ಹರೆಯದವರ ಚುಂಬನ, ಆಲಿಂಗನ, ಪ್ರೇಮಾಲಾಪನ ಹುಟ್ಟಿಸುವ ತಲ್ಲಣಗಳು

3 years ago

ಓ, ಸೀಮೆಗಿಲ್ಲದೇರೋ ಗಂಡ ಹೆಂಡ್ರು ಅಂತ ಕೈ ಕೈ ಹಿಡ್ಕೊಂಡೋ ಅಥವಾ ಅರ್ಧಾಲಿಂಗನದಲ್ಲಿ ಓಡಾಡುವ ಯುವ ದಂಪತಿಗಳನ್ನ ಕಂಡು ಮೂಗು ಮುರಿಯುತ್ತಿದ್ದ ಹಿರಿಯರನ್ನು ಕಂಡಿದ್ದೇನೆ. ಅವರವರು ಗಂಡ ಹೆಂಡಿರು ಅವರವರ ಸಂಗಾತಿಗಳನ್ನು ಬಳಸಿಕೊಂಡು ಹೋದರೆ ನೀವ್ಯಾಕೆ ಉರ‍್ಕೊಳ್ತೀರಿ ಅಂತ ಕೇಳಿದ್ರೆ, ಅದು ಅವರವರ ವೈಯಕ್ತಿಕ ಎಲ್ಲರೂ ಮಾಡೋದೇ ಅಂತ ರಸ್ತೆಗೆ ಮಂಚ ತಂದು ಹಾಕ್ಕೋಳಕ್ಕೆ ಆಗತ್ತಾ? ಅವರವರ ಕೋಣೆಗಳಲ್ಲಿ ಅವರೇನು ಬೇಕೋ ಅದನ್ನ ಮಾಡ್ಕೊಳ್ಳಿ, ಬೀದಿಯಲ್ಯಾಕೆ ಬೇಕು ಪ್ರದರ್ಶನ ಅಂತ ಉತ್ತರ ಬರುತ್ತದೆ.

ತಾನು ನಂಬುವ ಹರಿ ಎಂಬ ದೇವನ ನಾಮದ ಮುದ್ರೆಯನ್ನು ಹಣೆಯ ಮೇಲೆ ಒತ್ತಿಕೊಂಡು, ಹರನೆಂಬ ಈಶ್ವರನ ವಿಭೂತಿಯ ಲಾಂಛನವನ್ನು ಹಣೆಯ ಮೇಲೆ ಬಳಿದುಕೊಂಡು, ನಂಬುವ, ಒಪ್ಪುವ ಧರ್ಮ ಧೋರಣೆಗಳನ್ನು ಸಾರ್ವಜನಿಕವಾಗಿ ಢಾಳಾಗಿಯೇ ಪ್ರದರ್ಶಿಸುತ್ತಾ ಓಡಾಡುವ ಮಂದಿಗೇಕೋ ತಾವು ನಂಬುವ, ಒಪ್ಪುವ ಪ್ರೇಮದ ಸಂಕೇತಗಳನ್ನು ಪ್ರದರ್ಶಿಸಿದರೆ ಇರಿಸುಮುರಿಸಾದೀತು.

ಮನೆಯಲ್ಲಿ ಹಿರಿಯರು ಎಷ್ಟೋ ಬಾರಿ ಹೇಳುತ್ತಾರೆ; “ನಮ್ಮ ಕಾಲದಲ್ಲಿ ನಾವು ಒಬ್ಬರನ್ನೊಬ್ಬರು ನೋಡಿರುತ್ತಲೇ ಇರಲಿಲ್ಲ. ಈಗೆಲ್ಲಾ ಕಾಲ ಕೆಟ್ಟು ಹೋಯ್ತು. ಮದುವೆಗೆ ಮುನ್ನವೇ ಒಬ್ಬರನ್ನೊಬ್ಬರು ನೋಡುತ್ತಾರೆ, ಮಾತಾಡುತ್ತಾರೆ, ಜೊತೆಜೊತೆಗೆ ಓಡಾಡುತ್ತಾರೆ” ಎಂದು ನಿಡಿದಾಗಿ ಬಿಡುವ ನಿಟ್ಟುಸಿರಿನಲ್ಲಿ ಅಸೂಯೆಯ ಸುಳುಹನ್ನೋ, ಅತೃಪ್ತಿಯನ್ನೋ, ನಿರಾಶೆಯನ್ನೋ ತಿಳಿಯಾಗಿ ಹರಿದುಬಿಡುವ ಸಣ್ಣ ಹರಿವನ್ನು ಕಾಣುತ್ತೇನೆ.

ಮಗ ಅಥವಾ ಮಗಳು ಆಧುನಿಕತೆಯ ಬದುಕಿನಲ್ಲಿ, ಅದೇ ಆಧುನಿಕತೆಯ ಮುಕ್ತ ವೈಚಾರಿಕ ಧೋರಣೆಯಲ್ಲಿ ಮುಕ್ತವಾಗಿ ವ್ಯವಹರಿಸುವುದರಿಂದ ತಂದೆ, ತಾಯಿ, ಗುರುಗಳು ಮತ್ತು ಧಾರ್ಮಿಕ ಮುಖಂಡರೇ ಮೊದಲಾದ ಹಿರಿಯರಲ್ಲಿ ಉಂಟಾಗುವ ತಲ್ಲಣಗಳಿಗೆ ಕಾರಣಗಳಾದರೂ ಏನು? ಇದೇ ರೀತಿ ಮುಂದುವರಿದರೆ ಅವರು ಅನೈತಿಕ ಮಾರ್ಗವನ್ನು ಹಿಡಿಯುತ್ತಾರೆ, ಲಂಗು ಲಗಾಮುಗಳಿಲ್ಲದೇ ವರ್ತಿಸುತ್ತಾರೆ, ತಮ್ಮ ಬದುಕನ್ನು ಕಲುಷಿತಗೊಳಿಸಿಕೊಳ್ಳುವ ಮೂಲಕ ಇತರರ ಬದುಕ ಪಾವಿತ್ರ್ಯವನ್ನೂ ನಾಶ ಮಾಡಿಬಿಡುತ್ತಾರೆ, ಇದರಿಂದ ನಮ್ಮ ಸಂಸ್ಕೃತಿ, ಪರಂಪರೆಗೆ ಧಕ್ಕೆಯಾಗುತ್ತದೆ; ಇತ್ಯಾದಿ.

ಕಟ್ಟುನಿಟ್ಟಿನ ಸಂಪ್ರದಾಯಸ್ಥ ಸಮಾಜಗಳಲ್ಲೂ, ಸಂಪ್ರದಾಯ ಮುಕ್ತ ಸಮಾಜಗಳಲ್ಲೂ ಇಂದ್ರಿಯ ನಿಯಂತ್ರಿತರೂ ಅಥವಾ ಜಿತೇಂದ್ರಿಯರೂ ಇದ್ದಾರೆ. ಕಚ್ಚೆ ಹರುಕರೂ ಇದ್ದಾರೆ. ಜಿತೇಂದ್ರಿಯರಾಗುವುದಾಗಲಿ, ಕಚ್ಚೆಹರುಕರಾಗುವುದಿರಲಿ, ಆಯಾ ಸಮಾಜದ ಪ್ರಭಾವದಿಂದ ಎನ್ನುವುದಕ್ಕಿಂತ ವ್ಯಕ್ತಿಗತವಾದ ಸಾಮರ್ಥ್ಯ ಮತ್ತು ದೌರ್ಬಲ್ಯಗಳಿಂದ.

ಪೋರ್ನ್ ಸೈಟ್‌ಗಳು ಅಂತರ್ಜಾಲದಲ್ಲಿ ವ್ಯಾಪಕವಾಗಿವೆ, ಅದನ್ನು ತೆರೆಯುವ ಅಥವಾ ತೆರೆಯದಿರುವ ಮನಸ್ಥಿತಿ ತನ್ನದಾಗಿರುವುದಲ್ಲವೇ! ತಾವು ಬಹು ಕಷ್ಟಪಟ್ಟು ಅಡಗಿಸಿ, ಅದುಮಿಟ್ಟುಕೊಂಡಿರುವ ಗುಪ್ತವಾಂಛೆಗಳು, ಸುಪ್ತಕಾಮನೆಗಳು ತನ್ನ ಮುಂದಿನ ಕಿರಿಯರಲ್ಲಿ ಸ್ಫೋಟಗೊಳ್ಳಲು ಎಲ್ಲಿ ಈ ವಿಷಯಗಳು ದಾರಿ ಮಾಡಿಕೊಡುವವೋ ಎಂಬ ಭಯವೇ ಹಿರಿಯರಲ್ಲಿ? ನಾವು ನಮ್ಮ ಮಕ್ಕಳನ್ನು ಮಾನಸಿಕ ಸ್ಥೈರ್ಯವುಳ್ಳವರನ್ನಾಗಿ, ಭಾವನಾತ್ಮಕ ಸಬಲರನ್ನಾಗಿ ಮಾಡುವಲ್ಲಿ ವಿಫಲರಾಗಿದ್ದೇವೆ ಎಂದು ಒಪ್ಪಿಕೊಳ್ಳಲೂ ಹಿರಿಯರಿಂದಾಗದು. ಸಂಸ್ಕೃತಿ ಮತ್ತು ಧರ್ಮಗಳ ಬಾವುಟವನ್ನೆತ್ತುವುದೇ ವ್ಯಕ್ತಿಗತವಾದಂತಹ ನೈತಿಕ ಸ್ಥೈರ್ಯವನ್ನು ನೀಡುವಲ್ಲಿ ವಿಫಲರಾದಾಗ. ತಮ್ಮ ಮಕ್ಕಳ ಹಿಂದೆ ಗೂಢಾಚಾರಿಯ ಕೆಲಸ ಮಾಡಬಾರದು ಎನ್ನುವುದಾದರೆ, ಮಕ್ಕಳನ್ನು ಸಂದೇಹಿಸಬಾರದು ಎನ್ನುವುದಾದರೆ ಅವರಿಗೆ ಕಾಮ ಮತ್ತು ಪ್ರೇಮಗಳ ಸ್ಪಷ್ಟತೆಯ ಅನುಭವ ನೀಡಿರಬೇಕು.

ಯಾರೋ ಒಂದೆರಡು ಯುವ ಜೋಡಿಗಳು ರಸ್ತೆಯಲ್ಲಿ ಲಿಪ್-ಲಾಕ್ ಮಾಡಿಕೊಂಡರೆ, ನಾನು ನನ್ನ ಮಗಳ ಅಥವಾ ಮಗನ ಸಂದೇಹಿಸುವುದಿಲ್ಲ. ಅವರ ಪ್ರಭಾವ ನನ್ನ ಮಕ್ಕಳ ಮೇಲಾಗುತ್ತಿದೆ ಎಂದರೆ, ಅವರು ಈ ದಾರಿಗಿಳಿಯುತ್ತಾರೆ ಎಂದು ನಾನು ಹೆದರುವುದೇ ಆದರೆ ನನ್ನ ದೃಢತೆಯನ್ನೇ ನಾನು ಪರೀಕ್ಷಿಸಿಕೊಳ್ಳಬೇಕಾಗುತ್ತದೆ. ನಾನು ನನ್ನ ಮಕ್ಕಳಿಗೆ ಸತತವಾಗಿ ಹುಟ್ಟಿದಾಗಿನಿಂದ ಹಿಡಿದು, ಇಲ್ಲಿಯವರೆಗೂ ನೀಡಿರುವ ಸಂಸ್ಕಾರದ ಬಗ್ಗೆ ಪರಾವರ್ಶೆ ಮಾಡಬೇಕಾಗುತ್ತದೆ.

ಅತೃಪ್ತಿಯ ಜೀವಿಗಳಲ್ಲಿ ತೃಪ್ತಿಗೊಳಿಸಿಕೊಳ್ಳುವ ಆತುರವಿರುತ್ತದೆ. ದುರ್ಲಭವಾಗಿರುವಂತಹ ಆಹಾರ ಸಿಕ್ಕಾಗ ಹಸಿವಿನವರು ತಿನ್ನುವ ರೀತಿಯಲ್ಲಿ ಆವೇಗವಿರುತ್ತದೆ. ಪ್ರೀತಿಯ ತೃಪ್ತಭಾವವಿರುವ ಹರೆಯದವರು ಯಾಕಾಗಿ ಅತೃಪ್ತ ಪ್ರೇತಾತ್ಮಗಳಂತೆ ಬೀದಿಗಳಲ್ಲಿ, ಕ್ಯಾಂಪಸ್ಸುಗಳಲ್ಲಿ, ಪಾರ್ಕುಗಳ ಪೊದೆಗಳ ಮರೆಯಲ್ಲಿ ಜಾರಿ ಹೋದಾರು? ಮನೆಯಲ್ಲಿ ಪ್ರೇಮದ ಸಂವೇದನೆಯ ಕೊರತೆಯುಂಟಾದರೆ, ಕಾಮ ಮತ್ತು ಪ್ರೇಮಗಳ ಸ್ಪಷ್ಟತೆಯ ಅರಿವು ಆಗದೇ ಹೋದರೆ, ಎರಡನ್ನೂ ಒಂದಾಗಿಸಿಕೊಳ್ಳುವ ಸಂವೇದನೆಗಾಗಿ ಹಪಹಪಿಸುತ್ತಿರುತ್ತಾರೆ.

ಮಿಗಿಲಾಗಿ ಚುಂಬನವನ್ನಾಗಲಿ, ಆಲಿಂಗನವನ್ನಾಗಲಿ ಹೃದಯದ ಪ್ರೇಮಪ್ರಜ್ಞೆಯಿಂದ ಸೊಂಟದ ಕೆಳಗಿನವರೆಗೆ ಜಾರಿಸಿಕೊಳ್ಳುವಂತಹ ಪಾಪಪ್ರಜ್ಞೆಯೇಕೆ? ತಾ ಕಳ್ಳ, ಪರರ ನಂಬನೇ?

ಕಾಮುಕತೆಯಾಗಲಿ, ಲೈಂಗಿಕತೆಯಾಗಲಿ (ಕಾಮುಕತೆ ಮತ್ತು ಲೈಂಗಿಕತೆಗಳಿಗೆ ಸ್ಪಷ್ಟವಾದ ವ್ಯತ್ಯಾಸಗಳಿವೆ ಎಂಬುದು ಅತಿ ಸ್ಪಷ್ಟ, ಇರಲಿ ಬಳಕೆಯಲ್ಲಿರುವಂತೆ) ಅದು ಲಿಂಗದಲ್ಲಿರುವುದಲ್ಲವಲ್ಲ! ಚಿಂತಿಸುವ ಮನಸ್ಸುಗಳಲ್ಲಿ, ಕಾಣುವ ದೃಷ್ಟಿಗಳಲ್ಲಿ, ಸ್ವೀಕರಿಸುವ ಗ್ರಹಿಕೆಗಳಲ್ಲಿ ಕಾಮವೋ, ಪ್ರೇಮವೋ, ಶೀಲವೋ, ಅಶ್ಲೀಲವೋ, ತನ್ನ ಕನ್ನಡಕಗಳನ್ನು ಬದಲಿಸಿಕೊಳ್ಳುತ್ತಿರುತ್ತದೆ. ಕಾಮಾಲೆಯ ಕಣ್ಣುಗಳು ಹಳದಿಯ ಪೊರೆ ಕಳಚಿಕೊಳ್ಳುವುದು ಸಂಪೂರ್ಣ ಗುಣಮುಖವಾದ ಮೇಲೆ.

ಆ ಒಂದು ತಂದೆ, ತನ್ನ ಮಗನಿಗೆ ಯಾವುದೇ ಬಗೆಯ ಸಂತೋಷಕ್ಕೆ ಕೊರತೆಯನ್ನು ಉಂಟು ಮಾಡಲಿಲ್ಲ. ಅವನ ಎಲ್ಲಾ ಆಧುನಿಕ ವೈಚಾರಿಕ ಮುಕ್ತತೆಗೆ ಸಾಕ್ಷಿಯಾಗಿದ್ದ. ಏಕೆಂದು ಕೇಳಿದರೆ, “ನಾನು ಅನುಭವಿಸದ ಆನಂದವನ್ನು ಅವನಾದರೂ ಕಾಣುತ್ತಿದ್ದಾನೆ” ಎಂದ.

ಮತ್ತೊಬ್ಬ ತಂದೆ, ತನ್ನ ಮಗನಿಗೆ ಯಾವುದೇ ಬಗೆಯ ಮುಕ್ತತೆಗೆ ಅವಕಾಶವನ್ನು ನೀಡದೇ ದಿಗ್ಬಂಧನದಲ್ಲಿಟ್ಟಿದ್ದ. ಏಕೆಂದು ಕೇಳಿದರೆ, “ನಾವೂ ಹೀಗೇ ಮಾಡ್ತಿದ್ವಾ? ನಾವೆಲ್ಲಾ ಹೀಗೇ ಮೆರಿತಿದ್ವಾ?” ಎಂದ.

ಲೈಂಗಿಕತೆಯೆಂಬ ಪ್ರಕೃತಿ ಸಹಜತೆಯು ಕಾಮುಕತೆಯ ಆಗ್ರಹಕ್ಕೆ ಸೆಳೆಯಲ್ಪಟ್ಟಾಗ, ಪ್ರೇಮವೆಂಬ ಪ್ರಜ್ಞೆಯು ಕಾಮದಮಲಿಗೆ ಮೈ ಮರೆತಾಗ, ಸ್ಪಷ್ಟವಾಗಿ ಕಾಣುವುದು ಆಯಾ ವ್ಯಕ್ತಿಯ ದೌರ್ಬಲ್ಯ. ಮಗುವು ಎಳೆಯದಾಗಿರುವಾಗಷ್ಟೇ ಚುಂಬಿಸಿದ್ದು, ಅದರ ಆತ್ಮಕ್ಕೆ ಸದಾ ಪ್ರೀತಿಯ ಆಹಾರವನ್ನು ಉಣಬಡಿಸದೇ ಹೋಗಿ, ಆ ಎಳೆಯರೆಲ್ಲಾ ಯುವಕರಾಗಿ ತಮ್ಮ ಆತ್ಮದ ಆಹಾರಕ್ಕಾಗಿ ಕಿಸ್ ಆಫ್ ಲವ್ಹ್ ಅಂತ ಬೀದಿಗಿಳಿದು ಆಂದೋಲನ ಮಾಡಬೇಕಾಗಿರುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು ಯಾರೆಂದು ಹುಡುಕುತ್ತಾ ಹೋದರೆ ಅವರ ಪೋಷಕರು, ಪೋಷಕರು ಹೆದರುವ ಸಮಾಜ, ಧರ್ಮ, ಸಂಪ್ರದಾಯ, ಕಟ್ಟುಪಾಡು, ಮತ್ತಿತರ ವಿಚಿತ್ರ ನೈತಿಕತೆಗಳೆಲ್ಲಾ ಸಾಲು ಸಾಲಾಗಿ ಪೆರೇಡು ಹೊಡೆಯುತ್ತವೆ.

  • ಯೋಗೇಶ್ ಮಾಸ್ಟರ್, ರಂಗಕರ್ಮಿ

Leave a Reply