ಮಹಿಳೆ ಮೇಲೆ ಹಲ್ಲೆ ಪ್ರಕರಣ: ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧತೆ

2 years ago

ಬೆಂಗಳೂರು: ಬೆಳಗಾವಿ ಹೊರವಲಯದ ವಂಟಮೂರಿಯಲ್ಲಿ ಕಳೆದ ಡಿಸೆಂಬರ್ 11ರಂದು ನಡೆದಿದ್ದ ಮಹಿಳೆಯ  ವಿವಸ್ತ್ರ ಹಾಗೂ ಹಲ್ಲೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ದೇಶಾದ್ಯಂತ ಸುದ್ದಿ ಮಾಡಿದ್ದ ಪ್ರಕರಣದ ಕುರಿತು ಸಿಐಡಿ ಅಧಿಕಾರಿಗಳು ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆಸಿದೆ.

ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಪ್ರೀತಿಸಿದ ಯವಕನೊಂದಿಗೆ ಮನೆ ಬಿಟ್ಟು ಹೋದ ಯುವತಿ ನೀಡಿದ ಹೇಳಿಕೆಯೇ ಬ್ರಹ್ಮಾಸ್ತ್ರವಾಗಿದೆ ಎನ್ನಲಾಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾದ ತಂದೆ ಮತ್ತು ಚಿಕ್ಕಪ್ಪನ ವಿರುದ್ಧವೇ ಯುವತಿ ಹೇಳಿಕೆ ನೀಡಿದ್ದಾರೆ.

ನಾನು ಪ್ರೀತಿ ಮಾಡಿಯೇ ಯುವಕನ ಜೊತೆ ಹೋಗಿದ್ದೇನೆ. ನಮ್ಮಪ್ಪ, ಚಿಕ್ಕಪ್ಪ ಸೇರಿ ಪ್ರಿಯಕರನ ಮನೆ ಧ್ವಂಸ ಮಾಡಿ ಹಲ್ಲೆ ಮಾಡುತ್ತಿರುವುದಾಗಿ ಕರೆಮಾಡಿ ಹೇಳಿದ್ದಾಗಿ ಹೇಳಿಕೆ ನೀಡಿದ್ದಾಳೆ. ಪ್ರಕರಣ ಸಂಬಂಧ ಒಟ್ಟು 1,500 ಸಾವಿರಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ಸಿದ್ಧಪಡಿಸಲಾಗಿದ್ದು, 40 ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

ಹೆಚ್ಚುವರಿ ಪೊಲೀಸ್ ಮಹಾ‌ನಿರ್ದೇಶಕ (ಎಡಿಜಿಪಿ) ಬಿಜಯ್ ಕುಮಾರ್ ಸಿಂಗ್ ನೇತೃತ್ವದ ಸಿಐಡಿ ತನಿಖಾ ತಂಡ 15 ದಿನಗಳ ಕಾಲ ಬೆಳಗಾವಿಯಲ್ಲಿ ಬೀಡು ಬಿಟ್ಟಿತ್ತು. ಸಂತ್ರಸ್ಥ ಮಹಿಳೆ ಹಾಗೂ ಸ್ಥಳೀಯ ವೃದ್ಧೆಯೊಬ್ಬರು ಕೊಟ್ಟಿರುವ ಹೇಳಿಕೆಯೇ ಪ್ರಮುಖ ಸಾಕ್ಷ್ಯವನ್ನಾಗಿ ಮಾಡಲಾಗಿದೆ. ಆರೋಪಿಯ ಮಗಳ ಸುದೀರ್ಘ ಹೇಳಿಕೆಯನ್ನೂ ತನಿಖಾ ತಂಡ ದಾಖಲಿಸಿಕೊಂಡಿದೆ.

ಇದರ ಜೊತೆಗೆ ಟೆಕ್ನಿಕಲ್ ಸಾಕ್ಷಿಗಳನ್ನು ಕೂಡ ಸಂಗ್ರಹಿಸಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆ ಮೊಬೈಲ್ ದೃಶ್ಯದಲ್ಲಿ ಕಂಡುಬಂದವರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು.

ಮದುವೆ ನಿಶ್ಚಯವಾಗಿದ್ದ ಮಗಳು ಪ್ರಿಯಕರನ ಜೊತೆಗೂಡಿ ಓಡಿಹೋಗಿದ್ದೇ ಯುವಕನ ತಾಯಿ ಮೇಲೆ ಹಲ್ಲೆಗೆ ಕಾರಣ ಎಂಬುದನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಮರ್ಯಾದೆ ಹೋಯ್ತು ಎಂಬ ಪ್ರಚೋದಿತರ ಮಾತುಗಳಿಂದಾಗಿ ಆರೋಪಿತರು ಹಲ್ಲೆ ನಡೆಸಿದ್ದಾರೆ. ಮದುವೆ ಸಿದ್ಧತೆ ಮಾಡಿಕೊಂಡಿದ್ದಾಗಲೇ ಯುವತಿ ಓಡಿಹೋದ ಹಿನ್ನಲೆ ಚಿಕ್ಕಪ್ಪ ಹಾಗೂ ತಂದೆಯು ದುರುದ್ದೇಶದಿಂದಲೇ ಮಾಡಿರುವುದಾಗಿ ಹೇಳಿಕೆ ದಾಖಲಿಸಲಾಗಿದೆ.

ಸಂಬಂಧಿಕರ ಮಾತುಗಳಿಂದ ಪ್ರಚೋದನೆಗೊಂಡು ಜಾತಿಯ ವಿಚಾರವೆತ್ತಿ ಮಹಿಳೆಯನ್ನ ವಿವಸ್ತ್ರ ಮಾಡಿ ಹಲ್ಲೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯ ತನಿಖೆಯ ರಿಪೋರ್ಟ್ ಪಡೆದುಕೊಂಡಿರುವ ಸಿಐಡಿ ಆ ಬಗ್ಗೆಯೂ ಉಲ್ಲೇಖಿಸಿದೆ.

Leave a Reply