ಈತ ಬೆಂಗಳೂರು ಮೂಲದ ಇಂಗ್ಲೀಷ್ ಲೇಖಕ. ಈತನ ತಂದೆ ಶ್ರೀನಿವಾಸನ್ ತಮಿಳು ಮೂಲದವರು, ತಾಯಿ ನಾಗಮಣಿ ಸಂಪತ್ ಮರಾಠಿ ಮೂಲದವರು. ಓದಿದ್ದು ಇಂಜಿನಿಯರ್ ಆದರೂ ಸಹ ಇತಿಹಾಸ ಮತ್ತು ಸಂಗೀತದತ್ತ ಒಲವು ಇರಿಸಿಕೊಂಡು ಮೊದಲಿಗೆ ಮೈಸೂರು ಒಡೆಯರ್ ಸಂಸ್ಥಾನದ ಇತಿಹಾಸವನ್ನು ಬರೆದನು. ನಂತರ ಖ್ಯಾತ ಹಿಂದೂಸ್ಥಾನಿ ಗಾಯಕಿ ಹಾಗೂ ಭಾರತದಲ್ಲಿ ಪ್ರಥಮವಾಗಿ ಗ್ರಾಮಾಪೋನ್ ಧ್ವನಿಮುದ್ರಿಕೆಗಳಿಗೆ ಹಾಡಿದ ಗೋಹರ್ ಜಾನ್ ಳ ಬಗ್ಗೆ ಜೀವನ ಚರಿತ್ರೆ ಬರೆಯುವುದರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದನು.
ಆನಂತರದ ದಿನಗಳಲ್ಲಿ ಈತನ ಎದೆಯೊಳಗೆ ಸಂಘ ಪರಿವಾದ ಪ್ರಜ್ಞೆ ಎಚ್ಚರಗೊಂಡು ಮೋದಿಯ ಆಸ್ಥಾನದ ವಿದ್ವಾಂಸನಾಗಿ ಗುರುತಿಸಿಕೊಳ್ಳುವ ಆಸೆ ಹೆಚ್ಚಾಯಿತು. ಈತನ ಬೌದ್ಧಿಕ ಪ್ರಜ್ಞೆಯು ನಮ್ಮ ಕರ್ನಾಟಕದ ಐ.ಐ.ಟಿ. ಪ್ರೊಫೆಸರ್ ವಕ್ರತೀರ್ಥನ ಚರಂಡಿಯ ತೀರ್ಥಕ್ಕೆ ಸಮನಾದುದು. ಸಾವರ್ಕ್ ರ್ ಎಂಬ ಕೃತಿ ಬರೆದು ಮೋದಿ ಆಸ್ಥಾನವನ್ನು ಸೇರಿದನು. ಈ ಅಯೋಗ್ಯ ತನ್ನ ಕೃತಿಗೆ ವೀರ್ ಸಾವರ್ಕರ್ ಎಂಬ ಶೀರ್ಷಿಕೆ ನೀಡುವ ಮೊದಲು ವಿನಾಯಕ ದಾಮೋದರ್ ಸಾವರ್ಕರ್ ಗೆ ವೀರ ಎಂಬ ಕೀರ್ತಿ ಹೇಗೆ ಬಂದಿತು ಎಂದು ತಿಳಿದುಕೊಂಡಿದ್ದರೆ ಈತನನ್ನು ಇತಿಹಾಸಕಾರ ಎಂದು ಹೇಳಬಹುದಿತ್ತು.
ಈತ ಮತ್ತೊಬ್ಬ ಐ.ಐ.ಟಿ. ಪ್ರೊಫೆಸರ್ ಎಂಬುದಕ್ಕೆ ಸಾವರ್ಕರ್ ಪುಸ್ತಕಕ್ಕೆ ಜಾನಕಿ ಬಾಕ್ಲೆ ಎಂಭ ಲೇಖಕಿಯ ಪ್ರಬಂಧದ ಮಾಹಿತಿಗಳನ್ನ ಯಥಾವತ್ತಾಗಿ ಕದ್ದಿರುವುದಕ್ಕೆ ಈಗ ಸಾಕ್ಷಿಗಳು ಲಭ್ಯವಾಗಿವೆ. 2022 ರ ಮೇ 18 ರಂದು ಪ್ರಕಟವಾಗಿರುವ ದ ಹಿಂದೂ ಪತ್ರಿಕೆ ಯ ಬಳಗದ ಫ್ರಂಟ್ ಲೈನ್ ಪಾಕ್ಷಿಕ ಪತ್ರಿಕೆಯಲ್ಲಿ ಪುಸ್ತಕ ವಿಭಾಗದಲ್ಲಿ ಈ ಕುರಿತು ಲೇಖನ ಪ್ರಕಟವಾಗಿದೆ. ಆಸಕ್ತರು ಗಮನಿಸಬಹುದು.
ಇತಿಹಾಸಕಾರ ಎಂಬ ಈ ಅರೆಬೆಂದ ಮಡಕೆಯು ಈಗ ಗಾಂಧೀಜಿಯವರು 1930ರ ಅಸಹಾಕಾರ ಚಳುವಳಿಯಲ್ಲಿ ಬಂಧಿತರಾಗಿ ಪುಣೆಯ ಯರವಾಡ ಜೈಲಿನಲ್ಲಿ ಇದ್ದಾಗ ನೂರು ರೂಪಾಯಿ ಹಣ ಪಡೆಯುತ್ತಿದ್ದರು ಎಂದು ಆರೋಪಿಸಿದ್ದಾನೆ. ಜೈಲಿನ ಬಂಧಿಗಳಿಗೆ ನಿಗದಿಪಡಿಸಲಾದ ಕೂಲಿ ದರದ ಅನ್ವಯ ಗಾಂಧೀಜಿಯವರಿಗೆ ಆವರೆಗೆ ಜೈಲಿನಲ್ಲಿ ಮಾಡಿದ ಕೂಲಿ ಕೆಲಸಕ್ಕೆ ನೂರು ವೇತನದ ಪಟ್ಟಿಯ ಲೆಕ್ಕದ ದಾಖಲೆಯನ್ನು ಈ ಮೂರ್ಖ ತೋರಿಸುತ್ತಿದ್ದಾನೆ. ಇದನ್ನು ವಾಟ್ಸ್ ಅಪ್ ಯೂನಿರ್ವಸಿಟಿ ಪದವೀಧರರು ಹಂಚಿಕೊಂಡು ಸಂಭ್ರಮ ಪಡುತ್ತಿದ್ದಾರೆ.
ನಾನು ಈವರೆಗೆ ಪುಣೆಯ ಯರವಾಡ ಜೈಲಿಗೆ ಹಾಗೂ ಸಮೀಪದಲ್ಲಿರುವ ಆಗಖಾನ್ ಅರಮನೆಗೆ ಒಟ್ಟು ಏಳು ಬಾರಿ ಭೇಟಿ ನೀಡಿದ್ದೀನಿ. 2012 ರ ಜುಲೈ ತಿಂಗಳಿನಲ್ಲಿ ನನ್ನ ಮಗ ಅನನ್ಯಕುಮಾರನನ್ನು ಮಧ್ಯಪ್ರದೇಶದ ಅರಣ್ಯಾಧಿಕಾರಿಗಳ ತರಬೇತಿ ಕೇಂದ್ರಕ್ಕೆ ಕರೆದೊಯ್ಯುವ ಮುನ್ನ ಪುಣೆಯಿಂದ ಬಿಲಾಸ್ ಪುರ್ ರೈಲಿನಲ್ಲಿ ರಾತ್ರಿ ಹೊರಡುವ ಮುನ್ನ ಆತನನ್ನು ಮಧ್ಯಾಹ್ನ ಆಗಖಾನ್ ಅರಮನೆಗೆ ಕೊಂಡೊಯ್ದು ಗಾಂಧಿಯವರನ್ನು ಬಂಧಿಸಿ ಇಡಲಾಗಿದ್ದ ಕೊಠಡಿ ಹಾಗೂ ಮಹಾದೇವ ದೇಸಾಯಿ ಮತ್ತು ಕಸ್ತೂರಬಾ ಅವರ ಸಮಾಧಿಗಳನ್ನು ತೋರಿಸಿ ಗಾಂಧೀಜಿಯವರ ನೋವಿನ ಕಥನಗಳನ್ನ ವಿವರಿಸಿದ್ದೆ.
ಗಾಂಧೀಜಿಯವರು ವೇತನ ಪಡೆದಿರುವುದಕ್ಕೆ ಆಧಾರ ಇದ್ದರೆ ಅದನ್ನು ಇತಿಹಾಸದ ದಾಖಲೆ ಎಂದು ಪರಿಗಣಿಸಲಾಗುತ್ತದೆ. ಜೈಲಿನ ಲೆಕ್ಕ ಪತ್ರದ ಪಟ್ಟಿ ದಾಖಲೆಯಾಗುವುದಿಲ್ಲ ಎಂಬ ಕನಿಷ್ಠ ಪ್ರಜ್ಞೆ ಈ ಅವಿವೇಕಿಗೆ ಇಲ್ಲವಾಗಿದೆ.
ಗಾಂಧಿಯವರ ಜೈಲಿನ ದಿನಚರಿಯ ಕೆಲವು ಘಟನೆಗಳು ಈಗಿವೆ.
ಅವರು ಜೈಲಿನಲ್ಲಿ ಚಪ್ಪಲಿ ಹೊಲೆಯುವ ಕಾಯಕವನ್ನು ಆಯ್ಕೆ ಮಾಡಿಕೊಂಡಿದ್ದರು. ತನ್ನ ಮೇಲೆ ಅಪಾರವಾದ ಪ್ರೀತಿ, ಗೌರವ ತೋರಿಸುತ್ತಿದ್ದ ಜೈಲಿನ ಬ್ರಿಟೀಷ್ ಅಧಿಕಾರಿಗೆ ಚಪ್ಪಲಿಗಳನ್ನು ತಯಾರಿಸಿ ಇಟ್ಟುಕೊಂಡಿದ್ದ ಗಾಂಧೀಜಿಯವರು ಬಿಡುಗಡೆಯಾದ ಸಂದರ್ಭದಲ್ಲಿ ಆತನಿಗೆ ಉಡುಗೊರೆಯಾಗಿ ನೀಡಲು ಹೋದಾಗ ಆ ಅಧಿಕಾರಿಯು ಗಾಂಧೀಜಿಗೆ ಹೇಳಿದ ಮಾತುಗಳಿವು. “ಬಾಪೂಜಿ, ನೀವು ಸಿದ್ಧಪಡಿಸಿರುವ ಈ ಪಾದರಕ್ಷೆಗಳನ್ನ ನಾನು ನನ್ನ ತಲೆಯ ಮೇಲೆ ಇಟ್ಟುಕೊಳ್ಳಲು ಸಹ ಯೋಗ್ಯನಲ್ಲ, ಆದರೆ, ಇವುಗಳನ್ನು ನಾನು ನಿರಾಕರಿಸಲಾರೆ’’ ಎಂದು ಹೇಳಿ ಅವುಗಳನ್ನು ಸ್ವೀಕರಿಸಿದ್ದ. ನಂತರ ಅವುಗಳನ್ನು ಭಾರತದಲ್ಲಿ ಮಾತ್ರವಲ್ಲದೆ ಇಂಗ್ಲೆಂಡಿನ ತನ್ನ ಮನೆಯಲ್ಲಿ ಅಮೂಲ್ಯ ರತ್ನಗಳು ಎಂಬಂತೆ ರಕ್ಷಿಸಿ ಇಟ್ಟಿದ್ದನು. ಜೊತೆಗೆ ತನ್ನ ದಿನಚರಿಯಲ್ಲಿ ಇದನ್ನ ದಾಖಲಿಸಿದ್ದಾನೆ.
ಇದು ಎರಡನೆಯ ಘಟನೆ. ಗಾಂಧೀಜಿಯವರ ಜೊತೆ ಬಂಧಿತರಾಗಿದ್ದ ಬೆಲೂಚಿಸ್ಥಾನದ ಖಾನ್ ಅಬ್ದುಲ್ ಗಫೂರ್ ಖಾನ್ ದೈತ್ಯ ಆಕಾರದ ವ್ಯಕ್ತಿ. ಪಠಾಣ್ ಜನಾಂಗದ ಅವರಿಗೆ ಪ್ರತಿನಿತ್ಯ ಮಾಂಸಹಾರ ಸೇವಿಸುವುದು ಹವ್ಯಾಸ. ಆದರೆ, ಯರವಾಡ ಜೈಲಿನಲ್ಲಿ ವಾರಕ್ಕೊಮ್ಮೆ ಮಾತ್ರ ಮಾಂಸಾಹಾರ ನೀಡುತ್ತಿದ್ದರು. ಪ್ರತಿ ದಿನ ಚಪಾತಿ ಮತ್ತು ಬೇಳೆಯ ಸಾಂಬಾರ್ ನೀಡುತ್ತಿದ್ದರು. ಇದನ್ನು ಗಮನಿಸಿದ ಗಾಂಧಿಯವರು ಜೈಲಿನ ಅಧಿಕಾರಿಗಳಿಗೆ ನನಗೆ ದಿನಕ್ಕೆ ಒಮ್ಮೆ ಮಾತ್ರ ಊಟ ಸಾಕು. ನನ್ನ ಇನ್ನೊಂದು ಊಟಕ್ಕೆ ಬದಲಾಗಿ ನನ್ನ ಮಿತ್ರ ಗಫೂರ್ ಖಾನ್ ಗೆ ಮೊಟ್ಟೆ ನೀಡಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತಿದ್ದರು.
ಹಸಿದವರು ಮತ್ತು ನೊಂದವರ ಬಗ್ಗೆ ಬದುಕನ್ನು ತ್ಯಾಗ ಮಾಡಿದ ಮಹಾತ್ಮನು ಬ್ರಿಟೀಷರ ಹಣಕ್ಕೆ ಕೈ ಚಾಚಿದ ಎಂದು ಹೇಳುವ ಈ ಸುಳ್ಳಿನ ಹರಿಶ್ಚಂದ್ರರಿಗೆ ಏನು ಮಾಡೋಣ? ಈ ದೇಶದಲ್ಲಿ ಈಗ ಯಾವುದೇ ಅಳುಕಿಲ್ಲದೆ ನಿಂದಿಸಬಹುದಾದ ಹಾಗೂ ಟೀಕಿಸಬಹುದಾದ ಇತಿಹಾಸದ ಪುಣ್ಯ ಪುರುಷ ಎಂದರೆ ಅವರು ಗಾಂಧೀಜಿಯವರು ಮಾತ್ರ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




