ಬೆಂಗಳೂರು: ಗೋವಾದಿಂದ ಬೆಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುವ ಜಾಲವನ್ನು ಬೇಧಿಸಿರುವ ಬೆಂಗಳೂರು ಪೊಲೀಸರು ಬೆಳಗಾವಿ ಮೂಲದ ಇಬ್ಬರನ್ನು ಬಂಧಿಸಿ, ಲಕ್ಷ ರೂಪಾಯಿ ಮೌಲ್ಯದ ಮದ್ಯ ಮತ್ತು ವಾಹನ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಮೂಲದ ಆರೋಪಿಗಳಾದ ಪರಮೇಶ್ವರ್ ದೇವಪ್ಪ ನಾಯಕ ಹಾಗೂ ವಾಹನ ಚಾಲಕ ಅಮೀತ ಪಡತಾರೆ ಎಂಬುವವರು ಗೋವಾದಿಂದ ತರಲಾಗಿದೆ ಎಂಬ ಮದ್ಯವನ್ನು ಬೆಳಗಾವಿ ಮಾರ್ಗವಾಗಿ ಬೆಂಗಳೂರಿಗೆ ತರುತ್ತಿದ್ದಾರೆ ಎಂಬ ಮಾಹಿತಿ ಪಡೆದು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಬಕಾರಿ ಪೊಲೀಸರು 3240 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ.
ಅಬಕಾರಿ ಜಂಟಿ ಆಯುಕ್ತ ಎ.ಎಲ್.ನಾಗೇಶ್ ಅವರ ಮಾರ್ಗದರ್ಶನದಲ್ಲಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ನೇತೃತ್ವದಲ್ಲಿ ವಲಯ-30ರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಕೈಗೊಂಡ ಮಹದೇವಪುರ ವಲಯ ನಿರೀಕ್ಷಕ ಅಬೂಬಕರ್ ಮುಜಾವರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.




