ಭರದ್ವಾಡ ಗ್ರಾಮಕ್ಕೆ ಕಾರ್ಮಿಕ ಸಚಿವರ ಭೇಟಿ
ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮದಲ್ಲಿ ಸಾಲಬಾಧೆಯಿಂದ ಇಬ್ಬರೂ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ತುಂಬಾ ದುಃಖದ ಸಂಗತಿ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಕುಂದಗೋಳ ತಾಲೂಕಿನ ಭರದ್ವಾಡ ಗ್ರಾಮಕ್ಕೆ ಭೇಟಿ ನೀಡಿ, ಇತ್ತೀಚೆಗೆ ಮೃತರಾದ ರೈತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ರೀತಿಯ ಘಟನೆ ನಡೆಯಬಾರದಿತ್ತು. ರೈತರ ಕುಟುಂಬಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು. ರೂ.ಐದು ಲಕ್ಷ ಪರಿಹಾರ ಮತ್ತು ರಾಜ್ಯ ಸರ್ಕಾರದಿಂದ ಅಗತ್ಯ ನೆರವು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಭರದ್ವಾಡ ಗ್ರಾಮದ ರೈತರಾದ ರವಿರಾಜ ಬಸವರಾಜ ಜಾಡರ ಹಾಗೂ ಬಸನಗೌಡ ಶಿವನಗೌಡ ಪಾಟೀಲ ಅವರ ಕುಟುಂಬಸ್ಥರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು. ಸರ್ಕಾರದ ವತಿಯಿಂದ ಅವರ ಕುಟುಂಬಸ್ಥರಿಗೆ ಮನೆ, ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದರು.
ರವಿರಾಜ ಜಾಡರ ಅವರ ಕೆನರಾ ಬ್ಯಾಂಕ್ ಸಾಲವನ್ನು ಫೌಂಡೇಶನ್ ವತಿಯಿಂದ ಭರಿಸಲಾಗುತ್ತದೆ ಎಂದರು.
ರೈತರು ಆತ್ಮಹತ್ಯೆಗೆ ಶರಣಾಗಿರುವುದು ತುಂಬಾ ದುಃಖವನ್ನು ಉಂಟು ಮಾಡಿದೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಾರದು. ರೈತರಿಗೆ ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಬೆಳೆ ವಿಮೆ ಪರಿಹಾರವನ್ನು ಹಂತಹಂತವಾಗಿ ಹಾಗೂ ವ್ಯವಸ್ಥಿತ ರೀತಿಯಲ್ಲಿ ವಿತರಣೆ ಮಾಡಲಾಗುವುದು. ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಹುಬ್ಬಳ್ಳಿ ಧಾರವಾಡ ನಡುವೆ ಇಆರ್‍ಟಿ ಸಾರಿಗೆ: ಹುಬ್ಬಳ್ಳಿ ಧಾರವಾಡ ನಡುವೆ ಓಡಾಡುತ್ತಿರುವ ಬಿಆರ್‍ಟಿಎಸ್ ( ತ್ವರಿತ ಬಸ್ ಸಾರಿಗೆ ವ್ಯವಸ್ಥೆ) ಬದಲಿಗೆ ಇಆರ್‍ಟಿ ಸಾರಿಗೆ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರ ಸಾಧಕಬಾಧಕಗಳ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದರು.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ನೀಡುವುದು ಸರ್ಕಾರದ ಮೂಲ ಧ್ಯೇಯವಾಗಿದೆ. ಮುಂದಿನ ಒಂದು ತಿಂಗಳಲ್ಲಿ ಡಿಪಿಆರ್ (ವಿಸ್ತ್ರತ ಯೋಜನಾ ವರದಿ) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಎಂ.ಎಸ್.ಅಕ್ಕಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಬ್ಯಾಕೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಶೀಲ್ದಾರ ರಾಜು ಮಾವರಕರ, ಶಿವಾನಂದ ಬೆಂತೂರ, ಷಣ್ಮುಖ ಶಿವಳ್ಳಿ, ಚಂದ್ರಶೇಖರ ಜಟ್ಟಲ್, ಮದೇವಪ್ಪ ಮಾಡಳ್ಳಿ, ವೆಂಕನಗೌಡ್ರ ಪೊಲೀಸ್‍ಪಾಟೀಲ್, ಎಮ್.ಎಮ್.ಮುಲ್ಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.














