ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗದ ಮೂಲಕ ಹಿಂದುಳಿದ ವರ್ಗದವರಿಗೆ ಮತ್ತು ಇತರರಿಗೆ ಮೀಸಲಾತಿಯನ್ನು ಕೊಡಲು ನಿರ್ಧರಿಸಿದಾಗ ಯಾವ ಜನ ಇದರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿ ಅರಮನೆಯಿಂದ ಹೊರಟು ಬಂದರೋ ಅದೇ ಜನಗಳ ಸಂತತಿ ಎಲ್ ಜಿ ಹಾವನೂರ್ ವರದಿ ದೇವರಾಜ ಅರಸು ಜಾರಿಗೆ ತರಲು ಹೊರಟಾಗ ವಿರೋಧಿಸಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಮುಂದೆ ವೆಂಕಟಸ್ವಾಮಿ ಆಯೋಗ. ಓ ಚನ್ನಪ್ಪ ರೆಡ್ಡಿ ಆಯೋಗ, ಇವುಗಳ ವರದಿಯನ್ನು ಸಹ ಅನುಷ್ಠಾನಕ್ಕೆ ವಿರೋಧಿಸಿದರು. ಇದೇ ಮನಸ್ಥಿತಿಯ ಮುಂದುವರೆದ ಮಂದಿ, ಕಾಂತರಾಜ್ ವರದಿಯ ಬಿಡುಗಡೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ, ದೇವರಾಜ ಅರಸು, ವೀರಪ್ಪ ಮೊಯ್ಲಿರವರಿಗೆ, ಈಗ ಸಿದ್ದರಾಮಯ್ಯನವರಿಗೆ ಬೆದರಿಕೆ ಹಾಕುತ್ತಿರುವ ಮಂದಿ ಅಂತಿಮವಾಗಿ ಹೇಳುವುದು ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂಬಂತಹ ಮಾತುಗಳನ್ನ ಹೊರತುಪಡಿಸಿ ಮತ್ತಿನ್ನೇನು ಅಲ್ಲ.
ಈ ವರದಿಯನ್ನ ಬಿಡುಗಡೆ ಮಾಡುವುದರಿಂದ ಯಾವ ಪ್ರಪಂಚವೂ ಪ್ರಳಯವಾಗುವುದಿಲ್ಲ. ವರದಿಯನ್ನ ಬಿಡುಗಡೆ ಮಾಡಿದ ಮೇಲೆ ಸದನದಲ್ಲಿ ಚರ್ಚೆಯಾಗಬೇಕು. ನಂತರ ಸರಿತಪ್ಪುಗಳ ಆಧಾರದ ಮೇಲೆ ಒಪ್ಪುವುದು ಅಥವಾ ಬಿಡುವುದು ನಿರ್ಧಾರವಾಗುತ್ತದೆ. ವರದಿ ಬಿಡುಗಡೆಯಾದ ಮರುಕ್ಷಣದಲ್ಲಿಯೇ ಯಾವ ಬದಲಾವಣೆಗಳನ್ನ ಆಡಳಿತಾತ್ಮಕವಾಗಿ, ರಾಜಕೀಯವಾಗಿ ತರಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವರದಿಯ ಬಿಡುಗಡೆಗೆ ವಿರೋಧ ಮಾಡುವುದು ಸರಿಯಲ್ಲ.
ಹಿಂದುಳಿದ ವರ್ಗದವರು ಮತ್ತು ಶೋಷಣೆಗೆ ಗುರಿಯಾದ ಸಮಾಜದವರಿಗೆ ರಾಜಕೀಯ ಸ್ಥಾನಮಾನ, ಆರ್ಥಿಕ ಸೌಲತ್ತುಗಳು, ತಲುಪಬೇಕಾದರೆ ಇಂತಹ ಜಾತಿ ಜನಗಣತಿಯ ವರದಿಗಳು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವರು. ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಜನಗಣತಿ ಏಕೆ ಎಂಬ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ಅವರು ಸಹ ಜಾತ್ಯತೀತ ರಾಷ್ಟ್ರದಲ್ಲಿ ಮಠಗಳಲ್ಲಿ ಊಟದಲ್ಲಿ ಮತ್ತು ದರ್ಶನದಲ್ಲಿ ತಾರತಮ್ಯ ಮಾಡುವಂತಹ ಸಂಗತಿಯನ್ನು ಬಿಡಬೇಕು. ಅಸ್ಪೃಶ್ಯತೆಯನ್ನ ಆರಾಧಿಸುವ ಮನಸ್ಸುಗಳನ್ನ ದೂರ ಇಡಬೇಕು. ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಎಲ್ಲರೂ ಸಮಾನ ಗೌರವದಿಂದ ಬದುಕಲು ಮೊದಲು ಅವರುಗಳು ದೊಡ್ಡತನವನ್ನು ತೋರಬೇಕು.
ಇನ್ನೂ ಅಸ್ಪೃಶ್ಯರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡಲು ಅವಕಾಶವನ್ನ ನಿರಾಕರಿಸುವ ದೇವಾಲಯಗಳ ಸಂಖ್ಯೆ ಸಾಕಷ್ಟಿದೆ. ಕಾನೂನಿಗೆ ಹೆದರಿ ಎಲ್ಲರನ್ನೂ ತೋರಿಕೆಯ ಗೌರವದಿಂದ ನಡೆಸಿಕೊಳ್ಳುವಂತಹ ವ್ಯಕ್ತಿಗಳು ಸಾಕಷ್ಟು ಇದ್ದಾರೆ. ಮೊದಲು ಮನಸ್ಸುಗಳು ಬದಲಾದರೆ, ಮನುಷ್ಯತ್ವ ಅವರಲ್ಲಿ ಮೂಡಿದರೆ ಆಗ ಜಾತಿ ಜನಗಣತಿ ಏಕೆ ಎನ್ನುವ ಪ್ರಶ್ನೆಯನ್ನು ಕೇಳುವ ಹಕ್ಕು ಅವರಿಗಿರುತ್ತದೆ. ಇಲ್ಲದಿದ್ದರೆ ಅವರ ಮಾತುಗಳಿಗೆ ಕವಡೆ ಕಾಸಿನ ಬೆಲೆಯೂ ಇರುವುದಿಲ್ಲ.
ಮಂಡಲ್ ಆಯೋಗದ ವರದಿಯನ್ನು ವಿರೋಧಿಸುವ ಸಲುವಾಗಿ ರೂಪಿಸಿದಂತಹ ಕುತಂತ್ರಗಳ ಅರಿವು ಎಲ್ಲರಿಗೂ ಇದೆ. ಹಿಂದುಳಿದ ವರ್ಗದ ಜನರಿಗೆ ಸೌಲಭ್ಯವನ್ನು ನೀಡುವ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಲು ಹಿಂದುಳಿದ ವರ್ಗದ ಯುವಕರನ್ನೇ ಎತ್ತಿ ಕಟ್ಟಿದ್ದು ಇನ್ನೂ ನೆನಪಿದೆ. ಮುಗ್ಧ ಯುವಜನರ ಮನಸ್ಸಿನಲ್ಲಿ ತಪ್ಪು ಕಲ್ಪನೆಗಳನ್ನ ಮೂಡಿಸಿ ಅವರನ್ನು ದಾರಿ ತಪ್ಪಿಸಿದ್ದು ಯಾರು ಎನ್ನುವುದು ತಿಳಿದಿದೆ. ಅವಕಾಶಗಳನ್ನು ಪಡೆದವರೇ ಪಡೆದುಕೊಳ್ಳುತ್ತಿದ್ದರೆ ಉಂಡವರೇ ಉಣ್ಣುತ್ತಿದ್ದರೆ ಅವಕಾಶ ವಂಚಿತರಿಗೆ ಅವಕಾಶಗಳು, ಹಸಿದವರಿಗೆ ಊಟ ಎಲ್ಲಿಂದ ತಾನೇ ಸಿಗುತ್ತದೆ?
ಮೀಸಲಾತಿಯ ಕಾರಣದಿಂದಾಗಿ ಒಂದಷ್ಟು ಕ್ಷೇತ್ರಗಳು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ದೊರೆತಿರುತ್ತದೆ. ಆದರೆ ಹಿಂದುಳಿದ ವರ್ಗದವರಿಗೆ ಇಂತಹ ಯಾವ ನಿಗದಿಯೂ ಇಲ್ಲ. ಕೆಲವರು ತಮ್ಮ ವೈಯಕ್ತಿಕ ಸಾಮರ್ಥ್ಯ ಮತ್ತು ನಾಯಕತ್ವದಿಂದ ಚುನಾಯಿತ ಪ್ರತಿನಿಧಿಗಳಾಗುತ್ತಿದ್ದಾರೆ. ಇದರ ನಡುವೆಯೂ ಸಹ ನೂರಾರು ಸಣ್ಣ ಸಣ್ಣ ಸಮುದಾಯದವರು ಗ್ರಾಮ ಪಂಚಾಯಿತಿ ಸದಸ್ಯರಾಗಲು ಸಾಧ್ಯವಾಗುತ್ತಿಲ್ಲ.
ಕರ್ನಾಟಕ ರಾಜ್ಯದಲ್ಲಿ ಕಳೆದ 75 ವರ್ಷದಲ್ಲಿ ದೇವರಾಜ ಅರಸು, ವೀರಪ್ಪ ಮೊಯ್ಲಿ, ಎಸ್ ಬಂಗಾರಪ್ಪ, ಧರ್ಮಸಿಂಗ್ ಮತ್ತು ಸಿದ್ದರಾಮಯ್ಯನವರು ಸೇರಿದಂತೆ ಕೇವಲ ಎರಡು ದಶಕದ ಆಡಳಿತವನ್ನು ಹಿಂದುಳಿದ ವರ್ಗದ ಸಮಾಜದವರು ಮುನ್ನಡೆಸಲು ಸಾಧ್ಯವಾಗಿರುವುದಿಲ್ಲ. ಇನ್ನು ಉಳಿದ ಐದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ರಾಜ್ಯದ ನೇತೃತ್ವ ಯಾರ ಕೈಯಲ್ಲಿದೆ ಎಂಬುದನ್ನು ತಾವೇ ಕಲ್ಪಿಸಿಕೊಳ್ಳಬಹುದು. ಚುನಾಯಿತ ಪ್ರತಿನಿಧಿಗಳ ಸಂಖ್ಯೆಯಲ್ಲೂ ಸಹ ಹಿಂದುಳಿದ ವರ್ಗದವರ ಪ್ರಮಾಣ ಅವರ ಜನಸಂಖ್ಯೆಗೆ ಅನುಗುಣವಾಗಿ ಎಂದೂ ಸಹ ಹೊಂದಲು ಅವಕಾಶವ ಒದಗಿ ಬಂದಿರುವುದಿಲ್ಲ. ಹಲವಾರು ದಶಕಗಳ ಕಾಲ ಸಾರ್ವಜನಿಕ ಬದುಕಿನಲ್ಲಿದ್ದು ಎಲ್ಲ ಸಮಾಜದವರ ಸಹಕಾರದಿಂದ ರಾಜಕೀಯ ಸ್ಥಾನಮಾನವನ್ನು ಪಡೆದಂತಹ ನಾಯಕರುಗಳು ಹಿಂದುಳಿದ ವರ್ಗದವರ ವಿಚಾರದಲ್ಲಿ ಅಸಹನೆ ವ್ಯಕ್ತಪಡಿಸುತ್ತಿರುವುದು ಅವರಲ್ಲಿರುವ ಶ್ರೇಷ್ಠತೆಯ ಅಹಂಕಾರದ ಸಂಕೇತಗಳಾಗಿವೆ.
– ಕೆ ಎಸ್ ನಾಗರಾಜ್, ಬೆಂಗಳೂರು




