ಇಂದು ಡಾ.ಜಿ.ಎಸ್.ಶಿವರುದ್ರಪ್ಪನವರ ಜನ್ಮದಿನ. ಕನ್ನಡ ನಾಡಿನ ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದಂತಹ ಇವರು ನಾಡಿನ ಶ್ರೇಷ್ಠ ಕವಿಗಳು, ಸಂಶೋಧಕರು, ವಿಮರ್ಶಕರು ಮತ್ತು ಪ್ರಗತಿಶೀಲ ಬರಹಗಾರರಾಗಿದ್ದರು.
ಇವರು ಬರೆದಂತಹ ಅನೇಕ ಕವನದ ಸಾಲುಗಳು ಕನ್ನಡ ನಾಡಿನ ಜನರ ನಾಲಿಗೆಗಳ ಮೇಲೆ ಸದಾ ನಲಿಯುತ್ತಿರುತ್ತವೆ. ಇವರ ಹಾಡುಗಳನ್ನು ಭಾವಗೀತೆಗಳ ಮೂಲಕ ಗಾಯಕರು ಮನೆ ಮನೆಗೆ ಮುಟ್ಟಿಸಿರುತ್ತಾರೆ. ಅದರಲ್ಲೂ ವಿಶೇಷವಾಗಿ ಎದೆ ತುಂಬಿ ಹಾಡುವೆನು ಎಂಬ ಈ ಸಾಲುಗಳನ್ನ ಕೇಳದಂತಹ ಕನ್ನಡದ ಕಿವಿಗಳು ಇರಲು ಸಾಧ್ಯವೇ ಇಲ್ಲ.
ಇವರು ಕುವೆಂಪುರವರ ನೇರವಾದ ಶಿಷ್ಯಂದರು. ಸೌಂದರ್ಯ ಸಮೀಕ್ಷೆ ಎಂಬ ಇವರ ಪ್ರಬಂಧಕ್ಕೆ ಪಿಎಚ್ಡಿ ಪದವಿ ಪಡೆದಿರುತ್ತಾರೆ. ಇವರು ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಗಣನೀಯವಾದ ಸೇವೆಯನ್ನು ಸಲ್ಲಿಸಿರುತ್ತಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕನ್ನಡ ನಾಡಿನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಅಮೂಲ್ಯವಾದ ಸೇವೆ ಸಲ್ಲಿಸಿರುತ್ತಾರೆ.
ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಮುಖ್ಯಸ್ಥರಾಗಿ ಹೊರ ರಾಜ್ಯದಲ್ಲಿ ಕನ್ನಡದ ಸೇವೆ ಮಾಡಿರುತ್ತಾರೆ.
ಸಾಮಗಾನ, ಚೆಲುವು ಒಲವು, ದೇವಶಿಲ್ಪಿ, ಗೋಡೆ, ಕಾಡಿನ ಕತ್ತಲಲ್ಲಿ, ಕಾರ್ತಿಕ, ತೀರ್ಥ ವಾಣಿ, ಅನಾವರಣ, ತೆರೆದ ದಾರಿ ಹೀಗೆ ಹಲವಾರು ಕವನ ಸಂಕಲನಗಳು ಪ್ರಕಟಣೆಗೊಂಡಿವೆ.
ಕರ್ಮಯೋಗಿ ಇವರು ರಚಿಸಿದ ಕಾದಂಬರಿ. ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ, ಪರಿಶೀಲನೆ ಮುಂತಾದವುಗಳು ವಿಮರ್ಶೆಗೆ ಸಂಬಂಧಪಟ್ಟ ಕೃತಿಗಳು.
1983ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಇವರ ‘ಕಾವ್ಯಾರ್ಥ ಚಿಂತನ’ ಎಂಬ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಮಾಸ್ಕೋದಲ್ಲಿ 22 ದಿನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ನವೋದಯ, ಬೆಡಗು ಇವರ ಪ್ರಮುಖ ಕೃತಿಗಳು.
ಕರ್ನಾಟಕ ರಾಜ್ಯ ಸರ್ಕಾರ ಇವರ ಸೇವೆಯನ್ನು, ಪಾಂಡಿತ್ಯವನ್ನು, ಸಾಧನೆಯನ್ನು ಗುರುತಿಸಿ ರಾಷ್ಟ್ರಕವಿ ಗೌರವವನ್ನು ನೀಡಿ ಸತ್ಕರಿಸಿತು.
ಇವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಜನಪರವಾದ ಕಾಳಜಿಯಿಂದ ನಾಡು ನುಡಿ ಮತ್ತು ಸಮಾಜದ ವಿಚಾರಗಳು ಬಂದಾಗ ತಮ್ಮ ಅಭಿಪ್ರಾಯಗಳನ್ನು ನಿಷ್ಠೂರವಾಗಿ ವ್ಯಕ್ತಪಡಿಸಿರುತ್ತಾರೆ.
ಭಾವಗೀತೆಗಳ ಗಾಯಕರಿಗೆ ಕುವೆಂಪುರವರ, ಬೇಂದ್ರೆಯವರ, ಕೆ ಎಸ್ ನರಸಿಂಹಸ್ವಾಮಿರವರ ಕವನಗಳು ಎಷ್ಟು ಹೆಸರನ್ನು ತಂದುಕೊಟ್ಟಿದೆಯೋ ಅದೇ ರೀತಿಯಲ್ಲಿ ಜಿಎಸ್ಎಸ್ ರವರ ಕವನಗಳು ಭಾವಗೀತೆಗಳು ಅವರ ಕಾರ್ಯಕ್ರಮಗಳಿಗೆ ಮೆರಗು ನೀಡಿದೆ. ಇವರು 2013ರಲ್ಲಿ ನಮ್ಮನ್ನು ಅಗಲಿರುತ್ತಾರೆ.
ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರವನ್ನು, ಕಾವ್ಯ ಲೋಕವನ್ನು, ರಾಷ್ಟ್ರಮಟ್ಟಕ್ಕೆ ಮುಟ್ಟಿಸಿದಂತಹ ಕೆಲವೇ ಕೆಲವು ಶ್ರೇಷ್ಠ ಬರಹಗಾರರ ಸಾಲಿನಲ್ಲಿ ಜಿಎಸ್ಎಸ್ ರವರ ಹೆಸರು ಸದಾ ಉಳಿದುಕೊಂಡಿರುತ್ತದೆ.
- ಕೆ.ಎಸ್.ನಾಗರಾಜ್, ಬೆಂಗಳೂರು




