ಹೀಗೆ ಮುಂದುವರೆದರೆ ಮತದಾನದ ಅವಶ್ಯಕತೆ ಇರುವುದಿಲ್ಲ

5 months ago

ಚುನಾವಣಾಪೂರ್ವ ಸಮೀಕ್ಷೆಗಳು ಹೀಗೆ ಮುಂದುವರೆದರೆ ಮತದಾನದ ಅವಶ್ಯಕತೆ ಇರುವುದಿಲ್ಲ.

ಯಾವುದೇ ರಾಜ್ಯದ ಅಥವಾ ದೇಶದ ಲೋಕಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ಮತ್ತು ದಿನಾಂಕ ಘೋಷಣೆಯಾದ ನಂತರ ಮತದಾನದ ಹಿಂದಿನ ದಿನ ಮತ್ತು ವಿವಿಧ ಹಂತದ ಮತದಾನಗಳಿದ್ದರೆ ಮತದಾನದ ದಿನಗಳಲ್ಲಿಯೂ ನಮ್ಮ ದೇಶದ ಬಹುತೇಕ ದೃಶ್ಯ ಮಾಧ್ಯಮಗಳು ಚುನಾವಣಾ ಸಮೀಕ್ಷೆಗಳನ್ನ ಮೇಲಿಂದ ಮೇಲೆ ಪ್ರಚಾರ ಮಾಡುತ್ತಲೇ ಇರುವುದರಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ಸಾಕಷ್ಟು ಕೆಟ್ಟ ಪರಿಣಾಮಗಳಾಗುತ್ತಿವೆ.

ಮಾಧ್ಯಮದವರಿಗೆ ಬೇಕಾದವರಿಗೆ ಮತ್ತು ತಮಗೆ ಚೆನ್ನಾಗಿ ನೋಡಿಕೊಂಡವರಿಗೆ ಅನುಕೂಲವಾಗುವ ರೀತಿಯಲ್ಲಿ ಚುನಾವಣಾ ಸಮೀಕ್ಷೆಗಳನ್ನು ಅವರ ಪರವಾಗಿ ಪ್ರತಿದಿನವೂ ಹೇಳುತ್ತಲೇ ಇದ್ದರೆ ಮತದಾರರ ಮನಸ್ಸಿನಲ್ಲಿ ಒಂದು ರೀತಿಯ ಅವರ ಪರವಾಗಿ ಅಭಿಪ್ರಾಯ ಮೂಡುತ್ತದೆ ಇದರಿಂದಾಗಿ ಗೊಂದಲದಲ್ಲಿರುವ ಮತದಾರರು ಗೆಲ್ಲುವ ಪಕ್ಷ ಯಾವುದೆಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಪದೇಪದೇ ಸುದ್ದಿ ಮಾಧ್ಯಮದವರು ತೋರಿಸುವಂತಹ ಪಕ್ಷಗಳಿಗೆ ಪರವಾಗಿ ಅಭಿಪ್ರಾಯವನ್ನು ಹೊಂದುತ್ತಾರೆ. ಒಂದು ವೇಳೆ ತಾವು ಬೇರೆ ಪಕ್ಷ ಮತ್ತು ಬೇರೆ ಪಕ್ಷದ ಸಿದ್ಧಾಂತ ಒಪ್ಪಿಕೊಂಡಿದ್ದರು ಸಹ ಹೇಗಿದ್ದರೂ ಚುನಾವಣೆಯಲ್ಲಿ ಅವರು ಗೆಲ್ಲುವುದಿಲ್ಲ ಮತವನ್ನು ಯಾಕೆ ವ್ಯರ್ಥ ಮಾಡಬೇಕು ಎಂದು ಬಹುಜನರ ಅಭಿಪ್ರಾಯವಿರುವ ಕಡೆಯಲೇ ನಾವು ನಿಲ್ಲುವುದು ಒಳ್ಳೆಯದು ಎಂದು ತಮ್ಮ ನಿಲುವುಗಳನ್ನು ಬದಲಾಯಿಸುವಂತಹ ಸಾಧ್ಯತೆಗಳು ಹೆಚ್ಚಿರುತ್ತದೆ.

ಚುನಾವಣಾ ಸಮೀಕ್ಷೆಗಳು ಚುನಾವಣಾ ಪೂರ್ವದಲ್ಲಿ ಪ್ರಕಟಿಸುವುದು ನಿಷೇಧಿಸಿ ಚುನಾವಣೆ ಮುಗಿದ ನಂತರ ಬಹಿರಂಗಪಡಿಸಲು ಸುದ್ದಿ ಮಾಧ್ಯಮದವರಿಗೆ ಮತ್ತು ದೃಶ್ಯ ಮಾಧ್ಯಮದವರಿಗೆ ನಮ್ಮ ದೇಶದ ಚುನಾವಣಾ ಆಯೋಗ ಅಥವಾ ಸರ್ವೋಚ್ಚ ನ್ಯಾಯಾಲಯ ಆದೇಶವನ್ನ ಅಥವಾ ತೀರ್ಪನ್ನು ನೀಡದಿದ್ದರೆ ಮುಂದಿನ ದಿನಗಳಲ್ಲಿ ಚುನಾವಣೆಗಳನ್ನ ಮಾಡುವುದರ ಬದಲಿಗೆ ಎಲ್ಲ ಮಾಧ್ಯಮಗಳಲ್ಲಿ ಬರುವಂತಹ ಅಭಿಪ್ರಾಯಗಳನ್ನ ಕ್ರೂಢೀಕರಿಸಿ ನೇರವಾಗಿ ಸ್ಥಾನಗಳನ್ನ ಹಂಚುವುದು ತುಂಬಾ ಒಳ್ಳೆಯ ಕೆಲಸವಾಗುತ್ತದೆ.

ಪ್ರತಿಯೊಂದು ಚುನಾವಣೆಯಲ್ಲಿಯೂ ತಾವು ಒಪ್ಪಿಕೊಂಡು ಮೆಚ್ಚಿಕೊಂಡಿರುವ ಸಿದ್ಧಾಂತದ ಆರಾಧಕರಾದ ವ್ಯಕ್ತಿಗಳನ್ನು ಮತ್ತು ಆ ಪಕ್ಷಗಳನ್ನು ಅವರ ಸಾಧನೆಗಳನ್ನು ಅಗತ್ಯಕ್ಕಿಂತ ಹೆಚ್ಚಿನ ರೀತಿಯಲ್ಲಿ ಬಿಂಬಿಸುತ್ತ ಅವರ ವ್ಯಕ್ತಿತ್ವವನ್ನು ಅನಗತ್ಯವಾಗಿ ವೈಭವೀಕರಿಸುತ್ತ ಮತದಾರರ ಮೇಲೆ ಪರೋಕ್ಷವಾಗಿ ಪ್ರಭಾವವನ್ನು ಬೀರುವಂತಹ ಪಕ್ಷದ ಪರವಾದ ಪ್ರಚಾರಕರಾಗಿರುವ  ಮಾಧ್ಯಮದವರು ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಯಾವ ಕಾಳಜಿಯು ಇಲ್ಲದೆ ತಮ್ಮ ಮಾಧ್ಯಮಗಳನ್ನು ನಡೆಸುವ ಸಲುವಾಗಿ ತಾವು ಬದುಕುವ ಸಲುವಾಗಿ ಮತದಾನವೆಂಬ ಪವಿತ್ರವಾದ ಗುಪ್ತವಾದಂತಹ ಆ ಒಂದು ಅಭಿಪ್ರಾಯವನ್ನು ಸಹ ಸಾರ್ವಜನಿಕ ಗೊಳಿಸಿ ಮತದಾನದ ಪವಿತ್ರತೆಯನ್ನ ಹಾಳು ಮಾಡುತ್ತಿದ್ದಾರೆ.

ಚುನಾವಣಾ ಆಯೋಗ ಅಥವಾ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾದಂತಹ ನಿರ್ಧಾರಗಳಿಗೆ ಬರೆದಿದ್ದರೆ ಹಣ ಇರುವ ಪಕ್ಷಗಳು ಹಣ ಇರುವ ವ್ಯಕ್ತಿಗಳು ಮಾಧ್ಯಮಗಳನ್ನು ಖರೀದಿಸಿ ತಮ್ಮ ಪರವಾದಂತಹ ಅಭಿಪ್ರಾಯಗಳನ್ನ ಚುನಾವಣಾ ಪೂರ್ವದಲ್ಲಿಯೇ ಪ್ರತಿದಿನವೂ ಪ್ರತಿ ಕ್ಷಣವು ಬಿತ್ತರಿಸಿ ಮತದಾರರ ಮನಸ್ಸಿನಲ್ಲಿ ಅದೇ ಅಭಿಪ್ರಾಯವನ್ನ ಮೂಡಿಸಿ ಚುನಾವಣಾ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಬುಡಮೇಲು ಮಾಡುತ್ತಾರೆ ಇದಕ್ಕೆ ಕಡಿವಾಣ ಹಾಕದಿದ್ದರೆ ಚುನಾವಣೆ ಮಾಡುವುದ್ರಲ್ಲಿ ಅರ್ಥವೇ ಇಲ್ಲ. ವಿಶೇಷವಾಗಿ ದೃಶ್ಯಮಾಧ್ಯಮದವರ ನಡವಳಿಕೆಯಂತೂ ತುಂಬಾ ಅಪಾಯಕಾರಿಯಾಗಿದೆ

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply