ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೆಲವು ಬಹಿರಂಗ ಪ್ರಶ್ನೆಗಳು-1
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಎಂಬ ಹಳ್ಳಿಯೊಂದರ ಪ್ರಾಥಮಿಕ ಶಾಲೆಯ ಎಳೆ ಮಕ್ಕಳು ಕುಡಿಯುವ ನೀರಿನ ಟ್ಯಾಂಕಿನಲ್ಲಿ ಶ್ರೀರಾಮ ಸೇನೆ ಸಂಘಟನೆಯ ಮುಖಂಡ ವಿಷ ಬೆರೆಸಿದ ಅಮಾನವೀಯ ಘಟನೆಯನ್ನು ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಖಂಡಿಸಿದ ಸುದ್ಧಿಯನ್ನು ನಾನು ಪತ್ರಿಕೆಗಳಲ್ಲಿ ಓದಿದೆ. ಆ ಸುದ್ದಿಯಲ್ಲಿ ಬಿಜೆಪಿಯ ಮುಖಂಡರನ್ನೂ ತರಾಟೆ ತಗೆದುಕೊಂಡಿದ್ದು ವರದಿ ಆಗಿತ್ತು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಇದೆಲ್ಲ ಸರಿ. ನನ್ನ ಪ್ರಶ್ನೆ ಬೇರೆ ಇದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇರುವವರು ಬಿಜೆಪಿಯವರಲ್ಲ. ಆಡಳಿತ ಮಾಡುತ್ತಿರುವುದು ನೀವು. ನಿಮ್ಮನ್ನು ಏನು ಕೇಳಲು ಹೊರಟಿದ್ದೇನೆ ಎನ್ನುವ ಮುನ್ನ ಆ ಘಟನೆ ಬಗ್ಗೆ ಒಂದಿಷ್ಟು…
ಬೆಳಗಾವಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ ಅವರು ಮುತುವರ್ಜಿ ವಹಿಸಿ ಪ್ರಕರಣವನ್ನು ಬೇಧಿಸಿದ್ದಾರೆ. ಅವರೊಬ್ಬ ದಕ್ಷ ಅಧಿಕಾರಿ ಎಂಬುದನ್ನು ನಾನು ಮೊದಲಿನಿಂದಲೂ ಬಲ್ಲೆ. ಅವರು ಈ ಪ್ರಕರಣದಲ್ಲಿ ಒಂದು ಸತ್ಯ ಸಂಗತಿಯನ್ನು ಬಯಲು ಮಾಡಿದ್ದಾರೆ. ದೇಶದ ಎಲ್ಲ ಕಡೆ ಸಂಘ ಪರಿವಾರವು ಇಂಥ ಕುಕೃತ್ಯವನ್ನು ಮಾಡಲು ದಲಿತ ಸಮುದಾಯದ ಹುಡುಗರನ್ನೇ ಬಳಕೆ ಮಾಡಿಕೊಳ್ಳುತ್ತದೆ. ಆ ಹುಡುಗರೂ ನಾನಾ ಕಾರಣಗಳಿಗಾಗಿ ಬಳಕೆ ಆಗುತ್ತಿದ್ದಾರೆ. ಇಲ್ಲಿಯೂ ಸಹ ದ್ವೇಷ ಹುಟ್ಟಿಸುವ ಈ ಅಮಾನವೀಯ ಕೆಲಸಗಳಿಗೆ ಬಳಿಕೆ ಮಾಡಿಕೊಂಡಿರುವುದು ದಲಿತ ಸಮುದಾಯದ ಯುವಕನನ್ನೇ. ಆ ಯುವಕನ ಕೈಗೆ ವಿಷದ ಬಾಟಲಿ ಕೊಟ್ಟು ಟ್ಯಾಂಕಿನ ನೀರಿನಲ್ಲಿ ಬೆರೆಸಲು ಹೇಳಿದ್ದು ಶ್ರೀರಾಮ ಸೇನೆಯ ತಾಲೂಕಿನ ಮುಖಂಡ. ಈ ಸಂಗತಿಯನ್ನು ತನಿಖೆಯಿಂದ ಪೋಲೀಸರು ಬಯಲು ಮಾಡಿದ್ದಾರೆ.
ಇಂಥ ಕುಕೃತ್ಯಗಳಿಗೆ ಹೆಸರುವಾಸಿಯಾದ ಶ್ರೀರಾಮ ಸೇನೆ ಮಾಡಿದ ಅನೇಕ ದುಷ್ಕೃತ್ಯಗಳಲ್ಲಿ ಇದು ಒಂದಷ್ಟೇ. ಇಂಥವು ಲೆಕ್ಕಕ್ಕಿಲ್ಲದಷ್ಟು ರಾಜ್ಯದಲ್ಲಿ ನಡೆದಿವೆ. ಈ ಕುರಿತಾಗಿ ಬಿಜೆಪಿಯವರನ್ನು ತರಾಟೆಗೆ ತಗೆದುಕೊಳ್ಳುವ ಮುನ್ನ ನೀವು ಇಂಥ ಸಂಘಟನೆಗಳ ಮೇಲೆ ತಗೆದುಕೊಂಡ ಕ್ರಮಗಳೇನು? ಎಂಬುದು ಕೂಡ ಮುಖ್ಯವಾಗಬೇಕಲ್ಲವೆ?
ರಾಜ್ಯದಲ್ಲಿ ಈ ಸಂಘಟನೆಯನ್ನು ನಿಷೇಧಿಸಿ ಆ ಸಂಘಟನೆಯ ನಾಯಕರ ಮೇಲೆ ಕ್ರಮ ಕೈಗೊಳ್ಳಿ ಎಂದು ನಾವು ನೂರಾರು ಸಲ ಸರಕಾರವನ್ನು ಒತ್ತಾಯಿಸಿದ್ದೇವೆ. ನೀವು ಚೂರು ಹಂದಾಡದೆ ಸುಮ್ಮನೇ ಇದ್ದೀರಿ. ಕಾರಣ ಏನಿರಬಹುದು? ಅವರ ಜತೆಗಿನ ನಿಮ್ಮ ಮಿಲಾಪಿಯೇನು? ಉತ್ತರ ನೀಡುವಿರಾ ಈಗಲಾದರೂ?
ರಾಜ್ಯದಲ್ಲಿ ಸಂಶೋಧಕ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡಿದ ಎಂ. ಎಂ. ಕಲ್ಬುರ್ಗಿ ಮತ್ತು ಸೌಹಾರ್ದ ಪರಂಪರೆಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಯ ಪ್ರಕರಣಗಳಾಗಿದ್ದು ನೀವು ಅಧಿಕಾರದಲ್ಲಿ ಇರುವಾಗಲೇ. (ನಿಮ್ಮ ಆಡಳಿತದ ಗುಪ್ತಚಾರ ಇಲಾಖೆಯ ಕಾರ್ಯವೈಖರಿ ಅನೇಕ ಪ್ರಶ್ನೆಗಳಿವೆ. ಅವನ್ನು ಆಮೇಲೆ ನೋಡೋಣ) ಈ ಹತ್ಯೆಗಳನ್ನು ವಿರೋಧಿಸಿ ರಾಜ್ಯದಲ್ಲಿ ವಿದ್ವತ್ ವಲಯದಿಂದ ದೊಡ್ಡ ದೊಡ್ಡ ಹೋರಾಟಗಳಾದವು. ಎಚ್ಚತ್ತ ಜನರ ಪ್ರತಿಕ್ರಿಯೆ ಕೂಡ ದೊಡ್ಡದಾಗಿತ್ತು.
ಅಂತರಾಷ್ಟ್ರೀಯ ಮಟ್ಟದ ಗಮನ ಸೆಳೆದಿದ್ದ ಈ ಪ್ರಕರಣಗಳನ್ನು ಬೇಧಿಸಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಂಧನ ಆಯ್ತು. ಈ ವೇಳೆ ಕಲ್ಬುರ್ಗಿಯವರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಎರಡು ಸಲ ನಿಮ್ಮ ಸರ್ಕಾರದೊಡನೆ ಮಾತನಾಡುವ ಅವಕಾಶ ನಮಗೆ ದೊರಕಿತ್ತು. ಆಗಲ್ಲ ನಾನು ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸುವುದು ಸರಿ. ಆದರೆ ಇಂಥ ಕೃತ್ಯ ಎಸಗಲು ಪ್ರೇರಣೆ ನೀಡಿದ ವ್ಯಕ್ತಿಗಳಾರು?ಸಂಘಟನೆಗಳು ಯಾವುವು? ಎಂಬುದು ಕೂಡ ಮುಖ್ಯ. ಅವರ ಮೇಲೆ ತನಿಖೆ ನಡೆಸಿ ಕ್ರಮ ಕೈಕೊಳ್ಳಿ. ಈ ಹತ್ಯೆಗಳ ಆರೋಪಿತರು ಶ್ರೀರಾಮ ಸೇನೆ ಸಂಘಟನೆಗೆ ಸೇರಿದವರಾಗಿದ್ದಾರೆ. ಅಂಥ ವರದಿಗಳು ಸರ್ಕಾರದ ಮುಂದೆಯೂ ಇವೆ. ಈ ಸಂಘಟನೆ ಮೇಲೆ ಕ್ರಮ ಕೈಗೊಳ್ಳಿ ಮತ್ತು ಸಂಘಟನೆಯನ್ನು ನಿಷೇಧಿಸಿ ಎಂದು ಒತ್ತಾಯಿಸಿದ್ದೆ. ಆದರೆ ನಿಮ್ಮ ಸರ್ಕಾರ ಮಾಡಿದ್ದೇನು? ಏನೂ ಇಲ್ಲ. ಶ್ರೀರಾಮ ಸೇನೆ ಸಂಘಟನೆ ಮೇಲೆ ಏನೂ ಕ್ರಮಗಳಾಗಲಿಲ್ಲ.
ಈ ಹಿಂದೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಸಂಘಟನೆಯವರು ಬಂದೂಕು ತರಬೇತಿ ನೀಡಿದ ಘಟನೆಗಳು ನಡೆದವು. ಆಗಲೂ ನಾವು ಇದು ವಿಧ್ವಂಸಕ ಕೃತ್ಯ. ಈ ಸಂಘಟನೆ ಮೇಲೆ ಕ್ರಮ ಜರುಗಿಸುವ ಒತ್ತಾಯವನ್ನು ಮಾಡುತ್ತಲೇ ಬಂದೇವು. ನಿಮ್ಮ ಸರ್ಕಾರ ಹಂದಾಡಲಿಲ್ಲ.
ಸಿಂದಗಿಯಲ್ಲಿ ನಡೆದ ಧ್ವಜಸ್ತಂಭದ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣದಲ್ಲಿ ಸಿಗೆ ಬಿದ್ದಿರುವವರು ಕೂಡ ಶ್ರೀರಾಮ ಸಂಘಟನೆಗೆ ಸೇರಿದವರಾಗಿದ್ದವರು. ಬಾಗಲಕೋಟೆಯಲ್ಲಿ ನಡೆದ ಕೊಲೆ ಪ್ರಕರಣ ಒಂದರಲ್ಲಿ ಭಾಗಿಯಾದವರು ಈ ಸಂಘಟನೆಗೆ ಸೇರಿದವರಾಗಿದ್ದಾರೆ ಎಂದು ವರದಿಯಾಗಿತ್ತು. ಆಗಲೂ ಸಂಘಟನೆ ನಿಷೇಧಿಸುವ ಕೂಗು ನಮ್ಮಿಂದ ಬಂತು. ಸರ್ಕಾರಗಳು ಹಂದಾಡಲಿಲ್ಲ.
ರಾಜ್ಯದಲ್ಲಿ ನಡೆದ ಇಂಥ ನೂರಾರು ಕುಕೃತ್ಯಗಳಲ್ಲಿ ಮತ್ತು ಸಮಾಜದ ಸೌಹಾರ್ದತೆ ಕದಡಲು ನಡೆದ ನೂರಾರು ಕೋಮುಗಲಭೆಗಳನ್ನು ಗಮನಿಸಿದರೆ ಅಲ್ಲಿ ಶ್ರೀರಾಮ ಸೇನೆ ಸಂಘಟನೆಯವರು ಭಾಗಿಯಾದ ವಿವರಗಳು ಪೋಲೀಸರ ತನಿಖಾ ವರದಿಗಳಲ್ಲಿ ಧೂಳು ತಿನ್ನುತ್ತ ಬಿದ್ದಿವೆ. ಆಗೆಲ್ಲ ಸಾರ್ವಜನಿಕರಿಂದ ಮತ್ತು ನಮ್ಮಂಥವರಿಂದ ಈ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಿ, ನಿಷೇಧಿಸಿ ಎಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಆಗಲೂ ಸರ್ಕಾರ ಹಂದಾಡಲಿಲ್ಲ
ಈ ಎಲ್ಲ ಕಾರಣಗಳಿಗಾಗಿ ನಮ್ಮ ಮೇಲೆ ಶ್ರೀರಾಮ ಸೇನೆಯ ಕಾಕದೃಷ್ಟಿ ಇದೆ. ಅದನ್ನೂ ಮೀರಿ ನಾವು ಸಮಾಜದ ಸ್ವಾಸ್ಥ್ಯ ಗಮನಿಸಿಕೊಂಡು ಸಮಾಜವಿರೋಧಿಯಾದ ಈ ಸಂಘಟನೆ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಲೇ ಇದ್ದೇವೆ.
ಶ್ರೀರಾಮ ಸಂಘಟನೆ ನಿಷೇಧಕ್ಕೆ ಅಗತ್ಯ ಇರುವ ಈ ಸಂಘಟನೆ ಕುಕೃತ್ಯಗಳ ಸಮಗ್ರ ವರದಿಯನ್ನು ನೀವು ಸಿದ್ಧಪಡಿಸುತ್ತೀರಿ ಎಂದು ನಾವು ಕಾಯ್ದು ಕುಳಿತರೆ, ನೀವು ಇಂಥ ಕೃತ್ಯ ಎಸಗುವ ಸಂಘಟನೆ ನಾಯಕ ಧಾರ್ಮಿಕ ಭಯೋತ್ಪಾದಕನಾದ ಪ್ರಮೋದ ಮುತಾಲಿಕನಿಗೆ ಪೋಲೀಸ ಬೆಂಗಾವಲಿಗೆ ಆದೇಶ ಮಾಡುತ್ತೀರಿ. ಇಬ್ಬರು ಪೋಲೀಸರನ್ನು ಕಾವಲಿಗೆ ನಿಲ್ಲಿಸುತ್ತೀರಿ. ಬಂದೂಕು ಇಟ್ಟುಕೊಳ್ಳಲು ಅನುಮತಿ ಕೊಡುತ್ತೀರಿ.. ಇದೆಲ್ಲ ಆ ಪ್ರಮೋದ ಮುತಾಲಿಕನೇ ಬಿಜೆಪಿಗಿಂತ ಕಾಂಗ್ರೆಸ್ ಭದ್ರತೆ ಕೊಡುವ ಕೆಲಸ ಮಾಡಿದೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾನೆ. ಟಿವಿ ಸಂದರ್ಶನಗಳಲ್ಲಿ ಬಿಚ್ಚಿಡುತ್ತಾನೆ.
ಏನಿದರ ಹಕೀಕತ್ತು?
ಶ್ರೀರಾಮ ಸಂಘಟನೆಗಳಲ್ಲಿ ಸಕ್ರೀಯವಾಗಿರುವವರ ಹಿನ್ನಲೆ ಏನು? ಅವರ ಕ್ರಿಮಿನಲ್ ಚರಿತ್ರೆ ಏನು? ಯಾಕೆ ಅವರು ಸಮಾಜದ ಶಾಂತಿ ಕದಡುವ ದ್ವೇಷ ಯಾತ್ರೆಗಳನ್ನು ಮಾಡುತ್ತ ಬಂದಿದ್ದಾರೆ. ಇದರ ಹಿಂದೆ ಇರುವವರಾರು? ಎಂಥ ಸಂಘಟನೆಗಳು ಬೆನ್ನಿಗಿವೆ. ಮುಸ್ಲಿಮರ, ಕ್ರಿಸ್ತರ ಮೇಲೆ ಕೆಂಡ ಕಾರುವ ಉದ್ದೇಶಗಳೇನು? ಎಂಬ ಬಗ್ಗೆ ಒಂದು ವರದಿ ಸಿದ್ಧ ಪಡಿಸಿ ಆ ಸಂಘಟನೆಯನ್ನು ನಿಷೇಧಿಸುವ ಕೆಲಸ ಮಾಡದೆ ಬಿಜೆಪಿ ನಾಯಕರನ್ನು ತರಾಟೆ ತಗೆದುಕೊಳ್ಳುವುದು ಒಂದು ನಾಟಕ ಅಲ್ಲದೆ ಮತ್ತೇನು ಸಿದ್ದರಾಮಯ್ಯನವರೆ?
ಯಾಕಿಷ್ಟು ಉದ್ದದ ಮಾತು ಎಂದರೆ ಸಮಾಜವಾದಿಯಾದ ನೀವು ಸಮಾಜದ ಮೇಲೆ ಕೊಂಚವಾದರೂ ಪ್ರೀತಿ ಇಟ್ಟುಕೊಂಡು ರಾಜ್ಯದಲ್ಲಿ ವ್ಯಾಪಕವಾಗಿ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮ ಸೇನೆ ಸಂಘಟನೆಯನ್ನು ನಿಷೇಧಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರೆ ಶಾಲಾ ಆವರಣದಲ್ಲಿ ಎಳೆ ಮಕ್ಕಳ ಕುಡಿಯುವ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸುವ ಪ್ರಸಂಗ ಉದ್ಭವಿಸುತ್ತಿರಲಿಲ್ಲ ಎಂದಷ್ಟೇ..
ಈ ಹೊತ್ತು ನೀವೂ ಅವರು ಸೇರಿಯೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಲ್ಲವೆ ನಿಮಗೊಂದು ಆತ್ಮ ಅನ್ನುವದೊಂದು ಇದ್ದರೆ?
ನಮಸ್ಕಾರ
– ಬಸೂ (ಬಸವರಾಜ ಸೂಳಿಭಾವಿ)




