ಖಾಸಗಿ ಎಪಿಎಂಸಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ: ಶಿವಾನಂದ ಪಾಟೀಲ್

10 months ago

ಬೆಳಗಾವಿಯ ಜೈ ಕಿಸಾನ್ ಹೋಲ್‌ಸೇಲ್‌ ವೆಜಿಟೆಬಲ್‌ ಮಾರ್ಕೆಟ್‌ ಬಂದ್‌ ಮಾಡಲು ಕ್ರಮ

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಪರವಾನಗಿ ರದ್ದುಪಡಿಸಬಹುದು: ಸಿದಗೌಡ ಮೋದಗಿ, ರಾಜ್ಯಾಧ್ಯಕ್ಷ, ಭಾರತೀಯ ಕೃಷಿಕ ಸಮಾಜ 

ಖಾಸಗಿ ಎಪಿಎಂಸಿಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಅಲ್ಲಿ ಬೌನ್ಸರ್‌ಗಳನ್ನು ಇಡಲಾಗಿದೆ. ಸರ್ಕಾರ ತಕ್ಷಣ ಬಂದ್‌ಗೆ ಆದೇಶ ಮಾಡಬೇಕು: ಚೂನಪ್ಪ ಪೂಜಾರಿ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ 

ಬೆಳಗಾವಿ ಜಿಲ್ಲೆಯಿಂದ ಪ್ರತಿದಿನ 300 ಗಾಡಿ ತರಕಾರಿ ಗೋವಾಗೆ ಹೋಗುತ್ತಿದೆ. ಜಿಲ್ಲೆಯಲ್ಲಿ 3 ಲಕ್ಷ ರೈತರು ತರಕಾರಿ ಬೆಳೆಯುತ್ತಿದ್ದಾರೆ. ಸರ್ಕಾರ 300 ವರ್ತಕರ ಪರವಾಗಿ ನಿಲ್ಲದೆ 3 ಲಕ್ಷ ರೈತರ ಹಿತ ರಕ್ಷಣೆ ಮಾಡಬೇಕು: ಶಿವನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ 

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ಎಪಿಎಂಸಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡುವುದಿಲ್ಲ. ಬೆಳಗಾವಿಯ ಜೈ ಕಿಸಾನ್ ಹೋಲ್‌ಸೇಲ್‌ ವೆಜಿಟೆಬಲ್‌ ಮಾರ್ಕೆಟ್‌ ಬಂದ್‌ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಭರವಸೆ ನೀಡಿದ್ದಾರೆ.

ಬೆಳಗಾವಿಯಿಂದ ಆಗಮಿಸಿದ್ದ ಭಾರತೀಯ ಕೃಷಿಕ ಸಮಾಜ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತರೊಂದಿಗೆ ಸಭೆ ನಡೆಸಿದ ಅವರು, ಈ ವಿಚಾರದಲ್ಲಿ ರೈತರಿಗೆ ಸಂದೇಹವೇ ಬೇಡ, ಖಾಸಗಿ ಎಪಿಎಂಸಿ ಬಂದ್‌ ಮಾಡುವುದು ನಿಶ್ಚಿತವಾಗಿದ್ದು, ಅನಿವಾರ್ಯವಾದರೆ ಕಾಯ್ದೆ ತಿದ್ದುಪಡಿ ಮಾಡಲಾಗುವುದು ಎಂದರು.

ಖಾಸಗಿ ಎಪಿಎಂಸಿ ಬಂದ್‌ಗೆ ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಸಹಕಾರದ ಅಗತ್ಯವಿದೆ. ಹೀಗಾಗಿ ಸ್ವಲ್ಪ ಸಮಯ ಬೇಕಾಗಲಿದೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಖಾಸಗಿ ಎಪಿಎಂಸಿಗೆ ಅನುಮತಿ ನೀಡಲಾಗಿದೆ ಎಂದರು.

ಇದನ್ನು ತಕ್ಷಣ ರದ್ದು ಕ್ರಮ ಕೈಗೊಳ್ಳಲು ಇದು ಒಂದೇ ಇಲಾಖೆ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರವನ್ನೂ ಪಡೆಯಬೇಕಾಗುತ್ತದೆ. ರೈತ ಮುಖಂಡರನ್ನು ಸೇರಿಸಿ ಸಮಿತಿ ರಚನೆ ಮಾಡಲಾಗುವುದು ಅವರಿಂದ ವರದಿ ಪಡೆದುಕೊಂಡ ನಂತರ ಬಂದ್‌ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ, ನಗರಾಭಿವೃದ್ಧಿಸಚಿವ ಭೈರತಿ ಸುರೇಶ್ ಅವರೊಂದಿಗೆ ಶೀಘ್ರದಲ್ಲಿ ಸಭೆ ನಡೆಸಲಿದ್ದು, ಕಾನೂನಿನ ತೊಡಕು ಬಾರದಂತೆ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಖಾಸಗಿ ಎಪಿಎಂಸಿಗಳಿಗೆ ಅನುಮತಿ ನೀಡುವುದಿಲ್ಲ, ಉತ್ತೇಜನವನ್ನೂ ಕೊಡುವುದಿಲ್ಲ ಎಂದರು.

ಅಲ್ಲದೆ, ಸರ್ಕಾರ ರೈತರ ಪರವಾಗಿದೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ ಎಪಿಎಂಸಿ ಕಾಯ್ದೆಯನ್ನು ಮರುಸ್ಥಾಪನೆ ಮಾಡಿ ಎಲ್ಲ ಎಪಿಎಂಸಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿ ಇರುವುದರಿಂದಲೇ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಪಿಎಂಸಿಗಳ ಆಸ್ತಿಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಪ್ರತಿವರ್ಷ 18ರಿಂದ 20 ಕೋಟಿ ರೂ. ತೆಗೆದಿರಿಸಲಾಗುತ್ತಿದೆ. ಇನ್ನೂ ಐದಾರು ಹೊಸ ಎಪಿಎಂಸಿಗಳನ್ನು ಆರಂಭಿಸಲಾಗುತ್ತಿದೆ. 9 ಶೀತಲ ಗೃಹಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಮಾತನಾಡಿದ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಅವರು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಅಡಿಯಲ್ಲಿ ಪರವಾನಗಿ ರದ್ದುಪಡಿಸಬಹುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಅವರು, ಇದು ಹಲವು ವರ್ಷಗಳ ಹೋರಾಟ. ಖಾಸಗಿ ಎಪಿಎಂಸಿಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಅಲ್ಲಿ ಬೌನ್ಸರ್‌ಗಳನ್ನು ಇಡಲಾಗಿದೆ. ಸರ್ಕಾರ ತಕ್ಷಣ ಬಂದ್‌ಗೆ ಆದೇಶ ಮಾಡಬೇಕು. ಸರ್ಕಾರದ ಎಪಿಎಂಸಿ 83 ಎಕರೆ ವ್ಯಾಪ್ತಿಯಲ್ಲಿದ್ದು, ಇದನ್ನೇ ಅಭಿವೃದ್ಧಿಪಡಿಸಬೇಕು ಎಂದು ಕೋರಿದರು. 

ಎಪಿಎಂಸಿ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯಿಂದ ಪ್ರತಿದಿನ 300 ಗಾಡಿ ತರಕಾರಿ ಗೋವಾಗೆ ಹೋಗುತ್ತಿದೆ. ಜಿಲ್ಲೆಯಲ್ಲಿ 3 ಲಕ್ಷ ರೈತರು ತರಕಾರಿ ಬೆಳೆಯುತ್ತಿದ್ದಾರೆ. ಸರ್ಕಾರ 300 ವರ್ತಕರ ಪರವಾಗಿ ನಿಲ್ಲದೆ 3 ಲಕ್ಷ ರೈತರ ಹಿತ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಎಪಿಎಂಸಿಯಲ್ಲಿ ವಹಿವಾಟು ಇಲ್ಲದ ಕಾರಣ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ವರ್ತಕರು ಅಳಲು ತೋಡಿಕೊಂಡರು. ಬೆಳಗಾವಿ ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ರೈತ ಮುಖಂಡರು ಸರ್ಕಾರ ತಕ್ಷಣ ಖಾಸಗಿ ಎಪಿಎಂಸಿ ಬಂದ್‌ ಗೆ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

Leave a Reply