ಸಚಿವ ಎಂ.ಬಿ. ಪಾಟೀಲರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಎಂಬಿಬಿಎಸ್ ಶಿಕ್ಷಣಕ್ಕೆ ಆರ್ಥಿಕ ನೆರವು

5 months ago

ವಿಜಯಪುರ: ‘ನೀಟ್’ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರೂ ಆರ್ಥಿಕ ಸಂಕಷ್ಟದಿಂದ ಶಿಕ್ಷಣ ಮುಂದುವರಿಸಲು ಕಷ್ಟಪಡುತ್ತಿದ್ದ ಇಬ್ಬರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಚಿವ ಎಂ.ಬಿ. ಪಾಟೀಲ ಆರ್ಥಿಕ ನೆರವು ನೀಡಿದರು.

ವಿಜಯಪುರ ಜಿಲ್ಲೆಯ ಆಲಮೇಲ ಗ್ರಾಮದ ಉದಯಕುಮಾರ ನಾರಾಯಣಕರ ಹಾಗೂ ರತ್ನಾಪುರ ಗ್ರಾಮದ ಮನೋಹರ ಹರಗೆ ಅವರಿಗೆ ಎಂ.ಬಿ.ಬಿ.ಎಸ್ ಶಿಕ್ಷಣಕ್ಕಾಗಿ ಅಗತ್ಯವಿರುವ ಬೋಧನಾ ಶುಲ್ಕ, ಹಾಸ್ಟೆಲ್ ಹಾಗೂ ಮೆಸ್ ವೆಚ್ಚಕ್ಕಾಗಿ ಚೆಕ್‌ಗಳನ್ನು ವಿತರಿಸಲಾಯಿತು.

ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (HIMS) ಯಲ್ಲಿ ಸೀಟು ಪಡೆದಿರುವ ಉದಯಕುಮಾರ ನಾರಾಯಣಕರ ಕೃಷಿ ಕಾರ್ಮಿಕರ ಪುತ್ರನಾಗಿದ್ದು, ಈತನ ಶಿಕ್ಷಣಕ್ಕಾಗಿ ₹1,88,850 ಮೊತ್ತದ ನೆರವು ನೀಡಲಾಯಿತು. ಭವಿಷ್ಯದಲ್ಲಿ ಮಕ್ಕಳ ತಜ್ಞನಾಗಿ ಸೇವೆ ಸಲ್ಲಿಸುವುದು ತನ್ನ ಗುರಿಯಾಗಿದೆ ಎಂದು ಆತ ತಿಳಿಸಿದ್ದಾನೆ.

ಇನ್ನೊಂದೆಡೆ, ಕೃಷಿ ಕುಟುಂಬದ ಹಿನ್ನೆಲೆಯ ಮನೋಹರ ಹರಗೆ ಬೆಂಗಳೂರಿನ ಬಿ.ಎಂ.ಸಿ.ಆರ್.ಐ (BMCRI) ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದು, ಈತನ ಶಿಕ್ಷಣಕ್ಕಾಗಿ ₹1,28,400 ಮೊತ್ತದ ಚೆಕ್ ವಿತರಿಸಲಾಯಿತು. ಹೃದ್ರೋಗ ತಜ್ಞನಾಗುವ ಕನಸನ್ನು ಆತ ಹೊಂದಿದ್ದಾನೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ವಿದ್ಯಾರ್ಥಿಗಳು ಶ್ರಮ ಮತ್ತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ, ನೀಡಲಾಗಿರುವ ಆರ್ಥಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಬಸವನಾಡಿಗೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಆರ್.ವಿ. ಕುಲಕರ್ಣಿ, ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್.ಎಸ್. ಪಾಟೀಲ, ವಿದ್ಯಾರ್ಥಿಗಳ ಪೋಷಕರು ಹಾಗೂ ಇತರರು ಉಪಸ್ಥಿತರಿದ್ದರು.

ನೆರವು ಪಡೆದ ವಿದ್ಯಾರ್ಥಿಗಳು ವೈದ್ಯರಾದ ಬಳಿಕ ಬಡವರ ಸೇವೆ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದ್ದು, ಸಚಿವ ಎಂ.ಬಿ. ಪಾಟೀಲ ಅವರ ಮಾನವೀಯ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು. #mbpatil #karnatakaminister #malgudinews #malgudiexpress

Leave a Reply