ಬೆಳಗಾವಿ: ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರ ವೇಳೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪೀಕರ್ ಸ್ಥಾನದ ಕುರಿತು ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಸಭಾಧ್ಯಕ್ಷರ ಪೀಠಕ್ಕೆ ಕೋಮುಬಣ್ಣ ಬಳಿದಿರುವ ಜಮೀರ್ ಅಹಮದ್ ಖಾನ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ವಿಧಾನಸಭೆ ಕಲಾಪದಿಂದ ಅಮಾನತುಗೊಳಿಸಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವಿಷಯ ಉಭಯ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸದನ ಸಮಾವೇಶಗೊಂಡಾಗ ಮೊನ್ನೆ ನಿಧನರಾದ ಹಿರಿಯ ನಟಿ,ಲೀಲಾವತಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ವಸತಿ ಇಲಾಖೆ ಕುರಿತಾದ ಪ್ರಶ್ನೆಗೆ ಸಚಿವ ಜಮೀರ್ ಅಹಮದ್ ಖಾನ್ ಉತ್ತರ ಹೇಳಲು ಮುಂದಾಗುತ್ತಿದ್ದಂತೆ ವಿಪಕ್ಷ ನಾಯಕ ಅಶೋಕ್ ಆಕ್ಷೇಪಿಸಿದರು.
ಅಶೋಕ್ ಆಕ್ಷೇಪಕ್ಕೆ ಉಳಿದ ಸದಸ್ಯರು ದನಿಗೂಡಿಸಿ, ಜಮೀರ್ ಅಹಮದ್ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಆಗ ಆಡಳಿತ ಪಕ್ಷದ ಸದಸ್ಯರು ಸಚಿವರ ಬೆಂಬಲಕ್ಕೆ ಧಾವಿಸಿದ ಪರಿಣಾಮ ಗದ್ದಲ ಉಂಟಾಯಿತು. ಇದರಿಂದ ಸುಗಮ ಕಲಾಪ ಸಾಧ್ಯವಾಗದೆ ಸಭಾಧ್ಯಕ್ಷ ಯು.ಟಿ.ಖಾದರ್ ಕಲಾಪವನ್ನು ಅಲ್ಪ ಕಾಲಾವಧಿಗೆ ಮುಂದೂಡಿದರು.
ಮತ್ತೆ ಸದನ ಸಮಾವೇಶಗೊಂಡಾಗ ಪಟ್ಟು ಸಡಿಲಿಸದ ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷರು ಪೀಠದ ವಿಷಯದಲ್ಲಿ ರಾಜಕೀಯ ಮಾಡಬೇಡಿ ಎಂದು ವಿಪಕ್ಷಗಳಿಗೆ ಮನವಿ ಮಾಡಿದರು. ಆದರೆ ಅದನ್ನು ಕೇಳಿಸಿಕೊಳ್ಳದ ವಿಪಕ್ಷದ ನಾಯಕರು ಜಮೀರ್ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಆಗ ಆಡಳಿತ ಪಕ್ಷದ ಕಡೆಯಿಂದ ಸಚಿವರಾದ ಎಚ್.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಶಾಸಕರಾದ ನರೇಂದ್ರಸ್ವಾಮಿ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಮತ್ತಿತರರು ಬಿಜೆಪಿ ನಾಯಕರ ನಡವಳಿಕೆಯನ್ನು ಖಂಡಿಸಿದರು.
ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಗಳು ಜೋರಾದವು. ಬಿಜೆಪಿಯವರು ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ಬಿಜೆಪಿಯವರಿಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಆಸಕ್ತಿಯಿಲ್ಲ, ಹೀಗಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಭಾಧ್ಯಕ್ಷರು ಸದನದ ಸಮಯ ಹಾಳು ಮಾಡಬೇಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಸಚಿವರ ಹೇಳಿಕೆ ಆಘಾತಕಾರಿ. ನಾವೇನು ಗುಲಾಮರೇ ಎಂದು ಪ್ರಶ್ನಿಸಿದಾಗ ಡಾ.ಅಶ್ವತ್ಥನಾರಾಯಣ, ಸಭಾಧ್ಯಕ್ಷರೇ ಶಾಸಕ ಜಮೀರ್ ಅವರನ್ನು ಹೊರಹಾಕಬೇಕಿತ್ತು ಎಂದರು.
ನೋಟೀಸ್ ನೀಡದೇ ಯಾವುದೇ ವಿಚಾರಗಳನ್ನೂ ಮುಗುಮ್ಮಾಗಿ ಚರ್ಚೆ ಮಾಡಬೇಡಿ. ನೀವು ಪ್ರಸ್ತಾಪಿಸಲು ಬಯಸುವ ವಿಚಾರಗಳನ್ನು ನೋಟೀಸ್ ಮೂಲಕ ನೀಡಿ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದರು. ಆದರೆ ಇದನ್ನು ಪರಿಗಣಿಸದ ಆರ್.ಅಶೋಕ್ ಸರ್ಕಾರ ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಜಮೀರ್ ಅವರನ್ನು ಅಲ್ಪಸಂಖ್ಯಾತರ ಓಲೈಕೆಗೆ ರಕ್ಷಣೆ ಮಾಡಲಾಗುತ್ತಿದೆ, ಸಭಾಕ್ಷರ ಪೀಠಕ್ಕೆ ಅಗೌರವ ತೋರಿದ್ದರೂ ಸಚಿವರನ್ನು ಬೆಂಬಲಿಸುವುದು ಒಂದು ಕೋಮಿನ ಮತಕ್ಕಾಗಿ ಎಂದರು.
ಸಚಿವ ಜಮೀರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ ಅಡ್ಡಿಪಡಿಸಿದರು. ಇದರ ನಡುವೆ ಕಲಾಪವನ್ನು ಮುಂದುವರೆಸಲಾಯಿತು. ಧರಣಿ ಮಧ್ಯೆ ಸರಕು ಮತ್ತು ಸೇವೆಗಳ ತೆರಿಗೆ, ಕರ್ನಾಟಕ ಸ್ಟಾಂಪ್ ತಿದ್ದುಪಡಿ, ಕರ್ನಾಟಕ ವೈದ್ಯಕೀಯ ಕೋರ್ಸ್ ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ವಿಧೇಯಕ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ತಿದ್ದುಪಡಿ ವಿಧೇಯಕ ಹಾಗೂ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.



