀವ್ರಗೊಳಿಸುವ ದೃಷ್ಟಿಯಿಂದ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಗೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಬರಬೇಕೆಂದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೂಚನೆ ಕೊಟ್ಟಿದ್ದರು.
ಆದರೆ ಈ ಸೂಚನೆಗೆ ಬಹುತೇಕ ನಾಯಕರು ಸೊಪ್ಪು ಹಾಕಿಲ್ಲ. ಬೆಂಗಳೂರಿನಲ್ಲಿಯೇ ಇದ್ದ ಶಾಸಕರಾದ ಎಸ್ ಆರ್ ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ.ಹರೀಶ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದರಾದ ಪ್ರತಾಪ ಸಿಂಹ, ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಗೆ ಆಗಮಿಸದೆ ಅಂತರ ಕಾಯ್ದುಕೊಂಡರು.
ಪ್ರತ್ಯೇಕ ಸಭೆ ನಡೆಸಿದ ಭಿನ್ನಮತೀಯರು: ಪಕ್ಷದ ರಾಜ್ಯ ಘಟಕ ಕರೆ ನೀಡಿದ್ದ ಪ್ರತಿಭಟನೆಯಿಂದ ದೂರ ಉಳಿದ ನಾಯಕರು ಪ್ರತ್ಯೇಕ ಸಭೆ ನಡೆಸಿ ತಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಕುರಿತಂತೆ ಚರ್ಚೆ ನಡೆಸಿದರು.
ಪಕ್ಷದ ಅಧ್ಯಕ್ಷ ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ತಮ್ಮ ಪಕ್ಷದ ನಾಯಕ ಎಂದು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ ಎಂದು ಘೋಷಿಸಿರುವ ಈ ನಾಯಕರು, ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚಂದ್ರಪ್ಪ, ಶಾಸಕ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಹಲವರು ಹಾಜರಿದ್ದರು.



