ಕನ್ನಡ ನಾಡು ನುಡಿಯ ಘನತೆಯನ್ನ ಎತ್ತಿಹಿಡಿದವರು

2 years ago

#upheld #dignity #Kannada #language #VeerannaMadivalar #Appanna

ಅರಬಗಟ್ಟೆ ಅಣ್ಣಪ್ಪ ನನಗೆ ತರಬೇತಿಯೊಂದರಲ್ಲಿ ಸಿಕ್ಕ ಕವಿಮಿತ್ರ. ತರಬೇತಿಯ ಎಲ್ಲ ಕಾರ್ಯಚಟುವಟಿಕೆಗಳನ್ನ ಆಳವಾಗಿ ಗ್ರಹಿಸುತ್ತ ಸುಮ್ಮನೆ ಕೂರುತ್ತ ನನಗೆ ಹತ್ತಿರವಾದವರು. ವಾಟ್ಸಪ್ ನಲ್ಲಿ ನಿರಂತರವಾಗಿ ತಾವು ಬರೆದ ಕವಿತೆಗಳನ್ನ ಹಂಚಿಕೊಳ್ಳುತ್ತ ಬಂದವರು. ನಾವಿಬ್ಬರೂ ಮಾತನಾಡಿದ್ದು ಕಡಿಮೆ, ಆದರೆ ಒಬ್ಬರ ಬಗ್ಗೆ ಮತ್ತೊಬ್ಬರು ಅಪಾರವಾದ ಕುತೂಹಲವನ್ನಿಟ್ಟುಕೊಂಡವರು. ಸದ್ಯಕ್ಕೆ ನಮ್ಮಿಬ್ಬರ ಬಗ್ಗೆ ಇಷ್ಟು ಸಾಕು. ಈಗ ವಿಷಯಕ್ಕೆ ಬರೋಣ.

ಅಣ್ಣಪ್ಪನವರು ಹೊಸತೋಟದ ಕಿರಿಯ ಪ್ರಾಥಮಿಕ ಶಾಲೆಯೊಂದರ ಶಿಕ್ಷಕರು. ಈಗವರು ಅದೆಂಥ ಕೆಲಸ ಮಾಡಿದ್ದಾರೆಂದರೆ ನಮ್ಮ ನಾಡಿನ ಸಮಸ್ತ ಕುಲಕೋಟಿ ಜನ ಅಭಿಮಾನಪಡಬೇಕಾದ ಕೆಲಸ ಮಾಡಿದ್ದಾರೆ.

ಕೋಟಿ ರೂಪಾಯಿ ವ್ಯಯಿಸಿದರೂ ಇಂಥ ಅರ್ಥಪೂರ್ಣ ಕೆಲಸ ಮಾಡಿದ ಉದಾಹರಣೆ ನನಗೆ ಸಿಕ್ಕಿಲ್ಲ. ಆದರೆ ಒಂದು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು ಶಿಕ್ಷಕರು ಗ್ರಾಮಸ್ಥರು ಶಿಕ್ಷಣಪ್ರೇಮಿಗಳು ಸೇರಿ ಸೃಷ್ಟಿಸಿದ ಈ ವಿಸ್ಮಯ ಈ ನಾಡಿಗಷ್ಟೇ ಅಲ್ಲ ಈ ದೇಶಕ್ಕೇ ಮಾದರಿಯಾದುದು. ಅಣ್ಣಪ್ಪ ಶಿಕ್ಷಕರು ಗಳಿಸಿರುವ ಸಾರ್ವಜನಿಕರ ಪ್ರೀತಿ ವಿಶ್ವಾಸ ಯಾವ ಒಬ್ಬ ಜನನಾಯಕನಿಗೂ ಕಡಿಮೆಯೇನಿಲ್ಲ.

ಶಾಲೆ ಎಂದರೆ ದಾಳಿ ಮಾಡಲು ಇರುವ ಸ್ಥಳ, ಶಿಕ್ಷಕರೆಂದರೆ ಕಳ್ಳರು ತಾವು ಹಿಡಿಯಲು ಬರುವ ಪೋಲೀಸರು ಎಂದು ಭ್ರಮಿಸಿರುವ ದುರುಳರು ಅಣ್ಣಪ್ಪನವರಂಥ ಶಿಕ್ಷಕರ ಸಾಮರ್ಥ್ಯವನ್ನು ಯಾವ ಮಾನದಂಡದಿಂದ ತಾನೆ ಅಳೆದಾರು?! ದಾಖಲೆಗಳ ಅಸ್ತ್ರ ಹಿಡಿದು ದಾಳಿ ಮಾಡಲು ಬರುವ ಕ್ರೂರಿಗಳು ಅಣ್ಣಪ್ಪನವರು ಒಂದು ಅಭಿಮಾನದ ವಿಸ್ಮಯದ ಲೋಕವನ್ನೇ ಸೃಷ್ಟಿಸಿದ್ದಾರೆ, ಪ್ರಾಥಮಿಕ ಶಾಲಾ ಶಿಕ್ಷಕರು ದುರ್ಬಲರು ಅವರನ್ನ ಪೀಡಿಸಬಹುದು ಎಂದು ಕಾದಿರುವ ಪೀಡೆಗಳು ಇಂಥವರನ್ನ ನೋಡಿ ಕಲಿಯಲಿ.

ಅಣ್ಣಪ್ಪನವರು ಈ ನಾಡು ನೆನಪಿಡಬಹುದಾದ ಅದ್ಭುತಕ್ಕಿಂತಲೂ ಹೆಚ್ಚಿನ ಕನ್ನಡ ನುಡಿ ಜಾತ್ರೆ ಮಾಡಿದ್ದಾರೆ. ಅದೆಷ್ಟು ಕಾರ್ಯಕ್ರಮಗಳು, ಅದೆಷ್ಟೊಂದು ವೈವಿಧ್ಯಗಳು ಅದೆಷ್ಟೊಂದು ಮಕ್ಕಳು ಅದೆಷ್ಟು ಜನ, ಅದೆಂಥ ಉತ್ಸಾಹ ಅದೆಂಥ ಅಭಿಮಾನ…. ಆ ಇಡೀ ಕಾರ್ಯಕ್ರಮ ನೋಡಲು ಕಾಣಲು ಕಣ್ಣು ಹೃದಯ ಸಾಲದು.

ಪ್ರಾಥಮಿಕ ಶಾಲಾ ಶಿಕ್ಷಕರು ಈ ನಾಡಿಗೆ ಕೊಡಬಹುದಾದ ಬಹುದೊಡ್ಡ ಕೊಡುಗೆ , ಅಭಿಮಾನ ಪ್ರೀತಿಯೆಂದರೆ ಇದು.

ಸರಕಾರದ ಅನುದಾನಕ್ಕೆ ಕಾಯದೆ, ಅಪ್ಲಿಕೇಶನ್ ಹಾಕಿ ಪ್ರಶಸ್ತಿ ಪಡೆಯದೆ, ಮೇಲಿನವರ ಯಾವ ಆದೇಶಕ್ಕೂ ಕಾಯದೆ ಈ ನಾಡು ನನ್ನದು ಈ ಶಾಲೆ ನನ್ನದು ಈ ಊರು ನನ್ನದು ಈ ಮಕ್ಕಳು ನನ್ನವು ಎನ್ನುವ ಆಳದ ಸದಭಿಮಾನದಿಂದ ಮಾಡಿದ ಈ ಕಾರ್ಯಕ್ರಮ ಐತಿಹಾಸಿಕವಾದದ್ದು. ಅಣ್ಣಪ್ಪನವರು ನಮಗೆ ಮಾದರಿ. ಅವರು ತೋರಿಸಿಕೊಟ್ಟ ಈ ಹಾದಿ ಅನನ್ಯ.

ಏನೆಲ್ಲ ಹೇಳಬಹುದು ಅಣ್ಣಪ್ಪನವರ ಕಾರ್ಯದಕ್ಷತೆಯ ಬಗ್ಗೆ, ಎಷ್ಟೆಲ್ಲ ಬರೆಯಬಹುದು ಅವರ ಕಾರ್ಯವಟುವಟಿಕೆಗಳ ಬಗ್ಗೆ.

ಸರಕಾರಿ ಶಾಲಾ ಶಿಕ್ಷಕರೆಂದರೆ ಅಸಡ್ಡೆ ಮತ್ತು ಅವರ ವ್ಯಕ್ತಿತ್ವವೆಂದರೆ ಕಳಪೆ ಎಂದೇ ಭಾವಿಸುವ ಸ್ವಕಿರೀಟಿಗಳು ತಮ್ಮ ಕಿರೀಟಗಳನ್ನ ಬಿಸಾಕಿ ಇಂಥ ಶಿಕ್ಷಕಮಹನೀಯರನ್ನ ಅಪ್ಪಿಕೊಂಡು ತಮ್ಮ ಬದುಕು ಸಾರ್ಥಕಪಡಿಸಿಕೊಳ್ಳಲಿ.

ಅಣ್ಣಪ್ಪ ಸರ್ ನಿಮ್ಮ ವ್ಯಕ್ತಿತ್ವ ಬಹಳ ದೊಡ್ಡದು, ಈ ನಾಡಿಗೆ ನಮ್ಮ ಇಲಾಖೆಗೆ ಶಿಕ್ಷಕ ಸಮುದಾಯಕ್ಕೆ ಘನತೆ ತರುವಂಥದ್ದು. ನೀವು ಮಾಡುವ ಕೆಲಸದಲ್ಲಿ ಐದು ಪರ್ಸೆಂಟ್ ಅನ್ನಾದರೂ ಉಳಿದವರು ಮಾಡಲಿ. ಸದ್ದಿಲ್ಲದೆ ಸತ್ತು ಹೋಗುತ್ತಿರುವ ಶಾಲೆಗಳಿಗೆ ಮರುಜೀವಬರಬಹುದು, ವಿದ್ಯೆಯನ್ನೂ ಉದ್ಯಮ ಮಾಡಿಕೊಂಡು ಡೊನೇಶನ್ ರೂಪದಲ್ಲಿ ರಕ್ತಹೀರುತ್ತಿರುವವರ ಬಿಸಿನೆಸ್ ಶಾಖೆಗಳೆಲ್ಲ ಮುಚ್ಚಿಹೋಗಬಹುದು.

ಆ ದಿನಕ್ಕಾಗಿ ಕಾಯುತ್ತಾ…. ನಿಮ್ಮನ್ನ ಮನದುಂಬಿ ಅಭಿನಂದಿಸುತ್ತೇನೆ.

  • ವೀರಣ್ಣ ಮಡಿವಾಳರ, ಕವಿಗಳು

Leave a Reply