ಗಣತಿದಾರರಿಗೆ ಸೂಕ್ತ ಪರಿಹಾರ, ಸೌಲಭ್ಯಕ್ಕೆ ಕ್ರಮ: ಸಂತೋಷ್ ಲಾಡ್ ಭರವಸೆ

6 months ago

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

ಸಮೀಕ್ಷಾ ಅವಧಿಯಲ್ಲಿ ಆಕಸ್ಮಿಕ ಅಪಘಾತ, ಗಾಯಗೊಂಡವರಿಗೆ ಪರಿಹಾರ

ಧಾರವಾಡ: ಜಿಲ್ಲೆಯಲ್ಲಿ ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಪಘಾತ, ಅನಾರೋಗ್ಯಕ್ಕೆ ಒಳಗಾದ ಸಮೀಕ್ಷೆದಾರ ಶಿಕ್ಷಕರಿಗೆ ಸರಕಾರದಿಂದ ನಿಯಮಾನುಸಾರ ಸೂಕ್ತ ಪರಿಹಾರ, ಅಗತ್ಯ ಸೌಲಭ್ಯ ನೀಡಲು ಮಾನ್ಯ ಮುಖ್ಯಮಂತ್ರಿಗಳಿಗೆ ಶಿಪಾರಸ್ಸು ಮಾಡಿ, ಅಗತ್ಯ ಕ್ರಮ ಕೈಗೊಳ್ಳುವದಾಗಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.

ಜಿಲ್ಲಾ ಪಂಚಾಯತ ಆವರಣದಲ್ಲಿ ಸಮೀಕ್ಷೆ ಸಮಯದಲ್ಲಿ ಆಕಸ್ಮಿಕವಾಗಿ ಅಪಘಾತವಾಗಿ ಬೆಡ್ ರೆಸ್ಟ್ದಪಲ್ಲಿರುವ ಶಿಕ್ಷಕಿಯರೊಂದಿಗೆ ಆಗಮಿಸಿದ್ದ ಕುಂದಗೋಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳ ಮನವಿ ಸ್ವೀಕರಿಸಿ, ಮಾತನಾಡಿದರು.

ಸಮೀಕ್ಷೆ ಸಮಯದಲ್ಲಿ ಗಣತಿದಾರರು ವಿವಿಧ ರೀತಿಯ ಅಡಚಣೆಗಳ ಹೊರತಾಗಿಯೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸರಕಾರದಿಂದ ಗೌರವಧನ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಅನಾರೋಗ್ಯ ಪೀಡಿತರಾಗಿರುವ ಶಿಕ್ಷಕರ ವಿಶ್ರಾಂತಿಗೆ ರಜೆ ಹಾಗೂ ವೈಧ್ಯಕೀಯ ವೆಚ್ವದ ಮಂಜೂರಾತಿ ಬಗ್ಗೆ ನಿಯಮಾವಳಿ ಪ್ರಕಾರ ಕ್ರಮವಹಿಸಲು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗುವುದು. ತಮ್ಮೊಂದಿಗೆ ನಾವಿದ್ದೇವೆ ಎಂದು ಸಚಿವರು ನೈತಿಕ ಧೈರ್ಯ ತುಂಬಿದರು.

ಸರಕಾರದ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಅನುμÁ್ಠನಗೊಳಿಸುವಲ್ಲಿ ಶಿಕ್ಷಕರು ಸೇರಿದಂತೆ ಎಲ್ಲ ಇಲಾಖೆಗಳ ಸರಕಾರಿ ಅಧಿಕಾರಿ, ಸಿಬ್ಬಂದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಬೇಡಿಕೆ, ಮನವಿಗಳಿಗೆ ನಾವು ಸ್ಪಂದಿಸುತ್ತೇವೆ. ಅದರಂತೆ ಈ ಸಮಸ್ಯೆಗೂ ಪರಿಹಾರ ನೀಡುತ್ತೇವೆ. ಈ ಕುರಿತು ಶಿಕ್ಷಕರ ಮನವಿಗಳೊಂದಿಗೆ ಸರಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮನವಿಗೆ ಸ್ಪಂದಿಸಿದ ಸಚಿವರು ಕೂಡಲೇ ಮುಖ್ಯಮಂತ್ರಿಗಳ, ರಾಜ್ಯ ಹಂತದ ಅಧಿಕಾರಿಗಳ ಗಮನಕ್ಕೆ ತಂದು ಅನುಕೂಲ ಕಲ್ಪಿಸುವ ಸ್ಪಷ್ಟ ಭರವಸೆಯ ಮಾತುಗಳನ್ನು ಆಡಿ, ಗಾಯಗೊಂಡಿದ್ದ ಉಭಯ ಶಿಕ್ಷಕಿಯರ ಕುಶಲೋಪರಿಯನ್ನು ಅತ್ಯಂತ ಸಮಾಧಾನದಿಂದ ವಿಚಾರಿಸಿ, ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರೀ ಎಂದು ಆತ್ಮವಿಶ್ವಾಸ ತುಂಬಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಸಮೀಕ್ಷಾ ಸಮಯದಲ್ಲಿ ಇಬ್ಬರು ಶಿಕ್ಷಕಿಯರು ಮತ್ತು ಓರ್ವ ಶಿಕ್ಷಕರು, ಸಮೀಕ್ಷೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಮೂಳೆಮುರಿತ, ಗಾಯಗಳಾಗಿದ್ದು, ಅವರಿಗೆ ವೈದ್ಯರ ಸೂಚನೆಯಂತೆ, ವಿಶ್ರಾಂತಿಗಾಗಿ ವಿಶೇಷ ರಜೆಯನ್ನು ಮತ್ತು ವೈದ್ಯಕೀಯ ವೆಚ್ಚವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದರು.

ಶಿಕ್ಷಕರ ಸಮಸ್ಯೆಯನ್ನು ತಾವು ಸಹ ಖುದ್ದಾಗಿ ಪರಿಶೀಲಿಸಿದ್ದು, ಅವರ ಬೇಡಿಕೆಗೆ ಅನುಗುಣವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ. ಸರಕಾರಕ್ಕೆ ಈ ಕುರಿತು ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು. ಸೂಕ್ತ ನಿರ್ಧಾರ ತೆಗೆದುಕೊಂಡು ಸಮೀಕ್ಷೆದಾರರಿಗೆ, ಶಿಕ್ಷಕರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕೆಂದು ಶಿಕ್ಷಕರ ಪರವಾಗಿ ಜಿಲ್ಲಾಧಿಕಾರಿ ಸಚಿವರಿಗೆ ವಿನಂತಿಸಿದರು.

ಸಂತೋಷ್ ಲಾಡ್ ಅವರಿಗೆ, ದಿವ್ಯ ಪ್ರಭು ಅವರಿಗೆ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭುವನೇಶ ಪಾಟೀಲ ಅವರಿಗೆ ಅಪಘಾತಗೊಳಗಾದ ಶಿಕ್ಷಕಿಯರ ಸಮ್ಮುಖದಲ್ಲಿ ಏಕಕಾಲಕ್ಕೆ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಮತ್ತು ಸಮೀಕ್ಷೆ ಅವಧಿಯಲ್ಲಿ  ಅಪಘಾತಕ್ಕೊಳಗಾದ ಕಮಡೊಳ್ಳಿ ಸರಕಾರಿ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯಗುರುಗಳಾದ ಸುಶೀಲಾ ಪಾಟೀಲ್ ಮತ್ತು ಹಿರೇಹರಕುಣಿ ಶಾಲೆಯ ಶಿಕ್ಷಕಿ ವೀಣಾ ಚೆನ್ನಿ, ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕುಂದಗೋಳ ತಾಲೂಕು ಅಧ್ಯಕ್ಷ ಎಂ.ಎಂ. ಘೋಡಕೆ, ಜಿಲ್ಲಾ ಸಂಘದ ಎಚ್.ಪಿ. ನದಾಫ್, ಪ್ರಧಾನ ಕಾರ್ಯದರ್ಶಿ ಎಸ್.ಡಿ.ಕೋರಿ, ಧಾರವಾಡ ಶಹರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಆರ್.ಕಬ್ಬೇರ, ಎನ್ಜಿಟಓ ಜಿಲ್ಲಾ ಪದಾಧಿಕಾರಿಗಳಾದ ಫಿರೋಜ್ ಗುಡೇನಕಟ್ಟಿ, ಧಾರವಾಡ ಶಹರ ಶಿಕ್ಷಕರಾದ ಎಸ್.ಪಿ. ಹಿರೇಮಠ, ಆರ್.ಬಿ.ಮರಿಗೌಡ್ರ  ಅವರು ಸೇರಿದಂತೆ ಇತರರು ಹಾಜರಿದ್ದರು.

Leave a Reply