ಪ್ರತಿಭಾ ಪುರಸ್ಕಾರ ಸಮಾರಂಭ
ಬೆಂಗಳೂರು: ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಬಿಬಿಎಂಪಿ ನೌಕರರ ಸಹಕಾರ ಸಂಘ ನಿಯಮಿತ ವತಿಯಿಂದ 110ನೇ ಸಂಸ್ಥಾಪನಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಎಂಬಿಎ ಮತ್ತು ಬಿಇ, ಪದವಿ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಉತ್ತಮ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನ್ಯಾ. ವಿ.ಗೋಪಾಲಗೌಡ ಮಾತನಾಡಿ, ಕಲಿಕೆಯಲ್ಲಿ ಒಂದು ಉತ್ತಮ ಅಂಕಗಳಿಸಿ ಮುಂದಿನ ವಿದ್ಯಾಭ್ಯಾಸ ಹೋಗುವ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸುವುದು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದಂತೆ. ಸಹಕಾರ ಸಂಘದ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದಾಗ ನೌಕರರಿಗೆ ಹಣಕಾಸಿನ ಸಹಾಯ ಮಾಡುವ ಸಂಸ್ಥೆಯಾಗಿದೆ. ಮಕ್ಕಳಿಗೆ ಸನ್ಮಾನಿಸುವುದರಿಂದ ಅವರ ಮೇಲೆ ಜವಾಬ್ದಾರಿ ಹೆಚ್ಚುತ್ತದೆ, ಜ್ಞಾನವಂತರಾಗಿ, ಉತ್ತಮ ಪ್ರಜೆಯಾಗಿ ಒಳ್ಳೆಯ ಸಮಾಜ ನಿರ್ಮಾಣ ಮಾಡಿರಿ ಎಂದು ಶುಭಕೋರಿದರು.
ಮಕ್ಕಳು ಈ ದೇಶದ ಮಾನವೀಯ ಸಂಪತ್ತು, ದೇಶದ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಬೇಕು. ಅಂಕಗಳಿಸಿದರೆ ಮಾತ್ರ ಬುದ್ಧಿವಂತರಲ್ಲ, ಸಮಾಜದಲ್ಲಿ ಹೇಗೆ ಬದುಕುಬೇಕು ಎಂಬ ಕಲೆ ತಿಳಿದಿರಬೇಕು. ದೇಶದಲ್ಲಿ ಶೇಕಡ 50ರಷ್ಟು ಮಹಿಳೆಯರು ಇದ್ದಾರೆ. ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ನ್ಯಾಯ, ಸಮಾನತೆಯ ನ್ಯಾಯ, ರಾಜಕೀಯ ನ್ಯಾಯ ಮಹಿಳೆಯರಿಗೆ ಕೊಡಬೇಕು. ಕ್ರಾಂತಿಯೋಗಿ ಬಸವೇಶ್ವರರು, ಕುವೆಂಪುರವರು ಮಹಿಳೆಯರ ಸಾಮಾನತೆ, ಸಾಮಾಜಿಕ ನ್ಯಾಯದ ಪರ ಮಾತನಾಡಿದ್ದಾರೆ. ದೇಶ ಸ್ವಾತಂತ್ರ್ಯ ಬಂದ ಇಷ್ಟು ವರ್ಷವಾದರು ಬಡವರು ಬಡವರಾಗಿಯೇ ಇದ್ದಾರೆ ಎಂದರು.
ಗ್ರೇಟರ್ ಮುಂಬೈ ಮಹಾನಗರ ಪಾಲಿಕೆಯಲ್ಲಿ 1 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಬಿಬಿಎಂಪಿಯಲ್ಲಿ ಅದರ ಕಾಲುಭಾಗದಷ್ಟು ನೌಕರರು ಇಲ್ಲ. ಇದರಿಂದ ನೌಕರರ ಮೇಲೆ ಕೆಲಸದ ಒತ್ತಡ ಬೀಳುತ್ತದೆ ಮತ್ತು ಪೌರ ಕಾರ್ಮಿಕರು ಕೊರೋನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರ ಮಕ್ಕಳ ಶಿಕ್ಷಣ ಮತ್ತು ಪೌರ ಕಾರ್ಮಿಕರ ಆರೋಗ್ಯ ವಸತಿ ಸೌಕರ್ಯ ಕುರಿತು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, ಸಹಕಾರ ಸಂಘ 110 ವರ್ಷ ಆಗಿದೆ ಎಂದರೆ ಡೊಡ್ಡ ಸಾಧನೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಅವರ ಜೀವಮಾನವಿಡಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಂಗೀತದಲ್ಲಿ ಸ್ವರ ಸರಿಯಾಗಿ ಕಲಿಯಬೇಕು, ಇಲ್ಲದೇ ಹೋದರೆ ಅಪಸ್ವರ ಹಾಡಿದಂತೆ ಆಗುತ್ತದೆ. ಈಗಿನ ಜನರಲ್ಲಿ ತಾಳ್ಮೆ ಇಲ್ಲ. ಗುರಿ ಇರಬೇಕು, ಸಾಧನೆ ಮಾಡುವ ಛಲ ಇದ್ದಾಗ ಸಾಧನೆ ಮಾಡಲು ಸಾಧ್ಯ. ಕನ್ನಡ ಭಾಷೆ ಹೇಗೆ ಮಾತನಾಡಬೇಕು ಎಂದು ಕಲಿಸಿಕೊಟ್ಟವರು ಮೇರುನಟ ಡಾ.ರಾಜ್ ಕುಮಾರ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್. ಇಂದಿನ ಪೀಳಿಗೆಯವರು ಕನ್ನಡ ಭಾಷೆ ಕಲಿಯಬೇಕು, ಮಾತನಾಡಬೇಕು, ಉಳಿಸಬೇಕು ಎಂದು ಕರೆನೀಡಿದರು.
ಎ.ಅಮೃತ್ ರಾಜ್ ಮಾತನಾಡಿ, ಸಹಕಾರ ಸಂಘದ ಸದಸ್ಯರ 137 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಹಕಾರ ಸಂಘದಲ್ಲಿ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರತರೆ ಉತ್ತಮ ಪ್ರಜೆಯಾಗಿ ರಾಜ್ಯ, ರಾಷ್ಟ್ರದ ಸೇವೆ ಮಾಡಬಹುದು. ಉನ್ನತ ಶಿಕ್ಷಣಕ್ಕೆ ಹಣದ ಕೊರತೆ ಬಂದರೆ ಸಹಕಾರ ಸಂಘದ ಸದಸ್ಯರಿಗೆ ಸುಲಭ ಸಾಲ ಸೌಲಭ್ಯ ಲಭ್ಯವಿದೆ ಮತ್ತು ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಗೌರವಿಸಿ ಸನ್ಮಾನಿಸಲಾಗುತ್ತಿದೆ ಎಂದರು.
ಸಾಯಿಶಂಕರ್ ಮತ್ತು ಎ.ಜಿ.ಬಾಬಣ್ಣ ಮತ್ತು ನಿರ್ದೇಶಕರಾದ ಗಂಗಾಧರ್ ಲಾಲಿ, ವಿನಯ್ ಕುಮಾರ್, ಮಹೇಶ್, ಹರೀಶ್ ಕುಮಾರ್, ಮುನಿರಾಜು, ಮಂಜುನಾಥ್, ವಾಣಿ, ಅಕ್ಕಮಹಾದೇವಿ, ಮಹಾದೇವಿ ಸಂಗಪ್ಪ ಗಾಣಿಗೇರ, ರಾಜಶೇಖರ್, ಮಂಜುನಾಥ್, ಹಿನ್ನಲೆ ಗಾಯಕಿ ಅನುರಾಧಭಟ್, ಕೆ.ಜಿ.ರವಿ ಮೊದಲಾದವರು ಉಪಸ್ಥಿತರಿದ್ದರು.




