ಶಾಲೆ ಮುಚ್ಚಿದ ಸರ್ಕಾರ: ನಮಗೆ ಯಾವ ನೈತಿಕತೆ ಉಳಿದುಕೊಂಡಿದೆ?

5 years ago

ಇಂದಿಗೆ ಹತ್ತು ತಿಂಗಳ ಹಿಂದೆ ಕಳೆದ ಜೂನ್ ನಲ್ಲಿ ಲಾಕ್ ಡೌನ್ ಸಡಿಲಿಸಲಾಯಿತು. ಆದರೆ ಡಿಸೆಂಬರ್ ತಿಂಗಳವರೆಗೂ ಶಾಲೆಗಳನ್ನು ಪ್ರಾರಂಬಿಸಲಿಲ್ಲ. ಬಿಸಿಯೂಟ ಕೊಡಲಿಲ್ಲ.

ಆಗ ಇಲ್ಲಿನ ನಾಗರಿಕ ಸಮಾಜ ಮೌನವಾಗಿತ್ತು. ನವೆಂಬರ್-ಡಿಸೆಂಬರ್ ತಿಂಗಳಿಂದ ಮದುವೆಗಳಲ್ಲಿ, ಪ್ರವಾಸಿ ಸ್ಥಳಗಳಲ್ಲಿ, ಶಾಪಿಂಗ್ ಮಾಲ್ ಗಳಲ್ಲಿ, ದೇವಸ್ಥಾನಗಳಲ್ಲಿ ಸಾವಿರಾರು ಜನ, ಮಕ್ಕಳು ಗುಂಪುಗೂಡಲು ಮುಕ್ತ ಅವಕಾಶ ದೊರಕಿತು. ಆದರೆ ಶಾಲೆಗಳನ್ನು ತೆರೆಯಲಿಲ್ಲ. ಆಗಲೂ ಇಲ್ಲಿನ ನಾಗರಿಕ ಸಮಾಜ ಮೌನವಾಗಿತ್ತು.

ವಿದ್ಯಾಗಮ ಎಂಬ ವಿಫಲಗೊಳ್ಳಲೆಂದೇ ಡಿಸೈನ್ ಮಾಡಿದ (designed to fail)  ಅಬಿಯಾನ ಮಕಾಡೆ ಮಲಗಿತು. ನಂತರ ಪಬ್ಲಿಕ್ ಪರೀಕ್ಷೆ ನಡೆಸಬೇಕು ಎಂಬ ಅನಿವಾರ್ಯತೆಯಿಂದ  10, 12 ಶಾಲೆಗಳನ್ನು ಪ್ರಾರಂಬಿಸಿದರು.

ನಂತರ ಡಾ. ಶ್ರೀನಿವಾಸ ಕಕ್ಕಿಲಾಯ ಮತ್ತು ಕೆಲ ಶಿಕ್ಷಣ ತಜ್ಞರು ಹಾಗೂ ಕೆಲ ಸಂಘಟನೆಗಳ ಒತ್ತಾಯಕ್ಕೆ, ಒಲ್ಲದ ಮನಸ್ಸಿನಿಂದ ಫೆಬ್ರವರಿಯಲ್ಲಿ 6-9 ನೇ ತರಗತಿ ಪ್ರಾರಂಬಿಸಿದರು. ಆದರೆ 1-5 ತರಗತಿ ತೆರೆಯಲಿಲ್ಲ. ಈ ಎಂಟು ತಿಂಗಳ ಅವದಿಯಲ್ಲಿ ಬಡ ಕುಟುಂಬಗಳ ಶೇ. 25 ಪ್ರಮಾಣದ ಮಕ್ಕಳು ಬಾಲಕಾರ್ಮಿಕರಾದರು, ಶಿಕ್ಷಣದಿಂದ ವಂಚಿತರಾದರು. ಅವರ ಬವಿಶ್ಯ ಇಂದು ಮುಗಿದ ಕತೆ.

ಶೇ. 33% ಪ್ರಮಾಣದ ಹೆಣ್ಣುಮಕ್ಕಳು ಬಾಲ್ಯ ವಿವಾಹಕ್ಕೆ ಬಲಿಯಾದರು. ಆದರೆ ವೇದಿಕೆಗಳಲ್ಲಿ, ಅಂಕಣಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಮಾನತೆ, ಸಾಕ್ಷರತೆ ಕುರಿತು ನಿರರ್ಗಳವಾಗಿ ಮಾತನಾಡಿದ, ಬರೆದ ನಾಗರಿಕ ಸಮಾಜ ಈ ದುರಂತದ ಕುರಿತು ಬಾಯಿ ಬಿಡಲಿಲ್ಲ. ಶಿಕ್ಷಣ ಇಲಾಖೆಯ, ಸಚಿವರ ಬೇಜವಾಬ್ದಾರಿತನವನ್ನು ಪ್ರಶ್ನಿಸಲಿಲ್ಲ.

ವಿಶ್ವ ಸಂಸ್ಥೆ, ಯುನಿಸೆಫ್ ಮುಂತಾದವು ಮಕ್ಕಳಲ್ಲಿ ರೋಗ ನಿರೋದಕ ಶಕ್ತಿಯಿದೆ ಅವರಿಗೆ ಕೋವಿಡ್ ಕಾಯಿಲೆ ಹರಡುವ ಸಾದ್ಯತೆ ಶೇ. 0.1% ಪ್ರಮಾಣಕ್ಕಿಂತಲೂ ಕಡಿಮೆ ಎಂದು ಹೇಳಿದರೂ ಸಹ ನೀವೇಕೆ ಶಾಲೆಗಳನ್ನು ಪ್ರಾರಂಬಿಸುತ್ತಿಲ್ಲ ಎಂದು ಸರಕಾರವನ್ನು ಪ್ರಶ್ನಿಸಲಿಲ್ಲ.

ಪೋಶಕರಿಗೆ ಎಲ್ಲಾ ಬಗೆಯ ಸುರಕ್ಷತೆ ಒದಗಿಸುವ ಆಶ್ವಾಸನೆ ಕೊಟ್ಟು, ಆರೋಗ್ಯ ಕಾರ್ಯಕರ್ತರು, ಎಸ್ ಡಿಎಂಸಿ, ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ, ನೇತೃತ್ವದಲ್ಲಿ ಸೂಕ್ತ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡು, ತರಗತಿಗಳನ್ನು, ಶೌಚಾಲಯಗಳನ್ನು ದಿನನಿತ್ಯ ಸ್ವಚ್ಛಗೊಳಿಸುತ್ತ ಶಾಲೆಗಳನ್ನು ಪ್ರಾಂಬಿಸಲೇಕು, ಅದು ನಿಮ್ಮ ಹೊಣೆಗಾರಿಕೆ ಎಂದು ಶಿಕ್ಷಣ ಇಲಾಖೆ, ಸಚಿವರಿಗೆ ನಾಗರಿಕ ಸಮಾಜ ಹಕ್ಕೊತ್ತಾಯ ಮಾಡಲಿಲ್ಲ. ನಿಶ್ಕ್ರಿಯವಾಗಿತ್ತು.

ಈಗ ಕೊಟ್ಟ ಕುದುರೆಯನ್ನೇರಲು ಒಲ್ಲದ ಸರಕಾರ ಮತ್ತೆ 6-9 ರ ಶಾಲೆಗಳನ್ನು ಮುಚ್ಚಿದೆ. ಬಡ ಕುಟುಂಬದ ಮಕ್ಕಳು ಬೀದಿಗೆ ಬಿದ್ದಿದ್ದಾರೆ. ಅವರ ಬವಿಶ್ಯವೇನು? ನಾಗರಿಕ ಸಮಾಜ ಮೌನವಾಗಿದೆ.

ನಮಗೆ ಯಾವ ನೈತಿಕತೆ ಉಳಿದುಕೊಂಡಿದೆ?

– ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply