ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ: ಪ್ರತಿಭಟನೆ

2 years ago

ಕಲಬುರಗಿ: ಕಿಡಿಗೇಡಿಗಳು ಕಲಬುರಗಿಯ ಕೋಟನೂರು ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿರುವ ಘಟನೆ ನಡೆದಿದೆ. ಇದರಿಂದ ಕಲಬುರಗಿ ಜಿಲ್ಲೆಯ ಹಲವೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಮೆಗೆ ಅಪಮಾನ ‌ಮಾಡಿದ ಘಟನೆ ಖಂಡಿಸಿ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರದ ಅಂಗಡಿಮುಂಗಟ್ಟುಗಳನ್ನು  ಬಂದ್ ಮಾಡಿಸಲಾಯಿತು.

ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್, ರಾಮಮಂದಿರ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಹಲವೆಡೆ ಅಂಗಡಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದರು.

ಜಗತ್ ವೃತ್ತದಲ್ಲಿ ಎಲ್ಲ ರಸ್ತೆಗಳನ್ನು ತಡೆದು ನಾಲ್ಕೈದು ತಾಸು ಪ್ರತಿಭಟನೆ ಮಾಡಲಾಯಿತು. ಡಿಸಿಪಿ (ಕಾನೂನು ಸುವ್ಯವಸ್ಥೆ) ಕನ್ನಿಕಾ ಸಿಕ್ರಿವಾಲ್ ಅವರ ಕಾರು ತಡೆದು ನಿಲ್ಲಿಸಿದರು. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಪ್ರಮುಖ ವೃತ್ತಗಳಲ್ಲಿ ಟೈಯರ್‌ಗಳನ್ನು ಸುಟ್ಟು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳ ಮತ್ತು ಬಹುಜನ ಸಮಾಜದ ಮುಖಂಡರು ಹಾಗೂ ಯುವಕರು ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ರಸ್ತೆ ಸಂಚಾರ ಬಂದ್‌ ಮಾಡಿ ಪ್ರತಿಭಟಿಸಿದರು.

ಹಲವೆಡೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಸುಮಾರು ಮೂರು ಗಂಟೆಗಳ ಕಾಲ ನಾಲ್ಕೂ ದಿಕ್ಕುಗಳಲ್ಲಿ ವಾಹನಗಳ ಸಂಚಾರ ಬಂದ್‌ ಆಗಿತ್ತು. ಪ್ರಯಾಣಿಕರು ಪರದಾಡಿದರು. ವೃತ್ತದಲ್ಲಿ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ಅಡ್ಡಗಟ್ಟಿ ಮಾನವ ಸರಪಳಿ ನಿಲ್ಲಿಸಿದ ಸಿಪಿಐಎಂ ಹಾಗೂ ದಲಿತ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡಿದ್ದಾರೆ. ಇದು ದಿಗ್ಭ್ರಮೆಗೆ ಮತ್ತು ಬೇಸರಕ್ಕೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ನಾರಾಯಣಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರನ್ನೂ ಒಟ್ಟೊಟ್ಟಿಗೆ ಒಯ್ಯುವ ಶ್ರೇಷ್ಠ ಸಂವಿಧಾನವನ್ನು ನೀಡಿದ ಡಾ. ಅಂಬೇಡ್ಕರರಿಗೆ ಅವಮಾನ ಮಾಡಿದ ಕಿಡಿಗೇಡಿಗಳ ನಡೆ ಅಕ್ಷಮ್ಯ ಎಂದರು.

ರಾಜ್ಯದಲ್ಲಿ ತಳಸಮುದಾಯಗಳಿಗೆ ರಕ್ಷಣೆ ಇಲ್ಲ. ಅಲ್ಪಸಂಖ್ಯಾತರನ್ನೂ ಸೇರಿಸಿ ತಳ ಸಮುದಾಯಗಳ ರಕ್ಷಕರು ಎಂದು ಸರಕಾರ ಹೇಳಿಕೊಳ್ಳುತ್ತದೆ. ಆದರೆ, ಅವರಿಗೆ ರಕ್ಷಣೆ ಇಲ್ಲವಾಗಿದೆ. ಅಂಬೇಡ್ಕರರ ಪುತ್ಥಳಿಗೆ ಅವಮಾನ ಮಾಡಿದ ಘಟನೆ ಸರಕಾರದ ಬಗ್ಗೆ ಭಯ ಇಲ್ಲದೆ ಇರುವುದರ ಸಂಕೇತ ಎಂದು ವಿಶ್ಲೇಷಿಸಿದರು.

Leave a Reply