ಮಾರ್ಚ್ 14ರ ನಂತರವೂ ನಾಮಫಲಕ ಕನ್ನಡೀಕರಣಗೊಳ್ಳದಿದ್ದರೆ ಮತ್ತೆ ಹೋರಾಟ

2 years ago

ಶೇ. 60ರಷ್ಟು ಪ್ರಮಾಣದ ಕನ್ನಡ ನಾಮಫಲಕ ಅಳವಡಿಕೆಗೆ ರಾಜ್ಯ ಸರ್ಕಾರ ಫೆ.28ರವರೆಗೆ ಗಡುವು ನೀಡಿತ್ತು. ಈಗ ಗಡುವನ್ನು ಮಾರ್ಚ್ 14ರವರೆಗೆ ವಿಸ್ತರಿಸಿದೆ. ಮಾರ್ಚ್ 14ರ ನಂತರವೂ ನಾಮಫಲಕಗಳು ಬದಲಾಗದೇ ಇದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತೆ ಬೀದಿಗಿಳಿದು ಹೋರಾಟಕ್ಕೆ ಇಳಿಯಬೇಕಾಗುತ್ತದೆ.

ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಡಿಸೆಂಬರ್ 27ರಂದು ನಡೆಸಿದ ಐತಿಹಾಸಿಕ ʻಕನ್ನಡ ನಾಮಫಲಕ ಅಭಿಯಾನʼದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಮಗ್ರ ಕನ್ನಡ ಅನುಷ್ಠಾನ ವಿಧೇಯಕವನ್ನು ಮಂಡಿಸಿ ಈಗಾಗಲೇ ವಿಧೇಯಕಕ್ಕೆ ರಾಜ್ಯಪಾಲರೂ ಸಹ ಸಹಿ ಹಾಕಿರುವುದರಿಂದ ಅದು ಕಾನೂನಾಗಿ ಜಾರಿಗೆ ಬಂದಿದೆ. ಹೀಗಿದ್ದರೂ ಬೆಂಗಳೂರಿನಲ್ಲಿ ಇನ್ನೂ ಹಲವೆಡೆ ನಾಮಫಲಕಗಳು ಬದಲಾಗಿಲ್ಲ. ಅವರು ಮಾರ್ಚ್ 14ರ ನಂತರ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ಬಿಸಿಯನ್ನು ಅನುಭವಿಸಬೇಕಾಗುತ್ತದೆ.

ಕನ್ನಡ ವಿಧೇಯಕ ಜಾರಿಗೆ ಬಂದ ಹಿನ್ನೆಲೆಯಲ್ಲಿ ಮಾರ್ಚ್ 5ರಂದು ರಾಜ್ಯದ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಾಗೃತಿ ಮೆರವಣಿಗೆಗಳನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಕಾನೂನಿನ ಪ್ರಕಾರ ಶೇ.60 ರಷ್ಟು ಕನ್ನಡ ಅಕ್ಷರಗಳೊಂದಿಗೆ ಅಗ್ರಸ್ಥಾನದಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸಲಾಗುವುದು. ಮಾರ್ಚ್ 14ರ ನಂತರವೂ ನಾಮಫಲಕಗಳು ಬದಲಾಗದಿದ್ದರೆ ಎಲ್ಲ ಜಿಲ್ಲೆಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ರೂಪಿಸಲಿದೆ.

ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಭಾಗದ ಸ್ಥಳೀಯ ಆಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಕಾನೂನಿನ ಅನುಷ್ಠಾನದ ವಿಷಯದಲ್ಲಿ ಬೇಜವಾಬ್ದಾರಿ ತೋರಿದರೆ ಅಧಿಕಾರಗಳ ವಿರುದ್ಧವೂ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಸಂಘಟಿಸಲಿದೆ.

ರಾಜ್ಯದ ಪ್ರತಿ ನಗರ, ಪಟ್ಟಣ, ಹಳ್ಳಿಯ ನಾಮಫಲಕಗಳೂ ಕನ್ನಡೀಕರಣವಾಗುವವರೆಗೆ ಕರ್ನಾಟಕ ರಕ್ಷಣಾ ವೇದಿಕೆ ವಿರಮಿಸುವ ಪ್ರಶ್ನೆಯೇ ಇಲ್ಲ. ಪೊಲೀಸರ ಹತ್ತಾರು ಕೇಸುಗಳು, ಜೈಲು ಶಿಕ್ಷೆ ಎಲ್ಲವನ್ನು ಅನುಭವಿಸಿ ನಾವು ಹೋರಾಟ ರೂಪಿಸಿದ್ದೇವೆ. ನಾಮಫಲಕ ಅಭಿಯಾನ ನೂರಕ್ಕೆ ನೂರು ಯಶಸ್ವಿಯಾಗುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ.

– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

Leave a Reply