ಬೆಂಗಳೂರು: ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ 24 ಗಂಟೆಯೊಳಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 60 ಕೋಟಿ ರೂಪಾಯಿ ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗಿದೆ.
ಬೆಂಗಳೂರು ಹೊರವಲಯದ ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿ ಮಾಡಲಾಗಿದ್ದ 6.5 ಎಕರೆ ಭೂಮಿ ತೆರವು ಮಾಡಿ, ವಶಕ್ಕೆ ಪಡೆಯಲಾಗಿದೆ.
ಹೊಸ ವರ್ಷದಲ್ಲಿ ಅರಣ್ಯ ಇಲಾಖೆ ಕಾರ್ಯ ಯೋಜನೆಗಳ ಬಗ್ಗೆ ಈಶ್ವರ್ ಖಂಡ್ರೆ ಸಭೆ ನಡೆಸಿದ್ದರು. ಈ ವೇಳೆ ಉನ್ನತಾಧಿಕಾರಿಗಳಿಗೆ ಆದ್ಯತೆಯ ಮೇಲೆ ಒತ್ತುವರಿ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಬಿ.ಎಂ. ಕಾವಲಿನಲ್ಲಿ ಜೆ.ಸಿ.ಬಿ. ವಾಹನಗಳ ಮೂಲಕ ತೆರವು ಕಾರ್ಯಾಚರಣೆ ನಡೆಯಿತು.
ಬೆಂಗಳೂರು ನಗರ ಡಿ.ಸಿ.ಎಫ್, ರವೀಂದ್ರಕುಮಾರ್, ಎ.ಸಿ.ಎಫ್. ಸುರೇಶ್ ಮತ್ತು ಆರ್.ಎಫ್.ಓ. ಗೋವಿಂದರಾಜ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯ ತಂಡ ತೆರವು ಕಾರ್ಯಾಚರಣೆ ನಡೆಸಿ, ಈ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ ಹಾಗೂ ಅಕ್ರಮ ಕಟ್ಟಡ ನೆಲಸಮ ಮಾಡಿದರು. ಕಾರ್ಯಾಚರಣೆ ಮೂಲಕ ಅರಣ್ಯ ಭೂಮಿ ವಶಕ್ಕೆ ಪಡೆದು ಗಡಿಯಲ್ಲಿ ಬಿದಿರು ಸೇರಿದಂತೆ ನಾನಾ ಜಾತಿಯ ಮರಗಳನ್ನು ನೆಡುವ ಮೂಲಕ ಮರುವಶಕ್ಕೆ ಪಡೆದರು.
ವಶಪಡಿಸಿಕೊಂಡ ಅರಣ್ಯ ಪ್ರದೇಶದಲ್ಲಿ ಸುಮಾರು 6.5 ಎಕರೆಯಷ್ಟು ಭೂಮಿಯನ್ನು ಮಧುಸೂದನಾನಂದ ಸ್ವಾಮಿ ಎಂಬುವವರು ಒತ್ತುವರಿ ಮಾಡಿ, ಅಕ್ರಮ- ಸಕ್ರಮದಲ್ಲಿ ಮಂಜೂರಾತಿ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಅರಣ್ಯ ಭೂಮಿಯಾದ ಕಾರಣ, ಅಕ್ರಮ ಸಕ್ರಮದಲ್ಲಿ ಇದನ್ನು ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿಯನ್ನು ಅರಣ್ಯ ಇಲಾಖೆ ತಿರಸ್ಕರಿಸಿತ್ತು.
ಒತ್ತುವರಿದಾರರ ಬಳಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕಂದಾಯ ದಾಖಲೆ, ಕ್ರಯಪತ್ರ, ಮಂಜೂರಾತಿ ಪತ್ರ, ಸಾಗುವಳಿ ಚೀಟಿ ಯಾವುದೂ ಇಲ್ಲದ ಕಾರಣ 2017ರ ಆಗಸ್ಟ್ ನಲ್ಲಿಯೇ ಈ ಒತ್ತುವರಿ ತೆರವಿಗೆ ಎ.ಸಿ.ಎಫ್. ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಿಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
29.12.2023ರಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜ್ ಅವರು ಈ ಭೂಮಿ ಅರಣ್ಯ ಇಲಾಖೆಗೆ ಸಂಬಂಧಿಸಿದ್ದೆಂದು ಮಹತ್ವದ ಆದೇಶ ನೀಡಿದ್ದರು. ನಿನ್ನೆ ಅರಣ್ಯ ಸಚಿವ ಈಶ್ವರ ಖಂಡ್ರೆ ಬೆಂಗಳೂರು ಸುತ್ತಮುತ್ತ ಬೆಲೆ ಬಾಳುವ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ ಆದ್ಯತೆಯ ಮೇಲೆ ತೆರವು ಮಾಡುವಂತೆ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ಬಗ್ಗೆ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರು ಸುತ್ತಮುತ್ತ ಭೂಮಿಗೆ ಬಂಗಾರದ ಬೆಲೆ ಇದೆ. ಕೆಲವರು ಸ್ವಾರ್ಥಕ್ಕಾಗಿ ಕೋಟ್ಯಂತರ ರೂ. ಬೆಲೆಬಾಳುವ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ಪ್ರಕೃತಿ, ಪರಿಸರ, ಕಾಡು ಮತ್ತು ವನಸಂಪತ್ತು ಉಳಿಸುವುದೇ ಇಲಾಖೆಯ ಕರ್ತವ್ಯವಾಗಿದ್ದು, ಬೆಂಗಳೂರಿನಲ್ಲಿ ಆದೇಶ ಆಗಿರುವ ಪ್ರಕರಣಗಳಲ್ಲಿ ಒತ್ತುವರಿ ತೆರವು ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.




