ಬೆಳಗಾವಿ: ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಭರ್ಜರಿ ವಿದ್ಯಮಾನಗಳು ನಡೆದಿವೆ. ರಾಜಕೀಯ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಜಿಲ್ಲೆಯ ಮೇಲೆ ಬಿಗಿ ಹಿಡಿತ ಹೊಂದಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತವರ ಸೋದರರಿಗೆ ಹಿನ್ನಡೆಯಾಗಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಮತ್ತೊಂದೆಡೆ ಜಾರಕಿಹೊಳಿ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದರೂ ತಮ್ಮದೇ ಆದ ಪ್ರತ್ಯೇಕ ತಂತ್ರಗಾರಿಕೆ ಮೂಲಕ ಸೆಡ್ಡು ಹೊಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಮಂತ್ರಿ ಲಕ್ಷ್ಮಿ ಹೇಬ್ಬಾಳ್ಕರ್ ತಮ್ಮ ಪ್ರಾಬಲ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಸಹಕಾರ ಮತ್ತು ಸಕ್ಕರೆ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಅಥವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗುವುದು ಮಂತ್ರಿಗೆ ಸಮಾನ ಎಂಬಂತೆ ಬೆಳಗಾವಿಯಲ್ಲಿ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಎರಡು ಕ್ಷೇತ್ರಗಳ ಮೇಲೆ ಪ್ರಾಬಲ್ಯ ಸಾಧಿಸಲು ಜಿಲ್ಲೆಯ ರಾಜಕಾರಣಿಗಳು ಸಾಕಷ್ಟು ಪ್ರಯತ್ನ ನಡೆಸುತ್ತಾರೆ.
ಸತೀಶ್ ಜಾರಕಿಹೊಳಿ ಹಲವಾರು ವರ್ಷಗಳಿಂದ ಇವುಗಳ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಇವರಿಗೆ ಎದುರಾಳಿಯಾಗಿ ಬಿಜೆಪಿಯ ರಮೇಶ್ ಕತ್ತಿ ಕಾಂಗ್ರೆಸ್ಸಿನ ಎ.ಬಿ. ಪಾಟೀಲ್ ಪ್ರಕಾಶ್ ಹುಕ್ಕೇರಿ, ಪ್ರಭಾಕರ ಕೋರೆ ಮತ್ತಿತರರು ಪ್ರಾಬಲ್ಯ ಸಾಧಿಸುತ್ತಿದ್ದಾರೆ.
ಸಹಕಾರ ಮತ್ತು ಸಕ್ಕರೆಯ ರಾಜಕಾರಣಕ್ಕೆ ಇದ್ದ ವಿಷಯಕ್ಕೆ ಬಂದರೆ ಇಲ್ಲಿ ನಾಯಕರು ತಾವು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುವ ಪಕ್ಷವನ್ನು ಬಿಟ್ಟು ಜಿಲ್ಲೆಯ ಮಟ್ಟಿಗೆ ಬೇರೆಯ ರೀತಿಯ ಹೊಂದಾಣಿಕೆಯನ್ನು ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಇದೇ ರೀತಿಯಲ್ಲಿ ಈಗ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಆಡಳಿತ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸೋದರರು ಮತ್ತು ಬಿಜೆಪಿ ಮುಖಂಡ ಮಾಜಿ ಸಂಸದ ಅಣ್ಣ ಸಾಹೇಬ ಜೊಲ್ಲೆ ಹೊಂದಾಣಿಕೆ ಮಾಡಿಕೊಂಡು ಪ್ರಯತ್ನ ನಡೆಸಿದ್ದರು. ಆದರೆ ಈ ಪ್ರಯತ್ನ ವಿಫಲವಾಗುವ ಮೂಲಕ ಸಚಿವ ಜಾರಕಿಹೊಳಿ ಮತ್ತವರ ಸಹೋದರರು ಹಿನ್ನಡೆ ಅನುಭವಿಸಿದ್ದಾರೆ.
ಸಹಕಾರ ಸಂಘದ ಎಲ್ಲ 15 ಸ್ಥಾನಗಳನ್ನೂ ರಮೇಶ ಕತ್ತಿ ಹಾಗೂ ಶಾಸಕ ನಿಖಿಲ್ ಕತ್ತಿ ನೇತೃತ್ವದ ಪ್ಯಾನಲ್ ಗೆದ್ದುಕೊಂಡಿದೆ. ಒಂದು ತಿಂಗಳಿಂದ ಹುಕ್ಕೇರಿಯಲ್ಲೇ ಬೀಡುಬಿಟ್ಟಿದ್ದ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ.
ಭಾನುವಾರ ನಡೆದ ಚುನಾವಣೆ ವೇಳೆ ಶೇ 67.54ರಷ್ಟು ಮತದಾನವಾಗಿದ್ದು, ಸೋಮವಾರ ನಸುಕಿನ 3 ಗಂಟೆಯವರೆಗೂ ಮತ ಎಣಿಕೆ ನಡೆಯಿತು. ಒಂದೊಂದೇ ಕ್ಷೇತ್ರದ ವಿಜೇತರ ಹೆಸರನ್ನು ಹೇಳುತ್ತಿದ್ದಂತೆ ಕತ್ತಿ ಕುಟುಂಬದ ಬೆಂಬಲಿಗರು ಇನ್ನಿಲ್ಲದ ಉತ್ಸಾಹದಿಂದ ಚೀರಾಟ, ಕುಣಿದಾಟ ನಡೆಸಿದರು. ಬೆಳಿಗ್ಗೆ 6ರ ಹೊತ್ತಿಗೆ ಫಲಿತಾಂಶ ಪೂರ್ಣ ಪ್ರಕಟಿಸಲಾಯಿತು.
ಆರಂಭದಲ್ಲಿ ಮೀಸಲಾತಿ ಕ್ಷೇತ್ರಗಳಾದ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗ ಹಾಗೂ ಮಹಿಳಾ ಮೀಸಲು ಸ್ಥಾನಗಳ ಫಲಿತಾಂಶಗಳು ಹೊರಬಿದ್ದವು. ನಂತರ ಸಾಮಾನ್ಯ ಕ್ಷೇತ್ರದಲ್ಲೂ ಎಲ್ಲರೂ ರಮೇಶ ಕತ್ತಿ ಗುಂಪಿನವರೇ ನಿರ್ದೇಶಕ ಸ್ಥಾನಗಳನ್ನು ಪಡೆದರು.
ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿ ಹಲವು ಬೆಂಬಲಿಗರೂ ತಡರಾತ್ರಿಯವರೆಗೂ ಮತ ಎಣಿಕೆ ಕೇಂದ್ರದ ಬಳಿಯೇ ಹಾಜರಿದ್ದರು. ಆದರೆ, ಮೀಸಲು ಕ್ಷೇತ್ರಗಳಲ್ಲಿ ಅವರ ಪ್ಯಾನಲ್‌ಗೆ ಸೋಲು ಉಂಟಾದಾಗ ಒಬ್ಬೊಬ್ಬರಾಗಿ ಸ್ಥಳದಿಂದ ನಿರ್ಗಮಿಸಿದರು.
9 ಸ್ಥಾನಗಳನ್ನು ಗೆಲ್ಲುತ್ತಿದ್ದಂತೆ ರಮೇಶ ಕತ್ತಿ ಗುಂಪಿನ ಬೆಂಬಲಿಗರು ವಿಜಯೋತ್ಸವ ಆರಂಭಿಸಿದರು. ಎಲ್ಲೆಡೆ ಜನಸಾಗರ ಸೇರಿತ್ತು. ಸಿಳ್ಳೆ, ಕೂಗಾಟ, ಜೈಕಾರಗಳು ಮುಗಿಲು ಮುಟ್ಟಿದವು.
ಫಲಿತಾಂಶ ಪ್ರಕಟವಾದ ಬಳಿಕ ಗುಂಪಾಗಿ ಸೇರಿ ಕುಣಿದಾಡಿದ ಕತ್ತಿ ಕುಟುಂಬದ ಬೆಂಗಲಿಗರು ತೀವ್ರ ಚೀರಾಟ, ಕೂಗಾಟ ಶುರು ಮಾಡಿದರು. ಜನಸಂದಣಿಯಿಂದ ದಾಟುತ್ತಿದ್ದ ಸಚಿವ ಸತೀಶ ಜಾರಕಿಹೊಳಿ ಅವರ ಬೆಂಬಲಿರಿಗೆ ಸೇರಿದ ಕಾರನ್ನು ಕೈಯಿಂದ ಗುದ್ದಿದರು. ಇದೇ ವೇಳೆ ಕಲ್ಲೊಂದು ತೂರಿಬಂದು ಪಕ್ಕದಲ್ಲಿ ಬಿದ್ದು ಗೊಂದಲಕ್ಕೆ ಕಾರಣವಾಯಿತು. ಅನಂತರ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು.




