ದಾವಣಗೇರಿಯಲ್ಲಿ ವೀರಶೈವ ಗುರುಗಳ ಜಾತ್ರೆ (ಶೃಂಗ ಸಭೆ) ಮುಗಿಯಿತು. ಜಗತ್ತಿನ ಗುರುಗಳ ದರ್ಶನಾಶೀರ್ವಾದಕ್ಕಾಗಿ ಜಗತ್ತಿನಲ್ಲಿರುವ ಶಿಷ್ಯರು ಬರಲೇ ಇಲ್ಲ. ನಲವತ್ತಮೂರು ಲಕ್ಷ ವರ್ಷಗಳ ಪೂರ್ವದಲ್ಲಿ ಸ್ಥಾಪಿತವಾದ ಪಂಚಪೀಠಗಳ ಪೀಠಾಧೀಶ್ವರರ ದರ್ಶನಾಪೇಕ್ಷಿಗಳಿಲ್ಲದ ಜಾತ್ರೆ, ಕೇವಲ ಶಾಮನೂರ ಸಾಹುಕಾರರ ಮನೆಯವರಿಂದ ಮಾತ್ರ ತುಂಬಿದ ಕಲ್ಯಾಣ ಮಂಟಪದಲ್ಲಿ ನಡೆದ ಶೃಂಗ ಸಭೆ ಮುಕ್ತಾಯಗೊಂಡಿತು. ಲಕ್ಷ ಲಕ್ಷ ವರ್ಷಗಳ ಪೂರ್ವದಲ್ಲಿ ಸ್ಥಾಪಿತವಾದ, ವಿಶ್ವದೆಲ್ಲೆಡೆ ಪಸರಿಸಿದ ಧರ್ಮದ ಅನುಯಾಯಿಗಳು ಇಷ್ಟೆಯಾ? ಎಂದು ಅನೇಕರು ಕೇಳಿದರಂತೆ. ಹತ್ತೊಂಬತ್ತು ವರ್ಷಗಳ ತರುವಾಯ ಸೇರಿದ ಐದು ಗುರು ವರ್ಗದ ಪೂಜ್ಯರ ದರ್ಶನಕ್ಕಾಗಿ ವಿಶ್ವದೆಲ್ಲೆಡೆಯಿಂದ ಬರಬೇಕಾದ ಭಕ್ತರು ಬೇಡ, ರಾಜ್ಯದ ಭಕ್ತರೂ ಬೇಡ, ಜಿಲ್ಲೆಯ ಭಕ್ತರೂ ಬೇಡ, ಕಡೆ ಪಕ್ಷ ಒಂದೂರಿನ ಭಕ್ತರಾದರೂ ಬಂದಿದ್ದರೆ ನಮ್ಮ ಐತಿಹಾಸಿಕ ಪೂಜ್ಯರ ಅಟಾಟೋಪಕ್ಕೆ ಮಿತಿಯೇ ಇರುತ್ತಿರಲಿಲ್ಲವೇನೊ?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಭರ್ಜರಿ ಜಾತ್ರೆಯಲ್ಲಿ, ಭರ್ಜರಿ ಜನ ಸೇರುತ್ತಾರೆಂದು, ಭರ್ಜರಿ ಸರಕಿನೊಂದಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿಗಳು, ಅವರ ವಂದಿಗರು, ಮಾಜಿ ಸಚಿವರುಗಳಿಗೂ ಭ್ರಮನಿರಸನವಾಗಿ ಸಭೆ ಕಳೆಗುಂದಿತ್ತಂತೆ. ೨೦೨೮ರಲ್ಲಿ ಮಾಜಿಗಳಾಗಲಿರುವ ಈಗಿರುವ ಕೆಲ ಆಳುವ ಪಕ್ಷದ ಪುಡಿ ಹಾಲಿಗಳಿಗೆ ವೇದಿಕೆ ಸಿಕ್ಕಿದ್ದೆ ತಮ್ಮ ಪೂರ್ವಜನ್ಮದ ಪೂಣ್ಯವೆಂಬಂತೆ ಪೀಠಾಧೀಶರನ್ನು ಹೊಗಳಿದ್ದೆ ಹೊಗಳಿದ್ದಂತೆ. ಹೊಗಳಿಕೆಯ ಸರಕು ಮಾತ್ರ ಧಾರಾಳವಾಗಿ ಖರ್ಚಾಯಿತಂತೆ. ಸೂರ್ಯ ಚಂದ್ರರಿಗಿಂತ ಹೆಚ್ಚಿಗೆ ಪ್ರಕಾಶಿಸುವವರು ಈ ಪಂಚಪೀಠಾಧೀಶರೆಂದರಂತೆ, ಇವರಿಂದಲೇ ಹುಟ್ಟು ಸಾವೆಂದರಂತೆ. ಇವರಿಂದಲೇ ತಾಯಿಯ ಗರ್ಭದಲ್ಲಿರುವ ಗಂಡು ಮಗು ಸಹ ಹೆಣ್ಣಾಗುವುದೆಂದರಂತೆ. ಇವರಿಂದಲೇ ಸಮಸ್ತ ಮಾನವಕಲ್ಯಾಣವೆಂದರಂತೆ. ನೀವು ಇವರನ್ನು ಕಾಣಲು ಎರಡು ವರ್ಷ ಕಾಯಬೇಕಿಲ್ಲ, ಇವರನ್ನು ವರ್ಷಕ್ಕೊಮ್ಮೆ ದರ್ಶನ ಮಾಡಿಸುತ್ತೇವೆಂದು ಭಾಷೆ ಕೊಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡುತ್ತವೆ. ಪಂಚಪೀಠಾಧೀಶ್ವರರು ಪ್ರತಿವರ್ಷ ತಮ್ಮೆದುರಲ್ಲಿ ಪ್ರತ್ಯಕ್ಷರಾಗಿ ಭಕ್ತರಿಗೆ ಸುಭಿಕ್ಷ ದಿನಗಳನ್ನು ಕರುಣಿಸಿ, ಮಳೆ ಬೆಳೆಯಿಂದ ನಾಡು ಸಮೃದ್ಧವಾಗುವಂತೆ ಮಾಡುತ್ತೇವೆ ಎಂದರಂತೆ.
ಕಲ್ಯಾಣ ಮಂಟಪದಲ್ಲಿ ಜಾತ್ರೆ ಮಾಡಲು ಬಂದ ಭಕ್ತಾದಿಗಳು ಬೆಂಡು ಬತ್ತಾಸು ಖರೀದಿಸದೆ ಶಾಮನೂರಜ್ಜನ ಸಿಹಿಸಿಹಿ ಕಜ್ಜಾಯವೇ ಶ್ರೇಷ್ಠ ಎನ್ನುತ್ತ ಎಗ್ಗಳ ಬಡಿದರಂತೆ. ಸೇರಿದ್ದ ನಾಯಕರೂ ಸಹ ಭರ್ಜರಿ ಸಿಹಿ ಪ್ರಸಾದ ಸವಿದು ಸರ್ಕಾರಿ ವಾಹನಗಳಲ್ಲಿ ಹೊರಟು ಹೋದರಂತೆ. ಕಾಟಾಚಾರಕ್ಕೆ ವೀರಶೈವ ಲಿಂಗಾಯತರು ಒಂದಾಗಬೇಕೆಂಬ ಸವಕಲು ನಿರ್ಣಯಗಳನ್ನೂ ಮಂಡಿಸಿ, ಓದಿಯೂ ಹೇಳಿದರಂತೆ. ಅದರಿಂದ ಲಾಭ ಪಡೆಯುವವರು ಜೈಕಾರ ಹಾಕಿದರಂತೆ.
ಜಗತ್ತು ಆರ್ಟಿಫಿಸಿಯಲ್ ಇಂಟಿಲಿಜೆನ್ಸ್ ನತ್ತ ತಿರುಗಿಕೊಳ್ಳುವಾಗ ನಮ್ಮ ಮೂರ್ಖ ಸಂತಾನ ಇನ್ನೂ ಇದೆಯಲ್ಲ ಎಂದು ಹಿರಿಹಿರಿ ಹಿಗ್ಗಿದರಂತೆ ಪಂಚಪೀಠಾಧೀಶ್ವರರು. ತಮ್ಮನ್ನು ಸೂರ್ಯ ಚಂದ್ರರಿಗೆ ಹೋಲಿಸಿದ ನಾಯಕರಿಗೆ ತಮ್ಮ ಪಾದದಡಿಯಲ್ಲಿ ಸ್ಥಳ ನೀಡಿ, ತಲೆಯ ಮೇಲೆ ಕೈ ಸವರಿದರಂತೆ. “ಬೇಷ್.. ಬೇಷ್… ನಿಮ್ಮಪ್ಪನಲ್ಲದೆ ಅವನಪ್ಪನಂತೆ ನೀನಿರುವಿ. ನಮ್ಮ ಆಶೀರ್ವಾದ ನಿಮ್ಮಪ್ಪನ ಮೇಲೆಯೂ ಇತ್ತು, ಇನ್ನುಮುಂದೆ ನಿನ್ನ ಮೇಲೆಯೂ ಸದಾ ಇರಲಿದೆ” ಎಂದು ಆಶೀರ್ವಾದದ ಸುರಿಮಳೆಗೈದರಂತೆ.
ಇವೆ ಚಿತ್ರಗಳನ್ನು ನನ್ನ ಕಣ್ಣುಗಳು ನನ್ನ ಬಾಲ್ಯದಿಂದಲೂ ಪದೆ ಪದೆ ನೋಡುತ್ತಲೇ ಬಂದಿವೆ. ನಮ್ಮ ತಂದೆಯವರ, ಅವರ ತಂದೆಯವರ ಬಾಲ್ಯದಿಂದಲೂ ಇವೇ ಚಿತ್ರಗಳು ಮರುಕಳಿಸುತ್ತಲಿವೆ. ಈ ಚಿತ್ರಗಳಲ್ಲಿ ಬದಲಾಗಿದ್ದು ಕೇವಲ ಬಣ್ಣ ಮಾತ್ರ. ಮೊದಲು ಕಪ್ಪು ಬಿಳುಪಿನಲ್ಲಿರುತ್ತಿದ್ದ ಚಿತ್ರಗಳಿಂದು ಬಣ್ಣದಲ್ಲಿ ಮೂಡುತ್ತವೆ. ಅಷ್ಟೇ ವ್ಯತ್ಯಾಸ.
ನಾನು ಕಂಡಂತೆ ಈ ಸಮಾಜದಿಂದ ಇವರಿಗೆ ಮಾತ್ರ ಲಾಭವಾಗಿದೆ. ಮುಗ್ಧಭಕ್ತರ ಕಾಣಿಕೆಯಿಂದ ಸ್ವಾಮೀಜಿಗಳಿಗೆ ಬಹು ಬೆಲೆಯ ಮರ್ಸಿಡಿಸ್ ಕಾರುಗಳ ಸಂದಾಯವಾಗಿವೆ. ಪಂಚತಾರಾ ಹೊಟೆಲುಗಳನ್ನು ಮೀರಿಸುವ ಮಠಗಳನ್ನು ಕಟ್ಟಿ, ಕೈಗೊಬ್ಬ ಕಾಲಿಗೊಬ್ಬ ಸೇವಕರನ್ನೂ ಈ ಸಮಾಜ ಇವರಿಗೆ ಒದಗಿಸಿದೆ.
ರೇಣುಕರೇ ಇರಲಿ, ಬಸವಣ್ಣನವರೇ ಇರಲಿ ಅಥವಾ ಇನ್ನಾವ ದಾರ್ಶನಿಕರೇ ಇರಲಿ ಇವರ ಸಿದ್ಧಾಂತಗಳನ್ನು ಅಥವಾ ಈ ಶರಣರು ಮಾಡಿದ ಜನಹಿತ ಕಾರ್ಯಗಳನ್ನು ಜನಮಾನಸಕ್ಕೆ ಮುಟ್ಟಿಸಿದ್ದಾರೆಯೆ?
ನಾಲ್ವತ್ತಮೂರು ಲಕ್ಷ ವರ್ಷಗಳು ಇತಿಹಾಸ ಬೇಡ, ಒಂಬತ್ತು ಶತಮಾನಗಳ ಹಿಂದಾದ ಸಮಾಜಕಲ್ಯಾಣದ ವಿಷಯಗಳನ್ನಾದರೂ ಭಕ್ತರಿಗೆ ಪ್ರತಿಪಾದಿಸಿದ್ದರೆ ನಾವಿರುವ ಮೌಢ್ಯತೆಯಿಂದ ಹೊರಬರಬಹುದಾಗಿತ್ತು. ಮೇಲು/ಕೀಳು ಎಂಬ ಭೇದವಿಲ್ಲದ ಸರ್ವ ಜನಾಂಗಕ್ಕೆ ಶಿಕ್ಷಣ ನೀಡಬಹುದಾಗಿತ್ತು. ಜಾತಿ ವಿನಾಶವನ್ನುತೊಳೆಯಬಹುದಾಗಿತ್ತು, ದೇವರ ಶೋಷಣೆಯಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಪುರೋಹಿತರ ಶೋಷಣೆಯಿಂದ ರಕ್ಷಿಸಿಕೊಳ್ಳಬಹುದಾಗಿತ್ತು. ನಮ್ಮಲ್ಲಿಯೂ ಸರ್ವಶ್ರೇಷ್ಠ ವಿಶ್ವವಿದ್ಯಾಲಯಗಳಿರಬಹುದಿತ್ತು. ಅವುಗಳಿಂದ ವಿಶ್ವವಿಖ್ಯಾತ ವಿಜ್ಞಾನಿಗಳು, ತಂತ್ರಜ್ಞಾನಿಗಳು ಹೊರಬರಬಹುದಿತ್ತು. ರೋಗ ರುಜಿನಗಳಿಗೆ ಔಷಧಿಗಳನ್ನು ಒದಗಿಸಬಹುದಾಗಿತ್ತು. ಕೊನೇ ಪಕ್ಷ ಸ್ವಚ್ಛ ಪರಿಸರದೊಂದಿಗೆ, ಸ್ವಸ್ಥ ಮನಸ್ಸುಗಳ ನಾಗರಿಕರನ್ನಾದರೂ ಮಾಡಬಹುದಿತ್ತು.
ಎರಡು ಸಾವಿರ ವರ್ಷಗಳ ಹಿಂದೆ ಕ್ರೈಸ್ತರು ಬಂದರು, ರೋಗಿಗಳನ್ನು ಆರಾಧಿಸಿದರು, ಶಿಕ್ಷಣ ರಹಿತರಿಗೆ ಶಿಕ್ಷಣ ನೀಡಿದರು. ಹೊಸ ಹೊಸ ಅವಿಷ್ಕಾರಗಳನ್ನು ತಂದರು, ಮಾನವನನ್ನು ಮೌಢ್ಯದಿಂದ ಹೊರತಂದು ಸೃಷ್ಟಿಕರ್ತನಿಗೆ ಸೆಡ್ಡು ಹೊಡೆಯುವ ವಿಜ್ಞಾನವನ್ನು ಜನತೆಗೆ ನೀಡಿದರು.
ಹದಿಮೂರುನೂರ ವರ್ಷಗಳ ಹಿಂದೆ ಮುಸ್ಲಿಂರು ಬಂದರು, ಭೂಮಿಯ ಮೇಲೆ ಬದುಕುತ್ತಿರುವಲ್ಲರೂ ಸಮಾನರೆಂದರು, ಅಲ್ಲಾನ ಎದರು ಮೇಲೂ ಕೀಳೂ ಬೇಡವೆಂದರು, ಹತ್ತು ಹಲವು ದೇವರುಗಳಿಲ್ಲ, ಅವನೊಬ್ಬನೆ ಅವನನ್ನು ಪ್ರೀತಿಸಿ, ಅವನನ್ನು ಕಲ್ಲಲ್ಲಿ, ಮಣ್ಣಲ್ಲಿ, ಕಟ್ಟಿಗೆಯಲ್ಲಿ ಹುಡುಕದೆ, ಅವನು ಅಸ್ತಂಗತನಾದ ದಿಕ್ಕಿನತ್ತ ಮುಖಮಾಡಿ ಪ್ರಾರ್ಥನೆ ಮಾತ್ರ ಮಾಡಿಬಿಡಿ ಎಂದು ಸಮ ಸಮಾಜದ ಕಲ್ಪನೆ ತಂದರು.
ಲಿಂಗಾಯತ ಮತ್ತು ವೀರಶೈವ ಒಂದೇ ಎಂದು ಹೇಳುವ ನೀವು ನಿಮ್ಮ ಹಿಂಬಾಲಕರು ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇವೆ. ನಿಮನ್ನೂ ಸಹ ಗೌರವಿಸಿ ಪೂಜಿಸುತ್ತೇವೆ. ಆದರೆ ನಮ್ಮಲ್ಲಿರುವ ಕೆಲವು ಸಂಶಯಗಳನ್ನು ನಿವಾರಿಸಿ ಬುದ್ಧಿ.
ವೈಜ್ಞಾನಿಕವಾಗಿ ಸೃಷ್ಟಿಯಾದ ಜಗತ್ತಿನಲ್ಲಿ ಮಾನವನ ಇರುವಿಕೆಯು ಕೇವಲ ಅರವತ್ತು ಸಾವಿರ ವರ್ಷಗಳಿಂದೀಚಿಗೆ ಎಂದು ಜೀವ ಶಾಸ್ತ್ರಜ್ಞರು ಹೇಳಿದಾಗ ನೀವು ‘ಇಲ್ಲ ಜೀವಗಳು ನಾಲ್ವತ್ತುನಾಲ್ಕು ಲಕ್ಷ ವರ್ಷಗಳಿಂದ ಇವೆ’ ಎಂದೇಕೆ ಸಿದ್ದಪಡಿಸಲಿಲ್ಲ?
ಪೂಜ್ಯರಾದ ನೀವುಗಳು ನಾಲ್ವತ್ತನಾಲ್ಕು ಲಕ್ಷ ವರ್ಷಗಳ ಪೂರ್ವದಲ್ಲಿ, ಶಿಲೆಯಲ್ಲಿ ಉದ್ಭವವಾಗಿರುವುದನ್ನು ವೈಜ್ಞಾನಿಕವಾಗಿ ಸಿದ್ದಪಡಿಸಿ. ಅಂದಿನಿಂದ ಇಂದಿನವರೆಗೂ ನೀವು ಮಾಡಿದ ಜನ ಕಲ್ಯಾಣದ ವಿವರ ಹಾಗು ಅವುಗಳಿಗೆ ವೈಜ್ಞಾನಿಕ ಆಧಾರ ನೀಡುವಿರಾ?
ಇಷ್ಟೊಂದು ದೀರ್ಘ ಇತಿಹಾಸವಿರುವ ಹಿಂದೂ ವೀರಶೈವ ಧರ್ಮವು ಇಂದಿಗೂ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲ ಜಿಲ್ಲೆಗಳ ಗಡಿಗಳಾಚೆ ಏಕೆ ಪಸರಿಸಲಿಲ್ಲ? ಎರಡು ಸಾವಿರ ವರ್ಷದ ಪೂರ್ವದಲ್ಲಿ ಹುಟ್ಟಿದ ಧರ್ಮಗಳು ಜಗತ್ತಿನಾದ್ಯಂತ ಪಸರಿಸಿರುವಾಗ ಲಕ್ಷಲಕ್ಷ ವರ್ಷಗಳ ಪೂರ್ವದಲ್ಲಿ ಹುಟ್ಟಿದ ವೀರಶೈವ ಧರ್ಮವೇಕೆ ಜಗತ್ತಿನಾದ್ಯಂತ ಪಸರಿಸಿಲ್ಲ ಮತ್ತು ಜನಪ್ರಿಯತೆ ಗಳಿಸಲಿಲ್ಲ?
ನಿಮ್ಮ ಶಿಕ್ಷಣದಿಂದ, ನಿಮ್ಮ ಸಾಹಿತ್ಯದಿಂದ, ನಿಮ್ಮ ವೈಜ್ಞಾನಿಕ ದೃಷ್ಟಿಕೋನದಿಂದ ಏನಾದರು ವೈಜ್ಞಾನಿಕ ಅವಿಷ್ಕಾರಗಳಾಗಿವೆಯಾ ಬುದ್ಧಿ?
ನೀವಾಡುವ “ಮಾನವ ಕಲ್ಯಾಣ” ದಿಂದ ಯಾರ ಕಲ್ಯಾಣವಾಗಿದೆ? ಲಕ್ಷ ಲಕ್ಷ ವರ್ಷಗಳಿಂದ ತಾವು ಉಪದೇಶ ಮಾಡುತ್ತಲೇ ಬಂದಿದ್ದರೆ ಇಂದಿಗೂ ವರ್ಣ, ವರ್ಗ, ಲಿಂಗಭೇದವನ್ನು ನಾವು ನೀವು ಕಾಣುತ್ತಿಲ್ಲವೆ? ನಿಮ್ಮ ಸಿದ್ಧಾಂತವು ಕೇವಲ ಉಳ್ಳವರ ಮಾನವ ಕಲ್ಯಾಣವೆ? ಧರ್ಮ, ದೇವರು, ಆರಾಧನೆ ಕೇವಲ ಉಳ್ಳವರ ಸ್ವತ್ತೇ? ಮಾನವನೊಂದಿಗೆ ಹುಟ್ಟಿದ ದೇವರಿಂದ ಉವಾಚವಾದ ದೇವಭಾಷೆಯಾದ ಸಂಸ್ಕ್ರತವು ಯಾಕೆ ಜಗತ್ತಿನ ಸಂಪರ್ಕ ಭಾಷೆಯಾಗಲಿಲ್ಲ? ಈ ದೇವಭಾಷೆಯನ್ನೇಕೆ ಜನರಿಂದ ತಾವುಗಳು ಏಕೆ ಮುಚ್ಚಿಟ್ಟಿರಿ? ಲಕ್ಷ ಲಕ್ಷ ವರ್ಷಗಳಿಂದ ಸಂವಹಿಸುವ ಭಾಷೆ ಹೇಗೆ ಜನಮಾನಸದಿಂದ ದೂರವಾಯಿತು? ದೇವಭಾಷೆಯನ್ನು ಅಥವಾ ನಿಮ್ಮ ಮಾತೃಭಾಷೆಯನ್ನು ನೀವೇ ಕೊಂದಿರಾ?
ಕಾಣದ ದೇವರ ಭಾಷೆಯೆಂದು ಹೆಸರಿಸಿ ಅದನ್ನು ಸಾಮಾನ್ಯರಿಂದ ಮುಚ್ಚಿಟ್ಟು ಕಾಣದ ದೇವರಿಗೆ ಅರ್ಪಿಸಿ ಅದರಿಂದ ನೀವು ಸಾಧಿಸಿದ್ದೇನು? ಜನರನ್ನು ಮೂರ್ಖ ಮಾಡುವ ಉದ್ದೇಶ ಮಾತ್ರವೆ? ಒಂದು ಭಾಷೆಯನ್ನು ಕೊಂದವರು ಸಂಸ್ಕಾರಗಳನ್ನು ಹೇಗೆ ನೀಡುವಿರಿ?
ಲಕ್ಷ ಲಕ್ಷ ವರ್ಷಗಳಿಂದ ಸ್ಥಾಪಿತ ವೀರಶೈವ ಧರ್ಮದ ಸಾಧನೆ ಏನು?
ಗುರುಗಳೆ, ಇವೆಲ್ಲ ಪ್ರಶ್ನೆಗಳಲ್ಲದೆ ಅನೇಕ ಪ್ರಶ್ನೆಗಳು ನಮ್ಮ ಮನದಲ್ಲಿವೆ. ಇವೆಲ್ಲಕ್ಕೂ ಸಮರ್ಪಕ ಉತ್ತರ ನೀಡಿ, ಜನರ ಸಂಶಯಗಳನ್ನು ನಿವಾರಿಸಿ ಲಿಂಗಾಯತ/ ವೀರಶೈವ ಒಂದೇ ಎನ್ನುತ್ತ ಲಿಂಗಾಯತವನ್ನು ತಮ್ಮ ತೆಕ್ಕೆಗೆ ತಗೆದುಕೊಳ್ಳಿ. ಸತ್ಯ ಹೇಳಿದರೆ ಪುರಾಣದ ದೂರ್ವಾಸ ಮುನಿಗಳಾಗುವಿರಿ, ನೀವು ಅಂಗೈಯಲ್ಲಿ ಹಿಡಿದು ಪೂಜಿಸುವ ಇಷ್ಟಲಿಂಗವನ್ನೂ ನೀಡಿದ್ದು ಬಸವಣ್ಣನವರು. ನೀವು ಆಚರಿಸುವ ಪಂಚಾಚಾರ ಷಟ್ ಸ್ಥಲಗಳನ್ನು ಆಚರಣೆಯಲ್ಲಿ ತಂದವರು ಲಿಂಗಾಯತ ಶರಣರು.
ನೀವು ಅಸ್ತಿತ್ವಕ್ಕೆ ಬಂದಿದ್ದೆ ಹದಿನೈದನೆಯ ಶತಮಾನದಲ್ಲಿ, ಹನ್ನೆರಡನೆಯ ಶತಮಾನಕ್ಕಿಂತ ಪೂರ್ವದಲ್ಲಿ ತಾವು ಕಾಳಾಮುಖ, ಪಾಶುಪಥ, ನಾಥ ಪಂತದವರಾಗಿದ್ದಿರಿ ಎಂಬುದನ್ನು ಇತಿಹಾಸದಿಂದ ಅರಿಯಿರಿ.
ಕೊನೆಯದಾಗಿ ಬುದ್ಧಿ ನಾವು, ನೀವೆಲ್ಲ ಸಂಸ್ಕಾರ ಪಡೆದದ್ದು ಬಸವಣ್ಣನವರಿಂದ ಮಾತ್ರ ಬುದ್ಧಿ. ಹಠ ಬಿಟ್ಟು ಸತ್ಯ ಅರಿಯಿರಿ. ನಂತರ ಹೇಳಿ ಲಿಂಗಾಯತ ವೀರಶೈವ ಒಂದೇ ಎಂದು. ಶರಣು ಶರಣಾರ್ಥಿ.
– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ




