ಬೆಂಗಳೂರು: ಪ್ರಸ್ತುತ ರಾಜ್ಯದಲ್ಲಿ 144 ಲಕ್ಷಟನ್ ಮೇವು ಲಭ್ಯವಿದ್ದು, ಮುಂದಿನ 27 ವಾರಗಳ ಬಳಕೆಗೆ ಸಾಕಾಗುತ್ತದೆ. ಅಲ್ಲದೆ 25 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಕರೆಯಲಾಗಿದೆ. ಅವಶ್ಯಕತೆ ಬಂದ ಕೂಡಲೇ ಮೇವಿನ ದಾಸ್ತಾನನ್ನು ಪೂರೈಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳ ಮಾಸಿಕ ಸಭೆಯ ನಡುವೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮೇವಿನ ಕಿಟ್ ಖರೀದಿಗೆ ಎಸ್ ಡಿ ಆರ್ ಎಫ್ ಅಡಿ ಪಶುಸಂಗೋಪನೆ ಇಲಾಖೆಗೆ 20 ಕೋಟಿ ನೀಡಲಾಗಿದ್ದು, ಆ ಹಣದಲ್ಲಿ 7.62 ಲಕ್ಷ ಮಿನಿ ಕಿಟ್ ಗಳನ್ನು ಖರೀದಿಸಲಾಗಿದೆ. ಈ ಕಿಟ್ಗಳನ್ನು 4.19 ಲಕ್ಷ ರೈತರಿಗೆ ಉಚಿತವಾಗಿ ನೀಡಲಾಗಿದೆ. ಈ ಮೂಲಕ ಅಲ್ಪ ನೀರಾವರಿ ಜಮೀನಿನ ಲಭ್ಯತೆ ಇರುವ ರೈತರ ಮೂಲಕ ಮೇವು ಬೆಳೆದು ದಾಸ್ತಾನು ಮಾಡಲಾಗಿದೆ. ಅಲ್ಲದೆ, ಅಂತರ ರಾಜ್ಯ ಮೇವು ಸಾಗಾಣಿಕೆಯನ್ನು ನಿರ್ಬಂಧಿಸಿ 22/11/2023 ರಂದು ಆದೇಶ ಹೊರಡಿಸಲಾಗಿದ್ದು, ಪ್ರಸ್ತುತ ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ ಎಂದರು.
ಈಗಾಗಲೇ ಪ್ರತಿ ತಾಲೂಕಿನಲ್ಲೂ ಗೋಶಾಲೆ ಇವೆ. ಅಗತ್ಯವಿದ್ದರೆ ಎಸ್ ಡಿ ಆರ್ ಎಫ್ ಮಾರ್ಗಸೂಚಿಯ ಪ್ರಕಾರ ಅರ್ಹತೆಯಂತೆ ಹೋಬಳಿ ಮಟ್ಟದಲ್ಲೂ ಸಹ ಹೆಚ್ಚುವರಿ ಗೋಶಾಲೆ ತೆರೆಯಲು ಹಾಗೂ ಮೇವಿನ ಬ್ಯಾಂಕ್ ಸ್ಥಾಪಿಸಲು 4/12/2023ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದರು.




